ಪಾಂಡುರಂಗನ ಆರಾಧನೆಯ ನೆರಳಗಿ ದೇವಾಲಯ

*ಶ್ರೀನಿವಾಸ ಮೂರ್ತಿ ಎನ್ ಎಸ್

ಹಾಸನ ಜಿಲ್ಲೆಯಂದರೆ ನಮಗೆ ನೆನಪಾಗುವುದು ಹೊಯ್ಸಳರ ಹಲವು ದೇವಾಲಯಗಳು.  ಇಲ್ಲಿನ ಪ್ರತೀ ತಾಲ್ಲೂಕಿನಲ್ಲಿ ಸಿಗುವ ದೇವಾಲಯಗಳು ಅಧ್ಯಯನ ಹಾಗು ಪ್ರವಾಸದ ದೃಷ್ಟಿಯಿಂದ ಪ್ರಮುಖವಾದವು. ಹಲವು ಅಪರೂಪದ ದೇವಾಲಯಗಳನ್ನು ಸಹ ನೋಡಬಹುದು. ಹಲವು ಗ್ರಾಮಗಳಲ್ಲಿ ಚನ್ನಕೇಶವ ದೇವಾಲಯಗಳು ಇದ್ದು ಅವುಗಳಲ್ಲಿ ಅರಸೀಕೆರೆ ತಾಲ್ಲೂಕಿನ ಜಾವಗಲ್ಲಿನ ಸಮೀಪದ ನೆರಳಗಿಯ ಶ್ರೀಲಕ್ಷ್ಮೀ ಚನ್ನಕೇಶವ ದೇವಾಲಯವೂ ಒಂದು.  ಆದರೆ ಇಲ್ಲಿ ಇದರ ಜೊತೆಯಲ್ಲಿ ಪಾಂಡುರಂಗನ ಶಿಲ್ಪವಿರುವುದು ಅಪರೂಪ.

ಇತಿಹಾಸ ಪುಟದಲ್ಲಿ ನೆರಳಗಿಯ ಬಗ್ಗೆ ಶಾಸನಗಳು ಕಡಿಮೆ. ಇಲ್ಲಿನ ಕಲ್ಯಾಣಿ ಚಾಲುಕ್ಯರ ವಿಕ್ರಮನ ಕಾಲದ ಒಂದು ವೀರಗಲ್ಲು ಇದ್ದು ಅದರಲ್ಲಿ ಹೊಯ್ಸಳ ರಾಜ ತ್ರಿಭುವನಮಲ್ಲ ವಿನಯಾದಿತ್ಯನ ಉಲ್ಲೇಖ ನೋಡಬಹುದು. ದೇವಾಲಯದ ಆವರಣದಲ್ಲಿರುವ ಶಾಸನದಲ್ಲಿ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖ ಇದೆ.

ಮೂಲತಹ ಈ ದೇವಾಲಯದ ನಿರ್ಮಾಣದ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ ಸುಮಾರು 12 – 13 ನೇ ಶತಮಾನದಲ್ಲಿ ನಿರ್ಮಾಣವಾಗಿರಬಹುದಾದ ಈ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ, ತೆರೆದ ಮುಖ ಮಂಟಪ  ಹಾಗು ಪ್ರವೇಶ ಮಂಟಪ ಹೊಂದಿದೆ. ದೇವಾಲಯ ವಿಶಾಲವಾದ ಪ್ರಾಕರವನ್ನು ಹೊಂದಿದ್ದು ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಸುಂದರವಾದ ಚನ್ನಕೇಶವನ ಮೂರ್ತಿ ಇದೆ. ಶಂಖ, ಚಕ್ರ ಗಧಾ ಹಾಗು ಪದ್ಮಧಾರಿಯಾಗಿರುವ ಶಿಲ್ಪ ಪ್ರಮಾಣಬದ್ಧವಾಗಿದೆ.

ಇನ್ನೊಂದು ಗರ್ಭಗುಡಿ ಬಹುಶಹ ನಂತರದ ಸೇರ್ಪಡೆ ಆಗಿರಬಹುದು. ಇಲ್ಲಿ ಅಪರೂಪದ ಪಾಂಡುರಂಗ (ವಿಠ್ಠಲ) ನ ಮೂರ್ತಿ ಇದೆ. ಸೊಂಟದ ಮೇಲೆ  ಕೈಯನ್ನು ಇಟ್ಟುಕೊಂಡು ಸ್ಥಾನಿಕ ಭಂಗಿಯಲ್ಲಿನ ಶಿಲ್ಪದ ಕಿರೀಟ ಹಾಗು ಚಿಕ್ಕದಾದ ಪ್ರಭಾವಳಿ ಇದೆ. ಏಡ ಭಾಗದಲ್ಲಿ ಅವನ ಪತ್ನಿ ರಖುಮಾಯಿಯ ಕೆತ್ತನೆ ಇದೆ. ಪಂಢರಪುರದ ದೇವಾಲಯ ನಿರ್ಮಾಣಕ್ಕೆ ಹೊಯ್ಸಳ ರಾಜ ವಿಷ್ಣುವರ್ಧನ ಕಾರಣನಾಗಿದ್ದು ನಂತರ ಕಾಲದಲ್ಲಿ ವಿಠ್ಠಲ ಎಂದು ಹೆಸರಿಸಲಾಯಿತು ಎಂದು ವಿದ್ವಾಂಸ ಮಾಟೆಯವರು ಹೇಳುತ್ತಾರೆ.  ಹಾಗಾಗಿ ಹಳೇಬೀಡಿಗೆ ಹತ್ತಿರ ಇರುವ ನೆರಳಿಗೆಯಲ್ಲಿ ಪಾಂಡುರಂಗನ ಶಿಲ್ಪ ಬಂದಿರಬಹುದು.

ನವರಂಗದಲ್ಲಿನ ಕಂಭಗಳು ಹೊಯ್ಸಳ ಶೈಲಿಯನ್ನು ಹೋಲುವುದಿಲ್ಲ. ಮುಖಮಂಟಪ ಹಾಗು ಪ್ರವೇಶ ಮಂಟಪದ ಕಂಭಗಳು ಸಹ ಇದೇ ಮಾದರಿಯಲ್ಲಿದೆ. ದೇವಾಲಯಕ್ಕೆ ಕದಂಬ ನಾಗರ ಶೈಲಿ (ಘಾಂಸನ) ಯ ಚಿಕ್ಕ ಶಿಖರವಿದೆ.

ತಲುಪುವ ಬಗ್ಗೆ: ಜಾವಗಲ್ಲ್ – ಬಾಣಾವರ ರಸ್ತೆಯಲ್ಲಿ ಮಾರ್ಗದಮ್ಮ ದೇವಾಲಯದ ನಂತರ ಎಡಕ್ಕೆ ತಿರುಗಿ ಹೋದಲ್ಲಿ ನೆರಳಗಿ ತಲುಪಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles