ಜಗದ ಹಾಡು ಭಗವದ್ಗೀತೆ

ಹನುಮೇಶ್. ಜಿ ಮಳಗಿ 

ಕುರುಕ್ಷೇತ್ರ ಯುದ್ಧದ ಸನ್ನದ್ಧತೆ ಹಲವು ವರ್ಷಗಳ ಹಿಂದೆಯೇ ನಡೆದಿತ್ತು…

ಪಾಂಡವರು ಹಸ್ತಿನಪುರಕ್ಕೆ ಬಂದು ಕುರುಡ ದೊಡ್ಡಪ್ಪ ಧೃತರಾಷ್ಟ್ರನ ಆಸರೆಗೆ ಬಂದಾಗಲೇ…

ಅಪ್ಪ ಮೋಹದಿಂದ ಕುರುಡ…

ಮಗ ದ್ವೇಷದಿಂದ ಕುರುಡ…

ಇಬ್ಬರ ಕುರುಡತನಕ್ಕೆ ಶಕುನಿಯ ವಿಷಪೂರಣ..

ಕೌರವನ ದ್ವೇಷ ಹೆಮ್ಮರವಾಯ್ತು ವಿಷದ ಮಡುವಾಯ್ತು… ಪರಿಣಾಮ ಅರಗಿನ ಮನೆಯ ಬೆಂಕಿಯಲಿ ಪಾಂಡವರ ಪ್ರೀತಿ ಸುಟ್ಟು ಹೋಯಿತು..

ಬಾಳು ಅಡವಿ ಪಾಲಾಯ್ತು….

ಎಲ್ಲರ ಕೈ ಮೀರಿದಾಗ ಭಗವಂತ ಕೈ ಹಿಡಿಯುತ್ತಾನೆ..

ಪಾಂಡವರು ದ್ರೌಪದಿಯೊಂದಿಗೆ ಹಸ್ತಿನಪುರಕ್ಕೆ ಬರುತ್ತಾರೆ…

ಕುರುಡ ರಾಜನ ಮೋಹ ರಾಜ್ಯವನ್ನು ಒಡೆಯುತ್ತದೆ…

ಇಂದ್ರಪ್ರಸ್ಥದ ಸಂಪತ್ತು ಕೌರವನಲ್ಲಿ ಮತ್ತಷ್ಟು ಕಿಚ್ಚು ಹತ್ತಿಸುತ್ತದೆ…

ಮೋಸದ ಪಗಡೆಯಾಟ ದ್ರೌಪದಿಯ ವಸ್ತ್ರಾಪಹರಣ ಅವಮಾನದಲ್ಲಿ ಕೊನೆಗೊಳ್ಳುತ್ತದೆ..

ಪಾಂಡವರು ಎದೆಯಲ್ಲಿ ರೋಷ ಅವಮಾನ ಮುಚ್ಚಿಟ್ಟುಕೊಂಡು ವನವಾಸ ಅಜ್ಞಾತವಾಸ ಮುಗಿಸುತ್ತಾರೆ…

ಮುಂಬರುವ ಮಹಾಯುದ್ಧವನ್ನು ಊಹಿಸಿದ್ದ ಭಗವಂತನ ಸಲಹೆಯಂತೆ ಅರ್ಜುನ ಅಪಾರ ಶಸ್ತ್ರಗಳನ್ನು ಗಳಿಸಿಕೊಳ್ಳುತ್ತಾನೆ …

ಸೇಡು ತೀರಿಸಿಕೊಳ್ಳಲು ಪಾಂಡವರು ಕಾತರರಾಗಿದ್ದಾರೆ….

ಸೂಜೆಮೊನೆಯ ಸ್ಥಳವನ್ನೂ ಕೊಡುವುದಿಲ್ಲವೆಂದು ಶಾಂತಿಸಂಧಾನಕ್ಕೆ ಹೋದ ಭಗವಂತನಿಗೆ ಕೌರವನ ಅಹಂಕಾರದ ಉತ್ತರ…

ಯುದ್ಧ ಅನಿವಾರ್ಯ…

ಕುರುಕ್ಷೇತ್ರದಲ್ಲಿ ಕೌರವ ಪಾಂಡವರ ಹದಿನೆಂಟು ಅಕ್ಷೌಹಿಣಿ ಸೈನ್ಯ ಸನ್ನದ್ಧ…

ತುಡಿಯುತ್ತಿದ್ದ ಅರ್ಜುನ ಸಾರಥಿಯಾಗಿದ್ದ ಭಗವಂತನಿಗೆ ತನ್ನ ರಥವನ್ನು ಸೇನೆಯ ನಡುವೆ ನಿಲ್ಲುಸಲು ಆದೇಶಿಸುತ್ತಾನೆ….

ನಸುನಕ್ಕ ಭಗವಂತ ರಥವನ್ನು ಭೀಷ್ಮಾದಿಗಳ ಮುಂದೆಯೇ ನಿಲ್ಲಿಸುತ್ತಾನೆ…

ಅರ್ಜುನನ ಮನೋವ್ಯಾಧಿಗೆ ಮದ್ದು ನೀಡಲು ವೇದಿಕೆಯನ್ನು ಭಗವಂತ ಸಿದ್ಧಗೊಳಿಸುತ್ತಾನೆ…

ಗುರು ಹಿರಿಯರು ಬಂಧುಬಾಂಧವರನ್ನು ಕಂಡ ಅರ್ಜುನನಿಗೆ ಅಸ್ಥಾನ ಕರುಣೆ ಉಂಟಾಗಿ ಇವರನ್ನೆಲ್ಲಾ ನಾನೇ ಕೊಲ್ಲಬೇಕಾಗಿ ಬಂತಲ್ಲ,

ಇವರನ್ನು ಕೊಂದು ರಾಜ್ಯವಾಳುವುದಕ್ಕಿಂತ ಭಿಕ್ಷಾಟನೆ ಮಾಡಿ ಜೀವಿಸುವುದು ಶ್ರೇಷ್ಠವೆನ್ನುತ್ತಾನೆ…

ನಸುನಕ್ಕ ಭಗವಂತ ಅರ್ಜುನನಿಗೆ ಚಿಕಿತ್ಸೆ ಪ್ರಾರಂಭಿಸುತ್ತಾನೆ…

ವೈಕುಂಠ ಏಕಾದಶೀ…

ಈ ಮಹೋಪದೇಶದ ಮಹಾಪರ್ವವೇ ಇಂದು…

ಹೇ ಭರತರ್ಷಭನೇ, ಕ್ಲೈಬ್ಯವನ್ನು ಬಿಡು ಎದ್ದು ನಿಲ್ಲು. ಯುದ್ಧ್ಯುಕ್ತನಾಗು….

ಇವರ ದೇಹವೇ ಇವರಲ್ಲಾ…

ಇವರೆಲ್ಲ ಈಗಾಗಲೇ ನನ್ನಿಂದ ಹತರಾಗಿದ್ದಾರೆ ನೀನು ನಿಮಿತ್ತ ಮಾತ್ರ…

ಇವರ ದುಷ್ಕರ್ಮಗಳೇ ಇವರನ್ನು ಸಾಯಿಸುತ್ತವೆ….

ಆತ್ಮಕ್ಕೆ ಸಾವಿಲ್ಲ…

ಅದನ್ನು ಯಾವ ಶಸ್ತ್ರ ಬೆಂಕಿ ಗಾಳಿ ನೀರು ಸಾಯಿಸುವುದಿಲ್ಲ…

ಉದ್ವೇಗಗೊಳ್ಳದಿರು…

ಕೂರ್ಮದಂತೆ ಇಂದ್ರಿಯಗಳನ್ನು ವಿಷಯಗಳಿಂದ ಎಳೆದುಕೊ ಇಲ್ಲಿಯೇ ಇದ್ದು ಎಲ್ಲವನ್ನೂ ಮಾಡು…

ಆದರೆ ಕಮಲಪತ್ರದಂತೆ ಯಾವುದನ್ನೂ ಹಚ್ಚಿಕೊಳ್ಳಬೇಡ…

ನನ್ನಂತೆ ನಿನಗೂ ಇವರಿಗೂ ಸಾವಿರಾರು ಜನ್ಮಗಳಾಗಿವೆ…

ಕರ್ಮವನ್ನು ಜಾಣ್ಮೆಯಿಂದ ನಿರ್ವಹಿಸು…

ಕರ್ಮದ ಆಚರಣೆಯೊಂದು ಕೌಶಲ…

ನಾನು ನೀನು ಅನಂತ ಅನಾದಿ…

ಯುದ್ಧ ನಿನ್ನ ಕರ್ಮ…

ಅದನ್ನು ನಿಕ್ಷಾಮದಿಂದ ಮಾಡು.

ಗೆದ್ದರೆ ರಾಜ್ಯ ಸತ್ತರೆ ಸ್ವರ್ಗ…

ಕರ್ಮ ಮಾಡು ಅದರ ಫಲ ಅಪೇಕ್ಷಿಸದಿರು.

ಅದನ್ನು ನನಗೆ ಬಿಡು…

ಎಲ್ಲರ ಯೋಗಕ್ಷೇಮಕ್ಕೂ ನಾನಿದ್ದೇನೆ…

ಧರ್ಮಕ್ಕೆ ಗ್ಲಾನಿಯುಂಟಾದಾಗಲೆಲ್ಲಾ, ನಾನು ಧರ್ಮವನ್ನು ಎತ್ತಿಹಿಡಿಯಲು ಅವತರಿಸುತ್ತೇನೆ…

ಶಿಷ್ಟ ರಕ್ಷಣೆ ದುಷ್ಟ ಶಿಕ್ಷಣಕ್ಕಾಗಿ ನಾನು ಅವತರಿಸುತ್ತಲೇ ಇರುತ್ತೇನೆ…

ಹೇ ಅರ್ಜುನ ಇದೆಲ್ಲವನ್ನೂ ಈ ಹಿಂದೆ ನಾನು ಸೂರ್ಯನಿಗೆ ಹೇಳಿದ್ದೇನೆ…

ಈಗ ನಿನಗೆ ಹೇಳುತ್ತಿದ್ದೇನೆ…

ಇದೇ ಮೋಕ್ಷ ಸಾಧನ..

Related Articles

ಪ್ರತಿಕ್ರಿಯೆ ನೀಡಿ

Latest Articles