ಶನಿದೋಷ ಪರಿಹರಿಸುವ ಪುಣ್ಯಕ್ಷೇತ್ರವಿದು…

ಯೋಗಮುದ್ರೆಯಲ್ಲಿ ಭಕ್ತರಿಗೆ ಅಭಯ ನೀಡುವ ಈ ಗಣಪನ ವಿಶೇಷತೆಗಳು ಹಲವು. ಇಲ್ಲಿಗೆ ಭೇಟಿ ನೀಡಿದರೆ ಶನಿದೋಷ ನಿವಾರಣೆಯಾಗುತ್ತದೆ ಎಂದು ತಲೆತಲಾಂತರಗಳಿ0ದ ನಂಬಿಕೊ0ಡು ಬರಲಾಗಿದೆ.

ದೇಶದೆಲ್ಲೆಡೆ ವಿನಾಯಕ ದೇವನ ಮಂದಿರಗಳು ಅನೇಕ. ಪೌರಾಣಿಕ ಐತಿಹ್ಯವುಳ್ಳ, ಸ್ಥಳ ಮಹಿಮೆ ಹೊಂದಿದ ವಿನಾಯಕ ಮಂದಿರಗಳು ಭಕ್ತರ ಪಾಲಿನ ಪುಣ್ಯಸ್ಥಳ. ಭಕ್ತರ ನಂಬಿಕೆಗೆ ಇಂಬು ಕೊಡುವ ಪುಣ್ಯಕ್ಷೇತ್ರಗಳು ನೂರಾರು. ಅಂತಹ ಮಂದಿರಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಸವೆ ಗ್ರಾಮದಲ್ಲಿರುವ ಕಮಂಡಲ ಗಣಪತಿ ದೇವಸ್ಥಾನ ಕೂಡಾ ಒಂದು. ಯೋಗಮುದ್ರೆಯಲ್ಲಿ ಭಕ್ತರಿಗೆ ಅಭಯ ನೀಡುವ ಈ ಗಣಪನ ವಿಶೇಷತೆಗಳು ಹಲವು. ಇಲ್ಲಿಗೆ ಭೇಟಿ ನೀಡಿದರೆ ಶನಿದೋಷ ನಿವಾರಣೆಯಾಗುತ್ತದೆ ಎಂದು ತಲೆತಲಾಂತರಗಳಿ0ದ ನಂಬಿಕೊ0ಡು ಬರಲಾಗಿದೆ.

ಸಾವಿರ ವರ್ಷಗಳಷ್ಟು ಹಳೆಯದಾದ ದೇಗುಲವಿದು. ಸುತ್ತಲೂ ಹಸಿರಿನ ಹೊದಿಕೆ ಹಾಸಿದಂತಿರುವ ಪ್ರಕೃತಿಯ ನಡುವೆ ಯೋಗ ಮುದ್ರೆಯಲ್ಲಿ ನೆಲೆ ನಿಂತ ವಿಶ್ವವಂದ್ಯ ವಿನಾಯಕನು ಭಕ್ತರ ಇಷ್ಟಗಳನ್ನು ಈಡೇರಿಸುತ್ತಿದ್ದಾನೆ. ಹೆಚ್ಚಿನ ದೇವಸ್ಥಾನಗಳಲ್ಲಿ ಗಣೇಶನ ವಿಗ್ರಹವು ನಿಂತ ಭಂಗಿಯಲ್ಲಿ ಇಲ್ಲವೇ ಕುಳಿತ ಭಂಗಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಕಮಂಡಲ ಗಣೇಶ ಚಕ್ಕಲು ಬಕ್ಕಲು ಹಾಕಿ ಕುಳಿತಿದ್ದಾನೆ.
ಶನಿದೋಷ ನಿವಾರಣೆಗೆ ಹೆಸರುವಾಸಿಯಾಗಿರುವ ಈ ಕ್ಷೇತ್ರಕ್ಕೆ ಬಂದು, ಗಣೇಶನ ಸನ್ನಿಧಾನದಲ್ಲಿ ಹರಿಯುವ ಕಮಂಡಲ ತೀರ್ಥದಲ್ಲಿ ಮಿಂದೇಳಬೇಕು. ಕಮಂಡಲ ತೀರ್ಥದಲ್ಲಿ ಪುಣ್ಯಸ್ನಾನ ಗೈದು ಶ್ರೀದೇವರ ಪೂಜೆ ಮಾಡಿದರೆ ಸಕಲ ದೋಷಗಳು ಪರಿಹಾರವಾಗುವುದು ಎಂಬುದು ಭಕ್ತರ ನಂಬಿಕೆ. ಇಲ್ಲಿನ ತೀರ್ಥವನ್ನು ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುವುದು, ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆ ಎಂಬ ನಂಬಿಕೆಯು ಇದೆ. ವಿದ್ಯಾಪ್ರದಾಯಕ ವಿನಾಯಕನ ಮಹಿಮೆ ಇದು.
ಇಲ್ಲಿನ ಮತ್ತೊಂದು ವಿಶೇಷತೆ ಅಂದರೆ ವರ್ಷದ ಎಲ್ಲಾ ಸಮಯದಲ್ಲಿಯೂ ಕಮಂಡಲ ಆಕಾರದಿಂದ ನೀರು ಚಿಮ್ಮುತ್ತಲೇ ಇದೆ. ಬೇಸಿಗೆ ಕಾಲದಲ್ಲಿ ಇಲ್ಲಿ ನೀರು ಕಡಿಮೆಯಾಗುವುದಿಲ್ಲ.

ಕಮಂಡಲ ತೀರ್ಥ ಹೇಗೆ ಉದ್ಭವ ಆಯಿತು ಎಂಬುದರ ಬಗ್ಗೆ ಒಂದು ಪೌರಾಣಿಕ ಕಥೆ ಇದೆ.
ಒಮ್ಮೆ ಶನಿದೇವನ ಕೃಪೆಯಿಂದ ಪಾರಾಗಲು ಪಾರ್ವತಿ ದೇವಿಯು ಭುವಿಗಿಳಿದು ಮೃಗವಧೆ ಎಂಬಲ್ಲಿ ತಪಸ್ಸು ಮಾಡುತ್ತಾಳೆ. ಅಲ್ಲಿಂದ ಈ ದೇವಾಲಯದಲ್ಲಿರುವ ತನ್ನ ಪುತ್ರ ಗಣೇಶನನ್ನು ಪೂಜೆ ಮಾಡಲು ಬಂದಾಗ ಅಲ್ಲಿ ನೀರಿನ ಅಭಾವ ಇರುತ್ತದೆ. ಇದನ್ನು ಕಂಡ ಪಾರ್ವತಿ ದೇವಿ ಬ್ರಹ್ಮದೇವನನ್ನು ಪ್ರಾರ್ಥಿಸುತ್ತಾಳೆ. ಆಗ ಸಾಕ್ಷಾತ್ ಬ್ರಹ್ಮ ದೇವರು ಭೂಮಿಗೆ ಬಂದು ಬಾಣ ಬಿಟ್ಟು ತೀರ್ಥ ಕುಂಡವನ್ನು ನಿರ್ಮಿಸುತ್ತಾರೆ. ಅದು ಮುಂದೆ ಬ್ರಾಹ್ಮೀ ನದಿಯ ಉಗಮ ಸ್ಥಾನವಾಗುತ್ತದೆ ಎಂಬ ಪ್ರತೀತಿ ಇದೆ. ಈ ನದಿಯಲ್ಲಿ ಸ್ನಾನ ಮಾಡುವುದರಿಂದ ಶನಿದೋಷಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಬಹಳ ಕಾಲದಿಂದ ಇದೆ.

ಹೋಗುವುದು ಹೀಗೆ…
ಶ್ರೀಕ್ಷೇತ್ರ ಶೃಂಗೇರಿಯಿ0ದ 34 ಕಿಮೀ ದೂರದಲ್ಲಿದ್ದು, ಶೃಂಗೇರಿಯ ದೇವಿ ದರ್ಶನಕ್ಕೆ ಬಂದವರು ಇಲ್ಲಿನ ಗಣೇಶನ ದರ್ಶನವನ್ನೂ ಮಾಡಿಕೊಂಡು ಬರಬಹುದು.
ಕಮಂಡಲ ಗಣಪತಿ ದೇವಸ್ಥಾನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಿಂದ 6 ಕಿಮೀ ದೂರದ ಕಸವೆ ಗ್ರಾಮದಲ್ಲಿದೆ. ಕೊಪ್ಪದಿಂದ ಮೃಗವಧೆಗೆ ಹೋಗುವ ಮಾರ್ಗದಲ್ಲಿ 4 ಕಿಮೀ ಸಾಗಿದರೆ ಶ್ರೀ ಕಮಂಡಲ ಗಣಪತಿ ಕ್ಷೇತ್ರ ಎಂಬ ಸ್ವಾಗತ ಕಮಾನು ಸಿಗುತ್ತದೆ. ಬೆಂಗಳೂರಿನಿ0ದ 342 ಕಿಮೀ. ಮಂಗಳೂರಿನಿ0ದ 142 ಕಿಮೀ ದೂರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles