ಸದಾ ನಸುನಗುತ ಬಾಳುವ ಹೂವು ನಮಗೇಕೆ ಮಾದರಿಯಾಗಬಾರದು?

*ಶಿವಲೀಲಾ ಹುಣಸಗಿ ಯಲ್ಲಾಪುರ ( ಉ.ಕ )

ದಾರಿ ಸಾಗಿದಂತೆಲ್ಲ ಬದುಕಿನ ಅಮೂಲ್ಯ ಹಂತಗಳು ತಿಳಿದೋ ತಿಳಿಯದೆಯೋ ಅದರಷ್ಟಕ್ಕೆ ಅದು ಯಾರ ಅನುಮತಿಗೂ ಕಾಯದಂತೆ ಸಮಯದೊಟ್ಟಿಗೆ ಕೈ ಮೀರುವಾಗೆಲ್ಲ ಒಂದು ಕಡೆ ನೋವು ಇನ್ನೊಂದು ಕಡೆ ಸಮಯ ಬೇಕಿತ್ತು ಅನ್ನೊ ಭಾವ ಆಗಾಗ ಕಾಡುತ್ತಿರುತ್ತದೆ. ಸಾಧಿಸುವ ಕನಸು ಬೆಟ್ಟದಷ್ಟಿದ್ದರೂ ನನಸಾಗುವ ಛಲ ನಮ್ಮಲ್ಲಿ ಕುಂದಿದರೆ ಅದು ಸಫಲವಾಗುವುದಕ್ಕೆ ಸಾಧ್ಯವೇ? ಖಂಡಿತಾ ಇಲ್ಲವಲ್ಲ.
ಪ್ರತಿ‌ದಿನ ಮೂಡುವ ಸೂರ್ಯ ನಿನ್ನೆಯ ಕ್ಷಣಗಳಿಗೆ ಪೂರ್ಣ ವಿರಾಮ ಇಟ್ಟು, ಹೊಸ ಅಧ್ಯಾಯ ಬರೆದಂತೆ ನಳನಳಿಸುವ ಅವನ ಚೈತನ್ಯ ಇಡೀ ಜಗತ್ತಿಗೆ ಮಾದರಿ. ಸೋಂಬೇರಿಗಳಾಗಿ, ಮಾಡಿದರಾಯಿತು? ಎಂಬ ಉಡಾಫೆಯ ಮಾತನಾಡುತ್ತಾ ಅಥವಾ ಗೆದ್ದವರ ಕುರಿತು ಇಲ್ಲದ ಭಾವ ಸೃಷ್ಟಿಸುತ್ತಾ ಮೂಲೆ ಸೇರುವ ಮನೋಸ್ಥಿತಿಗಳಿಂದ ನರಳುವ ರೋಗಗ್ರಸ್ತ ಮನಸ್ಸಿಂದ ಹೊರಬರುವ ಚಿಂತನೆ ಮಾಡಬೇಕಿದೆ.


ಒಂದು ಹೂವಿನ ಆಯುಷ್ಯ ಎಷ್ಟು ವರ್ಷ? ಎಂದು ಕೇಳಿದರೆ ನಗು ಬರಬಹುದು. ಬೆಳಗ್ಗೆ ಅರಳಿ ಸಂಜೆ ಇಲ್ಲವಾಗುವ ಆ ಹೂವು ಪ್ರತಿದಿನ ಅರಳಿದರೂ ಅದರ ನಗುವಲ್ಲಿ ಯಾವ ಬದಲಾವಣೆಯು ಇರದು. ಇದ್ದಷ್ಟು ಗಳಿಗೆ ಕಣ್ಮನಗಳಿಗೆ ಸಂತಸ ನೀಡಿ, ದೇವರ ಮುಡಿಗೋ, ಹೆಂಗಳೆಯರ ಹೆರಳಿಗೋ, ಮನೆ ಹೊಸಲಿಗೋ ರಾರಾಜಿಸುವಾಕ್ಷಣ ಅದರ ಸಾರ್ಥಕ ಬದುಕನ್ನ ನಮ್ಮ ಮುಂದೆ ಮೌನವಾಗಿ  ಬಿಚ್ಚಿಟ್ಟು ಧರೆಯೊಳು ಲೀನವಾಗುವ ಅಧ್ಬುತ ಸೃಷ್ಟಿಯನ್ನು ಭಗವಂತ ಉದಾ ನೀಡಿರುವುದು ನಮಗೆ ಅರ್ಥೈಸಿಕೊಳ್ಳಲು ಸಮಯ ಬೇಕು. ಗೊತ್ತಿದ್ದು ಅದರ ಬಗ್ಗೆ ಚಿಂತನೆ ಮಾಡುವ ಗೋಜಿಗೆ ಹೋಗುವುದಿಲ್ಲ.


ಬೆಟ್ಟ ಪ್ರತಿದಿನ ಸವಾಲನ್ನ ಎಸೆಯುತ್ತದೆ. ಅದಕ್ಕೂ ಅಹಂ ನಾನೇ ಶ್ರೇಷ್ಠ, ನನ್ನಷ್ಟು ಎತ್ತರ ಯಾರಿಲ್ಲ, ನನ್ನ ಹತ್ತುವವರು ಯಾರೂ ಇಲ್ಲ. ಧೈರ್ಯವಿದ್ದರೆ, ಛಲವಿದ್ದರೆ, ಹಠವಿದ್ದರೆ ಹತ್ತು ಎಂಬ ಸವಾಲ ಎಸೆದಂತೆ ಬೀಗುವ ಅದನು ನೋಡಿದಾಗೊಮ್ಮೆ ಸಾಧಕನಿಗೆ ಬೆಟ್ಟದಷ್ಟು ಗಟ್ಟಿಯಾಗಿ ಮೇಲೆಳಬೇಕೆಂಬ ಆಶಯ ಮೂಡುತ್ತದೆ. ಮಾನವೀಯ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಬೆಳೆಯುವ ವಾತಾವರಣ ನಿರ್ಮಾಣವಾಗಬೇಕು ಅದು ಅನಿವಾರ್ಯ.
ಕಟ್ಟುವ ಬದುಕಿಗೆ ಗುಟುಕು ನೈಜತೆಯ ತುತ್ತು ನೀಡಿ ಬೆಳೆಸುವ ಚಿಂತನೆ ನಮ್ಮಲ್ಲಿ ಸದಾ ನಸುನಗುತ ಅರಳುವ ಹೂವಂತೆ  ಮೂಡಲೆಂಬ ಆಶಯ.

Related Articles

6 COMMENTS

  1. ಯಾವುದೆ ವ್ಯಕ್ತಿ ಯಾವ ರೀತಿಯಲ್ಲಿ ಬದುಕಬೇಕು? ಹೇಗೆ ತಾನು ನೆಮ್ಮದಿಯನ್ನು ಪಡೆದುಕೊಳ್ಳಬಹುದು ಎಂದು ಹೂವನ್ನು ಮಾದರಿಯಾಗಿಟ್ಟು ಓದುಗರಿಗೆ ಸಂದೇಶ ನೀಡಿದ್ದಾರೆ

ಪ್ರತಿಕ್ರಿಯೆ ನೀಡಿ

Latest Articles