ಕನ್ನಡವನ್ನೇ ಉಸಿರಾಡುವ ಸಂತ ನಾನು

ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ.ಈ ಬಾರಿ ನಾವು 65 ನೇ ವರ್ಷದ ರಾಜ್ಯೋತ್ಸವ ಸಂಭ್ರಮದಲ್ಲಿದ್ದೇವೆ. ಪ್ರತಿಯೊಬ್ಬ ಕನ್ನಡಿಗನೆದೆಯಲ್ಲೂ ತನ್ನ ಭಾಷೆಯ ಬಗ್ಗೆ ಒಲವು, ಅಭಿಮಾನ ಇದ್ದೇ ಇರುತ್ತದೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ವಿದೇಶಗಳಲ್ಲಿ ಸುತ್ತಾಡಿ ಬಂದರೂ ನನಗೆ ಆಪ್ತ ಎನಿಸುವುದು ಕನ್ನಡ. ಕನ್ನಡ ನನಗೆ ಪೂಜನೀಯ ಎಂದಿದ್ದಾರೆ, ಜತೆಗೆ ಕನ್ನಡ ಜನತೆಗೆ ಶುಭ ಹಾರೈಸಿದ್ದಾರೆ ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು.

ನಾನು ಮೂಲತಃ ಸಾಹಿತ್ಯದ ವಿದ್ಯಾರ್ಥಿಯಲ್ಲ. ಆದರೆ ಅಪ್ಪಟ ಕನ್ನಡ ಭಾಷಾ ವಿದ್ಯಾರ್ಥಿ. ನನ್ನ ವಿದ್ಯಾಭ್ಯಾಸ ನಡೆದಿದ್ದು ಕನ್ನಡದಲ್ಲೆ. ನಾನೊಬ್ಬ ಅವಿಶ್ರಾಂತ ಕನ್ನಡದ ಓದುಗ. ಕನ್ನಡದ ಅನುಯಾಯಿ. ಕನ್ನಡದ ಕಟ್ಟಾಳು.

ಕನ್ನಡವನ್ನೇ ಉಸಿರಾಡುವ ಸಂತ. ಕನ್ನಡ ಭಾಷೆ ನನ್ನ ಮೈಮನಗಳನ್ನು ಆವರಿಸಿಕೊಂಡಿದೆ. ಕನ್ನಡ ಬಿಟ್ಟು ಬದುಕು ಎಂದರೆ ಅದು ಅಸಾಧ್ಯವಾದ ಮಾತು. ನೀರಿನಿಂದ ಹೊರ ತೆಗೆದ ಮೀನು ಹೇಗೆ ಬದುಕುವುದಿಲ್ಲವೋ ಹಾಗೆ ಕನ್ನಡ ನುಡಿಯದ ಜೀವವೆಂದೂ ಉಳಿಯದು. ಅಷ್ಟು ಅಭಿಮಾನ. ಆ ಅಭಿಮಾನ ಬಾಲ್ಯದಿಂದಲೇ ಬೆಳಿತಾ ಬೆಳಿತಾ ಓದುತ್ತಾ ಓದುತ್ತಾ ನನ್ನೊಳಗೆ ಇನ್ನೂ ಹೆಚ್ಚುತ್ತಾ ಹೋಯಿತು.

ನನ್ನ ಬದುಕಿನಲ್ಲಿ ಇತರೆ ಭಾಷೆಗಳು ಬಂದಿದ್ದು ಆಮೇಲೆ. ಅದು ವ್ಯಾವಹಾರಿಕವಾಗಿ ಅಷ್ಟೆ. ದಕ್ಷಿಣ ಭಾರತದಿಂದ ಹಿಮಾಲಯದ ತನಕವಲ್ಲದೆ ಅನೇಕ ಪಾಶ್ಚಾತ್ಯ ದೇಶಗಳಿಗೆ ನಾನು ಹೋಗಿ ಬಂದಿದ್ದೇನೆ. ವ್ಯಾವಹಾರಿಕವಾಗಿ ಎಲ್ಲೆ ಸುತ್ತಾಡಿ ಬಂದರೂ ನನಗೆ ಆಪ್ತವೆನಿಸುವುದು ನನ್ನ ಮನೆ. ನನ್ನ ಭಾಷೆ. ನನ್ನ ಊರು. ನನ್ನ ಜನ.

ನನಗೆ ರಸಋಷಿ ಕುವೆಂಪು ಅವರ ಈ ಪದ್ಯ ಬಹಳ ಇಷ್ಟ. ಅದೆಷ್ಟೋ ಸಲ ಓದಿಕೊಂಡಿದ್ದೇನೆ. ಜೋರಾಗಿ ನಾನೊಬ್ಬನೇ ಓದಿಕೊಳ್ಳುತ್ತೇನೆ.

ಕನ್ನಡ ಎನೆ ಕುಣಿದಾಡುವುದೆನ್ನೆದೆ,

ಕನ್ನಡ ಎನೆ ಕಿವಿ ನಿಮಿರುವುದು!

ಕಾಮನ ಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವುದು.

ಕನ್ನಡಾ! ಕನ್ನಡ, ಹಾ, ಸವಿಗನ್ನಡ!

ಕನ್ನಡದಲಿ ಹರಿ ಬರೆಯುವವನು;

ಕನ್ನಡದಲಿ ಹರ ತಿರಿಯುವನು!

ಕನ್ನಡದಲ್ಲಿಯೆ ಬಿನ್ನಹಗೈದೊಡೆ ಹರಿ ವರಗಳ ಮಳೆ ಕರೆಯುವನು!

ಹರ ಮುರಿಯದೆ ತಾ ಪೊರೆಯುವನು!

ಬಾಳುವುದೇತಕೆ? ನುಡಿ, ಎಲೆ ಜೀವ;

ಸಿರಿಗನ್ನಡದಲಿ ಕವಿತೆಯ ಹಾಡೆ!

ಸಿರಿಗನ್ನಡದೇಳಿಗೆಯನು ನೋಡೆ:

ಕನ್ನಡ ತಾಯಿಯ ಸೇವೆಯ ಮಾಡೆ!

ಶ್ರೀ ಕುವೆಂಪು ಇಲ್ಲಿ ಬರಿತಾರೆ. ಹರಿ ಹರಾದಿಗಳಿಗೂ ಕನ್ನಡವೆಂದರೆ ಅಚ್ಚುಮೆಚ್ಚು. ಅವರನ್ನ ಕನ್ನಡದಲ್ಲೇ ಸಂಪನ್ನಿಸಿದರೆ ವರ ಕೊಡುತ್ತಾನೆ. ನಮ್ಮನ್ನೆಲ್ಲಾ ಪೊರೆಯುತ್ತಾನೆ ಅಂತ. ಅಂದರೆ ಕನ್ನಡ ದೇವಾನು ದೇವತೆಗಳಿಗೂ ಪ್ರಿಯವಾದ ಭಾಷೆ. ಚೆಂದವಾದ ಭಾಷೆ. ಮನಸಿಗೆ ಹತ್ತಿರವಾದ ಭಾಷೆ. ದೇವಭಾಷೆ.

ಇಷ್ಟು ಮಧುರವಾದ, ಭವ್ಯವಾದ, ಹೃದಯಕ್ಕೆ ಹತ್ತಿರವಾದ ಇನ್ನೊಂದು ಭಾಷೆ ಜಗತ್ತಿನಲ್ಲಿ ಇದೆಯಾ? ಬಹುಶಃ ಇಲ್ಲ. ನಾನು ಹರಿಹರರನ್ನು ನಂಬುತ್ತೇನೆ. ಪೂಜಿಸುತ್ತೇನೆ. ಹಾಗೆ ಕನ್ನಡವೂ ನನಗೆ ಪೂಜನೀಯ.

ಕನ್ನಡ ಸಮೃದ್ಧವಾಗಿ ಬೆಳೆಯಲು ಅನೇಕ ಮಹನೀಯರು ದುಡಿದಿದ್ದಾರೆ. ನಾಡು ಕಟ್ಟುವಲ್ಲಿ ಜೀವ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ನಮಸ್ಕಾರಗಳು. ತಮಗೆಲ್ಲಾ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.

Related Articles

ಪ್ರತಿಕ್ರಿಯೆ ನೀಡಿ

Latest Articles