ಸಂಗೀತ ಕ್ಷೇತ್ರದ ಯುವ ಪ್ರತಿಭೆ ಅಭಿರಾಮ್ ಭರತವಂಶಿಗೆ ನುಡಿನಮನ

ಇತ್ತೀಚೆಗೆ ಕೊರೊನಾದಿಂದ ಸಂಗೀತ ಕ್ಷೇತ್ರದ ಯುವ ಪ್ರತಿಭೆಯನ್ನು ಕಳೆದುಕೊಳ್ಳುವಂತಾಯಿತು. ಆ ಯುವ ಪ್ರತಿಭೆ ಮತ್ತಾರೂ ಅಲ್ಲ, ಸುದರ್ಶನ್ ಭಾರತೀಯ ಅವರ ಸುಪುತ್ರ ಅಭಿರಾಮ ಭರತವಂಶಿ. ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಬೇಕಿದ್ದ ಕುಡಿ ನಮ್ಮ ನಡುವೆ ನೆನಪುಗಳನ್ನಷ್ಟೇ ಬಿಟ್ಟು ಹೋಗಿದ್ದಾರೆ. ಅವರಿಗೆ ಹಿರಿಯ ಪತ್ರಕರ್ತ ವೆಂಕಟನಾರಾಯಣ ಅವರು ಅಕ್ಷರದ ನುಡಿ ನಮನ ಸಲ್ಲಿಸಿದ್ದಾರೆ.

ನನ್ನ ಪರಮ‌ ಪ್ರೀತಿ ಪಾತ್ರ ತಮ್ಮನ ಸಮಾನ ಸುದರ್ಶನ ಭಾರತೀಯ ಪ್ರತಿಭಾವಂತ ಪತ್ರಕರ್ತ. ಹಲವು ಸ್ನಾತಕೋತ್ತರ ಪದವಿಗಳ ಪ್ರವೀಣ, ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಮುಂತಾಗಿ ಹಲವಾರು ಕ್ಷೇತ್ರಗಳಲ್ಲಿ ಸ್ವತಃ: ಸಾಧಕ. ಅಂಥ ಸಾಧಕರನ್ನು ಬೆಳಕಿಗೆ ತರ ಬೇಕೆಂಬ ಹೆಬ್ಬಯಕೆಯ ಚೇತನ. ಇವರ ಧರ್ಮ ಪತ್ನಿ ನನ್ನ ಪುತ್ರಿ ಸಮಾನಳಾದ ಚಿ.ಸೌ.ಸುಷ್ಮಾ ನೃತ್ಯ ಕ್ಷೇತ್ರದಲ್ಲಿ ಅನನ್ಯ ಸಾಧಕಿ. ನೃತ್ಯ ಶಿಕ್ಷಕಿಯಾಗಿ ದೇಶ ವಿದೇಶಗಳಲ್ಲಿ ಅಪಾರ ಶಿಷ್ಯ ಬಳಗ ಹೊಂದಿರುವ ಸುಷ್ಮಾ ಮಧುರ ಕಂಠದ ಉತ್ತಮ ಗಾಯಕಿ ಕೂಡ. ಇವರಿಬ್ಬರ ಸುಮಧುರ ದಾಂಪತ್ಯದ ಕುಸುಮವಾಗಿ ಅರಳಿದ ಏಕಮಾತ್ರ ಸುಪುತ್ರ ಅಭಿರಾಮ್ ಭರತವಂಶಿ ಇವರಿಬ್ಬರ ಜೀವದ ಜೀವ.

ಅಭೀ ನಾಲ್ಕು ವರ್ಷದ ಬಾಲಕನಾಗಿದ್ದಾಗಿನಿಂದಲೇ ತಮ್ಮ ಪುತ್ರ ಹೀಗೇ ಇರಬೇಕೆಂದು ಎರಕ ಹೊಯ್ದಂತೆ ಬೆಳೆಸಿದ್ದರು. ತಂದೆಯಂತೆ ಮಗ; ರಾಜನಂತೆ ಪ್ರಜೆ. ಹಾಗೆಯೇ ತಾಯಿಯಂತೆ ಮಗಳು; ನೂಲಿನಂತೆ ಸೀರೆ ಎಂಬ ನಾಣ್ಣುಡಿಯಂತೆ ಇವರಿಬ್ಬರ ಪ್ರತಿಭೆಯನ್ನೂ ಮೇಳೈಸಿಕೊಂಡು ತನ್ನ ಜೀವನವನ್ನು ರೂಪಿಸಿ ಕೊಂಡಿದ್ದ ಅಭೀ. ಮಾಹಿತಿ ತಂತ್ರಜ್ಞಾನದ ಎಂಜಿನಿಯರಿಂಗ್ ಪದವೀಧರ ಅಭಿರಾಮ್ ಅತ್ಯದ್ಭುತ ಸಂಗೀತಗಾರ. ಪ್ರಖ್ಯಾತ ಸಂಗೀತ ವಿದ್ವನ್ಮಣಿ ಶ್ರೀ ಆರ್.ಕೆ ಪದ್ಮನಾಭ್ ಅವರ ಶಿಷ್ಯತ್ವದ ಸಂಪೂರ್ಣ ಪ್ರಯೋಜನ ಪಡೆದು ಅಭೀ 24ರ ಹರೆಯದಲ್ಲೇ ಅಪಾರ ಜನಮಾನಸವನ್ನು ಸೆಳೆದುಕೊಂಡಿದ್ದ. ಈ ಪ್ರತಿಭಾವಂತ ಹಲವಾರು ರಾಜ್ಯ, ರಾಷ್ಟ್ರ ಮತ್ತು ಅಂತಾ ರಾಷ್ಟ್ರೀಯ ಸಂಗೀತ, ಭಜನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಷ್ಟೇ ಅಲ್ಲ ತೀರ್ಪುಗಾರರ ವಿಶೇಷ ಮೆಚ್ಚುಗೆಗೂ ಪಾತ್ರನಾಗಿದ್ದ. ಮುಂದೊಂದು ದಿನ ಇವನು ಪ್ರಾತ:ಸ್ಮರಣೀಯ ಡಾ. ಭೀಮಸೇನ ಜೋಷಿ ಮತ್ತು ಡಾ. ಬಾಲಮುರುಳೀ ಕೃಷ್ಣರಂಥವರನ್ನು ಸಮಗಟ್ಟುತ್ತಾನೆಂಬ ಕನಸು ಕಂಡಿದ್ದವ ನಾ. ಸಂಗೀತ ಸಾಮ್ರಾಜ್ಯದ ಸುಂದರ ತೋಟದಲ್ಲಿ ಅರಳಿ ಕಾಯಾಗಿ ಹಣ್ಣಾಗ ಬೇಕಿದ್ದ ಪ್ರತಿಭಾವಂತ ಪುಷ್ಪವನ್ನು ಅತಿ ಕ್ರೂರ ಕೊರೋನಾ ನುಂಗಿ ನೊಣೆದುಬಿಟ್ಟಿತು. ಸುದರ್ಶನ ಭಾರತೀಯ ದಂಪತಿ ಮತ್ತು ನನ್ನಂತಹ ಅನೇಕ ಮಿತ್ರರ ಆಶಾಗೋಪುರ ಕಣ್ಣೆದುರಲ್ಲೇ ಕುಸಿದು ಹೋಯಿತು. ಇನ್ನೂ ನನ್ನನ್ನೇ ನಾನು ಸಾಂತ್ವನ ಗೊಳಿಸಿಕೊಳ್ಳಲಾಗುತ್ತಿಲ್ಲ. ಇನ್ನು ಅವರಿಗೇನು ಸಾಂತ್ವನ ಹೇಳಲಿ? ವಿಧಿ ವಿಪರೀತಾ, ವಿಧಿಯಾಘಾತಾ, ವಿಧಿ ವಿಲಾಸವೆನೆ ಇದೇನಾ…?

Related Articles

ಪ್ರತಿಕ್ರಿಯೆ ನೀಡಿ

Latest Articles