ತಿರುಪತಿಗೆ ಅಷ್ಟೊಂದು ಭಕ್ತರು ಯಾಕೆ ಯಾತ್ರೆ ಮಾಡುತ್ತಾರೆ?

ನಾವೆಲ್ಲಾ ತಿರುಪತಿ ಯಾತ್ರೆ ಮಾಡುತ್ತೇವೆ. ಆದರೆ ಆ ಯಾತ್ರೆಯ ಮಹತ್ವ, ಯಾತ್ರೆಯ ವಿಧಿಗಳನ್ನು ಅರಿತು ಮಾಡಿದರೆ ಅದರ ಸಂಪೂರ್ಣ ಫಲ ನಮ್ಮದಾಗುತ್ತದೆ.

*ದೇವಿಪ್ರಸಾದ್ ಗೌಡ ಸಜಂಕು

'ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ॥
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ॥॥
ಈ ಮೇಲಿನ ನಿತ್ಯಶ್ಲೋಕ ನಾವೆಲ್ಲಾ ಪಠಿಸುತ್ತೇವೆ. ಇದು ಗರುಡ ಪುರಾಣದ ಬ್ರಹ್ಮಕಾಂಡದಲ್ಲಿ ಬರುವ ಶ್ಲೋಕ. ಶ್ರೀಕೃಷ್ಣ ಪರಮಾತ್ಮನ ಪತ್ನಿಯಾದ ಜಾಂಬವತಿ ದೇವಿಯು ಹಿಂದಿನ ಜನ್ಮದಲ್ಲಿ ಸೋಮ ಸುತೆಯಾಗಿ ಜನಿಸಿದ್ದಳು. ಪರಮ ಹರಿಭಕ್ತೆಯಾದ ಆಕೆ ಸದಾ ಭಾಗವತಾದಿ ಪುರಾಣ ಶ್ರವಣ, ಹರಿಭಕ್ತರ ಸೇವೆ, ಸಾಧು ಸಜ್ಜನರ ಸೇವೆ, ಹರಿಸೇವೆ ಮಾಡುತ್ತಾ ಇರಲು ಬ್ರಾಹ್ಮಣ ಶ್ರೇಷ್ಠರ ಗುರುಗಳಾದ ಜೈಗೀಷವ್ಯ ಋಷಿಗಳ ಭೇಟಿ ಆಗುತ್ತದೆ. ಆಕೆಯ ನಿಶ್ಚಲ ಹಾಗೂ ನಿರ್ಮಲವಾದ ಹರಿಭಕ್ತಿಯನ್ನು ಕಂಡ ಋಷಿಗಳು ಆಕೆಗೆ ಜ್ಞಾನೋಪದೇಶ ನೀಡಿ ಹರಿಯ ನಿತ್ಯ ವಾಸವಾದ ತಿರುಪತಿ ತಿರುಮಲ ಯಾತ್ರೆ, ಅಲ್ಲಿನ  ತೀರ್ಥಗಳು, ಅವುಗಳ ಮಹಾತ್ಮೆ ಹಾಗೂ ಆ ಕ್ಷೇತ್ರದ ಯಾತ್ರೆ ಹೇಗೆ ಮಾಡಬೇಕು? ಯಾತ್ರೆಯಲ್ಲಿ ಏನು ಮಾಡಬೇಕು ವೆಂಕಟೇಶ್ವರ ಸ್ವಾಮಿಯ ಮಹಾತ್ಮೆಯನ್ನು ವಿವರವಾಗಿ ಹೇಳುತ್ತಾ ಮೇಲಿನ ಶ್ಲೋಕವನ್ನು ಉಪದೇಶ ಮಾಡುತ್ತಾರೆ.  


"ಯಾತ್ರೆಗೆ ಹೊರಡುವ ಮೊದಲು  ಯಾತ್ರೆ ಮುಗಿಯುವ ತನಕ ಉರ್ಧ್ವರತರಾಗಿ (ಬ್ರಹ್ಮಚರ್ಯ ಹಾಗೂ ಎಲ್ಲಾ ಬಗೆಯ ಕಾಮನೆ ಹಾಗೂ ಮೋಹದ ತ್ಯಾಗ) ಇರುವ ಸಂಕಲ್ಪ ಮಾಡಬೇಕು. ಯಾತ್ರೆಗೆ ಹೊರಡುವಾಗ ಸ್ನಾನಾದಿ ಪೂರೈಸಿ, ಹರಿಸೇವೆ ಮಾಡಿ ಹರಿಭಕ್ತರಿಗೆ ದಾನ ಧರ್ಮ ಮಾಡಿ ಸಂತುಷ್ಟ ಮಾಡಿ ಯಾತ್ರಾ ಸಮಯದಲ್ಲಿ ಹರಿಭಕ್ತರ ಸಹವಾಸ, ಹರಿಕಥೆ ಶ್ರವಣದ ಭಾಗ್ಯಕ್ಕೆ ಬೇಡಿ,  ಹರಿ ನಿರ್ಮಾಲ್ಯ ಗಂಧವನ್ನು ವಿಸರ್ಜಿಸಿ ಶ್ರವಣ ಮಾಡಿ ಬರಿಗಾಲಿನಲ್ಲಿ ಯಾತ್ರೆ ಹೊರಡಬೇಕು. ಶಾಲಿಗ್ರಾಮ ಇದ್ದವರು ತಮ್ಮ ಜೊತೆಗೆ ಇಟ್ಟುಕೊಂಡು ಯಾತ್ರೆ ಮಾಡಬೇಕು ಹಾಗೂ ಪ್ರತಿ ತೀರ್ಥದ ದರ್ಶನವಾದ ಕೂಡಲೇ ಶಾಲಿಗ್ರಾಮವನ್ನು ಮುಂದಿರಿಸಿ ನಾರಾಯಣ ದೇವರನ್ನು ಆಹ್ವಾನಿಸಿ ನಮಸ್ಕರಿಸಬೇಕು. ತೀರ್ಥಯಾತ್ರೆಯ ಮಾರ್ಗದಲ್ಲಿ ಹಗಲು ರಾತ್ರಿ ಭಗವಂತನ ದಿವ್ಯವಾದ ಕಥೆಗಳನ್ನು ಕೇಳಬೇಕು. 
ಶೇಷಾಚಲದ ತಪ್ಪಲಿಗೆ ತಲುಪಿದ ನಂತರ ಶಾಲಿಗ್ರಾಮವನ್ನು ಮುಂದಿರಿಸಿ ಹನ್ನೆರಡು ನಮಸ್ಕಾರ ಹಾಕಬೇಕು. ಇರದವರು ಮನದಲ್ಲಿಯೇ ಶ್ರೀನಿವಾಸನನ್ನು ನೆನೆದು ನಮಸ್ಕರಿಸಬೇಕು. ಅಲ್ಲಿಂದ  ಕಪಿಲ ತೀರ್ಥ ದರ್ಶನ ಮಾಡಿ ಸ್ನಾನ, ಮುಂಡನ ಮಾಡಿಸಿ ತೀರ್ಥ ಶ್ರಾದ್ಧವನ್ನು ಮಾಡಬೇಕು. ಧಾನ ಧರ್ಮಗಳನ್ನು ಮಾಡಿ ಭಾಗವತ ಪುರಾಣ ಶ್ರವಣ ಮಾಡಬೇಕು. 
ಆನಂತರ ನರಸಿಂಹ ತೀರ್ಥ ದರ್ಶನ ಮಾಡಿ ಸ್ನಾನ ಮುಗಿಸಿ ಶ್ರೇಷ್ಠ ಬ್ರಾಹ್ಮಣರಿಗೆ ದೀಪ ದಾನ ನೀಡಿ ದೃಢವಾದ ಜ್ಞಾನಕ್ಕಾಗಿ ಶ್ರೀನಿವಾಸನಲ್ಲಿ ಬೇಡಿ ಮುಂದೆ ಸಾಗಬೇಕು. ಭಾಗವತ ಪುರಾಣ ಪಠಿಸುತ್ತಾ ಮೆಟ್ಟಿಲುಗಳನ್ನು ಹತ್ತಬೇಕು. ಪ್ರತಿ ಪಾವಟಿಗೆಯ ಮೆಟ್ಟಿಲು  ಹತ್ತುವಾಗ ಆಯಾ ಪಾವಟಿಗೆಗಳ ಮಹಿಮೆ ಕೇಳಿ ಕೊನೆಯಲ್ಲಿ ಶಾಲಿಗ್ರಾಮ ಮುಂದಿರಿಸಿ ನಮಸ್ಕಾರ ಮಾಡಿ ಮುಂದಿನ ಪಾವಟಿಗೆ ಹೋಗಬೇಕು. (ಈಗ ಪ್ರತಿ ಪಾವಟಿಗೆಯ ಮೊದಲು/ಕೊನೆಯಲ್ಲಿ ವಿಷ್ಣುವಿನ ವಿವಿಧ ಅವತಾರಗಳ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಅದಕ್ಕೆ ಪೂಜೆ ಸಲ್ಲಿಸ ಬಹುದು). 
ಶ್ರೀನಿವಾಸನು ದೇವತೆಗಳಿಗೆ ಅನಂತ ಸೂರ್ಯರಂತೆ ಕಂಡರೆ ಅಪರೋಕ್ಷ ಋಷಿಗಳಿಗೆ ಸೂರ್ಯನಂತೆ, ಅಪರೋಕ್ಷ ಮಾನವರಿಗೆ ನಕ್ಷತ್ರದಂತೆ,  ಮನುಷ್ಯೋತ್ತಮರಿಗೆ ಚಂದ್ರನಂತೆಯೂ, ಸಂಸಾರಿಗಳಿಗೆ ದೇಹಾಕಾರದಲ್ಲಿ ಪ್ರಕಾಶ ರೂಪದಿಂದಲೂ, ಜಗತ್ತು ಮಿಥ್ಯೆ ಎಂದು ತಿಳಿದವರಿಗೆ ಕಲ್ಲಿನಂತೆ ಕಪ್ಪು ರೂಪನಾಗಿ ತೋರುತ್ತಾನೆ. ಹಾಗಾಗಿ ಪ್ರತಿ ಪಾವಟಿಗೆಯಲ್ಲಿಯೂ ಶ್ರೀನಿವಾಸನ ಅತ್ಯುತ್ತಮ ರೂಪದ ದರ್ಶನಕ್ಕೆ ಬೇಡಬೇಕು.  ಹಾಗೆಯೇ ನವ ವಿಧದ ದ್ವೇಷಗಳನ್ನು ತ್ಯಾಗ ಮಾಡುತ್ತಾ ಹಾಗೂ ಬೇಕು ಮತ್ತು ಅವುಗಳು ನಮಗೆ ಮತ್ತೆ ಬಾಧಿಸದಂತೆ ಬೇಡಬೇಕು.
ಯಾತ್ರೆ ಸಮಯದಲ್ಲಿ ಪರಮ ಭಾಗವತರಾದ ಪ್ರಹ್ಲಾದ, ಪರಾಶರ, ನಾರದ, ಅಂಬರೀಷ ಮುಂತಾದವರ ಚರಿತ್ರೆ ಸ್ಮರಣೆ ಮಾಡಿ ನಮಗೂ ಶ್ರೀನಿವಾಸನ ಅನುಗ್ರಹ ಸಿಗವಂತಾಗಲಿ ಎಂದು ‘ಹರೇ ಶ್ರೀನಿವಾಸ’, ‘ನಾರಾಯಣ’ ‘ನಾರಾಯಣ’ , ‘ಗೋವಿಂದ ‘, ‘ಹೇ ವಾಸುದೇವ’ ಇತ್ಯಾದಿ ನಾಮಗಳನ್ನು ಕೂಗುತ್ತಾ ಚಪ್ಪಾಳೆ ತಟ್ಟುತ್ತಾ, ನರ್ತಿಸುತ್ತಾ ಮುಂದೆ ಸಾಗಬೇಕು.
ಅಲ್ಲಿಂದ ಮುಂದೆ ಸಾಗಿ ಮುಖ್ಯಪ್ರಾಣ ದೇವರ ಸನ್ನಿಧಿಗೆ ಬಂದು ಶ್ರೀನಿವಾಸನ ಅನುಗ್ರಹಕ್ಕೆ ಬೇಡಬೇಕು. ನಂತರ ಸಿಗುವುದೇ ಶ್ರೀನಿವಾಸನ ಆಲಯ. ಪ್ರಥಮ ದ್ವಾರದ ಎದುರು ಶ್ರೀನಿವಾಸನಿಗೆ ನಮಿಸಬೇಕು. ಪೂರ್ವದ್ವಾರದಲ್ಲಿ ಜಯ ವಿಜಯರನ್ನು, ದಕ್ಷಿಣ ದ್ವಾರದಲ್ಲಿ ಚಂಡ-ಪ್ರಚಂಡರನ್ನು, ಪಶ್ಚಿಮ (ಹಿಂಬದಿಯಲ್ಲಿ) ದ್ವಾರದಲ್ಲಿ ನಂದ- ಸುನಂದರನ್ನು, ಉತ್ತರ ದ್ವಾರದಲ್ಲಿ ಕುಮುದ- ಕುಮುದಾಕ್ಷರನ್ನು ನೆನೆಯುತ್ತಾ ಹನ್ನೆರೆಡು ಪ್ರದಕ್ಷಿಣೆ ಬರಬೇಕು. 


ಸ್ವಾಮಿ ಪುಷ್ಕರಣಿ ತೀರ್ಥ

ನಂತರ ಸ್ವಾಮಿ ಪುಷ್ಕರಣಿ ತೀರ್ಥದಲ್ಲಿ ಅಚಮನ ಮಾಡಿ ನಮಸ್ಕರಿಸಿ ಸ್ನಾನ ಮಾಡಬೇಕು. 
ಮೂರು ಲೋಕಗಳಲ್ಲಿ ಮೂರುವರೆ ಕೋಟಿ ತೀರ್ಥಗಳಿವೆ. ಆ ಎಲ್ಲಾ ತೀರ್ಥಗಳ ಸನ್ನಿಧಾನ ಸ್ವಾಮಿ ಪುಷ್ಕರಣಿಯಲ್ಲಿ ಇದೆ. ಪುಷ್ಕರಣಿಯಲ್ಲಿ ಬೇರೆ ಬೇರೆ ಭಾಗದಲ್ಲಿ, ದಿಕ್ಕಿನಲ್ಲಿ, ಅಂತರದಲ್ಲಿ ಈ ತೀರ್ಥಗಳು ಇವೆ. ಅವುಗಳಲ್ಲಿ ಮುಖ್ಯವಾದವು ವಾಯುತೀರ್ಥ, ಮಧ್ವತೀರ್ಥ, ಚಂದ್ರತೀರ್ಥ, ಕುಬೇರ ತೀರ್ಥ, ಬ್ರಹ್ಮತೀರ್ಥ, ಇಂದ್ರತೀರ್ಥ, ವಹ್ನಿತೀರ್ಥ,  ಯಮತೀರ್ಥ,  ನೈಋತ್ಯತೀರ್ಥ ಶೇಷ ತೀರ್ಥ, ವರುಣ ತೀರ್ಥ, ಭಾಗೀರಥಿ ತೀರ್ಥಗಳು.  ಯಾವ ತೀರ್ಥಗಳಲ್ಲಿ ಯಾವ ರೀತಿಯ ಶಾಲಿಗ್ರಾಮ ಪೂಜೆ ಮಾಡಿ ದಾನ ಮಾಡಿದರೆ ಏನು ಫಲ,  ಶಾಲಿಗ್ರಾಮಗಳ ವಿಧಗಳ ವರ್ಣನೆ ಕೂಡಾ ಗರುಡ ಪುರಾಣದಲ್ಲಿ ಇದೆ. 
ಆನಂತರ ಭೂವರಾಹ ಸ್ವಾಮಿಗೆ ಪೂಜೆ ಸಲ್ಲಿಸಿ ನಮಸ್ಕಾರ ಮಾಡಬೇಕು. ಭೂವರಾಹ ಸ್ವಾಮಿಯ ಕಥೆ ಸ್ಮರಣೆ ಮಾಡಬೇಕು. ನಂತರ ಶ್ರೀನಿವಾಸನ ಮಂದಿರದ ತಲೆಬಾಗಿಲನ್ನು ಭಕ್ತಿ ಪೂರ್ವಕವಾಗಿ ‘ಗೋವಿಂದ -ಗೋವಿಂದ’ ಎಂದು ಎರಡೂ ಕೈ ತಲೆಯ ಮೇಲಕ್ಕೆ ಎತ್ತಿ ಮುಗಿಯುತ್ತಾ ಶರಣಾರ್ತಿಯಾಗಿ ಪ್ರವೇಶ ಮಾಡಬೇಕು. 
ದೇವಗೃಹ ಪ್ರವೇಶಿಸಿ ಸಾಷ್ಟಾಂಗ ಹಾಕಬೇಕು. ಪೀಠ ದೇವತೆಗಳನ್ನು ಮನಸಾ ಚಿಂತಿಸಬೇಕು. ಪೀಠ ಮಧ್ಯದಲ್ಲಿ ಶ್ರೀನಿವಾಸ, ಎಡಪಾರ್ಶ್ವದಲ್ಲಿ ಪೀಠದಲ್ಲಿ ಹೊರಗೆ ವಾಯುದೇವರನ್ನು, ಬಲಕ್ಕೆ ಬ್ರಹ್ಮ, ವಿಷ್ಣು, ರುದ್ರ ದೇವರನ್ನೂ, ಆಗ್ನೇಯ ಕೋನ ದಲ್ಲಿ ಗರುಡದೇವರನ್ನು, ನೈಋತ್ಯಕ್ಕೆ ವಾಸುದೇವ, ವಾಯುವ್ಯಕ್ಕೆ ದುರ್ಗಾ ದೇವಿಯನ್ನು ನಮಸ್ಕಾರ ಮಾಡಬೇಕು. 
ಪೀಠದಲ್ಲಿ ಮೇಲೆ ಆಗ್ನೇಯಕ್ಕೆ ಯಮಧರ್ಮ, ನೈಋತ್ಯಕ್ಕೆ ವಾಯುದೇವರನ್ನು, ವಾಯುವ್ಯಕ್ಕೆ ರುದ್ರ ದೇವರನ್ನೂ, ಈಶಾನ್ಯಕ್ಕೆ ಇಂದ್ರನನ್ನೂ, ಪೂರ್ವಕ್ಕೆ ನಿಋತಿ, ಬಲಕ್ಕೆ ಉಗ್ರ ದುರ್ಗಾ ದೇವಿ, ಪಶ್ಚಿಮಕ್ಕೆ ವೈರಾಗ್ಯಾಧಿಪತಿ ಕಾಮದೇವ, ಮಧ್ಯದಲ್ಲಿ ವರಾಹ ಸ್ವಾಮಿ ಹಾಗೂ ಅದರ ಮೇಲ್ಬಾಗದಲ್ಲಿ ಲಕ್ಷ್ಮೀದೇವಿಯನ್ನು, ಅದರ ಮೇಲ್ಬಾಗದಲ್ಲಿ ವಾಯು-ಕೂರ್ಮನನ್ನು, ಅದರ ಮೇಲ್ಬಾಗದಲ್ಲಿ ವರುಣನ್ನೂ ಅದರ ಮೇಲ್ಬಾಗದಲ್ಲಿ ಲಕ್ಷ್ಮೀದೇವಿಯನ್ನೂ ನಮಿಸಬೇಕು. 
ಪದ್ಮದಲ್ಲಿದ್ದ ದೇವರ ಬಲಕ್ಕೆ ಸೂರ್ಯ, ಎಡಕ್ಕೆ ದೀಪರೂಪಿ ಲಕ್ಷ್ಮಿ, ಮುಂಭಾಗದಲ್ಲಿ ದೀಪರೂಪಿ ಅಗ್ನಿ, ಮೇಲ್ಬಾಗದಲ್ಲಿ ಭೂದೇವಿಯನ್ನು, ದುರ್ಗಾ ದೇವಿಯನ್ನು ನಮಿಸಬೇಕು. ಹೀಗೇ  ಪೀಠದಲ್ಲಿ, ಆವರಣದಲ್ಲಿ ಬೇರೆ ಬೇರೆ ದೇವರಿಗೆ ವಂದಿಸಬೇಕು. ನಂತರ ಲಕ್ಮೀ ಪತಿ ಶ್ರೀನಿವಾಸನ ದರ್ಶನ ಮಾಡಬೇಕು. 
ನಾಲಗೆ “ಓಂ ವೆಕಟೇಶಾಯ ನಮಃ” ಎಂದು ಜಪಿಸುತ್ತಾ ಕಾಲು ಬೆರುಳಿನ ಉಗುರಿನಿಂದ ಆರಂಭಿಸಿ ಮುಕುಟದ ತನಕ ಭಕ್ತಿಯಿಂದ ನೋಡಬೇಕು. ಅವರವರ ಯೋಗ್ಯತೆಗೆ ತಕ್ಕಂತೆ ಶ್ರೀನಿವಾಸ ಕಾಣಿಸುತ್ತಾನೆ. ಮತ್ತೆ ಮತ್ತೆ ಆ ಮಂಗಳ ಮೂರ್ತಿಯನ್ನು ಮನದಲ್ಲಿ ವಂದಿಸುತ್ತಾ, ಪ್ರದಕ್ಷಿಣೆ ಹಾಕುತ್ತಾ ದೇವಗೃಹದಿಂದ ಹೊರಬರಬೇಕು. 

ಎರಡನೇ ದಿನ ಪ್ರಾತಃ ಕಾಲ  ದೇವರ ಸುಪ್ರಭಾತ ಹಾಡಿ ಪುಷ್ಕರಣಿಯಲ್ಲಿ ಮಿಂದು ಮತ್ತೆ ಹಿಂದಿನಂತೆಯೇ ದರ್ಶನ ಮಾಡಬೇಕು. 
ಆನಂತರ ಪಾಪನಾಶಿನಿ ನದಿಯಲ್ಲಿ ಸ್ನಾನ ಮಾಡಬೇಕು. ಅಲ್ಲಿ ಸ್ನಾನ ಮಾಡುವುದರಿಂದ ಬ್ರಹ್ಮ ಹತ್ಯೆಯಂತಹ ಪಾಪವೂ ನಾಶ ಆಗುತ್ತದೆ. ಸ್ನಾನದ ನೀರು ಶುಭ್ರವಾಗಿ ಕಾಣುವ ತನಕ ಸ್ನಾನ ಮಾಡಿದರೆ ಪಾಪ ಕಳೆಯುತ್ತದೆ. ಅಲ್ಲಿಯೂ ವಿಧ್ಯುಕ್ತವಾಗಿಯೆ ತೀರ್ಥ ಸ್ನಾನ ಮಾಡಬೇಕು. ಆನಂತರ ಕುಮಾರಿ ತೀರ್ಥ, ಅಂತರ್ಗಂಗೆ, ತುಂಬುರು ತೀರ್ಥ, ಇಂದ್ರ ತೀರ್ಥ, ವಿಷ್ವಕ್ಷೇನ ಸರೋವರ, ಪಂಚಾಯುಧ ತೀರ್ಥ,  ಅಗ್ನಿ ಕುಂಡ ತೀರ್ಥ, ಬ್ರಹ್ಮ ತೀರ್ಥ, ಪಕ್ಷಿ ತೀರ್ಥ ಇತ್ಯಾದಿ ತೀರ್ಥಗಳಲ್ಲಿ ಸ್ನಾನ ಮಾಡಿ ದೀಪ ಹಚ್ಚಿ ಶ್ರೀನಿವಾಸನಲ್ಲಿ ಮನಸಾ ಬೇಡಿದರೆ ಇಹ ಪರ ಎರಡರಲ್ಲೂ ಸುಖ ಲಭಿಸುತ್ತದೆ ಎಂದು ಜೈಗೀಷವ್ಯ ಋಷಿಗಳು ಸೋಮ ಸುತೆಗೆ ಉಪದೇಶ ಮಾಡಿದ್ದು ಸೋಮಸುತೆಯು ಬ್ರಾಹ್ಮಣ ಶ್ರೇಷ್ಠರ ಗುರುಗಳಾದ ಜೈಗೀಷವ್ಯ ಋಷಿಗಳ ಜೊತೆಗೆ ಯಾತ್ರೆ ಮಾಡಿ ಅಲ್ಲಿಯೇ ಕೃಷ್ಣಾವತಾರದ ತನಕ ಉತ್ತಮವಾದ ತಪಸ್ಸು ಆಚರಿಸಿ ಯೋಗ ಧಾರಣೆಯಿಂದ ದೇಹವನ್ನು ತ್ಯಾಗ ಮಾಡಿ ಜಾಂಬವಂತನ ಮಗಳು ಜಾಂಬವತಿಯಾಗಿ ತನ್ನನ್ನು ವರಿಸಿದಳು ಎಂದು ಶ್ರೀ ಕೃಷ್ಣ ಪರಮಾತ್ಮ ತನ್ನ ಪರಮ ಭಕ್ತ ಗರುಡನಿಗೆ (ಗರುಡ ಪುರಾಣದಲ್ಲಿ) ಉಪದೇಶ ಮಾಡಿದನು.
ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ। ಶ್ರೀ ಮದ್ವೇಂಕಟನಾಥಾಯ ಶ್ರೀನಿವಾಸಾಯತೇ ನಮಃ॥
(ಕಲ್ಯಾಣಕಾರಕವಾದ ಅದ್ಭುತ ದೇಹವುಳ್ಳವನಾಗಿ ಇಚ್ಚಿಸಿದ್ದನ್ನು ಕೊಡುವವನಾಗಿ ಸಕಲೈಶ್ವರ್ಯ ಅಧಿಪತಿಯಾಗಿ, ಎಲ್ಲಾ ಪಾಠಗಳನ್ನು ಕಳೆಯುವುದರಲ್ಲಿ ಶ್ರೇಷ್ಠನಾಗಿ ಲಕ್ಷ್ಮೀ ಸಮೇತರಾಗಿ ಇರುವ ನಿನಗೆ ನಮಸ್ಕಾರಗಳು)

(ಲೇಖಕರು ಸಂಸ್ಕೃತಿ ಚಿಂತಕರು)

Related Articles

ಪ್ರತಿಕ್ರಿಯೆ ನೀಡಿ

Latest Articles