ಶ್ರೀರಾಮನ ಜೀವನದಿಂದ ಪ್ರತಿಯೊಬ್ಬರೂ ಕಲಿಯಬೇಕಾದ ಜೀವನ ಮೌಲ್ಯಗಳು

ಭಗವಂತ ಸರ್ವಶಕ್ತ ಎಂಬ ತಿಳಿವಳಿಕೆ ಸಹಜವಾದದ್ದೇ. ಆದರೆ ರಾಮನನ್ನು ಸಾಮಾನ್ಯ ಮನುಷ್ಯನ ನೆಲೆಯಲ್ಲಿ ನಿಂತು ವಿಚಾರ ಮಾಡಿದರೆ ಅವನಿಂದ ಜೀವನದಲ್ಲಿ ಪಡೆಯಬಹುದಾದ್ದು ಅಪರಿಮಿತವಾದದ್ದಾಗಿದೆ.

  • ಶ್ರೀ ವಿದ್ಯಾಪ್ರಸನ್ನ ತೀರ್ಥರು

ಭಗವಂತನು ಅವತಾರ ಮಾಡುವ ಉದ್ದೇಶ ದುಷ್ಟರ ಶಿಕ್ಷೆಗೆ, ಶಿಷ್ಟರ ಪರಿಪಾಲನೆಗೆ. ಭಗವಂತನ ಎಷ್ಟೊಂದು ಅವತಾರಗಳು ಸಾಂದರ್ಭಿಕವಾಗಿ ತಾತ್ಕಾಲಿಕವಾಗಿಯಷ್ಟೇ ಕಂಡವುಗಳಾಗಿವೆ. ಕೆಲವೊಂದು ಅವತಾರಗಳು ದೀರ್ಘಕಾಲಿಕವಾದವುಗಳಾಗಿವೆ.
ಮನುಷ್ಯನಾಗಿ ಕಂಡು ಮಾನವ ಸಮಾಜದ ಜೊತೆ ದೀರ್ಘಕಾಲಿಕವಾಗಿ ಸಹ ಜೀವನ ನಡೆಸಿದ 2 ಅವತಾರಗಳು ಅಂದರೆ ರಾಮಾವತಾರ ಮತ್ತು ಕೃಷ್ಣಾವತಾರ.
ಭಗವಂತ ಸರ್ವ ಸಮರ್ಥ ಸರ್ವಶಕ್ತ ಎಂಬ ತಿಳಿವಳಿಕೆ ಸಹಜವಾದದ್ದೇ. ಆದರೆ ರಾಮನ ಬಗ್ಗೆ ವಿಮರ್ಶೆ ಮಾಡುವವನು ರಾಮನನ್ನು ಸಾಮಾನ್ಯ ಮನುಷ್ಯನ ನೆಲೆಯಲ್ಲಿ ನಿಂತು ವಿಚಾರ ಮಾಡಿದರೆ ಅವನಿಂದ ಜೀವನದಲ್ಲಿ ಪಡೆಯಬಹುದಾದ್ದು ಅಪರಿಮಿತವಾದದ್ದಾಗಿದೆ.
ರಾಮನು ರಾಜಮನೆತನದ ಕುಡಿಯಾದರೂ ಅವನು ಹುಟ್ಟಿದ್ದು ಎಲ್ಲರಂತೆ ಕೂಡುಕುಟುಂಬದಲ್ಲಿ. ತಂದೆ ತಾಯಿ ಚಿಕ್ಕಮ್ಮಂದಿರು ತಮ್ಮಂದಿರು ಎಲ್ಲರ ಜತೆಗೆ ಬಾಲ್ಯವನ್ನು ಕಳೆದವನು. ಆದರೆ ಅವನು ನಯ ವಿನಯ, ಸೌಜನ್ಯ, ವಿನಮ್ರತೆ, ಕಾರುಣ್ಯ ಮೊದಲಾದ ಅಪೂರ್ವ ಗುಣಗಳಿಂದಾಗಿ ಏರಿದ ಎತ್ತರ ಅಸದೃಶ. ಅದೆಷ್ಟೋ ವರ್ಷಗಳ ಕಾಲ ಕಾದು ದೇವತೆಗಳ ಆಶೀರ್ವಾದದ ಬಲದಿಂದ ಹುಟ್ಟಿದ ಮೊದಲ ಮಗ ರಾಮ. ದಶರಥ ತುಂಬಾ ಮುದ್ದು ಮಾಡಿ ಸಾಕಿದ. ದೊಡ್ಡ ಮಗ ಎಂಬ ಪ್ರೀತಿ ಬೇರೆ. ರಾಜವೈಭವ. ಕೈಕಾಲಿಗೆ ಆಳುಗಳು. ಎಷ್ಟು ಅಹಂಕಾರಿಯಾಗಿ ಬಾಳಬೇಕಾದವನು ರಾಮ. ಆದರೆ ಆಶ್ಚರ್ಯ. ಒಂದು ದಿನವೂ ಅವನು ಅಹಂಕಾರವನ್ನು ತೋರಿಸಿದವನಲ್ಲ. ತಂದೆ ತಾಯಿಗಳಿಗೆ ಇದಿರಾಡಿದವನಲ್ಲ. ಚಿಕ್ಕಮ್ಮಂದಿರಿಗೆ ತಮ್ಮಂದಿರಿಗೆ ನೋವುಂಟು ಮಾಡಿದವನಲ್ಲ. ಪ್ರಜೆಗಗಳನ್ನು ಅಗೌರವಿಸಿದವನಲ್ಲ. ಸುಳ್ಳು ಹೇಳಿದವನಲ್ಲ.

ಸ್ಮಿತ ಪೂರ್ವ ಭಾಷೀ
ರಾಮನ ವ್ಯಕ್ತಿತ್ವವನ್ನು ವರ್ಣಿಸುವುದಾಗಿ ಅವನ ಬಗ್ಗೆ ಹೇಳುವ ಮಾತು “ಸ್ಮಿತ ಪೂರ್ವ ಭಾಷೀ’ ಎಂದು.
ರಾಮನು ಓಡಾಡುವಾಗ ಯಾರಾದರೂ ಅವನ ಮುಂದೆ ಕಂಡರೆ ಮೊದಲು ನಗುತ್ತಿದ್ದವನು ಅವನೇ. ಮುಂದಿನವರು ನಗಲೆಂದು ಕಾಯುತ್ತಿರಲಿಲ್ಲ. ಅವನ ಮಂದಹಾಸ ಅಪೂರ್ವವಾಗಿತ್ತು.
ಯೋಗಕ್ಷೇಮದ ಬಗ್ಗೆ ಅವನೇ ಮೊದಲಾಗಿ ಕೇಳುತ್ತಿದ್ದ. ಮುಂದಿನವರು ಕೇಳಲೆಂದು ಕಾಯುತ್ತಿರಲಿಲ್ಲ.
ಯೋಗಕ್ಷೇಮದ ಬಗ್ಗೆ ಅವನೇ ಮೊದಲಾಗಿ ಕೇಳುತ್ತಿದ್ದ. ಮುಂದಿನವರು ಕೇಳಲೆಂದು ಕಾಯುತ್ತಿರಲಿಲ್ಲ. ಅವನ ವಿನಯಶೀಲತೆ, ಸಜ್ಜನಿಕೆ ಬೇರೊಂದು ಉದಾಹರಣೆ ಬೇಕಿಲ್ಲ.
ಮುದ್ದಿನ ಮಗುವಾಗಿ ಬೆಳೆದ ರಾಮನಿಗೆ 15 ವರ್ಷ ತುಂಬುತ್ತದೆ. ಇನ್ನೇನು ಮದುವೆ ಮಾಡಬೇಕೆಂದು ಸಮಾಲೋಚನೆ ಮಾಡಲು ದಶರಥ ಸಭೆ ಕರೆದ. ಅದೇ ಸಭೆಗೆ ಅನಿರೀಕ್ಷಿವಾಗಿ ವಿಶ್ವಾಮಿತ್ರ ಬಂದರು.
ವಿಶ್ವಾಮಿತ್ರರಿಗೆ ಕೊಡಬೇಕಾದ ಗೌರವವನ್ನು ನೀಡಿದ ದಶರಥನು”ತಾವು ಕೇಳಿದ್ದನ್ನು ಕೊಡುತ್ತೇವೆ’ ಎಂದು ವಾಗ್ದಾನ ಬೇರೆ ಮಾಡಿದ. ಹಿಂದೆ ಮುಂದೆ ನೋಡದೆ, ವಿಚಾರ ಮಾಡದೆ ಅವರಸವಸರವಾಗಿ ಮಾತು ಕೊಡುವುದು ದಶರಥನ ಚಾಳಿ. ಆಮೇಲೆ ಪಶ್ಚಾತ್ತಾಪ ಪಡುವುದೂ ಅವನ ಸ್ವಭಾವ.
ಕೇಳಿದ್ದನ್ನು ಕೊಡಬಲ್ಲೆನೆಂದು ಕೇಳಿದ ದಶರಥ ರಾಮಚಂದ್ರನನ್ನು ತನ್ನೊಂದಿಗೆ ಕಳುಹಿಸು ಎಂದಾಗ ಅವಕ್ಕಾದ. ಕಾಲಿಗೆ ಬಿದ್ದು ಕೇಳಿದ. ಅದನ್ನೊಂದನ್ನು ಬಿಟ್ಟು ಬೇರೆ ಏನು ಬೇಕಾದರೂ ಮಾಡಬಲ್ಲೆನೆಂದ.
ವಿಶ್ವಾಮಿತ್ರರ ಶಾಪದ ಭಯದಿಂದ ಮತ್ತು ಕುಲಗುರುಗಳಾದ ವಸಿಷ್ಠರ ಸಲಹೆಗೆ ಬೆಲೆ ಕೊಟ್ಟು ರಾಮನನ್ನು ಕಳುಹಿಸಲೇಬೇಕಾಯಿತು.

ಶ್ರೀರಾಮನ ಗುಣ
ಆದರೆ ರಾಮನ ಗುಣ ಎಂತಹದು. ಅವನು ತಂದೆಗೆ ಏನೂ ಮರು ಮಾತನಾಡಲಿಲ್ಲ. ಹಿಂಸ್ರ ಪ್ರಾಣಿಗಳಿರುವ ಕಾಡಿನ ಜೀವನ ಎಷ್ಟು ಭಯಂಕರವಾದುದು? ಆದರೆ ಏನೂ ತಕರಾರು ಮಾಡಿಲ್ಲ. ಹೂವಿನ ಹಾಸಿಗೆಯಲ್ಲಿ ಮಲಗುವ ರಾಮ ಕಾಡಿನ ನೆಲದಲ್ಲಿ ಮಲಗಬೇಕು. ನೆಲಹಾಸಿನ ಮೇಲೆ ನಡೆಯುತ್ತಿದ್ದ ರಾಮ ಮುಂದೆ ಕಾಡಿನಲ್ಲಿ ಕಲ್ಲುಮುಳ್ಳುಗಳಲ್ಲಿ ನಡೆಯಬೇಕು. ಅರಮನೆಯಲ್ಲಿ ವಾಸಿಸುತ್ತಿದ್ದ ರಾಮ ಮುಂದೆ ಎಲೆ ಮನೆಯಲ್ಲಿ ಬದುಕಬೇಕು. ಇದ್ಯಾವುದನ್ನೂ ಪ್ರಶ್ನಿಸದೆ ದಶರಥನ ಮಾತನ್ನು ಪಾಲಿಸಿದವ. ಎಂತಹ ಸೌಜನ್ಯ.
ರಾಮ ಲಕ್ಷ್ಮಣರಿಬ್ಬರೂ ಸಮಾನ ಮನಸ್ಕರಾಗಿದ್ದರು, ಅವರದೊಂದು ಜೋಡಿ, ರಾಮನಿಗೆ ಲಕ್ಷ್ಮಣನಲ್ಲಿ ಎಂತಹ ಪ್ರೀತಿ ಇತ್ತೆಂದರೆ ರಾಮನ ದೇಹಕ್ಕಿಂತ ರಾಮನ ಹೊರಗಿರುವ ರಾಮನದೇ ಒಂದು ಪ್ರಾಣ ಎಂಬ ಮಾತು ರಾಮಾಯಣದಲ್ಲಿದೆ. ಅಲ್ಲದೆ ರಾಮನ ಬಲಗೈ ಲಕ್ಷ್ಮಣ ಎಂಬುದಾಗಿ ಪದೇ ಪದೆ ಇವರಿಬ್ಬರ ಅಂತರ0ಗವನ್ನು ರಾಮಾಯಣದಲ್ಲಿ ವರ್ಣಿಸುವುದಿದೆ.
ರಾಮ ಕುದುರೆ ಸವಾರಿ ಮಾಡುವುದಿದ್ದರೆ ಲಕ್ಷ್ಮಣ ಅವನಿಗೆ ಬೇಕೇ ಬೇಕು. ಒಂದು ದಿನ ರಾಮ ಹೀಗೆ ಹೇಳಿದ್ದ ಲಕ್ಷ್ಮಣ ಒಂದು ವೇಳೆ ಈ ಸಾಮ್ರಾಜ್ಯ ನನಗೆ ಒಲಿದು ಬಂದರೆ ನಾನೊಬ್ಬನೇ ಇದನ್ನು ಅನುಭವಿಸುವುದಿಲ್ಲ. ನೀನೂ ನನ್ನ ಜತೆಯಲ್ಲಿರಬೇಕು ಎಂದು. ಕಾಡಿಗೆ ವಿಶ್ವಾಮಿತ್ರನ ಜೊತೆಗೆ ರಾಮ ಸಾಗುವಾಗ ಲಕ್ಷ್ಮಣನೂ ಹೆಜ್ಜೆ ಹಾಕಿದ. ಮೊದಲನೆಯ ದಿನ ಸರಯೂ ನದಿ ದಾಡಿ ಬಹುದೂರ ಕಾಲ್ನಡಿಗೆಯಿಂದ ಸಾಗಿದ. ಮಕ್ಕಳು ಏಳುವಾಗ ವಿಳಂಬವಾಗಿತ್ತು. ‘ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ’ ಎಂಬ ಮಾತಿನೊಂದಿಗೆ ವಿಶ್ವಾಮಿತ್ರರೇ ಎಬ್ಬಿಸುತ್ತಾರೆ.
ಮುಂದೆ ತಾಟಕಿಯು ರಾಮನಿಗೆ ಎದುರಾದಾಗ ರಾಮ ಒಬ್ಬ ಹೆಣ್ಣುಮಗಳನ್ನು ಸಾಯಿಸಬಾರದೆಂದು ಆದಷ್ಟು ತಾಳ್ಮೆಯಿಂದ ಕಾಯುತ್ತಾರೆ. ಕೊನೆಗೆ ಅವಳ ದುಷ್ಟತೆ ಮಿತಿಮೀರಿದಾಗ ವಿಶ್ವಾಮಿತ್ರನ ಅಪ್ಪಣೆಯಂತೆ ಅವಳ ಮೇಲೆ ಬಾಣವನ್ನು ಪ್ರಯೋಗಿಸುತ್ತಾನೆ.

ಅವನು ಕರುಣಾಪೂರ್ಣ
ವಿಶ್ವಾಮಿತ್ರನೊಡನೆ ಸಂಚರಿಸುತ್ತಾ ಒಂದು ದಿನ ಜನಕ ಮಹಾರಾಜನ ಅರಮನೆಗೂ ಹೋಗುವ ಪ್ರಸಂಗ ಬಂತು. ಸೀತಾಸ್ವಯಂವರದ ಸಂದರ್ಭ. ಐದು ಸಾವಿರ ಮಂದಿ ತಳ್ಳುಗಾಡಿಯಲ್ಲಿ ಎಳೆದುಕೊಂಡು ಬರಬಹುದಾದ ಶಿವಧನಸ್ಸು. ರಾವಣನಂತಹ ಬಲಿಷ್ಠರಿಗೂ ಎತ್ತಲು ಸಾಧ್ಯವಾಗದ ಧನಸ್ಸು. ರಾಮ ಅದನ್ನು ಲೀಲೆಯಿಂದ ಎತ್ತಿದ. ಆದರೂ ಆಹಂಕಾರವಿಲ್ಲ. ಸೌಜನ್ಯಮೂರ್ತಿಯಾಗಿದ್ದವನು ರಾಮ.
ತಾನು ಸ್ವಯಂವರದಲ್ಲಿ ಶರತ್ತಿಗೆ ಅನುಗುಣವಾಗಿ ಗೆದ್ದ ಮೇಲೆ ತನ್ನ ಸೊತ್ತಾದರೂ ಎರಡೂ ಕಡೆಯ ಗುರುಹಿರಿಯರ ಒಪ್ಪಿಗೆ ಉಪಸ್ಥಿತಿಯೊಂದಿಗೆ ಮದುವೆಯಾದ. ಅವನ ವಿನಯ, ಹಿರಿಯರಲ್ಲಿರುವ ಪೂಜ್ಯಭಾವನೆಗೆ ಇದೊಂದು ಉದಾಹರಣೆ. ಸಂಭ್ರಮದಲ್ಲಿ ಸೀತೆಯೊಂದಿಗೆ ಅಯೋಧ್ಯೆಯನ್ನು ಪ್ರವೇಶಿಸಿದ ರಾಮನಿಗೆ ಇನ್ನಿಲ್ಲದ ಸ್ವಾಗತ ಸಮಗ್ರ ಅಯೋಧ್ಯೆಯಲ್ಲಿ ದೊರೆಯಿತು. ಆದರೆ ಅವನೊಬ್ಬ ಸಾಮಾನ್ಯ ಮನುಷ್ಯನಂತೆ ಇದ್ದನೇ ಹೊರತು ರಾಜಪುತ್ರನಂತೆ ಅಹಂಕಾರದಿ0ದ ಮೆರೆಯಲಿಲ್ಲ.
ದಶರಥನು ತನಗೆ ವಯಸ್ಸಾಯಿತು. ತನ್ನ ಪುತ್ರ ರಾಮನಿಗೆ ಉತ್ತರಾಧಿಕಾರ ಕೊಡುತ್ತೇನೆಂದು ರಾಜಸಭೆಯಲ್ಲಿ ಶ್ರುತಪಡಿಸಿದಾಗ ಇಡೀ ರಾಜ್ಯವೇ ಸಂಭ್ರಮಿಸಿತು. ಕುಣಿದು ಕುಪ್ಪಳಿಸಿತು. ತಳಿರು ತೋರಣಗಳಿಂದ ಸಿಂಗರಿಸಿತು. ರಾಮನಲ್ಲಿ ಜನತೆ ಇಟ್ಟಿರುವ ಪ್ರೀತಿಗೆ ಅದುವೇ ಸಾಕ್ಷಿಯಾಗಿತ್ತು.


ಪಟ್ಟಾಭಿಷೇಕಕ್ಕೆ ಸಿದ್ಧತೆ ನಡೆಯುತ್ತಿರುವಾಗ ರಾಮ ಅಮ್ಮನಿಗೆ ನಮಸ್ಕರಿಸಿ ಆಶೀರ್ವಾದ ಬೇಡಿದ ಅವನಿಗೆ ಪಟ್ಟಾಭಿಷೇಕಕ್ಕೆ ಮುಹೂರ್ತ ನಿಗದಿಯಾಗಿತ್ತು. ರಾಮನಿಗೆ ಅಲಂಕಾರ ನಡೆಯುತ್ತಿತ್ತು. ರೇಶ್ಮೆ ವಸ್ತ್ರ ಆಭರಣಗಳಿಂದ ಶೋಭಿಸುತ್ತಿದ್ದ ಶ್ರೀರಾಮ. ಆಗ ಇದ್ದಕ್ಕಿದ್ದಂತೆ ಚಿಕ್ಕಮ್ಮ ಕೈಕೇಯಿಯಿಂದ ರಾಮನಿಗೆ ಕರೆ ಬಂತು. ಕೈಕೇಯಿ, “ದಶರಥ ರಾಮನನ್ನು ಕರೆಯುತ್ತಿದ್ದಾನೆಂದು ಹೇಳಿ ಕಳುಹಿಸಿದ್ದಳು. ರಾಮ ತನ್ನ ಅಭಿಷೇಕಕ್ಕೆ ಮುಹೂರ್ತ ಸಮೀಪಿಸಿತು. ಅದಕ್ಕಾಗಿ ಕರೆಯುತ್ತಿದ್ದಾನೆಂದು ಭಾವಿಸಿ ಸುಂದರ ವೇಷಭೂಷಣಗಳೊಂದಿಗೆ ಕೈಕೇಯಿ ಮನೆಗೆ ನಡೆದ. ದಶರಥ ಮೂರ್ಛಿತನಾಗಿ ಬಿದ್ದಿದ್ದ. ರಾಮ ಚಿಕ್ಕಮ್ಮನಿಗೆ ನಮಿಸಿದಾಗ ಕೈಕೇಯಿ ಹೇಳಿದ ಮಾತು ಯಾರಿಗಾದರೂ ಅಘಾತವನ್ನುಂಟು ಮಾಡುತ್ತಿತ್ತು.
“ನಿಮ್ಮ ತಂದೆ ನನಗೆ ಮಾತು ಕೊಟ್ಟಿದ್ದಾನೆ. ನನ್ನ ಮಗ ಭರತನಿಗೆ ಪಟ್ಟಾಭಿಷೇಕ. ನಿನಗೆ ಇದನ್ನು ಆಡಲು ಸಾಧ್ಯವಾಗದೇ ಮೂರ್ಛಿತನಾಗಿದ್ದಾನೆಂದು ಹೇಳಿದಾಗ. ರಾಮ ಸ್ವಲ್ಪವೂ ವಿಚಲಿತನಾಗಲಿಲ್ಲ. ಏನೂ ಮರು ಮಾತಿಲ್ಲದೆ ಒಪಿಕೊಂಡ. ೧೪ ವರ್ಷದ ವನವಾಸವನ್ನು ಯಾವ ರೀತಿಯಲ್ಲೂ ನೋವು ಪಡೆಯದೆ ಸ್ವಾಗತಿಸಿದ. ಪಿತೃವಾಕ್ಯದಲ್ಲಿ ಅವನಿಗಿರುವ ನಿಷ್ಠೆ ಎಣೆಯಿಲ್ಲದ್ದು.
ಯಾವೊಂದು ವೈಭವದ ಆಭರಣ ರೇಶ್ಮೆ ವಸ್ತç ಅವನಿಗೆ ರಾಜದೀವಿಗೆಯನ್ನು ನೀಡಿತ್ತೋ ಅವನ್ನೆಲ್ಲ ಕ್ಷಣ ಮಾತ್ರದಲ್ಲಿ ತೆಗೆದು ಬದಿಗಿರಿಸಿದ. ವಿರಾಗಿಗಳು ಧರಿಸಬಹುದಾದ ನಾರುಮುಡಿಯನ್ನು ಕೈಕೇಯಿ ಕೊಟ್ಟಾಗ ಯಾವುದೇ ದುಃಖದ ಛಾಯೆಯಿಲ್ಲದೇ ಅದೇ ಮುಖಭಾವದಿಂದ ಧರಿಸಿದ. ರಾಮನ ಸಮಚಿತ್ತತೆ ಅಷ್ಟು ಎತ್ತರದ ಉನ್ನತಿಯನ್ನು ಪಡೆದಿತ್ತು.
ಅವನು ಕಾಡಿಗೆ ಹೊರಡುವಾಗ ಊರಿಂದ ಊರೇ ತಡೆಯಿತು. ಬಾಲರಿಂದ ಆರಂಭಿಸಿ ವೃದ್ಧರವರೆಗೆ ಎಲ್ಲರೂ ದುಃಖಿಸಿದರು.
ರಾಮ ರಥದಲ್ಲೇ ಕಾಡಿಗೆ ಹೋಗಬೇಕೆಂದು ದಶರಥ ಹಠ ಹಿಡಿದಾಗ ರಾಮ ಅನಿವಾರ್ಯವಾಗಿ ಒಪ್ಪಿದ. ಆದರೆ ಅವನ ಓಡುವ ರಥದ ಹಿಂದೆ ಓಡಿ ಬರಲಾಗದೆ ವಯಸ್ಸಾದವರು ಏದುಸಿರು ಬಿಟ್ಟುಕೊಂಡು ನಡೆದು ಬರುತ್ತಿರುವುದನ್ನು ಕಂಡು ರಾಮ ರಥದಿಂದ ಕೆಳಗಿಳಿದು ತಾನೂ ನಡೆದುಕೊಂಡೇ ಬಂದ.
ಈ ಘಟನೆಗಳು ಪ್ರಜೆಗಳು ರಾಮನಲ್ಲಿಟ್ಟಿರುವ ಅಪಾರ ಕಾರುಣ್ಯಕ್ಕೆ ಉದಾಹರಣೆಗಳು.
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಎಂಬುದು ಕೂಡಾ ರಾಮನ ರಾಷ್ಟ್ರಪ್ರೇಮವಾಗಿತ್ತು. ರಾಮ ಮನುಷ್ಯತ್ವದಿಂದ ದೈವತ್ವಕ್ಕೇರಿದ ಗುಣಾಭಿರಾಮ.

(ಲೇಖಕರು ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳು, ಕುಕ್ಕೆ ಸುಬ್ರಹ್ಮಣ್ಯ)

Related Articles

ಪ್ರತಿಕ್ರಿಯೆ ನೀಡಿ

Latest Articles