ಮುಕ್ಕುಂದದ ಮೂರು ಪ್ರಸಿದ್ಧ ದೇಗುಲಗಳ ನೋಡ ಬನ್ನಿ …

*ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನ ದೇವಾಲಯ ಹಲವು ದೇವಾಲಯಗಳಲ್ಲಿ ಕಲ್ಯಾಣ ಚಾಲುಕ್ಯರ ಕೊಡುಗೆ ಪ್ರಮುಖವಾದದ್ದು ಅವರ ಹಲವು ದೇವಾಲಯಗಳು ಉತ್ತರ ಕರ್ನಾಟಕ ಭಾಗದಲ್ಲಿದ್ದು ಇವುಗಳಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದದ ದೇವಾಲಯಗಳು ಪ್ರಮುಖವಾದದ್ದು.

ಇತಿಹಾಸ ಪುಟದಲ್ಲಿ ಮುಕ್ಕುಂದ ಪ್ರಮುಖ ಪಟ್ಟಣವಾಗಿ ಗುರುತಿಸಿಕೊಂಡಿತ್ತು.  ಶಾಸನಗಳಲ್ಲಿ ಮುಕ್ಕುನ್ದೆ ಅಗ್ರಹಾರ ಎಂಬ ಉಲ್ಲೇಖವಿದೆ. ಇನ್ನು ಚಾಲುಕ್ಯರ ಭೂಲೋಕಮಲ್ಲ ಆರನೇಯ ವಿಕ್ರಾಮಾದಿತ್ಯನ ಕಾಲದಲ್ಲಿ ಸಿಂಧವಂಶದ ಬಾಚಿರಾಜ ಸಾಮಂತ ಅರಸನಾಗಿ ಆಳುತ್ತಿದ್ದ ಉಲ್ಲೇಖವಿದೆ. ಅವನ ಕಾಲದಲ್ಲಿ ಕೇಶವ ದೇವಾಲಯಕ್ಕೆ ದತ್ತಿ ನೀಡದ ಉಲ್ಲೇಖ ನೋಡಬಹುದು. ಇನ್ನು ಇವನು ನಿರ್ಮಿಸಿದ ಬಾಚೇಶ್ವರ ದೇವಾಲಯದ ಉಲ್ಲೇಖವನ್ನು ನೋಡಬಹುದು.

ಸೋಮಲಿಂಗೇಶ್ವರ ದೇವಾಲಯ:

ಸುಮಾರು 1094 ರಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದೆ. ಗರ್ಭಗುಡಿಯಲ್ಲಿ ಸೋಮಲಿಂಗೇಶ್ವರ ಎಂದು ಕರೆಯುವ ಶಿವಲಿಂಗವಿದೆ. ಇನ್ನು ಬಾಗಿಲುವಾಡದ ಲಲಾಟದಲ್ಲಿ ಗಜಲಕ್ಶ್ಮಿಯ ಕೆತ್ತೆನೆ ಇದ್ದು ಸರಳವಾಗಿದೆ. ಶಿವಲಿಂಗದ ಎದುರು ನಂದಿಯ ಶಿಲ್ಪವಿದೆ.

ಇನ್ನು ನವರಂಗದಲ್ಲಿ ಕಂಭಗಳಿದ್ದು ದೇವ ಕೋಷ್ಟಕಗಳಲ್ಲಿ ಗಣಪತಿಯ ಶಿಲ್ಪ ನೋಡಬಹುದು. ಇನ್ನು ಇಲ್ಲಿನ ದೇವಾಲಯದ ಹೊರಭಿತ್ತಿಯಲ್ಲಿ ಹಲವು ನರ್ತಕಿಯರ ಹಾಗು ದೇವರ ಶಿಲ್ಪಗಳು ಗಮನ ಸೆಳೆಯುತ್ತದೆ. ದೇವಾಲಯಕ್ಕೆ ಶಿಖರ ಕಾಣಬರುವದಿಲ್ಲ. ಶಾಸನಗಳಲ್ಲಿ ಉಲ್ಲೇಖಗೊಂಡಿರುವ ಬಾಚೇಶ್ವರ ದೇವಾಲಯ ಇದೇ ಇರಬಹುದೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ಮುರಹರಿ (ಮುರಾರಿ) ದೇವಾಲಯ

ಸುಮಾರು 1134 ರಲ್ಲಿ ಬಾಚಿರಾಜನ ಕಾಲದಲ್ಲಿ ಬೆನಜಿಮಯ್ಯ ಎಂಬ ಬ್ರಾಹ್ಮಣನಿಂದ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ತೆರೆದ ಅಂತರಾಳ ಹಾಗು ನವರಂಗ ಹೊಂದಿದೆ. ಗರ್ಭಗುಡಿಯಲ್ಲಿ ಮುರಾರಿಯ ಶಿಲ್ಪವಿದ್ದು ಇಕ್ಕೆಲಗಳಲ್ಲಿನ ಪುರುಷಾಕೃತಿಗಳು ಗಮನ ಸೆಳೆಯುತ್ತದೆ. ತೆರೆದ ಅಂತರಾಳದಲ್ಲಿ ಎರಡು ಕಂಭಗಳಿದ್ದು ಉಬ್ಬು ಶಿಲ್ಪಗಳ ಕೆತ್ತನೆ ನೋಡಬಹುದು. ನವರಂಗದಲ್ಲಿ ನಾಲ್ಕು ಕಂಭಗಳಿದ್ದು ಇಲ್ಲಿ ದೇವಾಲಯ ಬಗ್ಗೆ ಶಾಸನವಿದೆ.

ಕಾಪಾಳೇಶ್ವರ ದೇವಾಲಯ

ಈ ದೇವಾಲಯವನ್ನು ಸುಮಾರು 1066 ರಲ್ಲಿ ಕಲ್ಯಾಣ ಚಾಲುಕ್ಯ ಅರದ ತ್ರೈಲೋಕ್ಯಮಲ್ಲನ ರಾಣೀ ತ್ರೈಲೋಕ್ಯ ಮಹಾದೀವಿ ನಿರ್ಮಾಣ ಮಾಡಿದ್ದು ಈ ದೇವಾಲಯಕ್ಕೆ ಹಲವು ದತ್ತಿ ನೀಡಿದ ಉಲ್ಲೇಖವಿದೆ.  ಇನ್ನು ದೇವಾಲಯ ಗರ್ಭಗುಡಿ, ಅಂತರಾಳ, ತೆರೆದ ನವರಂಗ ಹಾಗು ಸಭಾಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಚತುಶ್ಶಾಖೆಯ ಬಾಗಿಲುವಾಡ ಇದ್ದು ಶೈವ ದಾರ ಪಾಲಕರನ್ನು ನೋಡಬಹುದು. ನವರಂಗದಲ್ಲಿ ನಂದಿಯ ಶಿಲ್ಪವಿದ್ದು ಶಿಖರದ ಭಾಗ ಕಾಣುವುದಿಲ್ಲ.

ತಲುಪುವ ಬಗ್ಗೆ: ಮುಕ್ಕುಂದ ಸಿಂಧನೂರಿನಿಂದ ಸುಮಾರು 26 ಕಿಮೀ ದೂರದಲ್ಲಿದ್ದು ಸಿರಗುಪ್ಪದಿಂದ ಸುಮಾರು 25 ಕಿ ಮೀ ಹಾಗು ಗಂಗಾವತಿಯಿಂದ 46 ಕಿಮೀ ದೂರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles