ಲಲಿತೆಯ ಶಕ್ತಿಗಣಗಳಲ್ಲಿಒಂದು ವಾರಾಹಿ

*ಕೃಷ್ಣ ಪ್ರಕಾಶ್ ಉಳಿತ್ತಾಯ

ವಿಶುಕ್ರ ಪ್ರಾಣಹರಣ ವಾರಾಹೀವೀರ್ಯನಂದಿತಾ|
ಕಾಮೇಶ್ವರ ಮುಖಾಲೋಕ ಕಲ್ಪಿತ ಶ್ರೀ ಗಣೇಶ್ವರಾ||

ಲಲಿತಾಪರಮೇಶ್ವರಿಯ ಸಾವಿರದ ನಾಮಗಳ ವಿವೇಚನೆಯಲ್ಲಿ ನಮಗೆ ಅದಿಭೌತಿಕ, ಅದಿದೈವಿಕ ಮತ್ತು ಆಧ್ಯಾತ್ಮಿಕ ತತ್ತ್ವಗಳು ಒಳಗೊಂಡಿರುವುದನ್ನು ಕಂಡಿರುವೆವು. ಲಲಿತೆಯ ದಂಡನಾಯಕಿಯಾದ ವಾರಾಹಿ ಎಂಬ ಶಕ್ತಿದೇವತೆಯಿಂದ ವಿಶುಕ್ರನೆಂಬ ಭಂಡಾಸುರನು ಹತನಾಗುತ್ತಾನೆ. ಇದರಿಂದ ಲಲಿತಾದೇವಿ ಆನಂದ ಪಡುತ್ತಾಳೆ. ಇಂಥ ಆನಂದತುಂದಿಲಳಾದ ದೇವಿಯ ಚಿತ್ರಣವೇ ಈ ನಾಮದ ಮೂಲ ಮೂರ್ತಿ. ವಿಷಂಗ ಮತ್ತು ವಿಶುಕ್ರ ಎಂಬ ಭಂಡಾಸುರನೇ ಸೃಷ್ಟಿಸಿದ ಅಸುರ ಶಕ್ತಿಗಳು ಎಂಬುದನ್ನು ನೋಡಿದ್ದೇವೆ. ವಿಷಂಗನನ್ನು ಲಲಿತೆಯ ಮಂತ್ರಿಣಿ ಶ್ಯಾಮಾದೇವಿ ವಧಿಸುತ್ತಾಳೆ. ಭಂಡನ ಬಲಭುಜದಿಂದ ಹುಟ್ಟಿದ ವಿಶುಕ್ರನ ವಧೆ ವಾರಾಹಿಯಿಂದ ನಡೆಯುತ್ತದೆ. ವಾರಾಹಿ ಪರಮ ತೇಜೋರೂಪಿ, ವೀರ್ಯವತ್ತಾದ ವರ್ಚಸ್ಸನ್ನು ಪಡೆದಿರುವಾಕೆ. “ವಿಶುಕ್ರ” ವೆಂದರೆ ತೇಜಸ್ಸು (ವೀರ್ಯ, ಶಕ್ತಿ) ಇವಕ್ಕೆ ವಿರುದ್ಧವಾದ ತತ್ತ್ವ. ಜೀವರಲ್ಲೂ ವಿಶುಕ್ರಗತಿ ಆಗಾಗ ನಡೆಯುತ್ತಿರುತ್ತದೆ.

ಇಂಥ ವಿಶುಕ್ರಗತಿಯಿಂದ ನಮ್ಮ ಜೀವನದ ದಾರಿ ಅಧೋಮುಖವಾಗಿ ಹೋಗುತ್ತದೆ. ಇದರ ಪರಿಣಾಮ ಅನಾರೋಗ್ಯ, ಚಿತ್ತವೈಕಲ್ಯ, ಎಡೆಬಿಡದ ಚಿಂತೆ ಎಂಬ ರೂಪದಲ್ಲಿ ನಮ್ಮ ಜೀವನದಲ್ಲಿ ಪರಿಣಮಿಸುತ್ತದೆ. ಪರಮ ತೇಜಸ್ಸಿನ ತಾಯಿ ಲಲಿತೆಯ ಶಕ್ತಿಗಣಗಳಲ್ಲಿ ಒಂದಾದ ವಾರಾಹಿಯಿಂದ ವಿಶುಕ್ರನ ಹನನವಾದಾಗ ಲಲಿತೆಗೆ ಉಂಟಾದ ಆನಂದದ ರೂಪವನ್ನು ಸ್ಮರಿಸುವುದು ಬಹು ಪುಣ್ಯಕರವೆಂದು ನಂಬಿಕೆ. ಇವು ವಿಶುಕ್ರಗತಿಗೂ ಪರಮಚಿಕಿತ್ಸೆ. ಶ್ರದ್ಧೆ ನಮ್ಮ ನಂಬಿಕೆಯನ್ನು ನಿಜಮಾಡಬಹುದು. ಹಾಗಾಗಿ “ವಿಶುಕ್ರ ಪ್ರಾಣಹರಣ ವಾರಾಹೀವೀರ್ಯನಂದಿತಾ” ಪರಮ ಪವಿತ್ರ ನಾಮದ ಸ್ಮರಣೆ ಭಜಕರಿಗೆ ಉಧ್ರ್ವಗಮನಕ್ಕೆ ಕಾರಣವಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ.

“ಕಾಮೇಶ್ವರ ಮುಖಾಲೋಕ ಕಲ್ಪಿತ ಶ್ರೀ ಗಣೇಶ್ವರಾ” ಮಾತೆ ತನ್ನ ಪತಿ ಕಾಮೇಶ್ವರನ ಮುಖವನ್ನು ಈಕ್ಷಿಸುತ್ತಾಳೆ. ನೋಡಿದೊಡನೆಯೇ ಮಹಾಗಣೇಶ್ವರ ಕಲ್ಪಿಸುತ್ತಾಳೆ. ಈ ಮಹಾಗಣೇಶ್ವರನ ಸೃಷ್ಟಿಗೂ ಉದ್ದೇಶವಿದೆ. ಅದು ಮುಂದಿನ ನಾಮದಲ್ಲಿ ಸೂಚಿಸಲ್ಪಟ್ಟಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles