ಶ್ರೀ ಸತ್ಯಧರ್ಮತೀರ್ಥರ 190 ನೇ ಆರಾಧನೆ

ಹೊಳೆಹೊನ್ನೂರಿನ್ನಲ್ಲಿ ಶ್ರೀ ಸತ್ಯಧರ್ಮತೀರ್ಥರ 190 ನೇ ಆರಾಧನೆ ಸೆ.5ರಂದು ನಡೆಯಿತು. ಕೂಡಲಿ ಕ್ಷೇತ್ರದ ಪೀಠಾಧಿಪತಿ ಶ್ರೀ ರಘುವಿಜಯ ತೀರ್ಥ ಶ್ರೀ ಪಾದರು ಅಧ್ಯಕ್ಷತೆ ವಹಿಸಿದ್ದರು.
ಆರಾಧನೆ ಪ್ರಯುಕ್ತ ಮಠದಲ್ಲಿ ಶ್ರೀ ಮೂಲರಾಮ ದೇವರಿಗೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಅನುಗ್ರಹ ಸಂದೇಶ ನೀಡಿ ಮಾತನಾಡಿದ ಶ್ರೀಗಳು, ರುದ್ರಾಂಶ ಸಂಭೂತರಾದ ಶ್ರೀ ಸತ್ಯಧರ್ಮತೀರ್ಥರು ಲೌಕಿಕ ವೈದಿಕ ಉಭಯ ವಿದ್ಯೆಗಳಲ್ಲೂ ಪರಿಣತರಾಗಿ ಆಚಾರ್ಯರ ಸಿದ್ಧಾಂತಕ್ಕೂ ಪರಂಪರೆಗೂ ವಿಶಿಷ್ಟವಾದ ಸೇವೆಯನ್ನು ಮಾಡಿದ್ದಾರೆ. ಇಂತಹ ಮಹಾನುಭಾವರ ಆರಾಧನೆಯ ಪರ್ವ ದಿನದಂದು ಗುರುಗಳ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದರು.

ಶ್ರೀ ಸತ್ಯಧರ್ಮತೀರ್ಥರು:

ಶ್ರೀ ಮದಾಚಾರ್ಯರ ಮಹಾ ಸಂಸ್ಥಾನದ  ಶ್ರೀ ಮದುತ್ತರಾಧಿ ಮಠದ ಪರಂಪರೆಯಲ್ಲಿ  ಶ್ರೀ ಮದಾಚಾರ್ಯರ ತರುವಾಯ ಇಪ್ಪತ್ತೆಂಟನೆಯ ಯತಿ ಶ್ರೇಷ್ಠರು. ಹೊಳೆಹೊನ್ನೂರು ಕ್ಷೇತ್ರದಲ್ಲಿ ವೃಂದಾವಸ್ಥರಾದರು.  

33 ವರ್ಷಗಳು (1797-1830)ಸರ್ವಜ್ಞ ಪೀಠವನ್ನು ಅಲ೦ಕರಿಸಿದ ವೈಷ್ಣವ ವೇದಾಂತದ ರಸಋಷಿಗಳ ಸಮೂಹದಲ್ಲಿ ಇವರು ಪ್ರಾತಃ ಸ್ಮರಣೀಯರು. ಇವರನ್ನು ಹತ್ತೊಂಬತ್ತನೆಯ ಶತಮಾನದ ಅತ್ಯಂತ ಪ್ರಮುಖ ಗ್ರಂಥಕಾರರೆಂದೂ, ತಪಸ್ಸು, ಜ್ಞಾನ, ವೈರಾಗ್ಯಗಳ ತ್ರಿವೇಣಿ ಸಂಗಮವಾಗಿದರೆಂದು, ಶ್ರೀ  ಪಾದಂಗಳವರು ಉತ್ತಮ ಚಿತ್ರಕಾರರೂ ಆಗಿದ್ದರೆಂದು ಹಲವು ವಿದ್ವಾಂಸರು ಹೇಳುತ್ತಾರೆ.   

ಶ್ರೀ ಸತ್ಯಧರ್ಮತೀರ್ಥರ ಪೂರ್ವಾಶ್ರಮದ ಹೆಸರು ಶ್ರೀ ಪುರುಷೋತ್ತಮಾಚಾರ್ಯರು.  ತಂದೆ ಶ್ರೀ ಮುದ್ಗಲಾಚಾರ್ಯ ಮತ್ತು ತಾಯಿ ವಿದುಷಿ ಜೀವೂಬಾಯಿಯವರಿಗೆ  ಕ್ರಿ.ಶ. 1749 ರ ಶುಕ್ಲ ಸಂವತ್ಸರದ ಪುಷ್ಯಮಾಸ ಕೃಷ್ಣ ಪಕ್ಷ ಷಷ್ಠಿ ತಿಥಿಯಲ್ಲಿ , ಉತ್ತರಾ ನಕ್ಷತ್ರ ಪ್ರಥಮ ಪಾದದಲ್ಲಿ ಚಂದ್ರನು ಸಿಂಹರಾಶಿಯಲ್ಲಿರುವಾಗ ಜ್ಞಾನಿ ಶ್ರೇಷ್ಠರಾದ ಶ್ರೀ ಪುರುಷೋತ್ತಮಾಚಾರ್ಯರು ಅವತರಿಸಿದರು.  

ಅಪರೋಕ್ಷ  ಜ್ಞಾನಿಗಳಾದ ಶ್ರೀ ಶ್ರೀ ಸತ್ಯವರ ತೀರ್ಥರು ಶ್ರೀ ಪುರುಷೋತ್ತಮಚಾರ್ಯರಿಗೆ ಕ್ರಿ.ಶ. 1797 ರ ಪಿಂಗಳನಾಮ ಸಂವತ್ಸರದ ಶ್ರಾವಣ ಶುದ್ದ ಸಪ್ತಮಿಯ ದಿನ ಶುಭ ಮುಹೂರ್ತದಲ್ಲಿ ವಿಧಿಪೂರ್ವಕವಾಗಿ ಮಂತ್ರೋಪದೇಷವನ್ನು ಮಾಡಿ ಸರ್ವಜ್ಞ ಪೀಠದಲ್ಲಿ  ಕುಳ್ಳರಿಸಿ ಪಟ್ಟಾಭಿಷೇಕವನ್ನು ಮಾಡಿದರು.

ನೂತನ ಶ್ರೀ ಪಾದಂಗಳವರನ್ನು ಶ್ರೀ ಸತ್ಯಧರ್ಮತೀರ್ಥರೆಂದು ನಾಮಕರಣ ಮಾಡಿದರು. (ಆಗ ಶ್ರೀ ಪುರುಷೋತ್ತಮಾಚಾರ್ಯರಿಗೆ 47ನೇ ವಯಸ್ಸು) ಇದರಿಂದ ಶ್ರೀ ಸತ್ಯನಿಧಿತೀರ್ಥರ ಭವಿಷ್ಯದ ನುಡಿಯೂ ಶ್ರೀ ಮಂತ್ರಾಲಯ ರಾಯರು ಆಚಾರ್ಯರಿಗೆ ಕನಸಿನಲ್ಲಿ ಕೊಟ್ಟ ಸೂಚನೆಯೂ ಫಲಪ್ರದವಾಯಿತು.   “ಶ್ರೀ ಗುರುಭಕ್ತ ವಿಠಲ“ಎಂಬ ಭಕ್ತನೊಬ್ಬ ಸಮರ್ಪಿಸಿದ  ಪ್ರಾಣದೇವರನ್ನು ಇವರು ಪೂಜಿಸಿದರು.

ಶ್ರೀ ಶ್ರೀ ಸತ್ಯಧರ್ಮತೀರ್ಥರು ಕ್ರಿ.ಶ. 1830 ರಲ್ಲಿ ಶ್ರಾವಣ ಬಹುಳ ತ್ರಯೋದಶಿ ಅಂದು ಹೊಳೆಹೊನ್ನೂರಿನಲ್ಲಿ ವೃಂದಾವನಸ್ಥರಾಗುತ್ತಾರೆ. ವೃಂದಾವನ ಸನ್ನಿಧಿಯಲ್ಲಿ ವಿಶೇಷ ಸನ್ನಿಧಾನವಿದ್ದು ಗಂಗಾ ಪ್ರತ್ಯಕ್ಷ ಎಂಬ ಪ್ರತೀತಿ ಇದೆ. ಶ್ರೀ ಪಾದಂಗಳವರ ವೃಂದಾವನದ ಕೂರ್ಮಪೀಠದ ಮುಂದೆ ಸ್ವಯಂವ್ಯಕ್ತವಾದ ಎರಡು ಉದ್ಭವ ಶಿವಲಿಂಗಗಳಿವೆ. ಶ್ರೀ ಮಠದ ಹೊರಗಡೆ ಶ್ರೀ ಪಾದಂಗಳವರ ಸಾಕ್ಷಾಚ್ಚಿಷ್ಯರಾದ ಶ್ರೀ ನರಸಿಂಹ ಒಡೆಯರ್ ರವರ ಮೂಲ ಬೃಂದಾವನವಿದೆ.  

   

ವರದಿ: ಅನಂತ ಕಲ್ಲಾಪುರ

Related Articles

ಪ್ರತಿಕ್ರಿಯೆ ನೀಡಿ

Latest Articles