ನಂದಿಹಳ್ಳಿಯ ಬಸವಣ್ಣ

ದೇಹದಿಂದ ಪ್ರತ್ಯೇಕವಿದ್ದರೂ ಮನಸ್ಸು ಸದಾ ಶಿವನಲ್ಲಿ ಕೇಂದ್ರೀಕೃತವಾಗಿರುತ್ತದೆ ಎನ್ನುವುದರ ಸೂಚಕವಾಗಿ ಶಿವನ ಮುಂದೆ ನಂದಿ ವಿಗ್ರಹವಿರುತ್ತದೆ.

*ವೈ.ಬಿ.ಕಡಕೋಳ
 ಯಾವುದೇ ಊರುಗಳ ಹೆಸರನ್ನು ತಗೆದುಕೊಂಡರೂ ಅಲ್ಲಿ ಒಂದು ಐತಿಹ್ಯವಿದ್ದೇ ಇರುತ್ತದೆ. ಅದರ ಹೆಸರಿನ ಹಿಂದೆ ಇತಿಹಾಸದ ಗತನೆನಪು ಹೊಂದಿದ ನಂಟನ್ನು ಉಳಿಸಿಕೊಂಡ ಊರುಗಳು ಇಂದಿಗೂ ಉಳಿದು ಬಂದಿವೆ. ಕಿತ್ತೂರು ತಾಲೂಕಿನ ನಂದಿಹಳ್ಳಿ ಎಂಬ ಗ್ರಾಮವೂ ಕೂಡ ಇದಕ್ಕೆ ಹೊರತಾಗಿಲ್ಲ. ಕಿತ್ತೂರಿನಿಂದ 8 ಕಿ.ಮೀ ಅಂತರದ ಊರು ನಂದಿಹಳ್ಳಿ. ಹಳ್ಳಿ ಎಂಬುದು ಚಿಕ್ಕ ಊರನ್ನು ಸೂಚಿಸಿದರೆ, ನಂದಿ ಎಂಬುದು ಈಶ್ವರನ ವಾಹನ ಎಂಬುದರ ಸಂಕೇತ.
   ಪೌರಾಣಿಕವಾಗಿ ಶಿಲದ ಎಂಬ ಮುನಿಯು ಸಾವಿರಾರು ವರ್ಷಗಳ ತಪಸ್ಸು ಮಾಡಿ ತನಗೆ ಎಂದಿಗೂ ನಶಿಸದ ಪುತ್ರನಿರಬೇಕೆಂದು ಬಯಕೆಯನ್ನು ಶಿವನ ಮೂಲಕ ಗಳಿಸಿಕೊಳ್ಳುತ್ತಾನೆ. ಹಾಗೆ ಶಿವನ ವರಪ್ರಸಾದದಿಂದಲೇ ಹುಟ್ಟಿದ ನಂದಿ ಶಿವನಿಗೆ ಬಲು ಪ್ರಿಯ. ಅದರಂತೆ ನಂದಿಗೂ ಸಹ ಶಿವನ ಮೇಲೆ ಎಲ್ಲಿಲ್ಲದ ಪ್ರೀತಿ ಗೌರವ. ಹಾಗೂ ಆದರ.
      ದೇಹದಿಂದ ಪ್ರತ್ಯೇಕವಿದ್ದರೂ ಮನಸ್ಸು ಸದಾ ಶಿವನಲ್ಲಿ ಕೇಂದ್ರೀಕೃತವಾಗಿರುತ್ತದೆ ಎನ್ನುವುದರ ಸೂಚಕವಾಗಿ ಶಿವನ ಮುಂದೆ  ನಂದಿ ವಿಗ್ರಹವಿರುತ್ತದೆ. ಕಿತ್ತೂರಿನ ಸಮೀಪದಲ್ಲಿ ಮೂರು ನಂದಿಹಳ್ಳಿ ಗ್ರಾಮಗಳಿವೆ. ಚಿಕ್ಕನಂದಿಹಳ್ಳಿ, ಹಿರೇನಂದಿಹಳ್ಳಿ, ನಂದಿಹಳ್ಳಿ. ಇವೆಲ್ಲವೂ ಒಂದರ ಪಕ್ಕ ಮತ್ತೊಂದರಂತೆ ಇರುವುದು ಕೂಡ ವಿಶೇಷ. 
ಹಾಗಾದರೆ ನಾವು ಭೇಟಿ ಮಾಡಬೇಕಾದ ನಂದಿಹಳ್ಳಿಯು ಕಿತ್ತೂರಿನಿಂದ 8ಕಿ.ಮೀ ಅಂತರದಲ್ಲಿದ್ದು, ಬೈಲಹೊಂಗಲ ಮಾರ್ಗವಾಗಿ ಹೊರಡುವ ರಸ್ತೆಯಲ್ಲಿ ಕಿತ್ತೂರಿನಿಂದ ಅತೀ ಸಮೀಪದಲ್ಲಿರುವ ಮೊದಲಿಗೆ ಬರುವ ಹಳ್ಳಿಯಾಗಿದೆ. ಇನ್ನುಳಿದ ನಂದಿಹಳ್ಳಿ ಹೆಸರಿನ ಗ್ರಾಮಗಳು ನಂತರ ಬರುತ್ತವೆ.
      ಕಿತ್ತೂರಿನಿಂದ ಪಟ್ಟಿಹಾಳ ಮಾರ್ಗವಾಗಿ ಚಲಿಸುವ ಬಸ್ ನಂದಿಹಳ್ಳಿ ಗ್ರಾಮದ ಮೂಲಕ ಬಂದು ಹೋಗುತ್ತದೆ. ದೇವಾಲಯದ ಮುಂದೆಯೇ ನಿಂತು ಹೋಗುವುದರಿಂದ ಕಿತ್ತೂರಿನಿಂದ ಇಲ್ಲಿಗೆ ಬಂದು ಹೋಗುವವರಿಗೆ ಅನುಕೂಲ ಇಲ್ಲವಾದಲ್ಲಿ ಸ್ವಂತ ವಾಹನವಿದ್ದಲ್ಲಿ ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ. ಬೈಲಹೊಂಗಲದಿಂದ 26 ಕಿ.ಮೀ ಮತ್ತು ಸವದತ್ತಿಯಿಂದ ಬೆಳವಡಿ ಮೂಲಕ 32 ಕಿ.ಮೀ ಅಂತರದಲ್ಲಿ ನಂದಿಹಳ್ಳಿಯನ್ನು ತಲುಪಬಹುದಾಗಿದೆ. ಕಿತ್ತೂರಿಗೆ ಬಂದರೂ ಕೂಡ ನಂದಿಹಳ್ಳಿಯನ್ನು ಸುಲಭವಾಗಿ ತಲುಪಬಹುದು. ಅಟೋ ರಿಕ್ಷಾಇತರೆ ಬಾಡಿಗೆ ವಾಹನಗಳು ಕೂಡ ಕಿತ್ತೂರಿನಿಂದ ಲಭ್ಯವಿದ್ದು ಅವರವರ ಅನುಕೂಲಕ್ಕೆ ತಕ್ಕಂತೆ ಇಲ್ಲಿಗೆ ಬಂದು ಹೋಗಬಹುದು.
    ಇಲ್ಲಿ ಬಂದಿಳಿದ ತಕ್ಷಣ ಗೋಚರಿಸುವುದೇ ಎರಡು ಗೋಪುರ, ವಿಶಾಲವಾದ ಪ್ರಾಂಗಣವುಳ್ಳ ನಂದಿಹಳ್ಳಿ ಬಸವಣ್ಣನ ದೇವಸ್ಥಾನ. ಅದನ್ನು ಬಿಟ್ಟರೆ ದೇವಸ್ಥಾನಕ್ಕೆ ಹಣ್ಣು ಕರ್ಪೂರ ಎಣ್ಣೆ ಇತ್ಯಾದಿ ತಗೆದುಕೊಂಡು ಹೋಗಬೇಕಲ್ಲವೇ ಅವುಗಳನ್ನು ಹೊಂದಿದ ಪುಟ್ಟ ಪುಟ್ಟ ಅಂಗಡಿಗಳು. ಮಕ್ಕಳೊಂದಿಗೆ ಬಂದಿದ್ದಲ್ಲಿ ಮಕ್ಕಳು ತಿನ್ನಲು ಬೇಕಾದ ಸಣ್ಣಪುಟ್ಟ ತಿಂಡಿ ತಿನಿಸು ಕೂಡ ಇಲ್ಲಿ ಲಭ್ಯವಿದೆ. ಆದರೆ ನಿಮ್ಮ ಜೊತೆಗೆ ನೀವು ಊಟಕ್ಕೆ ಬೇಕಾಗುವಷ್ಟು ಆಹಾರ ತಂದಿದ್ದರೆ ಅನುಕೂಲ. ದೇವಸ್ಥಾನದ ಪಕ್ಕದಲ್ಲಿ ಒಂದು ಕಲ್ಯಾಣ ಮಂಟಪವಿದೆ. ಇಲ್ಲಿ ವಿವಾಹ ಇತರೆ ಕಾರ್ಯ ಚಟುವಟಿಕೆಗಳು ಕೂಡ ಮುಹೂರ್ತಕ್ಕೆ ತಕ್ಕಂತೆ ಜರಗುತ್ತಿರುತ್ತವೆ.
 ಪುಟ್ಟದಾದ ಬಾಗಿಲನ್ನು ಮೆಟ್ಟಿಲುಗಳ ಮೂಲಕ ಪ್ರವೇಶ ಮಾಡಿದರೆ ಸಿಗುವುದೇ ದೇವಾಲಯ. ವಿಶಾಲವಾದ ಪ್ರಾಂಗಣದಲ್ಲಿ ಸುತ್ತಲೂ ಅಲ್ಲಲ್ಲಿ ಕೊಠಡಿಗಳು ವಿವಿಧ ಧಾರ್ಮಿಕ ಕಾರ್ಯ ಮುಗಿಸಿದರೆ ಪ್ರಸಾದ ಸೇವನೆಗೆ ಕುಳಿತುಕೊಳ್ಳಲು ಅನುಕೂಲವಿರುವ ಛತ್ರಗಳ ಆಕಾರದ ಕೊಠಡಿಗಳು. ಕುಡಿಯುವ ನೀರಿನ ವ್ಯವಸ್ಥೆ ಹೊಂದಿದ ನಲ್ಲಿಗಳು ಇತ್ಯಾದಿಯನ್ನು ಪ್ರಾಂಗಣದಲ್ಲಿ ಕಾಣಬಹುದು. ಅಲ್ಲಿ ದೇವಾಲಯಕ್ಕೆ ಪ್ರದಕ್ಷಿಣೆಯನ್ನು ಕೂಡ ಹಾಕಬಹುದಾಗಿದೆ. ವಿವಾಹಗಳು ಕೂಡ ಇಲ್ಲಿ ಜರುಗುತ್ತಿರುವ ಕಾರಣ ವಿವಾಹ ಮೂಹೂರ್ತಗಳ ಸಂದರ್ಭ ಇಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ.
      ದೇವರಿಗೆ ಹರಕೆ ಹೊತ್ತವರು ತಮ್ಮ ಅಭೀಷ್ಟಾರ್ಥ ನೆರವೇರಿದಾಗ ಇಲ್ಲಿ ವಿವಿಧ ರೀತಿಯ ಪ್ರದಕ್ಷಿಣೆಗಳನ್ನು ಹಾಕುವುದುಂಟು. ಒಳಗೆ ಪ್ರವೇಶಿಸಿದರೆ ವಿಶಾಲವಾದ ಅಜಾನುಬಾಹು ನಂದಿ ವಿಗ್ರಹವನ್ನು ನೀವು ಕಾಣಬಲ್ಲಿರಿ. ಏಕಶಿಲಾ ವಿಗ್ರಹ ಇದಾಗಿದ್ದು, ಈ ಭಾಗದಲ್ಲಿಯೇ ವಿಶಿಷ್ಟವಾಗಿ ಬೆಳೆದು ನಿಂತ ನಂದಿ ವಿಗ್ರಹ ಇದು. ಕಿತ್ತೂರಿನ ಸಂಸ್ಥಾನಕ್ಕೂ ಈ ದೇವಾಲಯಕ್ಕೂ ಅವಿನಾಭಾವ ಸಂಬಂಧವಿದೆ.
       ಕಿತ್ತೂರಿನ ದೊರೆ ಮಲ್ಲಸರ್ಜ ಪ್ರತಿದಿನ ಈ ದೇವಾಲಯಕ್ಕೆ ಭೇಟಿ ನೀಡಿ ನಂದಿಯ ಅನುಗ್ರಹ ಪಡೆಯುವ ಮೂಲಕ ತನ್ನ ನಿತ್ಯದ ಚಟುವಟಿಕೆಗಳನ್ನು ಪ್ರಾರಂಭಿಸುತ್ತಿದ್ದರೆಂದು ಹಿರಿಯರು ಹೇಳುವರು. ಕಿತ್ತೂರು ರಾಣಿ ಚನ್ನಮ್ಮಳಿಗೂ ಕೂಡ ಈ ನಂದಿ ಅಚ್ಚುಮೆಚ್ಚು. 
ಕಲ್ಯಾಣದ ಶರಣರು ಉಳವಿಯತ್ತ ಸಾಗಿದಾಗ ಈ ಮಾರ್ಗವಾಗಿ ಸಂಚರಿಸಿರುವುದು ಕೂಡ ನಂದಿಹಳ್ಳಿ ಉಲ್ಲೇಖವಾಗುತ್ತದೆ. ಇಲ್ಲಿನ ನಂದಿ ಮಾತ್ರ ಭಕ್ತರ ಅಭೀಷ್ಟ ಪೂರೈಸಿದ ನಂದಿಯಾದ ಕಾರಣ ಇಲ್ಲಿನ ಸುತ್ತಮುತ್ತಲಿನ ಜನರೂ ಈ ಬಸವಣ್ಣನಿಗೆ ಬಂದು ತಮ್ಮ ಭಕ್ತಿ ಸಮರ್ಪಿಸುವುದನ್ನು ಕಾಣಬಹುದು. ಇಲ್ಲಿ ನಂದಿ ಎದುರಿಗೆ ಈಶ್ವರನ ಮೂರ್ತಿ ಇದೆ. ನಂದಿ ತದೇಕ ಚಿತ್ತದಿಂದ ಈಶ್ವರನ ನೋಡುತ್ತಿರುವಂತೆ ಭಾಸವಾಗುತ್ತದೆ. ಒಂದು ಬದಿಗೆ ಅರ್ಚಕರ ಕೊಠಡಿಯಿದ್ದು ಅವರು ಸದಾ ಅಲ್ಲಿರುವುದರಿಂದ ಅರ್ಚನೆಗೆ ಅನುಕೂಲ. ಒಟ್ಟು ಮೂರು ಮನೆತನಗಳು ತಮ್ಮ ತಮ್ಮ ಸರತಿಯಂತೆ ಇಲ್ಲಿ ಅರ್ಚನೆ ಕೈಗೊಳ್ಳುತ್ತ ಬಂದಿದ್ದು. ನಿತ್ಯವೂ ನಂದಿಗೆ ಪೂಜೆ ಸಲ್ಲುತ್ತಿರುವುದು.
         ನಂದಿ ಬಸವಣ್ಣನ ವಾರ ಸೋಮವಾರವೆಂತಲೂ ಆ ದಿನ ವಿಶೇಷವಾದ ಜನಸಂದಣಿ ಇಲ್ಲಿರುವುದು. ಅಷ್ಟೇ ಅಲ್ಲ ಶ್ರಾವಣ ಮಾಸದಲ್ಲಿ ಇಲ್ಲಿ ವಿಶಿಷ್ಟ ಪೂಜೆಗಳು ಜರುಗುತ್ತವೆ. ಪ್ರತಿ ಶ್ರಾವಣ ಸೋಮವಾರವಂತೂ ಹಬ್ಬದ ವಾತಾವರಣ ಈ ದೇವಾಲಯದಲ್ಲಿ ಏರ್ಪಟ್ಟಿರುತ್ತದೆ. ಅರ್ಚಕರನ್ನು ಕೇಳಿದೆ ನಾನು ಮೂರ್ತಿಯ ಪೋಟೋ ತಗೆದುಕೊಳ್ಳಬಹುದೇ ಎಂದು ಅವರು ಒಪ್ಪಿಗೆ ಸೂಚಿಸಿದರು. ನನ್ನ ಪುಟ್ಟ ಅಳಿಯ ಶ್ರೇಯಸ್‍ನ ಪೋಟೋ ಮೊದಲು ತಗೆದುಕೊಂಡೆ. ಆ ಪುಟ್ಟ ಪೋರ ನನ್ನ ಪೋಟೋ ಸೆರೆ ಹಿಡಿದನು. ನಂತರ ದೇವರಿಗೆ ಹಣ್ಣು ಕಾಯಿ ನೈವೇದ್ಯ ಅರ್ಪಿಸಿ ದೇವಸ್ಥಾನದ ಕುರಿತು ಅರ್ಚಕರಲ್ಲಿ ಹಲವು ಮಾಹಿತಿ ಪಡೆದುಕೊಂಡು ಕಿತ್ತೂರಿನತ್ತ ಪ್ರಯಾಣ ಬೆಳೆಸಿದೆವು.
    ಈ ದೇವಸ್ಥಾನದಲ್ಲಿ ಶಿವರಾತ್ರಿಯ ಸಂದರ್ಭ ಇಲ್ಲಿ ರಥೋತ್ಸವ ಜರಗುತ್ತದೆ. ವರ್ಷವಿಡೀ ಯಾವುದೇ ಸಂದರ್ಭದಲ್ಲೂ ಇಲ್ಲಿಗೆ ಭೇಟಿ ನೀಡಬಹುದು.ಸದಾ ಇಲ್ಲಿ ಅರ್ಚಕರಿರುವ ಕಾರಣ ನಂದಿಯ ದರ್ಶನವನ್ನು ಪಡೆಯಬಹುದಾಗಿದೆ. ಇದೊಂದು ಚಿಕ್ಕ ಗ್ರಾಮವಾಗಿರುವ ಕಾರಣ ಸಾಧ್ಯವಾದಷ್ಟು ತಮ್ಮ ತಮ್ಮ ಅನುಕೂಲಗಳನ್ನು ಆಧರಿಸಿ ತಮ್ಮೊಂದಿಗೆ ಪರಿಕರ ಆಹಾರದ ವ್ಯವಸ್ಥೆಯೊಂದಿಗೆ ಇಲ್ಲಿಗೆ ಬಂದರೆ ಅನುಕೂಲ. ದೇವರ ದರ್ಶನಗೈದು ಇಲ್ಲಿಯೇ ಸ್ವಲ್ಪಕಾಲ ವಿಶ್ರಮಿಸಿ ಹೋಗಲು ಹೇಳಿ ಮಾಡಿಸಿದ ತಾಣವಿದು. ಹಾಗಾದರೆ ಇನ್ನೇಕೆ ತಡ ನಿಮಗೆ ಅನುಕೂಲವಿದ್ದರೆ ವರ್ಷದ ಯಾವುದೇ ದಿನ ಯಾವುದೇ ಸಂದರ್ಭ ಕಿತ್ತೂರಿನ ಮೂಲಕ ನಂದಿಹಳ್ಳಿಗೆ ಬನ್ನಿ.
 ಕಿತ್ತೂರು - ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕಾರಣ ಬೆಳಗಾವಿ ಧಾರವಾಡ ಮೂಲಕ ಸಾಕಷ್ಟು ವಾಹನಗಳ ಸಂಚಾರವಿದ್ದು. ಕಿತ್ತೂರಿನ ಬಸ್ ನಿಲ್ದಾಣದ ಮೂಲಕ ಹಾದು ಹೋಗುವ ಕಾರಣ ಕಿತ್ತೂರಿಗೆ ಬಂದು ಅಲ್ಲಿನ ಬಸ್ ನಿಲ್ದಾಣದಲ್ಲಿ ನಂದಿಹಳ್ಳಿ ಬಸವಣ್ಣನಿಗೆ ಹೋಗುವ ಬಸ್ ಎಷ್ಟು ಗಂಟೆಗೆ ಬರುತ್ತದೆ ಎಂದು ವಿಚಾರಿಸಿ ಸರಕಾರಿ ಬಸ್ ಮೂಲಕ ಇಲ್ಲಿಗೆ ನೇರವಾಗಿ ತಲುಪಬಹುದು. ಇಲ್ಲವೇ ಅಟೋ ರಿಕ್ಷಾ ಅಥವ ವಿವಿಧ ರೀತಿಯ ಬಾಡಿಗೆ ವಾಹನಗಳ ಮೂಲಕವೂ ಬರಬಹುದು. ನಿಮ್ಮದೇ ಆದ ವಾಹನದ ವ್ಯವಸ್ಥೆಯೊಂದಿಗೆ ಬಂದಿದ್ದರಂತೂ ಎಲ್ಲಕ್ಕಿಂತಲೂ ಅನುಕೂಲ. ಯಾವುದೇ ರೀತಿಯಿಂದಲಾದರೂ ಬನ್ನಿ ನಿಮಗೆ ನಂದಿ ದರ್ಶನ ಕಟ್ಟಿಟ್ಟ ಬುತ್ತಿ. 

                                      

Related Articles

ಪ್ರತಿಕ್ರಿಯೆ ನೀಡಿ

Latest Articles