ಮನೆಯಲ್ಲೇ ಮಾಡಬಹುದು ಹಲವು ಬಗೆಯ ಹಲ್ವಾ

ಹಲ್ವಾ ಅನ್ನೋ ಸಿಹಿ ತಿನಿಸು ಎಲ್ಲೆಡೆ ಫೇಮಸ್. ಹೆಚ್ಚಿನ ಎಲ್ಲ ಭಾಗಗಳಲ್ಲೂ ತಯಾರಿಸುತ್ತಾರೆ. ಹಲ್ವಾದಲ್ಲೂ ಹಲವು ಬಗೆಗಳಿವೆ. ರವೆ ಹಲ್ವಾ ಎಂದು ಕರೆಸಿಕೊಳ್ಳುವ ಕೇಸರಿಬಾತ್ ಸೇರಿದಂತೆ, ಗೋಧಿಹಲ್ವಾ, ಕುಕ್ಕರ್‌ಹಲ್ವಾ, ಬೂದು ಕುಂಬಳಕಾಯಿಯಿ0ದ ತಯಾರಿಸುವ ಕಾಶಿ ಹಲ್ವಾ, ಕ್ಯಾರೆಟ್, ಬೀಟ್‌ರೂಟ್‌ನಂತಹ ತರಕಾರಿಗಳಿಂದಲೂ ಹಲ್ವಾ ತಯಾರಿಸಲಾಗುತ್ತದೆ. ಅಲ್ಲದೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಮೈದಾ, ರಾಗಿ ಹಿಟ್ಟು ಇವೇ ಮೊದಲಾದ ಸಾಮಗ್ರಿಗಳಿಂದಲೂ ಬಗೆ ಬಗೆ ಹಲ್ವಾ ತಯಾರಿಸಲಾಗುತ್ತದೆ.


ಗೋಧಿ ಹಿಟ್ಟು, ಹೆಸರು ಬೇಳೆ ಹಲ್ವಾ

ಹೆಸರು ಬೇಳೆ ಕಾಲು ಕೆಜಿ, ಗೋಧಿಹಿಟ್ಟು ಕಾಲು ಕೆಜಿ, ಸಕ್ಕರೆ ಅರ್ಧ ಕೆಜಿ, ತುಪ್ಪ ಕಾಲು ಕೆಜಿ, ಉಂಡೆ ಗೋಡಂಬಿ 50 ಗ್ರಾಂ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಜಾಕಾಯಿ ಪುಡಿ, ಜಾಪತ್ರೆ ಪುಡಿ ಸ್ವಲ.
ಹೆಸರು ಬೇಳೆ ಚೆನ್ನಾಗಿ ತೊಳೆದು ಅರ್ಧ ಲೀಟರ್ ನೀರು ಹಾಕಿ. ಕುಕ್ಕರ್‌ನಲ್ಲಿ ಒಂದು ಕೂಗು ಬೇಯಿಸಿಕೊಳ್ಳಿ. ಇದೇ ಸಮಯದಲ್ಲಿ ಇನ್ನೊಂದು ಒಲೆಯ ಮೇಲೆ ಸಣ್ಣ ಶಾಖದಲ್ಲಿ ಗೋಧಿ ಹಿಟ್ಟು, ಉಂಡೆ ಗೋಡಂಬಿ, ತುಪ್ಪ ಬೆರೆಸಿ ಬಿಸಿ ಮಾಡಿ. ಬೆಂದ ಹೆಸರು ಬೇಳೆ ತಣ್ಣಗಾದ ಕೂಡಲೇ ಸಕ್ಕರೆ ಸೇರಿಸಿ. ಸಕ್ಕರೆ ಕರಗಿದ ನಂತರ ಸಣ್ಣ ಉರಿಯಲ್ಲಿ ಗೋಧಿ ಹಿಟ್ಟನ್ನು ಮಿಶ್ರಣಕ್ಕೆ ಸೇರಿಸಿ. ಕಲಸಿ ಬಿಸಿ ಮಾಡಿ. ಬಾಣಲೆಗೆ ಅಂಟದ ಹದ ಬಂದಾಗ ಹುರಿದಿಟ್ಟಿರುವ ದ್ರಾಕ್ಷಿ, ಗೋಡಂಬಿ ಚೂರು, ಬಾದಾಮಿ, ಏಲಕ್ಕಿ ಪುಡಿ, ಜಾಕಾಯಿ, ಜಾಪತ್ರೆ ಪುಡಿ ಸೇರಿಸಿ ಕಲಕಿ ಜಿಡ್ಡು ಬಳಿದ ತಟ್ಟೆಗೆ ಸುರಿಯಿರಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

ಬಾದಾಮಿ ಹಲ್ವಾ


ಬಾದಾಮಿಯಿಂದ ತಯಾರಿಸಲ್ಪಡುವ ಈ ಸಿಹಿಖಾದ್ಯ ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿರುತ್ತದೆ. ಸವಿಯಲು ರುಚಿಯಾಗಿರುತ್ತದೆ. ಇದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು ಬಾದಾಮಿ ಬೀಜ ಕಾಲುಕೆಜಿ, ಸಕ್ಕರೆ ಅರ್ಧ ಕೆಜಿ, ತುಪ್ಪ ಕಾಲು ಕೆಜಿ, ಕೇಸರಿ 10ಎಸಳು, ಏಲಕ್ಕಿ 10 ಕಾಯಿ.
ಮೊದಲು ಕೇಸರಿಯನ್ನು ಬಿಸಿ ಹಾಲಿನಲ್ಲಿ ನೆನೆಸಿಡಿ. ಬಾದಾಮಿ ಬೀಜವನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿ. ಹೊಟ್ಟು ಸುಲಿದು ಸ್ವಲ್ಪನೀರು ಹಾಕಿಕೊಂಡು ನುಣ್ಣಗೆ ರುಬ್ಬಿ ಒಂದು ಪಾತ್ರೆಯಲ್ಲಿ ಹಾಕಿ ಸಣ್ಣ ಶಾಖದಲ್ಲಿ ಕದಡುತ್ತಿರಿ. ಹತ್ತು ನಿಮಿಷ ನಂತರ ಸಕ್ಕರೆ ಸೇರಿಸಿ. ಬೇರೆ ಒಲೆಯಲ್ಲಿ ತುಪ್ಪ ಬಿಸಿ ಮಾಡಿಟ್ಟುಕೊಳ್ಳಿ. ಬಾದಾಮಿ ಸಕ್ಕರೆ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಬಂದಾಗ ಬಿಸಿ ತುಪ್ಪ ಸೇರಿಸಿ. ತಳ ಹತ್ತದಂತೆ ತಿರುವುತ್ತಿರಿ. ಇದಕ್ಕೆ ಏಲಕ್ಕಿ ಪುಡಿ, ಹಾಲಿನಲ್ಲಿ ನೆನೆದ ಕೇಸರಿ ಉಜ್ಜಿ ಸೇರಿಸಿ. ಮೂರು ನಿಮಿಷದ ನಂತರ ತಟ್ಟೆಗೆ ಹಾಕಿರಿ.

ಅಕ್ಕಿ ಹಲ್ವ


ಇದನ್ನು ತಯಾರಿಸುವುದು ಸುಲಭ. ಅಕ್ಕಿ ಮುನ್ನೂರು ಗ್ರಾಂ, ದೊಡ್ಡ ತೆಂಗಿನ ಕಾಯಿ ತುರಿ 2, ಬೆಲ್ಲ ಮೂರು ದೊಡ್ಡ ಅಚ್ಚು, ತುಪ್ಪ 4 ಚಮಚ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಏಲಕ್ಕಿ ಪುಡಿ.
ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೆನೆಹಾಕಿ, ಬಾದಾಮಿ ಬೀಜವನ್ನು ಚೂರು ಮಾಡಿಕೊಳ್ಳಿ. ನೆನೆದ ಅಕ್ಕಿಯನ್ನು ಬಸಿದು ತೆಂಗಿನ ತುರಿಯೊಡನೆ ನುಣ್ಣಗೆ ರುಬ್ಬಿ ಸೋಸಿದ ಬೆಲ್ಲ ಸೇರಿಸಿ ಒಲೆಯ ಮೇಲಿಡಿ. ಇಡ್ಲಿ ಹಿಟ್ಟಿನ ಹದಕ್ಕೆ ಬಂದಾಗ ಸ್ವಲ್ಪ ತುಪ್ಪ ಸೇರಿಸಿ ಕಲಕಿರಿ. ಪಾತ್ರೆಗೆ ಅಂಟದ ಹದ ಬಂದಾಗ ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರು, ಏಲಕ್ಕಿ ಪುಡಿ ಹಾಕಿ ಕಲಕಿ. ಜಿಡ್ಡು ಸವರಿದ ತಟ್ಟೆಗೆ ಸುರಿದು ಸಮತಟ್ಟಾಗಿಸಿ. ಬೇಕಾದ ಆಕಾರಕ್ಕೆ ಕತ್ತರಿಸಿ.

ಕಾಶಿ ಹಲ್ವಾ


ಕುಂಬಳಕಾಯಿಯಿ0ದ ತಯಾರಿಸಲಾಗುತ್ತದೆ. ಇದನ್ನು ತಯಾರಿಸಲು ಬೂದು ಕುಂಬಳಕಾಯಿ ಎರಡು ಕೆಜಿ, ಸಕ್ಕರೆ ಅರ್ಧ ಕೆಜಿ, ತುಪ್ಪ ಅರ್ಧ ಕೆಜಿ, ಖೋವಾ ಕಾಲು ಕೆಜಿ, ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ಕೇಸರಿ ಬಣ್ಣ ಸ್ವಲ್ಪ. ಬೂದು ಕುಂಬಳಕಾಯಿಯ ತಿರುಳು, ಬೀಜ, ಸಿಪ್ಪೆ ತೆಗೆದು ಮಿಕ್ಕ ಕಾಂಡವನ್ನು ತುರಿದು ಬೇಯಿಸಿ. ನೀರು ಹಾಕಬೇಕಿಲ್ಲ. ಕುಂಬಳಕಾಯಿ ತುರಿ ಬೆಂದ ನಂತರ ಅದರ ರಸ ಜಾಸ್ತಿ ಇದ್ದರೆ ಹಿಂಡಿ ತೆಗೆದುಬಿಡಿ. ಈ ಬೆಂದ ತಿರುಳಿಗೆ ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿ ಒಲೆಯ ಮೇಲಿಟ್ಟು ತುಪ್ಪ ಸೇರಿಸಿ ಕಲಕುತ್ತಿರಿ. ಪಾತ್ರೆಗೆ ಅಂಟದ ಹದ ಬಂದಾಗ  ಏಲಕ್ಕಿ ಪುಡಿ ಕೇಸರಿ ಬಣ್ಣ ಹಾಕಿ ಕಲಕಿ ಇಳಿಸಿಡಿ. ಇಳಿಸುವ ಮೊದಲು ಖೋವಾ ಪುಡಿ ಮಾಡಿ ಸೇರಿಸಿ, ಕುದಿಸಿರಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ.

Related Articles

ಪ್ರತಿಕ್ರಿಯೆ ನೀಡಿ

Latest Articles