ಬಸವಣ್ಣ ಐಕ್ಯಗೊಂಡ ಪುಣ್ಯನೆಲ ಕೂಡಲಸಂಗಮ

*ಶ್ರೀನಿವಾಸ ಮೂರ್ತಿ ಎನ್ ಎಸ್

ನಮ್ಮ ನಾಡಿನಲ್ಲಿ ಹಲವು ಧರ್ಮಗಳು ಪುಣ್ಯಕ್ಷೇತ್ರಗಳು ರಾಜ್ಯದ ಎಲ್ಲೆಡೆ ನೋಡಬಹುದು. ಆದರೆ ಧರ್ಮವನ್ನ ಮೀರಿ ಮಾನವೀಯತೆ ಬೋಧಿಸಿದವರು ಬಸವಣ್ಣನವರು. ಬಸವಜಯಂತಿಯ ಆಚರಿಸುವ ಅಕ್ಷಯ ತದಿಗೆ ಹಿನ್ನೆಲೆಯಲ್ಲಿ ಕೂಡಲ ಸಂಗಮ ಕ್ಷೇತ್ರದ ಪರಿಚಯ. ತಮ್ಮ ವಚನಗಳಿಂದ
ಶರಣ ಕ್ರಾಂತಿ ಮೂಡಿಸಿದ ಇವರ ಐಕ್ಯ ಸ್ಥಳ ಬಾಗಲಕೊಟೆ ಜಿಲ್ಲೆಯ ಕೂಡಲಸಂಗಮದಲ್ಲಿದೆ.

ಕೃಷ್ಣಾ ಮತ್ತು ಮಲಪ್ರಭಾ ನದಿಯ ಸಂಗಮದಲ್ಲಿರುವ ಈ ಐಕ್ಯ ಸ್ಥಳದಲ್ಲಿ ಕಲ್ಯಾಣ ಚಾಲುಕ್ಯರ ಸಂಗಮೇಶ್ವರ ಹಾಗು ಶ್ರೀ ಬಸವೇಶ್ವರರವರ ಐಕ್ಯ ಮಂಟಪವಿದೆ. ಒಂದಾನೊಂದು ಕಾಲದಲ್ಲಿ ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದ ಈ ಸ್ಥಳದಲ್ಲಿ ಶೈವಯತಿಗಳಾಗಿದ್ದ ಜಾತವೇದ ಮುನಿಗಳು ಇಲ್ಲಿನ ವಿದ್ಯಾ ಕೇಂದ್ರವನ್ನು ನಡೆಸುತ್ತಿದ್ದರು. ಇನ್ನು ಇಲ್ಲಿಯೇ ಬಸವಣ್ಣನವರು, ಚನ್ನ ಬಸವಣ್ಣನವರು ಹಾಗು ಅಕ್ಕ ನಾಗಮ್ಮ ಜಾತವೇದ ಮುನಿಗಳಿಂದ ಶಿಕ್ಷಣ ಪಡೆದರು. ಇನ್ನು ಇದನ್ನು ಕಪ್ಪಡಿ ಸಂಗಮ ಎಂದೂ ಕರೆಯುವ ಪದ್ದತಿ ಇದೆ. ಕಲ್ಯಾಣ ಕ್ರಾಂತಿಯ ನಂತರ ಇಲ್ಲಿ ಬಂದು ತಮ್ಮ ಅರಾಧ್ಯ ದೈವನ
ಸನ್ನಿಧಿಯಲ್ಲಿ ಐಕ್ಯರಾದರು ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ ಅವರ ಐಕ್ಯ ಮಂಟಪವನ್ನು ಇಲ್ಲಿ
ಸ್ಥಾಪಿಸಲಾಗಿದೆ.

ಇತಿಹಾಸ ಪುಟದಲ್ಲಿ ಇದೊಂದು ಪ್ರಮುಖ ಸ್ಥಳವಾಗಿ ಗುರುತಿಸಿಕೊಂಡಿತ್ತು. ಇಲ್ಲಿನ 1160 ಮತ್ತು 1213 ರ ಶಾಸನಗಳಲ್ಲಿ ಇಲ್ಲಿನ ದೇವಾಲಯಗಳ ಉಲ್ಲೇಖ ನೋಡಬಹುದು. ಶಾಸನಗಳಲ್ಲಿ ಅಚೇಶ್ವರ ಎಂಬ
ಉಲ್ಲೇಖ ನೋಡಬಹುದು.

ಕೂಡಲಸಂಗಮ ಇಲ್ಲಿ ಆಣೆಕಟ್ಟಿನಿಂದ ಮುಳುಗಡೆಯಾಗುವಾಗ ಜನರ ಒತ್ತಾಸೆಯ ಮೇರೆಗೆ ಇದನ್ನು
ಅಧುನಿಕ ತಂತ್ರಜ್ಞಾನ ಬಳಸಿ ಉಳಿಸಲಾಗಿದೆ. ಇಲ್ಲಿನ ಸಂಗಮೇಶ್ವರ ದೇವಾಲಯ ಸುಮಾರು 11 ನೇ
ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿತ್ತು. ದೇವಾಲಯ ಗರ್ಭಗುಡಿ ಹಾಗು
ಮುಖಮಂಟಪವನ್ನು ಹೊಂದಿದ್ದು ಇಲ್ಲಿನ ಗರ್ಭಗುಡಿಯಲ್ಲಿ ಸ್ವಯಂಭೂ ಸಂಗಮೇಶ್ವರ ಎಂದು
ಕರೆಯುವ ಶಿವಲಿಂಗವಿದೆ. ಗರ್ಭಗುಡಿಯ ಬಾಗಿಲುವಾಡದಲ್ಲಿನ ಕೆತ್ತನೆಗಳು ಮತು ಚಾಲುಕ್ಯ
ಶೈಲಿಯ ಕಂಭಗಳು ಚಾಲುಕ್ಯರ ವೈಭವವನ್ನು ನೆನಪಿಸುತ್ತದೆ. ನವರಂಗದಲ್ಲಿ ಶ್ರೀ ಬಸವೇಶ್ವರ,
ನೀಲಮ್ಮ ಅವರ ಪ್ರತಿಮೆಯ ಜೊತೆಯಲ್ಲಿ ನಂದಿ ಹಾಗು ಗಣಪತಿಯನ್ನ ನೋಡಬಹುದು.
ನೂತನವಾಗಿ ನವೀಕರಣಗೊಂಡ ಈ ದೇವಾಲಯ ಹೊಸ ಶಿಖರದೊಂದಿಗೆ ಇತಿಹಾಸದ
ಕೊಂಡಿಯಂತೆ ಇದೆ.
ಶ್ರೀ ಬಸವಣ್ಣನವರ ಐಕ್ಯ ಮಂಟಪವನ್ನು ಸಂರಂಕ್ಷಣೆ ಮಾಡಲಾಗಿದ್ದು ಪಾವಟಿಗೆಗ ಮೂಲಕ
ಇಳಿದು ತಲುಪಬಹುದು. ದೇವಾಲಯದ ಬಲ ಭಾಗದಲ್ಲಿ ಶಿವಾಚಾರ್ಯರ ಗದ್ದುಗೆ ಇದ್ದು
ಪಕ್ಕದಲ್ಲಿ ಚಾಲುಕ್ಯರ ಕಾಲದ ಮಂಟಪವಿದೆ. ಇಲ್ಲಿ ನಿತ್ಯ ದಾಸೋಹವಿದ್ದು ಮಾರ್ಚಿ ಮತ್ತು ಏಪ್ರಿಲ್
ಮಾಸದಲ್ಲಿ ಜಾತ್ರೆ ನಡೆಯಲಿದೆ. ಇಲ್ಲಿ ದೊಡ್ಡದಾದ ಸಂಶೋಧನ ಕೇಂದ್ರವನ್ನು
ಸ್ಥಾಪಿಸಲಾಗಿದೆ. ಬಸವ ಧರ್ಮ ಪೀಠ ಸಂಸ್ಥೆಯೂ ಇದೆ.
ದೇವಾಲಯ ನೋಡಿ ಬಂದಾಗ ಬಸವಣ್ಣನವರು ಹೇಳಿದ ಈ ವಚನ ನೆನಪಾಗುವುದು.
ಅಂಗದಲ್ಲಿ ಅರ್ಪಿತವಾದ ಸುಖವು
ಲಿಂಗದಲ್ಲಿ ಲೀಯವಾಯಿತ್ತೆಂದಡೆ
ಅಂಗವ ಲಿಂಗದಲ್ಲಿ ಮತ್ತೆ ನಿಕ್ಷೇಪಿಸಿಹೆನೆಂಬ
ಕಾರಣವೇಕಯ್ಯಾ ಶರಣಂಗೆ
ಪ್ರಾಣನ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ
ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿ ಎಂತು ಹೇಳಯ್ಯಾ
ಕೂಡಲಸಂಗಮದೇವಾ,

ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯವಾಗಿರ್ಪುದ
ಹೇಳಯ್ಯಾ ನಿಮ್ಮ ಧರ್ಮ
.

Related Articles

ಪ್ರತಿಕ್ರಿಯೆ ನೀಡಿ

Latest Articles