ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ನೂತನ ಕಟ್ಟಡಕ್ಕೆ ಶಂಕು ಸ್ಥಾಪನೆ

ಮೈಸೂರು: ಸೋಸಲೆ ವ್ಯಾಸರಾಜ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ನೂತನ ಕಟ್ಟಡಕ್ಕೆ ಜುಲೈ 11ರಂದು ಸೋಸಲೆ ವ್ಯಾಸರಾಜ ಮಠದ ಪೀಠಾಧಿಪತಿಗಳಾದ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಶಂಕು ಸ್ಥಾಪನೆ ನೆರೆವೇರಿಸಿದರು.

ನಂತರ ಮಾತನಾಡಿದ ಶ್ರೀಪಾದರು, ಹಿಂದಿನ ನಮ್ಮ ಪೂರ್ವಜರು ವೇದಾಧ್ಯಯನವನ್ನು ತಮ್ಮ ಜೀವನದ ಅವಿಭಾಜ್ಯ ಅಂಗ ಎಂಬ ಸತ್ಯವನ್ನು ಕಂಡುಕೊಂಡಿದ್ದರು. ಇದರ ಅಧ್ಯಯನವೇ ನಮ್ಮ ಜೀವನದ ಹೆಗ್ಗುರಿಯಾಗಬೇಕು ಎಂಬ ಸಂದೇಶವನ್ನೂ ನಮ್ಮ ಹಿರಿಯರು ಕೊಟ್ಟಿದ್ದಾರೆ. ಈ ದೃಷ್ಠಿಯಿಂದ ಈ ಪರಂಪರೆಯನ್ನು ಶಾಶ್ವತವಾಗಿ ಮುಂದುವರೆಸಿಕೊಂಡು ಹೋಗಬೇಕಾದ ಕಾರ್ಯಗಳನ್ನು ಮಾಡುವುದೇ ವಿದ್ಯಾಲಯಗಳು ವಿದ್ಯಾಪೀಠಗಳು ಎಂದರು.

ಇಂದು ನಮ್ಮ ಶ್ರೀಮಠದ ವ್ಯಾಸತೀರ್ಥವಿದ್ಯಾಪೀಠ ಇದೇ ರೀತಿಯ ಉನ್ನತ ದೃಷ್ಟಿಯನ್ನು ಇಟ್ಟುಕೊಂಡು ಹೊರಟಿರುವಂತಹದ್ದು, ವಿವೇಕಾನಂದರು ತಮ್ಮ ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಹೇಳಿದ ಮಾತನ್ನು ಉಲ್ಲೇಖಿಸಿದ ಶ್ರೀಗಳು ಜಗತ್ತಿನ ಕೆಲವು ದೇಶಗಳನ್ನು ಭಯೋತ್ಪಾದಕರು ಅಣು ಬಾಂಬ್ ಹಾಕಿ ಇಲ್ಲವೆಂದು ಮಾಡಿ ಬಿಟ್ಟರೆ ಎಂದು ಊಹಿಸಿಕೊಳ್ಳಿ ಇಂಗ್ಲೇಂಡ್‍ನ್ನು ಬಾಂಬ್ ಹಾಕಿ ಸರ್ವನಾಶಮಾಡಿದರೆ ಸುವ್ಯವಸ್ಥಿತವಾದ ಆಡಳಿತ ಕೊನೆಗೊಳ್ಳುತ್ತದೆ, ಜರ್ಮನಿಯನ್ನು ನಾಶಮಾಡಿದರೆ ಇಡೀವಿಶ್ವದಿಂದ ಶೌರ್ಯ ಕೆಚ್ಚು ನಾಶವಾಗತ್ತೆ, ಅದರಂತೆ ಫ್ರಾನ್ಸ್‍ನ್ನ ನಾಶಪಡಿಸಿದರೆ ಸೌಂದರ್ಯ ಹೋಗುತ್ತದೆ, ಅಕಸ್ಮಾತ್ ಭಾರತದ ಮೇಲೆ ಬಾಂಬ್ ಸಿಡಿಸಿ ನಾಶಪಡಿಸಿದರೆ ಇಡೀ ಜಗತ್ತಿನಿಂದ ಧರ್ಮ ಸಂಸ್ಕøತಿಗಳು ನಾಶವಾಗುತ್ತವೆ ಎಂದು ತಿಳಿಸಿದ್ದರು.

ಈ ದೃಷ್ಟಿಯಿಂದ ಧರ್ಮ ಸಂಸ್ಕøತಿಗೆ ದೊಡ್ಡದಾದ ಕೊಡುಗೆಯನ್ನು ನಿಡಿರುವುದು ನಮ್ಮ ಭಾರತ. ಅದರಲ್ಲಿಯೂ ಕೂಡ ನಮ್ಮ ವೇದಾಂತ ವಿದ್ಯೆ ನಮ್ಮ ಅನೇಕ ಜೀವನದ ಸಮಸ್ಯೆಗಳನ್ನು ನಾಶಪಡಿಸುತ್ತದೆ. ಭವಿಷ್ಯದಲ್ಲಿ ನಾವು ಕಾಣಬೇಕಿರುವುದು ಈ ಬೆಳಕನ್ನು, ಉಳಿದೆಲ್ಲಾ ಬೆಳಕುಗಳು ನಂದಿಹೋಗುತ್ತದೆ. ವಿದ್ಯೆಯ ಬೆಳಕು ಮಾತ್ರ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ತಂದೆ ತಾಯಿಗಳು ಕೊಟ್ಟ ದೇಹ ಈ ಜನ್ಮಕ್ಕೆ ಕೊನೆ ಆದರೆ ಗುರುಗಳಿಂದ ಪಡೆದ ವಿದ್ಯೆ ಜನ್ಮ ಜನ್ಮಾಂತರಕ್ಕೆ ಮುಂದೆ ಬರುತ್ತದೆ. ವಿದ್ಯೆ, ವಿದ್ಯೆಯಿಂದ ಪಡೆದ ನೈತಿಕ ಸಂಸ್ಕಾರ ಇವೆಲ್ಲವೂ ನಮ್ಮ ಜೀವನಕ್ಕೆ ಅವಶ್ಯವಾಗಿ ಬೇಕು, ಈ ಆದ್ದರಿಂದ ನಮ್ಮ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯವಿರುವುದಾದರೆ ಅದು ಆಧುನಿಕ ಶಿಕ್ಷಣದಿಂದಲ್ಲ, ಸಾಂಪ್ರದಾಯಿಕ ಶಿಕ್ಷಣ ಪದ್ದತಿಯ ಮೂಲಕ. ನಮ್ಮ ವಿದ್ಯಾಪೀಠದಲ್ಲಿ ಉಪನಯನವಾದ ವಿದ್ಯಾರ್ಥಿಗಳಿಗೆ ವೇದಾಧ್ಯಯನದೊಂದಿಗೆ ಲೌಕಿಕ ವಿದ್ಯೆಯನ್ನು ಕಲಿಸಲಾಗುತ್ತದೆ. ಇದರಿಂದ ಸಮಾಜಕ್ಕೆ ದೊಡ್ಡದಾದ ವಿದ್ಯಾಲಾಭ ಆಗುತ್ತಿದೆ ಹಾಗೂ ಆಗಲಿದೆ ಎಂದು ತಿಳಿಸಿದರು.

20 ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಾಲ್ಕುಕೋಟಿ ರೂಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ವಿದ್ಯಾಪೀಠದ ಕಟ್ಟಡದಲ್ಲಿ 12 ಪಾಠಶಾಲಾ ಕೊಠಡಿಗಳು, ಗ್ರಂಥಾಲಯ, ಸಂಶೋಧನಾ ಕೇಂದ್ರ, ಕಂಪ್ಯೂಟರ್ ಲ್ಯಾಬ್, ಆಡಳಿತ ಕಛೇರಿ, ಸಭಾಂಗಣ, 4 ವೇದ ಪಾಠಶಾಲೆಗಳು, ವಿದ್ಯಾರ್ಥಿನಿಲಯ, ಪಾಕಶಾಲೆ, ಭೋಜನಾಲಯ, ಆಡಿಯೋವಿಷುಯಲ್ ಕೊಠಡಿಗಳನ್ನು ಹಾಗೂ 5000ಚದರಡಿ ಒಳಾಗಣ ಕ್ರೀಡಾಂಗಣವನ್ನು ಹೊಂದಿರುವ ಸುಸಜ್ಜಿತ 4 ಅಂತಸ್ಥಿನ ಕಟ್ಟಡ ಇದಾಗಿರುತ್ತದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಹೆಚ್.ವಿ ರಾಜೀವ್, ಮಾಜಿ ವಿಧಾನ ಪರಿಷತ್ ಸದಸ್ಯ ಗೊ.ಮಧುಸೂದನ, ವ್ಯಾಸತೀರ್ಥವಿದ್ಯಾಪೀಠದ ಮ್ಯಾನೇಜಿಂಗ್ ಟ್ರಸ್ಟಿ ವಿದ್ವಾನ್ ಪಿ. ಎಸ್ ಶೇಷಗಿರಿ ಆಚಾರ್ಯ, ವ್ಯಾಸತೀರ್ಥವಿದ್ಯಾಪೀಠದ ಪ್ರಾಂಶುಪಾಲರಾದ ಡಾ|| ಸಿ.ಹೆಚ್. ಶ್ರೀನಿವಾಸಮೂರ್ತಿ ಆಚಾರ್ಯ, ಡಾ|| ಆನಂದತೀರ್ಥಾಚಾರ್ಯ ನಾಗಸಂಪಿಗೆ ಹಾಗೂ ಸೋಸಲೆ ವ್ಯಾಸರಾಜ ಮಠದ ದಿವಾನರಾದ ಎಲ್.ಎಸ್ ಬ್ರಹ್ಮಣ್ಯಾಚಾರ್ಯ, ವಿದ್ಯಾಪೀಠದ ಗೌರವ ಕಾರ್ಯದರ್ಶಿಗಳಾದ ಡಾ.ಡಿ.ಪಿ ಮಧುಸೂದನಚಾರ್ಯ, ಮುರಳೀಧರ್‍ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles