ಬೆಳದಿಂಗಳೆಂಬ ಮುಗುಳ್ನಗೆ

* ಕೃಷ್ಣಪ್ರಕಾಶ ಉಳಿತ್ತಾಯ

ನಿಜಸಲ್ಲಾಪಮಾಧುರ್ಯವಿನಿರ್ಭರ್ತ್ಸಿತಕಚ್ಛಪೀ ಮಂದಸ್ಮಿತಪ್ರಭಾಪೂರಮಜ್ಜತ್ಕಾಮೇಶಮಾನಸಾ||

ಮಾತಿಗೇ ಮಾತೆಯಾಗಿರುವ ಮಾತೆಯ ಮಾತನ್ನು ಈ ಮಾತಲ್ಲಿ ಹೇಳುತ್ತಾರೆ-‘ನಿಜಸಲ್ಲಾಪಮಾಧುರ್ಯವಿನಿರ್ಭರ್ತ್ಸಿತಕಚ್ಛಪೀ’ ಎಂದು. ತಾಯಿಯ ಮಾತಿನ ಮಧುರತೆ ಮತ್ತು ಅದು ಹೊರಡಿಸುವ ನಾದ ಗುಂಫನ ಸರಸ್ವತಿಯ ಕಚ್ಛಪೀ ವೀಣೆಯ ನಾದವನ್ನೂ ತಿರಸ್ಕರಿಸುವಂತಹಾದ್ದಾಗಿದೆ. ಕಚ್ಛಪೀ ವೀಣೆಯ ನಾದಕ್ಕಿಂತಲೂ ಅಧಿಕತಮವಾದ ನಾದ ಸೌಂದರ್ಯವನ್ನು ತಾಯಿಯ ಮಧುರ ವಚನಗಳು ಹೊಂದಿವೆ.  

ಸೌಂದರ್ಯಲಹರಿಯ ಈ ಹಾಡು ಇಲ್ಲಿ ಉಲ್ಲೇಖನೀಯ-  ವಿಪಂಚ್ಯಾ ಗಾಯಂತೀ ವಿವಿಧಮಪದಾನಂ ಪಶುಪತೇ- ಸ್ತ್ವಯಾರಬ್ಧೇ ವಕ್ತುಂ ಚಲಿತಶಿರಸಾ ಸಾಧುವಚನೇ| ತದೀಯೈರ್ಮಾಧುರ್ಯೈರಪಲಪಿತತಂತ್ರೀಕಲರವಾಂ ನಿಜಾಂ ವೀಣಾಂ ವಾಣೀ ನಿಚುಲಯತಿ ಚೋಲೇನ ನಿಭೃತಮ್||  

ಸರಸ್ವತಿಯು ಪಶುಪತಿಯ ಲೀಲೆಗಳನ್ನು ವೀಣೆಯಿಂದ ಹಾಡುತ್ತಿರುವಾಗ ತಾಯಿ ನೀನು ಪ್ರಶಂಸಾಪೂರ್ವಕವಾಗಿ ತಲೆದೂಗುತ್ತಾ ಒಳ್ಳೆಯ ಮಾತನ್ನು ಆಡುವುದಕ್ಕೆ ತೊಡಗಿದಾಗ ಸರಸ್ವತಿಯು ತನ್ನ ಕಚ್ಛಪೀ ವೀಣೆಗೆ ಗವಸನ್ನು (ಮುಸುಕು, ಚೀಲ) ಹಾಕಿ ಮುಚ್ಚುತ್ತಾಳೆ. ಕಾರಣ, ನಿನ್ನ (ತಾಯಿಯ) ಮಾತಿನ ಮಾಧುರ್ಯ ಸರಸ್ವತಿಯ ವೀಣೆಯ ತಂತ್ರೀಕಲರವವನ್ನೂ ಪರಿಹಾಸಮಾಡುವಂತಹಾ ಅಸದೃಶ ಮಾಧುರ್ಯವನ್ನು ಹೊಂದಿರುವಂತದ್ದು. ತಾಯಿಯ ಮಧುರವಚನವನ್ನು ಕೇಳಿದಾಗ ವಾಗ್ದೇವಿ ಸರಸ್ವತಿಯು ಕರಗಿಬಿಟ್ಟಳೆಬುಂದನ್ನು ಇಲ್ಲಿ ಧ್ವನಿಸುತ್ತದೆ.

ಆದರೆ, ಈ ಹಾಡಿನ ಮೂಲಧ್ವನಿ ಮತ್ತೊಂದು. ತಾಯಿಯ ಧ್ವನಿ ಕೇಳವಾಗ ನಮ್ಮ ಮಾತು ನಿಲ್ಲುತ್ತದೆ. ಅದರ ಮುಂದೆ ನಮ್ಮದೇನು? ನಾವು ತೋಡಿಕೊಂಡು ಹಾಡಿದುದಕ್ಕೆ ತಾಯಿಯ ಪ್ರಸಾದ ಇದು. ಅಂದರೆ ನಾವು ತೋಡಿಕೊಳ್ಳಬೇಕು ಆಗ ಪ್ರಕೃತಿಯೂ ತೋಡಿಕೊಳ್ಳಲು ಆರಂಭಿಸುವುದು. ಅದಕ್ಕೆ ಕಿವಿಯಾಗೂವುದಷ್ಟೇ ನಮ್ಮ ಕೆಲಸ.   “ಮಂದಸ್ಮಿತಪ್ರಭಾಪೂರಮಜ್ಜತ್ಕಾಮೇಶಮಾನಸಾ” ತಾಯಿಯ ಮಂದಹಾಸದಿಂದ ಉಂಟಾದ ಲಾವಣ್ಯ ಪ್ರಭೆಯಲ್ಲಿ ಕಾಮೇಶನ ಮನಸ್ಸು ಮಿಂದೇಳುತ್ತಿದೆ. ಅಂತಹಾ ಮಂದಸ್ಮಿತವನ್ನು ಅನುಸಂಧಾನಿಸಿ ತಾಯಿಯ ನಾಮವನ್ನು ಸ್ಮರಿಸಿದ್ದಾರೆ. “ಸ್ಮಿತಜ್ಯೋತ್ಸ್ನಾ ಜಾಲಂ” ತಾಯಿಯ ಮುಖಚಂದ್ರನ ಬೆಳದಿಂಗಳೆಂಬ ಮುಗುಳ್ನಗೆ ಎಂದು ಆಚಾರ್ಯ ಶಂಕರರು ತಾಯಿಯ ಮುಗುಳ್ನಗೆಯನ್ನು ವರ್ಣಿಸಿದ್ದಾರೆ. ತಾಯಿಯ ಮಧುರವಾದ ಮಾತು ಮತ್ತು ಮುಗುಳ್ನಗೆಯ ಧ್ಯಾನ ನಮ್ಮೆಲ್ಲರಿಗೂ ಒಳಿತನ್ನೀಯಲಿ.

Related Articles

ಪ್ರತಿಕ್ರಿಯೆ ನೀಡಿ

Latest Articles