ಕುಪ್ಪಳ್ಳಿಯ ಕವಿಶೈಲದ ನೆನಪುಗಳು…

*ವೈ.ಬಿ.ಕಡಕೋಳ

ತೆರೆದಿದೆ ಮನೆ ಓ ಬಾ ಅತಿಥಿ ಹೊಸ ಬೆಳಕಿನ ಹೊಸ ಧಾರೆಯಾ ಹೊಸ ಬಾಳನು ತಾ ಅತಿಥಿ” ಕುವೆಂಪುರವರ ಪದ್ಯದ ಈ ಸಾಲನ್ನು ಜ್ಞಾಪಿಸಿಕೊಂಡು ಬನ್ನಿ ಕುಪ್ಪಳ್ಳಿಯ ಕವಿಮನೆಗೆ. ಕುಪ್ಪಳ್ಳಿ ಕುವೆಂಪುರವರ ಮನೆಯ ಹೊಂದಿದ ಮಲೆನಾಡಿನ ರಮ್ಯ ಪ್ರಕೃತಿ ತಾಣ.

ಇದು ದಟ್ಟ ಕಾನನದಲ್ಲಿ ತೀರ್ಥಹಳ್ಳಿಯಿಂದ 16 ಕಿ.ಮೀ.ದೂರದಲ್ಲಿದೆ. ರಾಷ್ಟ್ರೀಯ ಸ್ಮಾರಕವೆಂದು 1992 ರಲ್ಲಿ ಮೈದಳೆದು ಪುನರ್ನಿರ್ಮಾಣಗೊಂಡು 2000 ರಲ್ಲಿ ರಾಷ್ಟ್ರಕ್ಕೆ ಅರ್ಪಿತವಾದ ಈ ಕವಿಮನೆ, ಬರಿಯ ಕವಿಮನೆಯಾಗದೇ ನಮಗಿಂದು ಕುವೆಂಪು ರಾಷ್ಟ್ರಕವಿಯಾಗಿ ನಮ್ಮೊಡನಿರುವರೇನೋ ಎಂಬಂತೆ ಭಾಸವಾಗುತ್ತದೆ.

ಕುಪ್ಪಳ್ಳಿ ಕವಿಮನೆಗೆ ಹೋಗಲು ನಿಗದಿತ ಪ್ರವೇಶ ಶುಲ್ಕ ನೀಡಿದರೆ ಕವಿ ಭಾವಚಿತ್ರ, ವಿಶ್ವಮತ ಸಂದೇಶ ಸಾರುವ ಚೀಟಿ ನೀಡುತ್ತಾರೆ. ಅದು ನಿಜಕ್ಕೂ ಸ್ಮರಣೀಯ. ಮನೆ ಪ್ರವೇಶಿಸಿದೊಡನೆ ನಟ್ಟ ನಡುವೆ ಪ್ರಾಚೀನ ಕಾಲದಿಂದಲೂ ಪೂಜೆಗೊಳ್ಳುತ್ತಿರುವ ತುಳಸಿ ವೃಂದಾವನವಿದೆ.

ಸುಮಾರು ಎರಡು ನೂರು ವರ್ಷಗಳ ಹಿಂದಿನ ಕುಸುರಿ ಕಲೆಯಿಂದ ಕೆತ್ತನೆಗೊಂಡ ಮನೆಯ ಉಪ್ಪರಿಗೆಗಳು ಇಲ್ಲಿವೆ. ಬಾಣಂತಿ ಕೋಣೆ, ಐಗಳ ಶಾಲೆಯಂತೆ ಇದ್ದ ಕೊಠಡಿ ವಿಶಾಲವಾದ ಅಡುಗೆ ಮನೆ, ಹಳೆಯ ಕಾಲದ ಸ್ನಾನದ ಮನೆ ಇತ್ಯಾದಿಗಳು ಕುವೆಂಪುರವರ ಬದುಕಿನ ಪುಟ ತೆರೆದಿಡುವ ವೈವಿಧ್ಯತೆಗಳೊಂದಿಗೆ ಗಮನ ಸೆಳೆಯುತ್ತವೆ.

ಇಂಥ ಮನೆಯಲ್ಲಿ ಕುವೆಂಪುರವರು ನಿತ್ಯ ಬರವಣಿಗೆಗೆ ಬಳಸುತ್ತಿದ್ದ ಎಲ್ಲ ವಸ್ತುಗಳು, ಎಲ್ಲ ಪುಸ್ತಕಗಳು, ಬಾಳಿನ ರಸಘಟ್ಟಗಳನ್ನು ನೆನಪಿಸುವ ಛಾಯಾಚಿತ್ರಗಳು, ಅಲ್ಲದೇ ಮಲೆನಾಡಿನ ಜನಜೀವನವನ್ನು ಬಿಂಬಿಸುವ ಮನೆ ಬಳಕೆಯ ಮತ್ತು ಬೇಸಾಯದ ವಸ್ತುಗಳು ಇವೆಲ್ಲವುಗಳ ಸಂಗ್ರಹಾಲಯವಾಗಿ ಕುಪ್ಪಳ್ಳಿಯ ಅವರ ಮನೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕುವೆಂಪುರವರು ತಮ್ಮ ಕುಪ್ಪಳ್ಳಿಯ ಕುರಿತು ಬರೆದ ಪದ್ಯ ಈ ಮನೆ ನೋಡುವಾಗ ಸ್ಮೃತಿ ಪಟಲದಲ್ಲಿ ಮೂಡಿಬಂದಿತು.

“ತೀರ್ಥಹಳ್ಳಿಯ ಕಳೆದು ತಾಯಿ ತುಂಗೆಯ ದಾಟಿ ಒಂಬತ್ತು ಮೈಲಿಗಳ ದೂರದಲಿ ನಮ್ಮೂರು ಕುಪ್ಪಳ್ಳಿ ಊರಲ್ಲ ನಮ್ಮ ಮನೆ, ನಮ್ಮ ಕಡೆ ಊರೆಂದರೊಂದೆ ಮನೆ ಪಡುವೆಟ್ಟಗಳ ನಾಡು ದಡ್ಡವಾದಡವಿಗಳು ಕಿಕ್ಕಿರಿದ ಮಲೆನಾಡು ಸುತ್ತಲೂ ಎತ್ತರದ ಬೆಟ್ಟಗಳು, ಕಾಡುಗಳು ಎತ್ತ ನೋಡಿದರತ್ತ ಸಿರಿ ಹಸಿರು ಕಣ್ಣುಗಳಿಗಾನಂದ ಮೇಣಾತ್ಮ ಕೊಂದೊಸೆಗೆ.”

ನಿಜಕ್ಕೂ ಈ ಮನೆ ನೋಡಿ ಹೊರ ಬಂದವರು ಈ ಪದ್ಯ ನೆನಪಿಸಿದರೆ ಸಾಕು ಅರ್ಥಪೂರ್ಣವಾಗಿ ಆ ಮನೆ ಸಾರ್ಥಕವೆನಿಸುತ್ತದೆ. ಎದುರಿಗೆ ಅಡಿಕೆ ತೋಟ, ಅಲ್ಲಿಯೇ ಕೆರೆಯೊಂದಿದೆ. ಮನೆ ಮುಂದೆ ಕುವೆಂಪುರವರ ಸಂದೇಶಗಳನ್ನು ಅಲ್ಲಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ. ಕವಿಮನೆ ಎದುರಿನಲ್ಲಿ ದಕ್ಷಿಣ ದಿಕ್ಕಿಗೆ ಕವಿಶೈಲವಿದೆ. ಕವಿಶೈಲ ಕವಿಮನೆಯ ದಕ್ಷಿಣ ದಿಕ್ಕಿನಲ್ಲಿ ಕವಿಮನೆಗೆ ಹೊಂದಿಕೊಂಡು ಇರುವ ಬೆಟ್ಟವೇ ಕವಿಶೈಲ. ಇದು ಕವಿ ಸ್ಪೂರ್ತಿಯ ತಾಣ. ಹತ್ತು ನಿಮಿಷಗಳಲ್ಲಿ ಬೆಟ್ಟ ಏರಿ ಬಂದರೆ, ಎಲ್ಲ ಕಡೆ ವಿಶಾಲವಾದ ಬಂಡೆಗಳು ಇಲ್ಲಿವೆ. ಕವಿ ಚಿಕ್ಕವಯಸ್ಸಿನಲ್ಲಿ ಇದಕ್ಕೆ ಅಷ್ಟೇ ಅಲ್ಲ ಕುವೆಂಪು ಕವಿಶೈಲದಲ್ಲಿ ಕಂಡ ಹಲವಾರು ದೃಶ್ಯಗಳನ್ನು ಕವನಗಳಲ್ಲಿ, ಕಾದಂಬರಿಗಳಲ್ಲೂ ತೆರೆದಿಟ್ಟಿದ್ದಾರೆ.

1936 ರಲ್ಲಿ ಕವಿಶೈಲದ ಬಂಡೆಯ ಮೇಲೆ ಕುವೆಂಪು, ಬಿ.ಎಂ.ಶ್ರೀ, ಟಿ.ಎಸ್.ವೆಂ.ರವರು ಕೆತ್ತಿದ ಅಕ್ಷರಗಳು ಇಂದಿಗೂ ಚಿರಸ್ಥಾಯಿಯಾಗಿವೆ. ಇಲ್ಲಿ ಸೂರ್ಯಾಸ್ತವನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ. ಕುವೆಂಪು ಸ್ಮಾರಕಭವನ ಕುಪ್ಪಳ್ಳಿಯ ಕವಿಮನೆಗೆ ಬರಬೇಕಾದರೆ ಮಾರ್ಗ ಮಧ್ಯದಲ್ಲಿ ಅಂದರೆ, ಮನೆ ತಲುಪುವ ಮುಂಚೆ 1 ಕಿ.ಮೀ ಅಂತರದಲ್ಲಿ ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನವಿದೆ. ಮಲೆನಾಡಿನ ಹಳ್ಳಿ ಮನೆಗಳ ಸಾಂಪ್ರದಾಯಿಕ ಶೈಲಿಯಿಂದ ನಿರ್ಮಿಸಲಾಗಿರುವ ಈ ಮನೆಯ ಹೊದಿಕೆ ಹೆಂಚಿನದು.

ಇಲ್ಲಿ ಬಾಗಿಲ ಮೇಲೆ “ಓ ನನ್ನ ಚೇತನ ಆಗು ನೀ ಅನಿಕೇತನ” ಎಂಬ ಕೆತ್ತನೆ ಇದೆ. ಈ ಭವನದಲ್ಲಿ ಕುವೆಂಪುರವರ ಪತ್ನಿ ಹೇಮಾವತಿಯವರ ಹೆಸರು ಹೊತ್ತ “ಹೇಮಾಂಗಣ” ವಿದೆ. ಇದು ಸಭೆ, ಸಮಾರಂಭ, ಗೋಷ್ಠಿಗಳು ಇತ್ಯಾದಿ ನಡೆಸಲು ಅನುಕೂಲವಾಗಿದೆ. ಇಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಕೊಠಡಿಗಳು, ಗ್ರಂಥಾಲಯ ಕಾರ್ಯನಿರ್ವಹಿಸುತ್ತಿವೆ. ಕುವೆಂಪು ಜೈವಿಕಧಾಮ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಅರಣ್ಯದ ಭಾಗವಾದ ಕವಿಮನೆ. ಸುತ್ತಲಿನ ಪರಿಸರವು ಅನೇಕ ಬಗೆಯ ಗಿಡ-ಮರಗಳು ಅಪರೂಪದ ಪ್ರಾಣಿ-ಪಕ್ಷಿಗಳು, ಗಿಡಮೂಲಿಕೆಗಳನ್ನು ಒಳಗೊಂಡಿದ್ದು, ರಾಜ್ಯ ಸರಕಾರ ಇವುಗಳ ಸಂರಕ್ಷಣೆಗಾಗಿ ಕ್ರಮ ಕೈಗೊಂಡು “ಜೈವಿಕ ಧಾಮ”ವಾಗಿ ಘೋಷಿಸಿದ್ದು ಇಲ್ಲಿ ಚಾರಣ ಶಿಬಿರಗಳನ್ನು ಕೂಡ ಸಂಘಟಿಸಲಾಗುತ್ತಿದೆ. ಜೈವಿಕಧಾಮದ ಮಧ್ಯದಲ್ಲಿ ಅರಣ್ಯ ಇಲಾಖೆ ಮೂರು ಕುಟೀರಗಳನ್ನು ನಿರ್ಮಿಸಿದ್ದು, ಚಿಟ್ಟೆ ವನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

“ಕುವೆಂಪು ಸಂದೇಶವನ” ಎಂಬ ಹೆಸರಿನೊಂದಿಗೆ ಇದು ಕಂಗೊಳಿಸುತ್ತಿದೆ. ದಾರಿಯುದ್ದಕ್ಕೂ ಕುವೆಂಪುರವರ ಪದ್ಯದ ಹಾಗೂ ಚಿಂತನೆಯ ವಾಕ್ಯಗಳನ್ನು ಫಲಕಗಳಲ್ಲಿ ಬರೆದಿದ್ದು ಓದುತ್ತಾ ಅರಣ್ಯದಲ್ಲಿ ಸುತ್ತಾಡಲು ಅನುಕೂಲವಾಗಿದೆ. ರಾಷ್ಟ್ರಕವಿ ಕುವೆಂಪು ಅವರ ನೆನಪು ಸದಾಕಾಲ ಉಳಿಯಬೇಕೆಂಬ ಉದ್ದೇಶದಿಂದ ಕರ್ನಾಟಕ ಸರಕಾರ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಚಿರಸ್ಥಾಯಿಯಾಗಿ ಉಳಿಯುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಸ್ವತಃ ಇಲ್ಲಿಗೆ ಬಂದು ನೋಡುವವರಿಗೆ ಇದರ ಅನುಭವವಾಗದೇ ಇರದು. ಬಹುಶಃ ತೀರ್ಥಹಳ್ಳಿಯಲ್ಲಿ ವಾಸ್ತವ್ಯ ಮಾಡಿ ಕುಪ್ಪಳ್ಳಿ ನೋಡಬೇಕೆನ್ನುವವರಿಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶ ಉಂಟು.

ಅಂಬುತೀರ್ಥ ತೀರ್ಥಹಳ್ಳಿಯಿಂದ ಹೊಸನಗರ ಮಾರ್ಗವಾಗಿ 10 ಕಿ.ಮೀ ಪ್ರಯಾಣಿಸಿದರೆ ಶರಾವತಿ ನದಿ ಉಗಮಸ್ಥಾನವಾದ ಅಂಬುತೀರ್ಥ ಸಿಗುತ್ತದೆ. ಶ್ರೀರಾಮನು ಬಿಟ್ಟ ಅಂಬಿನಿಂದ ಉದ್ಭವಿಸಿದ ತೀರ್ಥ ಇದೆಂದು ಅದಕ್ಕಾಗಿ “ಅಂಬುತೀರ್ಥ”ಹೆಸರು ಬಂದಿತೆಂದು ಹೇಳುವ ತಾಣ ನಿಸರ್ಗ ರಮಣೀಯವಾಗಿದೆ. ಆಗುಂಬೆ ತೀರ್ಥಹಳ್ಳಿಯಿಂದ ಕುಪ್ಪಳ್ಳಿಗೆ ಹೋಗುವ ಮಾರ್ಗದಲ್ಲೇ ಮುಂದೆ ಇರುವುದು ಆಗುಂಬೆ. ಇದು ಕುಪ್ಪಳ್ಳಿಯಿಂದ 25 ಕಿ.ಮೀ ಅಂತರದಲ್ಲಿ ತೀರ್ಥಹಳ್ಳಿಯಿಂದ 40 ಕಿ.ಮೀ ಅಂತರದಲ್ಲಿದೆ. ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಖ್ಯಾತವಾದ ಇಲ್ಲಿ ಅತ್ಯಂತ ಹೆಚ್ಚು ಮಳೆಯಾಗುತ್ತದೆ. ಸಮುದ್ರಮಟ್ಟದಿಂದ 2725 ಅಡಿ ಎತ್ತರವಿರುವ ಈ ಸ್ಥಳ ಸರ‍್ಯಾಸ್ತ ವೀಕ್ಷಣೆಗೆ ಅನುಕೂಲ. ಕವಲೇದುರ್ಗ ತೀರ್ಥಹಳ್ಳಿಯಿಂದ 15 ಕಿ.ಮೀ ದೂರದಲ್ಲಿ ದಟ್ಟ ಕಾಡಿನ ನಡುವೆ ಇರುವ ಏಳು ಸುತ್ತನ ಕೋಟೆ ಇರುವುದು ಇಲ್ಲಿನ ವಿಶೇಷ. ಸಮುದ್ರಮಟ್ಟದಿಂದ 5056 ಅಡಿ ಎತ್ತರದಲ್ಲಿ ಈ ತಾಣವಿದೆ. ನವಿಲು ಕಲ್ಲು ಇದು ಕುಪ್ಪಳ್ಳಿಯಿಂದ 14 ಕಿ.ಮೀ ದೂರದಲ್ಲಿದೆ. ಸುತ್ತ ಮುತ್ತಲು ಕಾಡಿನಲ್ಲಿ ನವಿಲುಗಳು ಈ ಶಿಲಾಶಿಖರದಲ್ಲಿ ವಿಹರಿಸುತ್ತಿರುವುದು, ಅವುಗಳ ನರ್ತನ ಸೊಬಗು ನೋಡಲು ಈ ಸ್ಥಳ ಅದ್ಭುತ. ಕುವೆಂಪುರವರಿಗೆ ನೆಚ್ಚಿನ ತಾಣ. ಸೂರ್ಯೋದಯ, ಸೂರ್ಯಾಸ್ತಗಳೆರಡನ್ನೂ ಈ ಪ್ರಕೃತಿಯಲ್ಲಿ ವೀಕ್ಷಿಸುವುದೇ ಒಂದು ಸುಂದರ ಅನುಭವ.

ಸಿಬ್ಬಲುಗುಡ್ಡ ಕುಪ್ಪಳ್ಳಿಯಿಂದ 14 ಕಿ.ಮೀ ಅಂತರದಲ್ಲಿ ತುಂಗಾ ನದಿತೀರದ ಈ ಸ್ಥಳ ಗಣೇಶನ ದೇವಾಲಯದ ಹಿಂದಿರುವ ತುಂಗಾನದಿ, ಅಲ್ಲಿಯ ಜಲರಾಶಿಯ ನಡುವೆ ಮೀನುಗಳ ವೈಭವ ಪ್ರಕೃತಿ ಸೊಬಗು ಕುವೆಂಪುರವರಿಗೆ ಸ್ಪೂರ್ತಿ ನೀಡಿದೆ. ಹಿರೇ ಕೂಡಿಗೆ ಕುವೆಂಪು ಅವರ ತಾಯಿಯ ತವರು ಮನೆ ಹಾಗೂ ಕುವೆಂಪು ಭೂಸ್ಪರ್ಶ ಪಡೆದ ಹಳ್ಳಿ. ಕುಪ್ಪಳ್ಳಿಗೆ ಕೇವಲ ಆರು ಕಿ.ಮೀ ದೂರದಲ್ಲಿದೆ.ಇಲ್ಲಿ ಸರ್ಕಾರ “ಸಂದೇಶ ಭವನ” ಎಂಬ ಸುಂದರವಾದ ಕಟ್ಟಡ ನಿರ್ಮಿಸಿದ್ದು. ಇದರಲ್ಲಿ ಅಮೃತ ಶಿಲೆಯಲ್ಲಿ ಕುವೆಂಪು ಸೂಕ್ತಿಗಳನ್ನು ಅವರ ವಿಶ್ವ ಮಾನವ ಸಂದೇಶವನ್ನು ಕೆತ್ತಲಾಗಿದೆ.

ಕುವೆಂಪು ಅವರ ಒಂದು ಪ್ರತಿಮೆಯನ್ನೂ ಇಲ್ಲಿ ನಿರ್ಮಿಸಲಾಗಿದೆ. ಕಾನೂರು ಕುಪ್ಪಳಿಗಳಂತಯೇ ಹಿರೆಕೂಡಿಗೆ ಇರುವುದು ಕೊಪ್ಪ ತಾಲೂಕಿನಲ್ಲಿಯೇ. ಅಂಚೆ ಮನೆಯ ಅರೆಕಲ್ಲು. ಕುಳಿತಿರುವೆನೇಕಾಂಗಿ ಹಾಸು ಬಂಡೆಯ ಮೇಲೆ ನೆತ್ತಿಯಡೆ ತಿಳಿಬಾನು ಸುತ್ತಲೂ ವನಧಾತ್ರಿ ಮೊರೆಯುತಿಹುದೆನ್ನ ಕರೆಯುತೆ ಅನವರತ ಯಾತ್ರಿ ಮಂಜುಲ ತರಂಗಿಣಿಯ ಜಲಶಿಲಾ ಕುಲಲೀಲೆ ಈ ರೀತಿ ಬೇಸರದ ಕಾಲವನ್ನು ಕಳೆಯಲು ಕುವೆಂಪುರವರ ಪ್ರಮುಖ ತಾಣ ಅಂಚೆ ಮನೆಯ ಅರೆಕಲ್ಲು. ಇದು ಕುಪ್ಪಳ್ಳಿಯಿಂದ ಒಂದೂವರೆ ಮೈಲು ದೂರದಲ್ಲಿ ಕಾಡು ದಾರಿಯ ನಡುವೆ ಇರುವ ಹಳ್ಳದ ಹಾಸು ಬಂಡೆಗಳನ್ನು ಹೊಂದಿದ ಸ್ಥಳ. ಈ ಹಾಸು ಬಂಡೆಗಳ ಮೇಲೆ ಹಾಯಾಗಿ ಕುಳಿತೋ ಮಲಗಿಯೋ ಒಮ್ಮೆ ನೀಲಿಬಾನಿನ ಕಡೆ ಕಣ್ಣ ತಿರುಗಿಸುತ್ತ ಇನ್ನೊಮ್ಮೆ ಹಸಿರು ಕಾನನದ ಕಡೆ ದೃಷ್ಟಿ ನೋಡುತ್ತ ತೊರೆಯ ಜುಳು ಜುಳು ನಿನಾದಕ್ಕೆ ಕಿವಿಗೊಟ್ಟು ನಿಶ್ಚಿಂತೆಯಾಗಿ ಕಾಲ ಕಳೆಯಬಹುದಾದ ತಾಣವಿದು.

ಕುಪ್ಪಳ್ಳಿ ತಲುಪುವ ಮಾರ್ಗ ರಸ್ತೆ ಮಾರ್ಗ

ಬೆಂಗಳೂರಿನಿಂದ 275 ಕಿ.ಮೀ ಶಿವಮೊಗ್ಗ, ಶಿವಮೊಗ್ಗದಿಂದ ಕುಪ್ಪಳ್ಳಿಯ ಕವಿಮನೆ 76 ಕಿ.ಮೀ ಅಂತರದಲ್ಲದೆ. ತೀರ್ಥಹಳ್ಳಿಯಿಂದ ಹೋಗುವುದಾದರೆ 16 ಕಿ.ಮೀ. ಅಂತರ, ಬೆಂಗಳೂರಿನಿಂದ ಕುಪ್ಪಳ್ಳಿಗೆ ನೇರವಾಗಿ ಬರುವವರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ್ ಬಸ್ ವ್ಯವಸ್ಥೆ ಇದೆ.

ರೈಲು ಮಾರ್ಗ: ಶಿವಮೊಗ್ಗದವರೆಗೆ ರೈಲು ಮಾರ್ಗವಿದ್ದು, ಅಲ್ಲಿಂದ ಬಸ್ ಪ್ರಯಾಣವೇ ಅನುಕೂಲ.

ವಸತಿ ವ್ಯವಸ್ಥೆ: ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲಿ ವಸತಿಗೃಹಗಳಿದ್ದು, ಕುಪ್ಪಳ್ಳಿಯಲ್ಲೂ ಕುವೆಂಪು ಪ್ರತಿಷ್ಠಾನದ “ಅನಿಕೇತನ” ಕಟ್ಟಡವಿದ್ದು, ಪ್ರತಿಷ್ಠಾನವನ್ನು ಸಂಪರ್ಕಿಸಿ ವಸತಿ ವ್ಯವಸ್ಥೆ ಪಡೆಯಬಹುದು.

ಕವಿ ಮನೆ ತೆರೆದಿರುವ ಸಮಯ: ಕವಿ ಮನೆಯು ವರ್ಷದ 365 ದಿನಗಳೂ ವೀಕ್ಷಣೆಗೆ ಲಭ್ಯ. ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ಅವಕಾಶ.

Related Articles

ಪ್ರತಿಕ್ರಿಯೆ ನೀಡಿ

Latest Articles