ಭೂ ತಾಯಿಗೆ ಚರಗ ಚೆಲ್ಲುವ ಸೀಗೆ ಹುಣ್ಣಿಮೆ

ಅಕ್ಟೋಬರ್ 20 ಭೂ ತಾಯಿಗೆ ಚರಗ ಚಲ್ಲುವ ಉತ್ತರ ಕರ್ನಾಟಕದ ಪ್ರಸಿದ್ದ ಹುಣ್ಣಿಮೆ ಶೀಗೇ ಹುಣ್ಣಿಮೆಯ ದಿನ. ಈ ದಿನ ಒಕ್ಕಲುತನವನ್ನು ಅವಲಂಬಿಸಿದ ಕೃಷಿಕರಿಗೆಲ್ಲ ಸಂತಸ ಸಡಗರದ ದಿನ. ವರ್ಷವಿಡೀ ಉತ್ತಿ ಬಿತ್ತಿ ಬೆಳೆದ ಫಸಲನ್ನು ಕಾಣುವ ಶುಭ ದಿನ. ಈ ಸಂದರ್ಭ ಭೂ ತಾಯಿಗೆ ನಮಿಸುವ ಕ್ಷಣಗಳು ನಿಜಕ್ಕೂ ಅಭೂತಪೂರ್ವ.

*ವೈ.ಬಿ.ಕಡಕೋಳ

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಭೂ ತಾಯಿ ಎದ್ದೊಂದು ಘಳಿಗೆ ನೆನೆದೇನೋ … ಎಂದು ಜನಪದ ಗರತಿಯು ಭೂ ತಾಯಿಯನ್ನು ಬೆಳಗಿನ ಜಾವದಲ್ಲಿ ನೆನೆಯುವುದು ಜಾನಪದರ ಬದುಕಿನಲ್ಲಿ ಅಪಾರ ಭಕ್ತಿಯಿಂದ ಹೇಳುವುದು ಭೂ ತಾಯಿಗೆ ನಮಿಸುವುದನ್ನು ನಾವು ಕಾಣುತ್ತೇವೆ. ನವರಾತ್ರಿ ಎಲ್ಲ ರೈತರಿಗೆ ಮಳೆಯ ಬಿಡುವು ಬಿತ್ತನೆಯ ಭೂಮಿ ಹಸುರಿನಿಂದ ಕಂಗೊಳಿಸುತ್ತಿರುವಾಗ ಬನ್ನಿ ಮುಡಿದ ರೈತರು ಭೂ ತಾಯಿಗೆ ನಮಿಸಲು ಚರಗ ಚೆಲ್ಲಲು ಹೊರಡುವ ಹಬ್ಬ ಸೀಗೆ ಹುಣ್ಣಿಮೆ. ಉತ್ತರ ಕರ್ನಾಟಕದ ದಾರವಾಡ. ಬೆಳಗಾವಿ, ಬಾಗಲಕೋಟ, ಬಿಜಾಪುರ ಜಿಲ್ಲೆಗಳಲ್ಲಿ ಈ ಹಬ್ಬದ ಸಡಗರ ಹೇಳ ತೀರದ್ದು.

ಭೂ ತಾಯಿ ಪೂಜೆಗೆಂದು ನಸುಕಿನಲ್ಲಿ ಎದ್ದು ಹೆಣ್ಣು ಮಕ್ಕಳು ವಿವಿಧ ತರಹದ ಅಡುಗೆಯನ್ನು ಸಿದ್ದಪಡಿಸುವರು. ಅಂದರೆ ಚರಗ ಚೆಲ್ಲುವುದಕ್ಕಾಗಿ ಸೌತೆ, ಬದನೆ, ಚವಳಿಕಾಯಿ, ಕುಂಬಳಕಾಯಿ,ಪುಂಡಿಪಲ್ಲೆ,ಕುಚ್ಚಿದ ಖಾರ, ಗುರೆಳ್ಳು, ಶೆಂಗಾ ಚಟ್ನಿ, ಮೊಸರು, ಜೋಳದ ಕಡಬು, ಸಿಹಿಗಡಬು, ಅಕ್ಕಿ ಹುಗ್ಗಿ, ಸಜ್ಜೆರೊಟ್ಟಿ, ಜೋಳದರೊಟ್ಟಿ, ಕಟ್ಟಿನ ಸಾರು, ಒಗ್ಗರಣೆ ಅನ್ನ, ಬಿಳಿ ಅನ್ನ, ಒಂದೇ ಎರಡೇ ನಮ್ಮ ಜನಪದ ಮಹಿಳೆಯರ ಉತ್ಸಾಹ ಈ ಅಡುಗೆ ನೋಡಿದರೆ ತಿಳಿಯುತ್ತದೆ.ಇವನ್ನೆಲ್ಲ ಮಾಡಿಕೊಂಡು ಬುತ್ತಿಗಂಟು ಕಟ್ಟಿಕೊಂಡು ಚಕ್ಕಡಿಗಳಲ್ಲಿ ಮನೆಯವರೆಲ್ಲ ತಮ್ಮ ತಮ್ಮ ಹೊಲಗಳಿಗೆ ಹೊರಡುವ ರೀತಿ ಒಂದು ಜಾತ್ರೆಯನ್ನು ನೋಡಿದಂತಾಗುತ್ತದೆ.

“ಚೆನ್ನಾಗಿ ಮಾಡಿದ ಅಡುಗೆ ತೃಪ್ತಿ ತರುವ ಊಟ ಬಾಳಲ್ಲಿ ತುಂಬಾ ತರುವಂಥಹವು. ಈ ಅಡುಗೆ ಮಾಡಬೇಕೆಂದರೆ ಭೂ ತಾಯಿಯಲ್ಲಿ ಫಸಲು ಚೆನ್ನಾಗಿ ಬರಬೇಕು.ಫಸಲು ಚೆನ್ನಾಗಿ ಬರಬೇಕೆಂದರೆ ಮಳೆ ಬರಬೇಕು ರೈತಾಪಿವರ್ಗ ಭೂ ತಾಯಿಯನ್ನು ಚೆನ್ನಾಗಿ ಹಸನು ಮಾಡಿ ಉತ್ತಿ ಬಿತ್ತಬೇಕು. ಬಿತ್ತಿದ್ದ ಬೆಳೆಯಬೇಕು ಬೆಳೆದಾಗ ಮಾತ್ರ ಬದುಕು ಹಸನು. ಇಂಥ ಭೂ ತಾಯಿ ಹಸಿರಿನಿಂದ ಕಂಗೊಳಿಸುವ ಕಾಲ ಸೀಗೆ ಹುಣ್ಣಿಮೆ ಬರುತ್ತದೆ”. ವರ್ಷದಲ್ಲಿ ಎರಡು ಸಲ ಚರಗ ಚೆಲ್ಲುವ ಸಂಪ್ರದಾಯವಿದೆ ಅಂದರೆ ಸೀಗೆ ಹುಣ್ಣಿಮೆಗೆ ಮುಂಗಾರು ಬೆಳೆ ಬೆಳೆದು ನಿಂತಿರುವ ಸಂದರ್ಭ ಎಳ್ಳ ಅಮಾವಾಸ್ಯೆಯಲ್ಲಿ ಹಿಂಗಾರಿ ಬೆಳೆ ಬೆಳೆದು ನಿಂತ ಸಂದರ್ಭದಲ್ಲಿ ಚರಗ ಚೆಲ್ಲುವರು.ಸೀಗೆ ಹುಣ್ಣಿಮೆಗೆ ಹುರಕ್ಕಿ ಹೋಳಿಗೆಯ ವಿಶೇಷತೆ ಇದ್ದರೆ ಎಳ್ಳ ಅಮಾವಾಸ್ಯೆಗೆ ಎಳ್ಳಿನ ಶೇಂಗಾ ಹೋಳಿಗೆ ವಿಶೇಷ ಅಡುಗೆಗಳಾಗಿರುತ್ತವೆ.

ಇಡೀ ಭೂದೇವಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತಾಳೆ ಇವರೂ ಕೂಡ ಚಕ್ಕಡಿಯ ಶೃಂಗಾರ ಎತ್ತುಗಳನ್ನು ಹಿಂದಿನ ದಿನವೇ ಮೈತೊಳೆದು ಅವುಗಳ ಕೋಡುಗಳಿಗೆ ಬಣ್ಣ ಹಚ್ಚಿ ರಿಬ್ಬನ್ ಕಟ್ಟಿ ಮರುದಿನ ಅವುಗಳ ಬೆನ್ನ ಮೇಲೆ ಗುಲಾಲ್ ಹಾಕಿ ಪೂಜಿಸಿ ಚಕ್ಕಡಿಯನ್ನು ಹೂಡುತ್ತಾರೆ. ಹೀಗೆ ಸಡಗರದಿಂದ ಹೊರಡುವಾಗ ಪೂಜೆಗೆಂದು ಕರಿ ಕಂಬಳಿ ತಗೆದುಕೊಂಡು ಹೋಗುವರು. ಅಂದರೆ ಭೂ ತಾಯಿಯ ಪೂಜೆಗೆ ಕರಿ ಕಂಬಳಿ ಶ್ರೇಷ್ಟವೆಂಬುದು ರೈತರ ನಂಬುಗೆ.

ಹೊಲಗಳನ್ನು ತಲುಪಿದ ತಕ್ಷಣ ಹೊಲದಲ್ಲಿರುವ ಬನ್ನಿ ಮರವೋ ಬೇವಿನ ಮರವೋ ಹೀಗೆ ಪೂಜಿಸಲು ಸಿದ್ದತೆಗಾಗಿ ಮರದ ಕೆಳಗೆ ತಂದಿರುವ ಎಲ್ಲವನ್ನು ಇಟ್ಟು ಕರಿ ಕಂಬಳಿ ಹಾಸಿ ಹೊಲದಲ್ಲಿ ಬಿದ್ದಿರುವ ಐದು ಬೆಣಚು ಕಲ್ಲುಗಳನ್ನು ಹುಡುಕಿ ತರುವರು. ಅವುಗಳನ್ನು ತೊಳೆದು ಐದು ಕಲ್ಲುಗಳು ಪಂಚಪಾಂಡವರೆಂದು ತೊಳೆದು ಅವುಗಳಿಗೆ ಸುಣ್ಣ ,ಕೆಮ್ಮಣ್ಣು, ಹಚ್ಚಿ ವಿಭೂತಿ ಕುಂಕುಮ ಹಚ್ಚಿ ಪೂಜಿಸುವರು.ನಂತರ ಮನೆಯಿಂದ ತಂದಿದ್ದ ಅಡುಗೆಯನ್ನು ನೈವೇದ್ಯ ಮಾಡಿ ಭೂ ತಾಯಿಗೆ ಸೂರ್ಯ ದೇವನಿಗೆ ಪಂಚ ಪಾಂಡವರಿಗೆ ಎಡೆ(ನೈವೇದ್ಯ) ಹಿಡಿಯುವರು.

ನಂತರ ಮನೆಯ ಕೆಲವು ಸದಸ್ಯರು ತಮ್ಮ ತಮ್ಮ ಹೊಲದ ಅಕ್ಕ ಪಕ್ಕದಲ್ಲಿ ಅಂದರೆ ಹತ್ತಿರದಲ್ಲಿರುವ ಏಳು ಮಕ್ಕಳ ತಾಯವ್ವ,ಬಸವಣ್ಣ.ಕರಿಯಮ್ಮ,ಹೀಗೆ ಯಾವ ದೇವರ ಹೆಸರಿನಲ್ಲಿ ಸಣ್ಣಪುಟ್ಟ ಗದ್ದುಗೆ ಅಥವ ಗುಡಿಗಳಿರುತ್ತವೆಯೋ ಅವುಗಳಿಗೆ ಹೋಗಿ ನೈವೇದ್ಯ ಅರ್ಪಿಸಿ ಬರುವರು. ಹೀಗೆ ಎಲ್ಲರೂ ಒಂದೆಡೆ ಸೇರಿ ಹೊಲದಲ್ಲಿ ಚರಗ ಚಲ್ಲುವರು.ಆಗ ಎಲ್ಲರೂ ಹುಲ್ಲುಲಿಗೋ ಸುರುಂಬಳಿಗೋ ಹಲ್ಲುಲಿಗೋ ಸುರುಂಬಳಿಗೋ ಎಂದು ಹೇಳುತ್ತಾ ಇಡೀ ಹೊಲದಲ್ಲಿ ತಂದಿರುವ ಎಡೆ (ನೈವೇದ್ಯ) ಯನ್ನು ನೀರಿನೊಂದಿಗೆ ಚೆಲ್ಲುವರು. ಇದರ ಉದ್ದೇಶವಿಷ್ಟೇ ಭೂ ತಾಯಿ ನಾವೆಲ್ಲ ನಿನ್ನ ಸೇವೆ ಮಾಡಿದ್ದೇವೆ ನೀನು ಕೂಡ ಸಮೃದ್ದ ಬೆಳೆಯನ್ನು ನಮಗೆ ಕೊಡು.ಹುಲುಸಾಗಿ ನಮ್ಮ ಬೆಳೆ ಬರಲಿ. ಅದು ಎಲ್ಲೆಡೆ ಸುರುಂಬಳಿಯಾಗಿ ಜನರನ್ನು ತಣಿಸಲಿ ಎಂದು ಭಕ್ತಿಯಿಂದ ಕೇಳಿಕೊಳ್ಳುವ ಮೂಲಕ ಚರಗ ಚಲ್ಲುವರು. ನಂತರ ಕುಟುಂಬದ ಸದಸ್ಯರೆಲ್ಲ ಒಂದೆಡೆ ಕುಳಿತು ಊಟ ಮಾಡುವರು.ಅಷ್ಟೇ ಅಲ್ಲ ಅಕ್ಕ ಪಕ್ಕದ ಹೊಲಗಳಿಗೆ ಬಂದವರನ್ನು ಕರೆದು ಊಟ ಮಾಡಿಸುವರು.ತಾವು ತಂದಿದ್ದ ಅಡುಗೆಯನ್ನು ಅವರಿಗೆ ನೀಡುವುದು.ಅವರು ಇವರಿಗೆ ನೀಡುವುದು ಹೀಗೆ ವಿನಿಮಯ ಕೂಡ ಸಾಗುವುದು.

ಹೊಲ ಇಲ್ಲದ ಸ್ನೇಹಿತರನ್ನು ಕೂಡ ಈ ದಿನ ತಮ್ಮೊಡನೆ ಕರೆದು ಊಟ ಮಾಡಿಸುವುದು ತಮ್ಮ ಹೊಲಗಳನ್ನು ತೋರಿಸುವುದು ವಾಡಿಕೆ.ಈ ಸಂತಸದ ಕ್ಷಣಗಳನ್ನು ಶಿಶುನಾಳ ಷರೀಪ್‍ರು ಹೀಗೆ ಹಾಡಿದ್ದಾರೆ ಸೀಗಿ ಹುಣ್ಣಿಮೆ ಮರುದಿನ ಉಣ್ಣಲಿಕ್ಕೆ ಕರೆಯುವರೇನಲ್ಲಾ ಕರೆದರೆ ಹೋಗೋದು ಬಿಡಲಿಲ್ಲವಲ್ಲಾ ಹುರಿಯಕ್ಕಿ ಹೋಳಿಗೆ ಹೂರಣಗಡುಬು ಕಡಲೀ ಪಚ್ಚಡಿ ಕಟ್ಟಿನಂಬರಾ ಉಂಡಿಗಡಬು ಪುಂಡಿಪಲ್ಲೆ ಬುಟ್ಟಿಯೊಳಿಟ್ಟೆಲ್ಲ ಬುಟ್ಟಿಗೆ ಕೆಮ್ಮಣ್ಣು ಬಡಿದೆಲ್ಲ ಅದರ ಅನುಭವ ತಿಳಿದಿಲ್ಲ ಅಂದು ಇಂದು ಬಂದು ಬಹುದಿನ ಹೊಲದೊಳು ಕುಂತೆಲ್ಲೋ ಮನಸಿಗೆ ಮೈಲಿಗೆ ತಿಳಿಲಿಲ್ಲಾ ಗಂಧgದ ಬಟ್ಟು ಯಮಕಿಲೆ ಇಟ್ಟು ಹಂಗನೂಲು ಹಾಕಿದೆಲ್ಲ ಬಟ್ಟನ್ನ ಕಲ್ಲೀಗಿ ಸುಣ್ಣಾ ತೊಟು ಕಣ್ಣೀಲೆ ಕಂಡೆಲ್ಲಾ ಆ ಕಲ್ಲು ಉಣಲಿಲ್ಲಾ ಎಡೆಮಾಡಿ ನೀನೇ ಉಂಡೆಲ್ಲ ವಸುಧೆಯೊಳು ಶಿಶುನಾಳಧೀಶನಲ್ಲೇ ಬಲ್ಲವರು ನೀವೆಲ್ಲ ಕೂಡಿದಲ್ಲೇ ಶೃಂಗಾರ ನಾರ್ಯಾರೆಲ್ಲಾ ರಂಗಿನಿಂದ ಕೋಲು ಹಿಡಿದು ಯೋಗದಿಂದಾ ತ್ಯಾಗ ಮಾಡಿ ರಾಗದಲ್ಲೇ ಶಿವಶರಣರಲ್ಲೇ ಸೀಗಿ ಕರೆದಾರಲ್ಲಾ ಎಂದು ರೈತರು ಈ ಹಬ್ಬವನ್ನು ಆಚರಿಸುವ ರೀತಿಗೆ ಅಧ್ಯಾತ್ಮಕತೆಯ ಮೆರಗಿನ ಸಂದೇಶವನ್ನಿಟ್ಟು ಹಾಡಿರುವರು.ಇಲ್ಲಿ ಕಲ್ಲು ದೇವರ ಪೂಜಿಸಿ ಉಣ್ಣುವುದನ್ನು ತಿಳಿಸುವ ಅವರು ಅಕ್ಕಪಕ್ಕದವರನ್ನು ಊಟಕ್ಕೆ ಕರೆಯುವ ರೀತಿಯನ್ನು ತಿಳಿಸುವ ಜೊತೆಗೆ ಭೂ ತಾಯಿಯ ಪೂಜಿಸಿ ಎಲ್ಲರೂ ಸಂತಸ ಪಡುವ ರೀತಿಯನ್ನು ಕೊನೆಯ ಚರಣದಲ್ಲಿ ತಿಳಿಸಿರುವರು.ಒಟ್ಟಾರೆ ಭೂ ತಾಯಿಯನ್ನು ಪೂಜಿಸಿ ಸಿಹಿ ಅಡುಗೆಯನ್ನು ಉಣಬಡಿಸುವ ಯಾವತ್ತೂ ಹೊಲಕ್ಕೆ ಕಾಲಿಡದ ಸದಸ್ಯರನ್ನು ಹೊಲವನ್ನು ನೋಡದ ಬಂಧುಬಳಗದವರನ್ನು ಕರೆದುಕೊಂಡು ಚರಗ ಚೆಲ್ಲುವ ಸಂಪ್ರದಾಯ ಹೊಂದಿದ ಸೀಗೆ ಹುಣ್ಣಿಮೆ ಉತ್ತರ ಕರ್ನಾಟಕದ ಜನಪ್ರೀಯ ಹಬ್ಬಗಳಲ್ಲೊಂದು.ಅಷ್ಟೇ ಅಲ್ಲ ಉತ್ತರ ಕರ್ನಾಟಕದ ವಿಶಿಷ್ಟ ಅಡುಗೆಯ ರುಚಿ ಕಾಣಬೇಕಾದರೆ ಸೀಗೆ ಹುಣ್ಣಿಮೆಗೆ ನೆಂಟರಾಗಿ ಅವರ ಮನೆಗಳಿಗೆ ಆಗಮಿಸಬೇಕು.ಬಂಧು ಬಳಗವನ್ನೆಲ್ಲ ಕರೆದುಕೊಂಡು ಹೊಲಕ್ಕೆ ಹೋಗುವ ರೈತರು ಹೊಲವಿಲ್ಲದ ಅಕ್ಕಪಕ್ಕದವರನ್ನೂ ನೆಂಟರನ್ನೂ ಕೂಡ ಈ ಹಬ್ಬಕ್ಕೆ ಆಹ್ವಾನಿಸಿ ತಮ್ಮ ಹೊಲದ ಫಸಲನ್ನು ತೋರಿಸಿ ಖುಷಿ ಪಟ್ಟು ಊಟ ಮಾಡಿಸುತ್ತಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles