ತೆಂಗಿನಕಾಯಿ ಹರಕೆಗೆ ಒಲಿವ ತಿಮ್ಮಾಪುರದ ಆಂಜನೇಯ ದೇವ

* ಗುರುರಾಜ ಕುಲಕರ್ಣಿ (ಮುರನಾಳ)

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಒಂದು ಪುಟ್ಟ ಗ್ರಾಮ ತಿಮ್ಮಾಪುರ. ಈ ಗ್ರಾಮ ಹುನಗುಂದದಿಂದ ವಾಯವ್ಯ ದಿಕ್ಕಿನಲ್ಲಿ 6 ಕಿ.ಮೀ. ದೂರದಲ್ಲಿದೆ. ಬಾಗಲಕೋಟೆಯಿಂದ ಈಶಾನ್ಯ ದಿಕ್ಕಿನಲ್ಲಿ ಸುಮಾರು 50ಕಿ.ಮೀ. ದೂರದಲ್ಲಿದೆ. ಇಲ್ಲಿ ಒಂದು ಪುರಾತನ ಹನಮಂತ ದೇವರ ದೇವಾಲಯವಿದೆ.

ಒಮ್ಮೆ ಈ ಗ್ರಾಮಕ್ಕೆ ಹರಪನಹಳ್ಳಿಯ ದೇಸಾಯಿ ಮನೆತನದವರು ಇಲ್ಲಿಗೆ ಈ ಊರಿಗೆ ಬರುತ್ತಿದ್ದಾಗ ಊರ ಸಮೀಪ ಬಂದಾಗ ನನ್ನನ್ನು ಕರೆದುಕೊಂಡು ಹೋಗು ಎಂದು ಯಾರೋ ಹೇಳಿದಂತಾಯಿತು. ಆ ದೇಸಾಯಿ ಮನೆತನದವರು ಆಚೆ – ಈಚೆ ನೋಡಿದಾಗ ಈ ಹನುಮಂತನ ಪ್ರತೀಕವಿರುವ ಆ ಶಿಲೆಯನ್ನು ನೋಡಿ ಈ ಶಿಲೆ ಭಾರವಾಗುತ್ತದೆ. ನಮಗೆ ಎತ್ತಿಕೊಂಡು ಹೋಗಲು ಆಗುವುದಿಲ್ಲ ಎಂದಾಗ ಆ ಶಿಲೆಯಿಂದ ಅಶರೀರ ವಾಣಿ ಹೊರಬಂದು ನಾನು ಭಾರ ಇಲ್ಲ ರೊಟ್ಟಿ ತೂಕದಲ್ಲಿ ಬರುತ್ತೇನೆ ಎಂದು ಹೇಳಿದಾಗ ಆ ದೇಸಾಯಿ ಕುಟುಂಬದವರು ಆ ಶಿಲೆಯನ್ನು ಹೊತ್ತುಕೊಂಡು ತಿಮ್ಮಾಪುರ ಗ್ರಾಮದವರೆಗೆ ಬರುತ್ತಾರೆ. ಅಲ್ಲಿ ಈಗಿರುವ ದೇವಸ್ಥಾನದ ಜಾಗಕ್ಕೆ ಬಂದಾಗ ಆ ಶಿಲೆ ಭಾರವಾಗಿ ಅವರು ಅದನ್ನು ಅಲ್ಲಿಯೇ ಇಳಿಸಿ ಬಿಡುತ್ತಾರೆ. ಮತ್ತೆ ಆ ಶಿಲೆಯಿಂದ ಅಶರೀರವಾಣಿ ಬಂದು ತಾನೂ ಅಲ್ಲಿಯೇ ನೆಲೆಸುವುದಾಗಿ ಹೇಳುತ್ತಾನೆ. ಮುಂದೆ ಆ ದೇಸಾಯಿಯವರು ಗ್ರಾಮಸ್ಥರ ನೆರವಿನಿಂದ ಈ ಹನುಮಪ್ಪನಿಗೆ ಜೋಳದ ಸಂಗಟಿ ನಿವೇದಿಸುತ್ತಾರೆ. ಈ ಪರಿಪಾಠ ಇಂದಿಗೂ ಅಲ್ಲಿ ನಡೆಯುತ್ತದೆ.

ಕಲ್ಲು ಹಗುರಾದ ಮಹಿಮೆ

ಅಶಿಮಾ ಲಘಮಾ ಗರಿಮಾ ಮಣಿಮಾ ಪ್ರಾಪ್ತಿ ಪ್ರಾಕಾಮ್ಯ ಈಶತ್ವ ಮತ್ತು ವಶಿತ್ವ ಎಂಬ ಈ ಅಷ್ಟಸಿದ್ಧ ಹೊಂದಿದ ಈ ಮಾರುತಿಯ ಕಲ್ಲು ಹಗುರಾದ ಮಹಿಮೆಯೇ ಅಪಾರವಾದದ್ದು.
ಈ ತಿಮ್ಮಾಪುರ ಗ್ರಾಮಕ್ಕೆ ೪ ಕಿ.ಮೀ.ವರೆಗೆ ಯಾವ ಗ್ರಾಮಗಳು ಹತ್ತಿರವಿಲ್ಲವಾದು ದರಿಂದ ಈ ಗ್ರಾಮಕ್ಕೆ ಅಡವಿ ತಿಮ್ಮಾಪೂರ ಎಂತಲೂ ಕರೆಯುತ್ತಾರೆ.
ಒಮ್ಮೆ ಹತ್ತಿರದ ಹುನಗುಂದ ಗ್ರಾಮದ ಹತ್ತಿಯ ವ್ಯಾಪಾರಿ ಜನಾದ್ರಿ ಮನೆತನದವರು ಈ ಹನುಮನಿರುವ ಸ್ಥಳದಲ್ಲಿ ವಿಶ್ರಾಂತಿಗಾಗಿ ತಂಗಿ ಆತನನ್ನು ನಂಬಿ ಮುಂದೆ ಅವರೇ ದೇವಾಲಯವನ್ನು ಕಟ್ಟಿಸುತ್ತಾರೆ. ಮತ್ತು ಈಗಲೂ ಸಹ ಆ ಮನೆತನದವರು ಬಂದು ಜಾತ್ರೆಯಲ್ಲಿ ಭಾಗವಹಿಸಿ ಈ ಹನುಮನ ಕೃಪೆಗೆ ಪಾತ್ರರಾಗುತ್ತಾರೆ.
ಈ ಹನುಮಪ್ಪನ ಜಾತ್ರೆ ಉತ್ತರಾಮಳೆ, ಜಾತ್ರೆಯಂತಲೇ ಪ್ರಸಿದ್ಧಿಯಾಗಿದೆ. ಹುಬ್ಬಾ ಮಳೆ ನಕ್ಷತ್ರದ ನಾಲ್ಕನೇ ಪಾದದ ಶನಿವಾರ ನೀರು ಹಣಿಸುವುದರೊಂದಿಗೆ ಜಾತ್ರೆ ಪ್ರಾರಂಭವಾಗಿ ಉತ್ತರಾ ಮಳೆ ನಕ್ಷತ್ರದ ಮಳೆಯಲ್ಲಿ ಪರಿಸಮಾಪ್ತಿಯಾಗುತ್ತದೆ. ಈ ತಿಮ್ಮಾಪುರ ಗ್ರಾಮದಿಂದ 8 ಕಿ.ಮೀ. ಉತ್ತರ ದಿಕ್ಕಿನಲ್ಲಿರುವ ಮಲಪ್ರಭಾ ನದಿಗೆ ಪಲ್ಲಕ್ಕಿಯಲ್ಲಿ ತೆರಳಿ ಕಲಶದಲ್ಲಿ ಅಭಿಷೇಕದ ನೀರನ್ನು ತರುತ್ತಾರೆ. ಹತ್ಯಾರ ಸುಟಗಾಯಿ ಮತ್ತು ಮಳೆ ಬೆಳೆ ಹೇಳಿಕೆ ಈ ಹನುಮಪ್ಪನ ಜಾತ್ರೆಯ ವೈಶಿಷ್ಟö್ಯ. ಮಲಪ್ರಭಾ ನದಿಗೆ ಹೋಗಿ ನದಿಯಿಂದ ನೀರು ತರುವಾಗ ನುಡಿಸುವ ಕರಡಿ ಮಜಲು ಭಕ್ತರ ಆಕರ್ಷದ ಕೇಂದ್ರ ಬಿಂದು ಆಗಿರುತ್ತದೆ. ಮತ್ತು ಭಕ್ತರು (ಪೂಜಾರಿ) ಕತ್ತಿಯ ಅಲಗನ್ನು ತಮ್ಮ ಎದೆ, ಹೊಟ್ಟೆ, ತೊಡೆಗಳಿಗೆ ಹೊಡೆದುಕೊಳ್ಳುವುದನ್ನು ನೋಡಿದರೆ ರೋಮಾಂಚನವಾಗುತ್ತದೆ. ಮತ್ತು ಅವರಿಗೆ ಯಾವ ಗಾಯಗಳಾಗಿರುವುದಿಲ್ಲ ಇದು ಒಂದು ಮಹಿಮೆಯೇ ಸರಿ.

ದೇವರ ಪಲ್ಲಕ್ಕಿ ಉತ್ಸವ ದೇವಾಲಯವನ್ನು ಸುತ್ತಿ ಬರುವಾಗ ಆ ಪಲ್ಲಕ್ಕಿಗೆ ನೆರಳಾಗಿ ನಾಲ್ಕು ಜನ ಹಿಡಿದ ಕಂಬಳಿಯ ಕೆಳಗೆ ತೆಂಗಿನಕಾಯಿ ನೆಲಕ್ಕೆ ಬಡಿದು ಒಡೆಯುವ ಸಂಪ್ರದಾಯಕ್ಕೆ ಸುತಗಾಯಿ ಅಥವಾ ಸುಟಗಾಯಿ ಎಂದು ಗ್ರಾಮದ ಭಕ್ತರು ಕರೆಯುತ್ತಾರೆ. ಕಷ್ಟಗಳೆಂಬ ಸಾವಿರಾರು ತೆಂಗಿನಕಾಯಿಗಳು ಚೂರಾಗಿ ಒಡೆದು ಸುಖ ಸಿದ್ದಿಸುತ್ತದೆ ಎಂದು ಇಲ್ಲಿ ಭಕ್ತರ ನಂಬಿಕೆ. ಮತ್ತು ಮೈಲಾರಲಿಂಗನ ಹೇಳಿಕೆಯಂತೆಯೇ ಈ ಗ್ರಾಮದಲ್ಲಿಯೂ ಕೂಡಾ ಜಾತ್ರೆ ದಿನ ಸಾಯಂಕಾಲ ಸಮಯದಲ್ಲಿ ಭರಮದೇವರ ಕಟ್ಟೆಯ ಮೇಲೆ ಹೇಳಿಕೆ ನಡೆಯುತ್ತದೆ. ಮಳೆ-ಬೆಳೆ, ಮುಂಬರುವ ಸೂಚನೆಗಳೇ ಈ ಹೇಳಿಕೆ.
ಈ ಹನುಮಂತನ ದೇವಾಲಯ ಆವರಣದಲ್ಲಿ ಕೆಲವು ಮಹಾಮಹಿಮರ ಗದ್ದುಗೆಗಳಿದ್ದು, ಜಾತ್ರೆ ದಿನ ಅವುಗಳಿಗೆ ಪೂಜೆ ನಡೆಯುತ್ತದೆ.

ಹನುಮಪ್ಪನ ಪವಾಡಗಳು
ಈ ಹನುಮಪ್ಪ ಪವಾಡಗಳಲ್ಲಿ ಓರ್ವ ಭಕ್ತ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ಮರಳಿ ಈ ಹನುಮಪ್ಪನ ಅನುಗ್ರಹದಿಂದ ಜೋಡಿಸಿಕೊಂಡಿದ್ದು ಮತ್ತು ಇನ್ನೋರ್ವ ಭಕ್ತ ತನ್ನ ಮಂಡೆ ಚಿಪ್ಪನ್ನು ಕೊರೆದು ದೀಪ ಹಚ್ಚಿ ಅವನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ಇಲ್ಲಿ ಈ ಗ್ರಾಮದಲ್ಲಿ ಇನ್ನೊಂದು ದೇವಾಲಯದಲ್ಲಿ ಜೋಡಿ ಎತ್ತುಗಳ ವಿಗ್ರಹವಿದ್ದು ಇದಕ್ಕೆ ಜೋಡಿ ಬಸವ ಎಂದು ಪೂಜಿಸುತ್ತಾರೆ. ಇಲ್ಲಿಯ ಈ ಜೋಡಿ ಎತ್ತಿನ ಆರಾಧನೆ ಇಲ್ಲಿನ ಮಳೆ ಸಮೃದ್ಧಿಗೆ ಕಾರಣವಾಗಿದೆ.
ಮನುಜನ ಉಸಿರಿನ ಮೂಲವಾದ ಈ ಹನುಮಪ್ಪ ಮತ್ತು ರೈತನ ಬೆನ್ನೆಲುಬಾದ ಜೋಡಿ ಎತ್ತುಗಳ ಜೋಡಿ ಬಸವನ ರಥೋತ್ಸವ ಒಂದೇ ದಿನ ನಡೆಯುತ್ತದೆ. ಎಷ್ಟೇ ಕಷ್ಟ ಬಂದರೂ ಕಷ್ಟಗಳೆಂಬ ತೆಂಗಿನಕಾಯಿ ಒಡೆದುಕೊಂಡು ಕಷ್ಟಗಳನ್ನು ಚೂರು ಚೂರು ಮಾಡುವ ಈ ಆಂಜನೇಯನ ಕೃಪೆ ನಮ್ಮೆಲ್ಲರ ಮೇಲಿರಲಿ.
(ಸಹಕಾರ: ಶ್ರೀ ಜಗದೀಶ ಹದ್ಲಿ, ವರದಿಗಾರರು ಹುನಗುಂದ)

Related Articles

ಪ್ರತಿಕ್ರಿಯೆ ನೀಡಿ

Latest Articles