ಆನ್‌ಲೈನ್ ಸತ್ಸಂಗ: ಮುಕ್ತಾನಂದ ಶ್ರೀಗಳಿಂದ, ಭಕ್ತರ ಮನೆಮನಗಳಲ್ಲಿ ಸದ್ವಿಚಾರ ಬಿತ್ತುವ ಮಹತ್ಕಾರ್ಯ

*ವೈ ಬಿ ಕಡಕೋಳ

ಸಿಂದೋಗಿ ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಮುಕ್ತಾನಂದ ಪರಮಪೂಜ್ಯರು ಶ್ರೀಮಠಕ್ಕೆ ಸತ್ಸಂಗ ನಿಮಿತ್ತ ಆಗಮಿಸುವ ಸದ್ಭಕ್ತರಿಗೆ ಕೋರೋನಾ ಲಾಕ್‌ಡೌನ್ ಸಲುವಾಗಿ ಮನೆಮನೆಯಲ್ಲಿ ಅಂತರ್ಜಾಲ ಬಳಸಿ ಸತ್ಸಂಗ ನಡೆಸುವ ಯೋಜನೆಯನ್ನು ರೂಪಿಸಿದರು.
ಆನ್‌ಲೈನ್ ಮೂಲಕ ಸತ್ಸಂಗ ನಡೆಸುವ ಸಿದ್ಧತೆಯನ್ನು ಪ್ರೌಢಶಾಲಾ ಶಿಕ್ಷಕರಾದ ಕಂಕಣವಾಡಿ ಮತ್ತು ವೀರಣ್ಣ ಕೊಳಕಿಯವರು ಸಿದ್ಧತೆ ನಡೆಸಿದರು. ಜೊತೆಗೆ ಶ್ರೀ ಮಠಕ್ಕೆ ಆಗಮಿಸಿ ಸತ್ಸಂಗದಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತ ಬಂದಿದ್ದ ಸಿಂಧೋಗಿ ಮುನವಳ್ಳಿಯ ಭಕ್ತರ ಮೊಬೈಲ್ ಸಂಪರ್ಕ ಸಂಖ್ಯೆಯನ್ನು ಕಲೆ ಹಾಕಿ ಅನುರಾಧ ಬೆಟಗೇರಿ ಮತ್ತು ಹೊನ್ನಳ್ಳಿ. ವೀರಣ್ಣ ಕೊಳಕಿ ಹಾಗೂ ಪರಮಪೂಜ್ಯ ಶ್ರೋ.ಬ್ರ.ನಿ. ಮುಕ್ತಾನಂದ ಸ್ವಾಮೀಜಿಯವರು ಸೇರಿ ವ್ಯಾಟ್ಸಪ್ ಗ್ರ‍್ರೂಪ್ ರಚಿಸಿದರು. 74 ಸದಸ್ಯರ ಈ ಗ್ರೂಪ್‌ನಲ್ಲಿ ಇದ್ದವರು ತಮಗೆ ಆಪ್ತರೆನಿಸಿದವರಿಗೆ ತಾವು ವೈಯಕ್ತಿಕವಾಗಿ ಲಿಂಕ್ ಕಳಿಸಲು ಅನುಕೂಲವಾಯಿತು. ಹೀಗಾಗಿ ಅದೊಂದು ವಿನೂತನ ಯೋಜನೆ ಜಾರಿಗೊಂಡು ಮೇ 22 ರಂದು ಸತ್ಸಂಗವನ್ನು ಪರಮಪೂಜ್ಯ ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದ ಪೂಜ್ಯರು “ಬದುಕಲು ಬೇಕು ಮೌಲ್ಯಗಳು”ಎಂಬ ವಿಷಯ ಕುರಿತು ಅಂತರ್ಜಾಲದ ಮೂಲಕ ಸತ್ಸಂಗವನ್ನು ನಡೆಸಿಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸತ್ಸಂಗ ಪ್ರತಿ ಶನಿವಾರ ಮತ್ತು ರವಿವಾರ ಸಂಜೆ 4.30 ರಿಂದ 6 ಗಂಟೆಯವರೆಗೆ ಹಾಗೂ ಸೋಮವಾರ ಮತ್ತು ಶುಕ್ರವಾರ ರಾತ್ರಿ 7.30ರಿಂದ 9 ರವರೆಗೆ ನಿರಂತರವಾಗಿ ಲಾಕ್‌ಡೌನ್ ಸಂದರ್ಭದಲ್ಲಿ ಜರುಗತೊಡಗಿತು. ಶನಿವಾರ ಮತ್ತು ರವಿವಾರ ಬದುಕಲು ಕಲಿಯಿರಿ ಎಂಬ ಸಂದೇಶವುಳ್ಳ ಮೌಲ್ಯಗಳ ಕುರಿತು ಸತ್ಸಂಗ ಜರುಗಿದರೆ ಪ್ರತಿ ಸೋಮವಾರ ಭಾಗವತ ವಿಚಾರಧಾರೆ ಶುಕ್ರವಾರ ಸತ್ಸಂಗಿಗಳಾದ ಯಶವಂತ ಗೌಡರ ನೇತೃತ್ವದಲ್ಲಿ ಮತ್ತು ಚನಬಸು ನಲವಡೆ ಹಲಗತ್ತಿ ಇವರಿಂದ ನಿಜಗುಣ ಶಿವಯೋಗಿಗಳ ತತ್ವಧಾರೆಗಳನ್ನು ಸೋತ್ರಗಳನ್ನು ಬಿಡಿಸುವ ಸತ್ಸಂಗ ಜರುಗತೊಡಗಿತು.

ವಿನೂತನ ಪ್ರಯೋಗ
ನಂತರದ ದಿನಗಳಲ್ಲಿ ವಿನೂತನ ಪ್ರಯೋಗಗಳಿಗೆ ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದ ಪರಮಪೂಜ್ಯರು ತೊಡಗಿದರು. ಮೊದಲು ಪ್ರಾರ್ಥನೆಯನ್ನು ಸತ್ಸಂಗದ ಸದಸ್ಯರು ಒಬ್ಬರು ಹೇಳುವುದು, ನಂತರ ಮಕ್ಕಳಿಂದ ವಚನ, ಚಿಂತನಪರ ನುಡಿಗಳನ್ನು ಹೇಳಿಸುವುದು,ನಂತರ ಪೂಜ್ಯರ ಉಪನ್ಯಾಸ, ಓಂಕಾರ ಮಂತ್ರ, ಧ್ಯಾನ. ನಂತರ ಮನೆಮದ್ದು, ವಿಶಿಷ್ಟ ದಿನಗಳು ಬಂದರೆ ಅವುಗಳ ಮಹತ್ವವನ್ನು ಸತ್ಸಂಗದ ಕೊನೆಯಲ್ಲಿ ಹೇಳುವ ಮೂಲಕ ಅದನ್ನು ಅಳವಡಿಸಿಕೊಳ್ಳುವ ಬಗೆಯನ್ನು ತಿಳಿಸಿಕೊಡುವ ಪ್ರಯತ್ನ, ನಂತರ ಮಂಗಲ.ಪಾಲ್ಗೊ0ಡ ಭಕ್ತರು ಕರೆ ಮಾಡಿ ತಮ್ಮ ಅನಿಸಿಕೆ ಹಂಚಿಕೊಳ್ಳಲು ಅವಕಾಶ, ಹೀಗೆ ಭಕ್ತರ ಮನೆಮನದಲ್ಲಿ ಸತ್ಸಂಗ ಜರುಗತೊಡಗಿತು.


ಜೂನ್ 20 ರ ಸತ್ಸಂಗದಲ್ಲಿ
ಜೂನ್ 20 ರಂದು ನಡೆದ ಸತ್ಸಂಗದ ಒಂದು ನಿದರ್ಶನ ಇಲ್ಲಿ ನೀಡುವೆನು. ಈ ದಿನ ‘ಅವನೇ ಗುರು ಅವನೇ ದೇವ ಲೋಕದೊಡೆಯನು’ಎಂಬ ಪ್ರಾಥನೆ ಕವಿತಾ ಕಲ್ಲೇದ ಇವರಿಂದ ಜರುಗಿತು. ಚೇತನಾ ಹೊನ್ನಳ್ಳಿ ವಿದ್ಯಾರ್ಥಿನಿಯಿಂದ ವಚನ ಪಠಣ.ಅದರ ಮಹತ್ವ ಹೇಳಿದಳು. ನಂತರ ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದ ಪೂಜ್ಯರು ‘ದೋಷಗಳ ನಿವಾರಣೆ, ಗುಣಗಳ ವೃದ್ಧಿ ಸಂಸ್ಕಾರ’ ಎಂಬ ವಿಷಯದ ಕುರಿತು ಹೇಳುತ್ತ ‘ಭತ್ತದ ಮೇಲಿನ ಪದರ ತಗೆಯುವುದು ದೋಷಗಳ ನಿವಾರಣೆಯಿದ್ದಂತೆ, ಬಿಳಿ ಅಕ್ಕಿಯನ್ನು ತಗೆದುಕೊಳ್ಳುವುದು ಗುಣವನ್ನು ತೋರ್ಪಡಿಸುವ ಪ್ರಕ್ರಿಯೆ, ಅಕ್ಕಿಯನ್ನು ತೊಳೆದು ನೀರನ್ನು ಸೇರಿಸಿ ಅನ್ನ ಮಾಡಿಕೊಂಡು ಊಟ ಮಾಡುವುದು ಗುಣವನ್ನು ವೃದ್ಧಿಸುವ ಪ್ರಕ್ರಿಯೆ. ಇದನ್ನು ಮನೆಯವರೆಲ್ಲ ಒಂದುಗೂಡಿ ಊಟ ಮಾಡುವುದು ಸಂಸ್ಕಾರ. ಹೀಗೆ ನಮ್ಮ ನಿತ್ಯ ಬದುಕಿನಲ್ಲಿ ಸದ್ವಿಚಾರದ ನಡೆ ನುಡಿಗಳನ್ನು ಪ್ರತಿ ಕುಟುಂಬದ ಎಲ್ಲ ಸದಸ್ಯರು ಮಾಡುತ್ತ ಸಾಗಿದಾಗ ಅದಕ್ಕೊಂದು ವಿಶಿಷ್ಟತೆ ಬರುತ್ತದೆ.
ಶಿಕ್ಷಣ ನಮಗೆ ಜ್ಞಾನವನ್ನು ನೀಡಿದರೆ ಸಂಸ್ಕಾರ ಬದುಕುವ ರೀತಿಯನ್ನು ಕಲಿಸಿಕೊಡುತ್ತದೆ. ಮಕ್ಕಳಿಗೆ ಶಿಕ್ಷಣ ಕೊಡುವ ಜೊತೆಗೆ ಇಂದು ಸಂಸ್ಕಾರದ ಅಗತ್ಯತೆ ಇದೆ.ಶಿಕ್ಷಣ ನಮಗೆ ಹಕ್ಕನ್ನು ಹೇಳಿದರೆ ಸಂಸ್ಕಾರ ನಮಗೆ ಕರ್ತವ್ಯವನ್ನು ಹೇಳುತ್ತದೆ.ಎಂಬುದನ್ನು ಕುಡುಕ ತಂದೆಯೊಬ್ಬ ಮನೆಗೆ ಬರುವ ಸಂದರ್ಭ ಅವನ ಮಗನಿಗೆ ಶಾಲೆಯ ಗುರುಗಳು ಪ್ರತಿದಿನ ತಂದೆ ತಾಯಿಯ ಸೇವೆ ಮಾಡುವ ಜೊತೆಗೆ ಅವರ ಪಾದಕ್ಕೆ ನಮಸ್ಕರಿಸಬೇಕು ಎಂದು ಹೇಳಿದ್ದರು. ಆ ದಿನ ಮಗು ತನ್ನ ತಂದೆ ತಾಯಿಯ ಪಾದಕ್ಕೆ ನಮಸ್ಕರಿಸಿ ಊಟ ಮಾಡಬೇಕು ಎಂದುಕೊ0ಡು ತಂದೆಯ ಬರುವಿಕೆಯನ್ನು ಕಾಯುತ್ತ ಕುಳಿತಿದ್ದ. ತಾಯಿ ಎಷ್ಟು ಹೇಳಿದರೂ ಊಟ ಮಾಡಿರಲಿಲ್ಲ. ದುರ್ವ್ಯಸನದ ತಂದೆ ಕಂಠಪೂರ್ತಿ ಕುಡಿದು ಮನೆಗೆ ಬರುವಷ್ಟರಲ್ಲಿ ತಡರಾತ್ರಿಯಾಗಿತ್ತು. ಮಗು ನಿದ್ರೆಗೆ ಜಾರುವ ಸಮಯ ಆದರೂ ತಂದೆಯ ಕಾಲಿಗೆ ನಮಸ್ಕರಿಸಬೇಕು ಎಂದು ನಿದ್ರೆಯ ತಡೆದುಕೊಂಡ ಕುಳಿತ ಮಗುವಿಗೆ ತಂದೆ ಆ ಸಂದರ್ಭ ತನ್ನ ನಿಶೆಯಲ್ಲಿ ನಿರ್ಲಕ್ಷö್ಯ ತೋರಿದಾಗ ಊಟ ಮಾಡದೇ ಮಗು ಮಲಗಿತು. ಮರುದಿನ ಎದ್ದಾಗ ತಾಯಿಯಿಂದ ವಿಷಯ ತಿಳಿದ ತಂದೆ ಮಗುವಿನ ಆ ಕ್ಷಣದ ವಿಚಾರ ಅರಿತು. ಇಂದಿನಿ0ದ ತಾನು ಕುಡಿಯುವುದನ್ನು ಬಿಡುವೆನು ಎಂದುಕೊ0ಡು ಮಗುವಿನ ಸಂಸ್ಕಾರಕ್ಕೆ ಮೊರೆ ಹೋಗುತ್ತಾನೆ. ಇಲ್ಲಿ ಗುರುಗಳೂ ಕೂಡ ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರದ ಪಾಠ ಹೇಳಬೇಕು.ಜೊತೆಗೆ ಕುಟುಂಬದವರೂ ಕೂಡ ಅದಕ್ಕೆ ಸ್ಪಂದಿಸಿದರೆ ಆ ಕುಟುಂಬ ಸಂಸ್ಕಾರವ0ತ ಕುಟುಂಬವಾಗಲು ಸಾಧ್ಯ. ಇದೇ ರೀತಿ ಸಮಾಜ,ಗ್ರಾಮ,ದೇಶ ಸಂಸ್ಕಾರ ಪಥದಲ್ಲಿ ಸಾಗಲು ಅನುಕೂಲ.ನಮ್ಮ ದೇಶದ ಈ ಹಿಂದಿನ ಗುರುಕುಲ ಪದ್ಧತಿ ಶಿಕ್ಷಣ ಹೇಗೆ ಸಾಗುತ್ತಿತ್ತು. ಎಂಬುದನ್ನು ಸಂಸ್ಕಾರ ಮತ್ತು ಶಿಕ್ಷಣ ಕುರಿತಂತೆ ಉಪನ್ಯಾಸ ನೀಡಿದರು. ನಂತರ ಯೋಗ ದಿನದ ಮಹತ್ವವನ್ನು. ತುಳಸಿ ಗಿಡದ ಪವಿತ್ರತೆ ಮತ್ತು ತುಳಸಿಯ ಪ್ರಯೋಜನಗಳನ್ನು ಹೇಳುವ ಮೂಲಕ ಮಂಗಲಾರತಿ ಮಾಡಲಾಯಿತು. ಇದು ಒಂದು ದಿನದ 4.30 ರಿಂದ 6 ಗಂಟೆಯವರೆಗೆ ಜರುಗಿದ ಸತ್ಸಂಗದ ಒಂದು ನಿದರ್ಶನ. ಈ ರೀತಿ ಲಾಕ್ ಡೌನ್ ಸಂದರ್ಭದಲ್ಲಿ ವಿವಿಧ ಮೌಲ್ಯಗಳನ್ನು ಕುರಿತಂತೆ ಸತ್ಸಂಗ ಜರುಗುತ್ತಿರುವುದು ಮಹತ್ವದ ಸಂಗತಿ.

ಶ್ರೀಮಠದಲ್ಲಿ ಸತ್ಸಂಗ ನಡೆದು ಬಂದ ದಾರಿ

 ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ವಿಜಯಾನಂದ ಮಹಾಸ್ವಾಮಿಗಳು 1989 ರಿಂದ ಮುನವಳ್ಳಿಯಲ್ಲಿ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮ ವತಿಯಿಂದ ಮಹಿಳೆಯರಿಗಾಗಿ ಪ್ರತಿ ಶನಿವಾರ ಸಾಯಂಕಾಲ 4.30 ರಿಂದ 6 ಗಂಟೆಯವರೆಗೆ ಸತ್ಸಂಗವನ್ನು ಪ್ರಾರಂಭಿಸಿದರು. ಸತ್ಸಂಗದಲ್ಲಿ ಮಹಿಳಾ ಜಾಗೃತಿಗಾಗಿ ಶರಣರ ಜೀವನ ಚರಿತ್ರೆ, ವಚನಗಳನ್ನು ಉಪದೇಶಿಸುವ ಮೂಲಕ ಮಹಿಳೆಯರ ಬದುಕಿನಲ್ಲಿಯೂ ಕೂಡ ಸತ್ಸಂಗ
ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು. ಕಾರಣ ಮಹಿಳೆಯರೆಲ್ಲ ಒಂದೆಡೆ ಸೇರಿ ಈ ಸತ್ಸಂಗದ ಅರಿವಿನ ವಿಚಾರದ ಜೊತೆಗೆ ಪ್ರತಿ ದಿನ ಪ್ರಾರ್ಥನೆ, ಶಾಸ್ತ್ರ, ಶ್ರವಣ, ಭಜನೆ, ಜಪ, ಧ್ಯಾನ, ಆರತಿ ಇತ್ಯಾದಿ ಮಾಡತೊಡಗಿದರು. ಶ್ರೀಗಳಲ್ಲಿ ವಾರದಲ್ಲಿ ಇದೇ ಸತ್ಸಂಗವನ್ನು ಎರಡು ದಿನ ಮಾಡುವಂತೆ ಮನವಿ ಕೂಡ ಮಾಡಿದರು. ನಂತರದ ದಿನಗಳಲ್ಲಿ ವಾರಕ್ಕೆ ಎರಡು ದಿನ ಅಂದರೆ ಶನಿವಾರ ಮತ್ತು ರವಿವಾರ ನಡೆಸಲು ಪ್ರಾರಂಭಿಸಿದರು.


2010 ರಲ್ಲಿ ಪೂಜ್ಯ ಶ್ರೀ ವಿಜಯಾನಂದ ಶ್ರೀಗಳು ಲಿಂಗೈಕ್ಯರಾದ ನಂತರ ಈಗ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ಮುಕ್ತಾನಂದ ಮಹಾಸ್ವಾಮಿಗಳು ಇದೇ ಸಂಪ್ರದಾಯವನ್ನು ಮುಂದುವರೆಸಿಕೊ0ಡು ಹೋಗುತ್ತಿದ್ದು ಶಿಂದೋಗಿ ಗ್ರಾಮದ ಹತ್ತಿರದಲ್ಲಿರುವ ಮಠದಲ್ಲಿ ಶ್ರೀ ವಿಜಯಾನಂದ ಶ್ರೀಗಳ ಕರ್ತೃ ಗದ್ದುಗೆಯನ್ನು ನಿರ್ಮಿಸಲಾಗಿದ್ದು ಅಲ್ಲಿ ಧ್ಯಾನಮಂಟಪವಿದೆ. ಅಲ್ಲಿಯೇ ಇಂಥ ಅನೇಕ ಕಾರ್ಯಗಳು ಜರುಗುವ ಜೊತೆಗೆ ಚಿಕ್ಕಮಕ್ಕಳಿಗೆ ಯೋಗಾಭ್ಯಾಸವನ್ನು ಕೂಡ ಮುಕ್ತಾನಂದ ಮಹಾಸ್ವಾಮಿಗಳು ಉಚಿತವಾಗಿ ನಡೆಸುತ್ತಿರುವುದು ಶ್ಲಾಘನೀಯ.
ಹೀಗೆ ಆನ್‌ಲೈನ್ ಸತ್ಸಂಗ ಭಕ್ತರ ಮನೆ-ಮನಗಳಲ್ಲಿ ಸದ್ವಿಚಾರವನ್ನು ತಲುಪಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.


Related Articles

ಪ್ರತಿಕ್ರಿಯೆ ನೀಡಿ

Latest Articles