ಶ್ರಾವಣ ಮಾಸದಲ್ಲಿ ನಿತ್ಯ ಪೂಜೆಗೊಳ್ಳುವ ಬೆಂಗಳೂರಿನ ಚೊಕ್ಕನಾಥಸ್ವಾಮಿ

*ಶ್ರೀನಿವಾಸ ಮೂರ್ತಿ ಎನ್ ಎಸ್

ಬೆಂಗಳೂರಿನ ದೇವಾಲಯಗಳೆಂದರೆ ಬೇಗೂರು, ಹಲಸೂರು ಹಾಗು ಬಸವನಗುಡಿಯ ದೇವಾಲಯಗಳ ಬಗ್ಗೆ ಚರ್ಚಿತವಾದರೂ ದೊಮ್ಮಲೂರಿನಲ್ಲಿನ ಪುರಾತನ ಚೊಕ್ಕನಾಥಸ್ವಾಮಿ ದೇವಾಲಯದ ಬಗ್ಗೆ ಬರಹಗಳು ಕಡಿಮೆ. ಈ ದೇವಾಲಯದ ಬಗ್ಗೆ ಇಲ್ಲಿದೆ ಒಂದು ಕಿರುನೋಟ.

ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಚೊಕ್ಕನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಇತಿಹಾಸ ಪುಟದಲ್ಲಿ ದೊಮ್ಮಲೂರನ್ನು ಟೋಂಬಲೂರು – ತೊಮ್ಮಲೂರು – ದೇಸಿಮಾನಿಕಪಟ್ಟಂ ಎಂದೇ ಬಣ್ಣಿಸಲಾಗಿದೆ. ದೇವಾಲಯದಲ್ಲಿ ಹಲವು ಶಾಸನಗಳಿದ್ದು ಅವುಗಳಲ್ಲಿ ಚೋಳರ ಹಾಗು ಹೊಯ್ಸಳರು ಶಾಸನಗಳು ಸೇರಿವೆ.  ಹೊಯ್ಶಳರ ಕಾಲದಲ್ಲಿ ಇಲ್ಲಿನ ದೇವಾಲಯದ ಪೂಜೆಗೆ ದತ್ತಿ ನೀಡಿದ ಉಲ್ಲೇಖವಿದೆ.  ಚೋಳರ ಕಾಲದಲ್ಲಿ ಇರವಿ ತ್ರಿಪುರಾಂತಕ ಚಿಟ್ಟಿಯಾರ್ ಹಾಗು ಆತನ ಪತ್ನಿ ಪಾರ್ವತಿ ಚೆಟ್ಟಟ್ಟಿ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ.

ಮೂಲತಹ ಈ ದೇವಾಲಯ ಗರ್ಭಗುಡಿ, ಸುಖನಾಸಿ, ನವರಂಗ ಹಾಗೂ ಮಂಟಪವನ್ನು ಹೊಂದಿದೆ.  ಮೂಲ ಗರ್ಭಗುಡಿ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು ಗರ್ಭಗುಡಿಯಲ್ಲಿ ಅವರ ಕಾಲದ ಚೊಕ್ಕನಾಥಸ್ವಾಮಿ ಶ್ರೀ ದೇವಿ ಹಾಗು ಭೂದೇವಿಯೊಂದಿಗೆ ಇರುವ ಶಿಲ್ಪ ಇದೆ.  ಶಾಸನಗಳಲ್ಲಿ ಚೊಕ್ಕಪೆರುಮಾಳ್ ಎಂದು ಕರೆಯಲಾಗಿದೆ.  ಇನ್ನು ನವರಂಗ ಹಾಗು ಮಂಟಪದ ಭಾಗಗಳು ವಿಜಯನಗರ ಕಾಲದ ವಿಸ್ತರಣೆಯಾಗಿದ್ದರೆ ದೇವಾಲಯದ ಪ್ರವೇಶ ಮಂಟಪ ಆಧುನಿಕ ಸೇರ್ಪಡೆ. ನವರಂಗದಲ್ಲಿ ವಿಜಯನಗರ ಶೈಲಿಯ ಕಂಭಗಳಿದ್ದು ಅದರಲ್ಲಿನ ಉಬ್ಬು ಶಿಲ್ಪದ ಕೆತ್ತನೆಗಳು ಗಮನ ಸೆಳಯುತ್ತದೆ.

ಇಲ್ಲಿನ ಸ್ಥಳೀಯ ಪುರಾಣದಂತೆ ಇಲ್ಲಿ ಒಬ್ಬ ಮುನಿಗಳು ತಪಸ್ಸು ಮಾಡುತ್ತಿದ್ದ ಸಮಯದಲ್ಲಿ ಶ್ರೀ ವಿಷ್ಣುವಿನ ಅನುಗ್ರಹ ಪಡೆದು ಆತನ ವಿಗ್ರಹವನ್ನು ಸ್ಥಾಪಿಸಲು ಆದೇಶ ಮಾಡಿದ ಕಾರಣ ಎತ್ತರದ ಪ್ರದೇಶದಲ್ಲಿ ಸ್ಥಾಪಿಸಿ ಪ್ರಾಣಿಕ್ ಶಕ್ತಿಯನ್ನು ಹೊಂದಿದ ದೇವಾಲಯವಾಗಿದೆ ಎಂದು ಹೇಳಲಾಗಿದೆ. ಇಲ್ಲಿ ಫೆಬ್ರುವರಿ ಮತ್ತು ಆಗಸ್ಟ್ ಮಾಸದಲ್ಲಿ ಸೂರ್ಯನ ಕಿರಣಗಳು ಸ್ವಾಮಿಯ ಪಾದಗಳನ್ನು ಸ್ವರ್ಶಿಸುವವು ಎಂಬ ಪ್ರತೀತಿ ಇದೆ.

ದೇವಾಲಯದ ಆವರಣದಲ್ಲಿ 1985 ರಲ್ಲಿ ವಿದ್ಯಾಗಣಪತಿ ಹಾಗು 2007 ರಲ್ಲಿ ಶ್ರೀ ಭಕ್ತಾಂಜನೇಯ ದೇವಾಲಯವನ್ನು ಸ್ಥಾಪಿಸಲಾಗಿದೆ. ಆ ಸಮಯದಲ್ಲಿ ಪುರಾತನ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ.

ತಲುಪವ ಬಗ್ಗೆ : ಈ ದೇವಾಲಯ ಬೆಂಗಳೂರಿನ ದೊಮ್ಮಲೂರಿನಲ್ಲಿದ್ದು ಹತ್ತಿರದ ಸೂರ್ಯ ದೇವಾಲಯ ಹಾಗು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಬೃಹತ್ ಶಿವನನ್ನು ನೋಡಬಹುದು. 

Related Articles

ಪ್ರತಿಕ್ರಿಯೆ ನೀಡಿ

Latest Articles