ಕಾಣದ ಮನವೆಂಬ ಭಾವ ಶರಧಿ…

✍️ಎಸ್. ಎಲ್. ವರಲಕ್ಷ್ಮೀಮಂಜುನಾಥ್
ಎಲ್ಲವ ಅಡಗಿಸಿಕೊಂಡ ಮನ ಕಾಣದಾಗಿದೆ 
ನೋವ ನುಂಗಿದ ಮನ ಮೌನದಿ 
ನಗುವ ಮುಖದಿ ತೋರಿ ಹುಸಿನಗೆ ಬೀರಿದೆ 
ಅನಿವಾರ್ಯದ ಒಳಸುಳಿಗೆ ನಗೆಯ ಮುಖವಾಡ 
ಮನದ ಬೇಗುದಿಗೆ ಸದ್ದಿರದ ವಿರಾಮ!

ಕಾಣದ ಮನ ಭಾವನೆಗಳ ವಿಸ್ಮಯ ಸಂಚಿಕೆ 
ಹೇಗೆ ಬಚ್ಚಿಟ್ಟುಕೊಂಡಿಹುದೋ ತೋರಗೊಡದೆ!
ಭಾವ ಶರಧಿಯೊಳಗೆ ಅಬ್ಬಾ!ಹೆದ್ದೆರೆಗಳು 
ಪ್ರೀತಿ ಪ್ರೇಮ ಮೋಹ ವಿರಹಗಳ ಭೋರ್ಗರೆತಗಳು

ತನ್ನೊಳಗೆ ಅಡಗಿಸಿಕೊಂಡು ಅಸೀಮ ಶಕ್ತಿ!
ಮನುಜನ ತನ್ನಿಚ್ಛೆಯಂತೆ ಅಳಿಸಿ ನಗಿಸಿ ಕುಣಿಸಿ 
ಅಂಕುಶಕ್ಕೆ ಸಿಗದೆ ಹಾರಿದೆ ಕಾಡಿಸಿ 
ಸಿಗದ ಮರೀಚಿಕೆಯ ಬಿಡದೆ ಹಿಂಬಾಲಿಸಿ 

ಮರದಿಂದ ಮರಕೆ ಹಾರುವ  ಮರ್ಕಟದ ತೆರದಿ 
ಭಾವ ಬದಲು ಕಾಲಚಕ್ರದ ತಿರುಗಿನಲ್ಲಿ 
ಮನದ ಸವಿನೆನಪುಗಳು ಕ್ಷಣಭಂಗುರವಾಗಿ 
ಮನ ತೂಗುಯ್ಯಾಲೆ ಬದುಕ ಸಂದಿಗ್ಧಗಳಲಿ

ಭಾವನೆಗಳ ತಾಕಲಾಟ  ಅಂತರ್ಯದಿ ಮೇಳೈಸಿ 
ಕಾಣದ ಮನದ ತೋಟದೊಳಗೆ ನೂರಾರು ಭಾವನೆಗಳು ಬಿರಿದು ವಿಕಸಿತವಾಗಿ 
ಅರಳಿ ನಲುಗಿ ಮಣ್ಣಾಗಿ ಮಾಯವಾಗಿ... 

Related Articles

ಪ್ರತಿಕ್ರಿಯೆ ನೀಡಿ

Latest Articles