ಶಕ್ತಿ ದೇವತೆಯ ಆರಾಧನಾ ಕ್ಷೇತ್ರಗಳಿವು

ದಸರೆ ಎಂದರೆ ಶಕ್ತಿ ದೇವತೆಯ ಆರಾಧನೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಶಕ್ತಿ ದೇವತೆಯ ದೇಗುಲಗಳು ಕಾಣಬರುತ್ತದೆ. ಇಲ್ಲಿ ಹಲವು ದುರ್ಗಾ ದೇವಾಲಯಗಳಿದ್ದು ಆಯ್ದ ದೇವಸ್ಥಾನಗಳ ಪರಿಚಯ ಇಲ್ಲಿದೆ.

  • ಶ್ರೀನಿವಾಸ ಮೂರ್ತಿ ಎನ್. ಎಸ್.

ಕಟೀಲು ದುರ್ಗಾ ಪರಮೇಶ್ವರಿ

ತುಳುನಾಡಿನ ಅತ್ಯಂತ ಪ್ರಮುಖ ಶಕ್ತಿ ಕೇಂದ್ರವಾದ ಕಟೀಲಿನ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ  ಮಂಗಳೂರಿನಿಂದ ಸುಮಾರು 25 ಕಿ ಮೀ ದೂರದಲ್ಲಿದೆ.  ಕಟಿ ಎಂದರೆ ಮಧ್ಯ ಹಾಗು ಇಲಾ ಎಂದರೆ ಪ್ರದೇಶ ಎಂಬ ಅರ್ಥ ಇದೆ.  ದೇವಿಯು ನೆಲೆಸಿರುವ ಈ ಜಾಗ ನಂದಿನಿಯ ನದಿಯ ಮದ್ಯ ಭಾಗದಲ್ಲಿರುವದರಿಂದ ಕಟೀಲು ಎಂಬ ಹೆಸರು ಬಂದಿದೆ.

ಇನ್ನು ಇಲ್ಲಿನ ಸ್ಥಳ ಪುರಾಣದಂತೆ ಜಬಾಲಿ ಮುನಿ ತನ್ನ ಯಾಗ ಮಾಡಲು ದೇವೆಂದ್ರನ ಸಲಹೆಯಂತೆ ದೇವಲೋಕದ ನಂದಿನಿಯನ್ನ ಪ್ರಾರ್ಥಿಸಿದಾಗ ಅಹಂಕಾರದಿಂದ ಮೆರೆಯುತ್ತಿದ್ದ ನಂದಿನಿ ಬರಲು ಒಪ್ಪುವುದಿಲ್ಲ. ಇದರಿಂದ ಕೋಪಗೊಂಡ ಮುನಿ ನದಿಯಾಗಿ ಭೂಮಿಯ ಮೇಲೆ ಹುಟ್ಟುವಂತೆ ಶಾಪ ಕೊಡುತ್ತಾನೆ. ತನ್ನ ತಪ್ಪಿನ ಅರಿವಾಗಿ ನಂದಿನಿ ಆದಿ ಶಕ್ತಿಯಲ್ಲಿ ಕ್ಶಮೆ ಕೇಳಿದಾಗ ನೀನು ನದಿಯಾಗಿ ಪ್ರವಹಿಸು ಮುಂದೆ ತಾನು ಅವತಾರ ತಾಳಿದಾಗ  ನದಿಯ ಮಧ್ಯ ಭಾಗದಲ್ಲಿ ನೆಲೆಸುವುದಾಗಿ ಮಾತು ನೀಡುತ್ತಾಳೆ.  ಕಾಲ ಕ್ರಮದಲ್ಲಿ ಇಲ್ಲಿ ಅರುಣಾಸುರ ಎಂಬ ರಾಕ್ಷಸನ ಉಪಟಳ ಜಾಸ್ತಿಯಾಗುತ್ತದೆ.  ಆಗ ಶ್ರೀ ಆದಿ ಪರಾಶಕ್ತಿ ಸ್ವರೂಪಿಣಿಯಾದ ದೇವಿಯು ಇಲ್ಲಿ ಉಗ್ರ ಭಾಮರಿಯ ರೂಪದಿಂದ ಅರುಣಾಸುರನನ್ನು ಕೊಂದು ಸೌಮ್ಯ ರೂಪದಲ್ಲಿ ನಂದಿನಿ ನದಿಯ ತಟದಲ್ಲಿ ನೆಲೆಸಿದಳು ಎಂಬ ನಂಬಿಕೆ ಇದೆ. ಇಲ್ಲಿ ನವರಾತ್ರಿ ಹಬ್ಭ ವಿಷೇಶವಾಗಿ ಆಚರಣೆ ನಡೆಯಲಿದ್ದು ಮಧ್ಯಾಹ್ನ ಚಂಡಿಕಾ ಹೋಮ, ಸಂಜೆ ರಂಗ ಪೂಜೆಗಳು ನಡೆಯಲ್ಲಿದ್ದು ಪ್ರತಿ ದಿನ ಸಂಕೀರ್ತನ ಸೇವೆ ಇರುತ್ತದೆ.

ಬಪ್ಪನಾಡು ದುರ್ಗಾ ಪರಮೇಶ್ವರಿ

ಮಂಗಳೂರಿನ ಸಮೀಪದ ಮುಲ್ಕಿಯ ಬಳಿ ಇರುವ ಈ ದೇವಾಲಯದ ಕರಾವಳಿಯ ಪ್ರಮುಖ ದೇವಾಲಯಗಳಲ್ಲಿ ಒಂದು. ಅಗ್ನ ಅವಘಡದಲ್ಲಿ ನಾಶವಾದ ದೇವಾಲಯವನ್ನು ನವೀಕರಣ ಮಾಡಿದ್ದು ಹೊಸ ದೇವಾಲಯದಲ್ಲಿ ಸುಂದರವಾದ ಹಳೆಯ ದುರ್ಗಾ ಪರಮೇಶ್ವರಿಯ ಶಿಲ್ಪವಿದೆ. ಇನ್ನು ಇಲ್ಲಿನ ಬಪ್ಪಬ್ಯಾರಿಯಿಂದ ಸಾವಂತರು ದೇವಾಲಯ ನಿರ್ಮಿಸಿದ ಕಾರಣ ಈ ಕ್ಷೇತ್ರಕ್ಕೆ ಬಪ್ಪನಾಡೆಂದು ಹೆಸರು ಬಂದಿತು.  ಇಲ್ಲಿ ದಿನದ ಎರಡು ಸಮಯದಲ್ಲಿ ಪೂಜೆ ನಡೆಯಲಿದ್ದು ಲಿಂಗ ರೂಪದಲ್ಲಿ ಪೂಜೆಗೊಳ್ಳುವ ದೇವಿಯಲ್ಲಿ ಇದು ಒಂದು. ಇನ್ನು ಇಲ್ಲಿನ ಬ್ರಹ್ಮರಥೋತ್ಸವ ಸುಮಾರು ಹದಿನೈದು ದಿನ ನಡೆಯಲಿದ್ದು ಈ ಭಾಗದ ಪ್ರಮುಖ ಉತ್ಸವಗಳಲ್ಲಿ ಒಂದು.

ನಂದಿಕೂರು ಶ್ರೀ ದುರ್ಗಾಪರಮೇಶ್ವರಿ

ನಂದಿಕೂರು ಶ್ರೀ ದುರ್ಗಾಪರಮೇಶ್ವರಿ

ಉಡುಪಿಯ ಕಾಪು ಬಳಿಯಲ್ಲಿರುವ ನಂದಿಕೂರಿನಲ್ಲಿ ಪ್ರಾಚೀನವಾದ ಶ್ರೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಇದು ಅಚಾರ್ಯ ಮಧ್ವರ ಅದ್ಯಾತ್ಮಿಕ ಗುರು ಶ್ರೀ ಅಚ್ಯುತ ಪ್ರೇಕ್ಷಾಚಾರ್ಯರ ಊರು. ಭಾರ್ಗವ ಮಹರ್ಷಿಯಿಂದ ಸ್ಥಾಪಿತವಾದ ದುರ್ಗೆ ಎಂಬ ನಂಬಿಕೆ ಇದೆ. ಇನ್ನು ತುಳುನಾಡಿನ ಪ್ರಮುಖ ಅರಸರಾಗಿ ಎಲ್ಲೂರು ಸೀಮೆಯನ್ನ ಆಳಿದ ಕುಂದ ಹೆಗ್ಗಡೆಯವರ ಊರು ಸಹ. ಸುಮಾರು 14 – 16 ನೇ ಶತಮಾನದಲ್ಲಿ ಆಳಿದ ಇವರ ಕಾಲದಲ್ಲಿ ಸಾಕಷ್ಟು ಅಭಿವೃದ್ದಿಗೊಂಡಿತು. ಮಹಿಷಾಸುರಮರ್ದಿನಿಯ ಸುಮಾರು ಮೂರು ಆಡಿ ಎತ್ತರದ ಶಿಲ್ಪ ಇಲ್ಲಿ ದುರ್ಗೆಯ ರೂಪದಲ್ಲಿ ಅರಾಧಿಸಲ್ಪಡುತ್ತದೆ. ವಿದ್ವಾಂದ ಗುರುರಾಜಭಟ್ಟರು ಇದನ್ನು ಬಾದಾಮಿ ಚಾಲುಕ್ಯರ ಕಾಲದ ಶಿಲ್ಪ ಎಂಬ ಅಭಿಪ್ರಾಯ ಪಡುತ್ತಾರೆ.   ಇನ್ನು ಮೀನ ಸಂಕ್ರಮಣದಂದು ರಥೋತ್ಸವ ನಡೆಯಲಿದ್ದು ನವರಾತ್ರಿಯಲ್ಲಿ ವಿಷೇಶ ಪೂಜೆಗಳು ನಡೆಯುತ್ತದೆ.

ಮಂದರ್ತಿ ಶ್ರೀ ದುರ್ಗಾ ಪರಮೇಶ್ವರಿ

ಕರಾವಳಿಯ ಪ್ರಮುಖ ಶಕ್ತಿ ದೇವತೆಗಳಲ್ಲಿ ಇದು ಒಂದು. ಉಡುಪಿಯ ಹಾಲಾಡಿಯಿಂದ ಸುಮಾರು 15 ಕಿ ಮೀ ದೂರದಲ್ಲಿ ಈ ದೇವಾಲಯ ಇದೆ. ರಾಜನ ಕೋರಿಕೆಯಂತೆ ದುಷ್ಟ ರಾಕ್ಷಸರನ್ನು ಸಂಹಿರಿಸಿ ಇಲ್ಲಿ ಶ್ರೀ ದುರ್ಗಾ ಪರಮೇಶ್ವರಿಯಾಗೆ ನೆಲೆಸಿ ಭಕ್ತರನ್ನು ಸಲಹುತ್ತಾಳೆ ಎಂಬ ನಂಬಿಕೆ ಇದೆ.

ಇಲ್ಲಿನ ಸ್ಥಳೀಯ ಪುರಾಣದಂತೆ ನಾಗಲೋಕದ ಶ್ರೀ ಶಂಖ ಚೂಡನಿಗೆ ಮಂದರತಿ ಹಾಗು ಇತರ ನಾಲ್ಕು ಹೆಣ್ಣು ಮಕ್ಕಳು ಜನಿಸುತ್ತಾರೆ. ಅವರು ಶಿವನ ಪುತ್ರ ಸುಬ್ರಹ್ಣಣ್ಯನನ್ನ ವರಿಸಲು ಕೈಲಾಸಕ್ಕೆ ತೆರಳುತ್ತಾರೆ.  ಆದರೆ ಅಲ್ಲಿ ನಂದಿನಿಯ ಶಾಪದಿಂದ ಸರ್ಪ ರೂಪದಲ್ಲಿ ಸಹ್ಯಾದ್ರಿಯ ಕಾಡ್ಗಿಚ್ಚಿಗೆ ಸಿಲುಕುತ್ತಾರೆ. ಅಲ್ಲಿ ಸಂಚಾರ ಮಾಡುತ್ತಿದ್ದ ವ್ಯಾಘ್ರಪಾದ ಮುನಿಗಳಿಗೆ ತೊಂದರೆ ನೀಡಿದ್ದಕ್ಕೆ ಪುನಹ ಶಾಪಗ್ರಸ್ತರಾಗುತ್ತಾರೆ.  ವಿನಂತಿ ಮಾಡಿದಾಗ ರಾಜನಿಂದ ನಿಮಗೆ ಶಾಪ ವಿಮೋಚನ ಯಾಗುವದು ಎಂಬ ಬರವಸೆ ಸಿಗುತ್ತದೆ. ಅಲ್ಲಿಗೆ ಬಂದ ಅವಂತಿಯ ರಾಜ ದೇವದರ್ಮನು ಈ ಸರ್ಪಗಳನ್ನ ಉಳಿಸುತ್ತಾನೆ.  ಅವುಗಳಲ್ಲಿ ಮಂದರತಿ ಬಂದು ನೆಲಿಸಿದ ಜಾಗವೇ ಈಗಿನ ಮಂದರ್ತಿ.  ಇಲ್ಲಿನ ರಕ್ಕಸರನ್ನ ಕಲ್ಲುಟಿಗ, ಬೊಬ್ವರ್ಯ ಸಹಾಯದಿಂದ ಸಂಹರಿಸುತ್ತಾಳೆ.  ದುರ್ಗೆಯ ಸ್ವರೂಪ ಕಂಡ ಮಹಿಶ ಶರಣಾಗತನಾಗುತ್ತಾನೆ. ಹೀಗೆ ದೇವಿ ಇಲ್ಲಿ ದುರ್ಗಾ ಪರಮೇಶ್ವರಿಯಾಗಿ ನೆಲೆ ನಿಲ್ಲುತ್ತಾಳೆ.   ಇಲ್ಲಿ ನವರಾತ್ರಿಯಲ್ಲಿ ವಿಶೇಷ ಪೂಜೆಗಳು ನಡೆಯಲಿದೆ.  ಕುಂಭ ಸಂಕ್ರಮಣದಂದು ಇಲ್ಲಿ ಕೆಂಡ ಸೇವೆ ಹಾಗು ನಾಗ ದರ್ಶನ ನಡೆಯಲಿದೆ.

ಅಲೆವೂರಿನ ಶ್ರೀ ದುರ್ಗಾಪರಮೆಶ್ವರಿ

ಅಲೆವೂರಿನ ಶ್ರೀ ದುರ್ಗಾಪರಮೆಶ್ವರಿ

ಉಡುಪಿಯ ಸಮೀಪದ ಪಡು ಅಲೆವೂರಿನಲ್ಲಿ ಶ್ರೀ ದುರ್ಗಾಪರಮೇಶ್ವರಿಯ ದೇವಾಲಯವಿದೆ. ಇಲ್ಲಿ ಕಾಣ ಬರುವ ಶಿಲಾದೇವಾಲಯಗಳಲ್ಲಿ ಒಂದಾದ ಈ ದೇವಾಲಯ ಸುಮಾರು 9 – 10 ನೇ ಶತಮಾನದ್ದು ಎಂಬ ನಂಬಿಕೆ ಇದೆ.  ವಿಜಯನಗರ ಅರಸರ ಕಾಲದಲ್ಲಿ ನವೀಕರಣಗೊಂಡ ಈ ದೇವಾಲಯದ ಗರ್ಭಗುಡಿಯಲ್ಲಿ ಸುಮಾರು 1 -2 ಅಡಿ ಎತ್ತರದ ಲಿಂಗ ಸ್ವರೂಪಿ ದೇವಿಯ ಇದ್ದು ದೇವಾಲಯದ ನಂತರ ಕಾಲದಲ್ಲಿ ಸಾಕಷ್ಟು ನವೀಕರಣಗೊಂಡಿದೆ.  ಇನ್ನು ಇಲ್ಲಿ ನವರಾತ್ರಿಯಲ್ಲಿ ಒಂಬತ್ತು ದಿನ ವೈಭವದ ಉತ್ಸವ ನಡೆಯಲಿದ್ದು ಕಾರ್ತೀಕ ಮಾಸದಲ್ಲಿ ದೀಪೋತ್ಸವ ನಡೆಯಲಿದೆ.

ಕುಂಜಾರುಗಿರಿ ಶ್ರೀ ದುರ್ಗಾ ದೇವಿ

ಕುಂಜಾರುಗಿರಿ ಶ್ರೀ ದುರ್ಗಾ ದೇವಿ

ಉಡುಪಿಯ ಪಾಜಕ ಕ್ಷೇತ್ರಗಳಲ್ಲಿ ಇರುವ ಕುಂಜಾರುಗಿರಿಯಲ್ಲಿ ನೆಲೆಸಿದ ಶ್ರೀ ದುರ್ಗಾ ದೇವಿ ತುಳುನಾಡಿನ ಪರುಶರಾಮ ಸ್ಥಾಪಿತ ಮುಖ್ಯ ಶಕ್ತಿ ಪೀಠಗಳಲ್ಲಿ ಒಂದು. ಕುಂಜಾರುಗಿರಿ ಸುಮಾರು ಸಮುದ್ರ ಮಟ್ಟದಿಂದ ಸುಮಾರು 175 ಅಡಿ ಎತ್ತರದಲ್ಲಿದ್ದು ದುರ್ಗಾ ದೇವಿಯ ಜೊತೆಯಲ್ಲಿ ಪರುಶರಾಮನ ದೇವಾಲಯವೂ ಇದ್ದು ಅಪುರೂಪದ ಪುಣ್ಯ ಸ್ಥಳ.  ಶ್ರೀ ದುರ್ಗೆಯನ್ನು ಕುಂಜಾರುಗಿರಿ ಬೆಟ್ಟದಲ್ಲಿ ಶ್ರೀ ಪರುಶುರಾಮರೇ ಸ್ವಯಂ ಸ್ಥಾಪಿಸಿದರು ಎಂಬ ನಂಬಿಕೆ ಇದೆ.

ಇನ್ನು ಇಲ್ಲಿನ ಸ್ಥಳೀಯ ಪುರಾಣದಂತೆ ಕೃಷ್ಣಾವತಾರದ ಸಮಯದಲ್ಲಿ ಅವನ ಅನುಜೆಯಾಗಿ ದುಷ್ಟ ಸಂಹಾರದಲ್ಲಿ ನೆರವಾಗಿ ಕೃಷ್ಣನ ಹತ್ತಿರದಲ್ಲಿ ಇಲ್ಲಿನ ಕುಂಜಾರು ಬೆಟ್ಟದಲ್ಲಿ ದುರ್ಗೆಯಾಗಿ ನೆಲೆಸಿದಳು ಎಂಬ ನಂಬಿಕೆ ಇದೆ. ಸ್ಥಾನಿಕ ಭಂಗಿಯಲ್ಲಿ ನೆಲೆಸಿರುವ ಈ ಮೂರ್ತಿ ಚತುರ್ಭುಜಧಾರಿಯಾಗಿದ್ದು ಶಂಖ, ಚಕ್ರ, ಬಿಲ್ಲ ಹಾಗ ತ್ರಿಶೂಲಧಾ ರಿಣಿಯಾಗಿದ್ದಾಳೆ. ನವರಾತ್ರಿಯಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯಲಿದ್ದು ನವ ದುರ್ಗೆಯರಿಗೆ ಕನ್ನಿಕಾ ಪೂಜೆ ಹಾಗು ಇತರ ಪೂಜೆಗೆಳ ನಡೆಯುತ್ತವೆ.

ಶರವೂರಿನ ಶ್ರೀ ದುರ್ಗಾಪರಮೇಶ್ವರಿ

ಶರವೂರಿನ ಶ್ರೀ ದುರ್ಗಾಪರಮೇಶ್ವರಿ

ಉಪ್ಪಿನಂಗಡಿಯ ಸಮೀಪದಲ್ಲಿ ಇರುವ ಶರವೂರಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಪುರಾತನವಾದ ದೇವಾಲಯ ಈಗ ನವೀಕರಣಗೊಂಡಿದ್ದು ಗರ್ಭಗುಡಿಯಲ್ಲಿ ಸ್ಥಾನಿಕ ಭಂಗಿಯಲ್ಲಿನ ಶ್ರೀ ದುರ್ಗೆಯ ಶಿಲ್ಪವಿದೆ. ಕೈಗಳಲ್ಲಿ ತ್ರಿಶೂಲ ಹಾಗು ಕಮಲವಿದ್ದು ಪ್ರಾಕಾರದಲ್ಲಿ ಗಣಪತಿ, ಲಕ್ಶ್ಮೀನಾರಾಯಣ, ಚಾಮುಂಡಿಯ ಶಿಲ್ಪಗಳಿವೆ. ಇನ್ನು ಇಲ್ಲಿ ನವರಾತ್ರಿಯಲ್ಲಿ ವಿಷೇಶ ಪೂಜೆಗಳು ನಡೆಯಲಿದ್ದು ಹತ್ತು ದಿನದ ಜಾತ್ರೆ ನಡೆಯಲಿದೆ.  

ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿ

ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿ

ಕುಂದಾಪುರದಿಂದ ಸುಮಾರು 44 ಕಿ ಮೀ ದೂರದಲ್ಲಿ ಸಿದ್ದಾಪುರದ ಹತ್ತಿರ ಇರುವ ಇಲ್ಲಿ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಾಲಯವಿದೆ. ಇಲ್ಲಿ ಕುಬ್ಜ ಹಾಗು ನಾಗತೀರ್ಥಗಳ ಸಂಗಮ ಸ್ಥಳದಲ್ಲಿದ್ದು ದೇವಿ ಶಿವಲಿಂಗ ಸ್ವರೂಪಿಣಿಯಾಗಿ ಆರಾಧಸಿಲ್ಪಡುತ್ತಾಳೆ. ಇಲ್ಲಿ ಖರಾಸುರ ಮತ್ತು ರಟ್ಟಾಸುರರನ ಸಂಹಾರ ಮಾಡುವಲ್ಲಿ ಶಂಕರನಾರಾಣನಿಗೆ ಸಹಾಯ ಮಾಡಿದ ನಂತರ ಇಲ್ಲಿನ ಕಮಲಾಕಾರದ ಶಿಲೆಯ ಮೇಲೆ ಸ್ವಯಂಭೂ ಲಿಂಗವಾಗಿ ನೆಲೆಸಿದ ಕಾರಣ ಈ ಸ್ಥಳಕ್ಕೆ ಕಮಲಶಿಲೆ ಎಂಬ ಹೆಸರು ಬಂದಿದೆ.

ಇನ್ನು ಮತ್ತೊಂದು ಕಥೆಯಂತೆ ಶ್ರೀ ಪಾರ್ವತಿ ದೇವಿಯೇ ಇಲ್ಲಿ ನೆಲೆಸಿರುವ ಎಂಬ ನಂಬಿಕೆ ಇದೆ.  ಪಾರ್ವತಿಯ ಶಾಪಕ್ಕೆ ಬಲಿಯಾದ ಪಿಂಗಳಾ ಎಂಬ ಅಪ್ಸರೆಯ ಕೋರಿಕೆಗ ಮೇರೆಗೆ ಇಲ್ಲಿ ಸ್ವಯಂಭೂ ಲಿಂಗ ಸ್ವರೂಪಿಣಿಯಾಗಿ ನೆಲೆಸುತ್ತೇನೆ ಹಾಗು ಪ್ರತಿ ವರ್ಷ ಇಲ್ಲಿ ನನ್ನ ಪಾದವನ್ನು ಸ್ಪರ್ಶಿ ಸುವ ಮೂಲಕ ನಿನ್ನ ಶಾಪ ವಿಮೋಚನೆಯಾಗುವುದು ಎಂದು ಅಭಯ ನೀಡುತ್ತಾಳೆ. ಹಾಗಾಗಿ ಅಪ್ಸರೆ ಕುಬ್ಜಾ ನದಿಯ ಸ್ವರೂಪದಲ್ಲಿ ಇಲ್ಲಿ ಹರಿದಳು ಎಂಬ ನಂಬಿಕೆ ಇದೆ. ಇನ್ನು ಈ ಸ್ಥಳಕ್ಕೆ ಕಂಜಶಿಲಾಪುರ ಎಂದು ಕರೆಯಲಾಗುತ್ತಿದ್ದು ಇಲ್ಲಿನ ಸುಪಾರ್ಶ್ವ ಗುಹೆಯಲ್ಲಿ ದೇವರ ಅದಿಸ್ಥಾನ ಎಂಬ ನಂಬಿಕೆ ಇದೆ. ಇಲ್ಲಿಯೇ ನಾಗ ತೀರ್ಥ ನದಿ ಹುಟ್ಟುವುದು. ಇಲ್ಲಿ ಶಿವಲಿಂಗ ಹಾಗು ಪಾಣಿ ಪೀಠಗಳನ್ನು ಮೄತ್ತಿಕಾಷ್ಟಬಂಧದಿಂದ ಜೋಡಿಸಲಾಗುತ್ತಿದ್ದು ಇದನ್ನೇ ಪ್ರಸಾಧವಾಗಿ ನೀಡಲಾಗುತ್ತದೆ, ಸುಂದರ ಪ್ರಶಾಂತ ವಾತಾವರಣದಲ್ಲಿ ನೆಲೆಸಿರುವ ಈ ಮಾತೆಗೆ ನವರಾತ್ರಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles