ಚಂಪಾ ನಿಧನಕ್ಕೆ ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರ ನುಡಿ ಶ್ರದ್ಧಾಂಜಲಿ

ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ಚಂದ್ರಶೇಖರ್ ಪಾಟೀಲ ಅವರದ್ದು ಕನ್ನಡ ಸಾರಸ್ವತದಲ್ಲಿ ಮತ್ತು ಕನ್ನಡ ಸಾಹಿತ್ಯಲೋಕದಲ್ಲಿ ತುಂಬ ದೊಡ್ಡ ಹೆಸರು. ಅವರು ಉತ್ತರ ಕರ್ನಾಟಕದ ಸಾಹಿತಿ. ಉತ್ತರ ಕರ್ನಾಟಕದ ಗಟ್ಟಿತನವನ್ನು ಮೈಗೂಡಿಸಿಕೊಂಡು ಬೆಳೆದ ಚಂಪಾ ಕನ್ನಡ ನಾಡು, ನುಡಿಗೆ ಹಗಲಿರುಳು ದುಡಿದ ಮಹಾನುಭಾವರು.

ಆಂಗ್ಲ ಪ್ರಾಧ್ಯಾಪಕರಾಗಿದ್ದರೂ ಕನ್ನಡದ ಕಟ್ಟಾಳು

ಚಂಪಾರವರು ವೃತ್ತಿಯಿಂದ ಆಂಗ್ಲ ಪ್ರಾಧ್ಯಾಪಕರಾಗಿದ್ದರೂ ಕನ್ನಡದ ಕಟ್ಟಾಳು. ಅವರು ಆಂಗ್ಲ ಪ್ರಾಧ್ಯಾಪಕರಾದುದು ಆಕಸ್ಮಿಕ! ಅವರು ಕನ್ನಡದ ಕಟ್ಟಾಳುವಾಗಿ ಹೋರಾಟ ಮಾಡಿದುದು ಐಚ್ಛಿಕ!!

ನಾವು ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿಓದುತ್ತಲಿದ್ದಾಗ (ಸ್ನಾತಕೋತ್ತರ) ಚಂದ್ರಶೇಖರ್ ಪಾಟೀಲರು ಆಂಗ್ಲಭಾಷೆಯ ಪ್ರಾಧ್ಯಾಪಕರಾಗಿ ಪಾಠ ಮಾಡುತ್ತಿದ್ದರು. ಅವರು ಆಂಗ್ಲವಿಭಾಗದ ಮುಖ್ಯಸ್ಥರೂ ಕೂಡ ಆಗಿದ್ದರು.

ಡಾ. ಚಂದ್ರಶೇಖರ್ ಪಾಟೀಲರು ತುಂಬ ಪ್ರಖರ. ಅವರು ತುಂಬ “ಇಂಟಲಿಜೆಂಟ್”!! ವಿಶ್ವವಿದ್ಯಾಲಯದಲ್ಲಿ ಮತ್ತು ವಿದ್ವತ್ವಲಯದಲ್ಲಿ ಡಾ.ಚಂದ್ರಶೇಖರ್ ಪಾಟೀಲರೆಂದು ಚಿರಪರಿಚಿತರಾಗಿದ್ದ ಅವರು ಸಾಹಿತ್ಯವಲಯದಲ್ಲಿ “ಚಂಪಾ” ಎಂದೇ ಖ್ಯಾತನಾಮರು.

ಚಂಪಾರವರ ಭಾಷೆ ಮತ್ತು ಭಾವ ಎರಡೂ ಪ್ರಖರ ಮತ್ತು ನಿಖರ. ಚಂಪಾರವರು, ಸತ್ಯ, ಸತ್ವ ಮತ್ತು ಸಿದ್ಧಾಂತ – ಈ ಮೂರರ ತ್ರಿವೇಣಿ ಸಂಗಮ. ಉತ್ತರ ಕರ್ನಾಟಕದ ಭಾಷೆಯಲ್ಲಿ ಹೇಳಬೇಕೆಂದರೆ, ಚಂಪಾರವರು ತುಂಬ “ಖಡಕ್”!! ಅವರು ಖಡಕ್ ಸಾಹಿತಿ. ಚಂಪಾರವರ ಮಾತೆಂದರೆ, ಅದು “ಏಕ್ ಮಾರ್ ದೋ ತುಕಡಾ”!!

ಚಂಪಾರವರು ಸಾಹಿತ್ಯವಲಯದಲ್ಲಿ “ಅಂಜದ ಗಂಡು” ಎಂದೇ ಪ್ರಸಿದ್ಧರಾಗಿದ್ದರು. ಚಂಪಾರವರ ಮಾತು, ಬರಹ, ಭಾಷಣ – ಈ ಮೂರರಲ್ಲೂ ಹಾಸ್ಯವೂ ಇರುತ್ತಿತ್ತು, ಅಪಹಾಸ್ಯವೂ ಇರುತ್ತಿತ್ತು. ಎಂಥವರನ್ನಾದರೂ ಸರಿ, ಹಾಸ್ಯಮಾಡಲು, ಅಪಹಾಸ್ಯಮಾಡಲು ಅವರು ಹೆದರುತ್ತಿರಲಿಲ್ಲ. ಅಂಥೊಂದು ಧೈರ್ಯ, ದಿಟ್ಟತನ, ಧೀಮಂತಿಕೆ ಅವರಲ್ಲಿತ್ತು.

ಸಭೆ, ಸಮಾರಂಭ ಮತ್ತು ವೇದಿಕೆಯಲ್ಲಿ ಅವರಿದ್ದಾರೆ ಎಂದರೆ ಸ್ವಲ್ಪ ಹುಷಾರಾಗಿ ಮತ್ತು ಹುಷಾರಿಟ್ಟುಕೊಂಡು ಮಾತನಾಡಬೇಕಿತ್ತು. ಚಂಪಾರವರ ಮಾತಿನಲ್ಲಿ ಮೊನಚಿದ್ದರೂ ಅವರ ಮನಸ್ಸಿನಲ್ಲಿ ಕುಟಿಲ, ಕುಹಕಗಳಿರುತ್ತಿರಲಿಲ್ಲ. ಚಂಪಾರವರ ಮಾತೇನೋ ಜೋರು; ಆದರೆ ಮನಸ್ಸು ಮಾತ್ರ ಧಾರವಾಡ ಪೇಢಾ! ಚಂಪಾ, ಬಹುಮುಖ ಪ್ರತಿಭೆಯ ಪ್ರತಿಭಾಸಂಗಮ. ಅವರು ಕವಿ, ಲೇಖಕ, ನಾಟಕಕಾರ, ವಿಮರ್ಶಕ, ಅಂಕಣಕಾರ, ಸಂಪಾದಕ, ಸಂಯೋಜಕ, ಹೋರಾಟಗಾರ, ಬುದ್ಧಿಜೀವಿ……ಏನೆಲ್ಲ!!

ಚಂಪಾ, ಹುಟ್ಟುಹೋರಾಟಗಾರರು. ಅವರು ಉಸಿರಾಟದಷ್ಟೇ ಆದ್ಯತೆಯನ್ನು ಹೋರಾಟಕ್ಕೆ ಕೊಟ್ಟುಕೊಂಡಿದ್ದರು. ಹೋರಾಟ, ಅವರ ಉಸಿರಾಟದಲ್ಲಿ ಓತಪ್ರೋತಗೊಂಡಿತ್ತು!! ಕನ್ನಡ ನಾಡು, ನುಡಿಯ ಅಗ್ರಹೋರಾಟವೆಂದೇ ಕನ್ನಡನಾಡಿನ ಇತಿಹಾಸದಲ್ಲಿ ದಾಖಲಿಸಲ್ಪಟ್ಟ ಗೋಕಾಕ್ ಚಳುವಳಿಯಲ್ಲಿ ಚಂಪಾರವರು ಮುಂಚೂಣಿಯಲ್ಲಿ ನಿಂತುಕೊಂಡು ಕನ್ನಡದ ಕೆಲಸ ಮಾಡಿದರು ಮತ್ತು ಕನ್ನಡಕ್ಕಾಗಿ ಕೆಲಸಮಾಡಿದರು.

1977ರ ತುರ್ತುಪರಿಸ್ಥಿತಿಯಲ್ಲಿ ಅವರು ಜೆ. ಪಿ. ಚಳುವಳಿಗೆ ಬೆನ್ನೆಲುಬಾಗಿ ನಿಂತುಕೊಂಡರು. ಅವರು ಮಂಡಲ್ ವರದಿಗಾಗಿ ಹೋರಾಟ ಮಾಡಿದರು. ಅವರು ಕನ್ನಡನಾಡಿನಲ್ಲಿ ರೈತ ಚಳುವಳಿಗೆ ಬಲ ತುಂಬಿದರು. ಆಡಳಿತ ಸರಕಾರ ಕಣ್ಣು, ಕಿವಿಗಳನ್ನು ಮುಚ್ಚಿಕೊಂಡಿದ್ದರೂ ಅದನ್ನು ಓಲೈಸಿಕೊಂಡಿರುವ “ಭಟ್ಟಂಗಿ ಪ್ರಕೃತಿ” ಅವರದಲ್ಲ. ಚಂಪಾರವರು “ಕನ್ನಡಪರ” ಎಲ್ಲ ಹೋರಾಟಗಳಲ್ಲೂ ಆದಿಯಾಗಿ, ಅ ಧ್ವರ್ಯುವಾಗಿ ಮತ್ತು ಕೊಂಬು, ಕಹಳೆಯಾಗಿ ನಿಂತುಕೊಳ್ಳುತ್ತಿದ್ದರು. ತಪ್ಪು ಹೆಜ್ಜೆ ಇಡುವ ಆಡಳಿತ ಸರಕಾರವನ್ನು ಅವರು ಮುಲಾಜಿಲ್ಲದೆ ಕಟುವಾಗಿ ಟೀಕಿಸುತ್ತಿದ್ದರು. ನಿಜಕ್ಕೂ ಹೇಳಬೇಕೆಂದರೆ, ಚಂಪಾರವರು ಸ್ವತಂತ್ರ ಬುದ್ಧಿಜೀವಿಗಳು. ಅವರು ಇನ್ನೊಬ್ಬರ ಕೃಪಾಛತ್ರದಲ್ಲಿ ಮತ್ತು ಛತ್ರಛಾಯೆಯಲ್ಲಿರುವ ಬುದ್ಧಿಜೀವಿಗಳಲ್ಲ.

ಚಂಪಾರವರು ಬಂಡಾಯದ ಧ್ವನಿಯೂ ಅಹುದು; ಅವರು ಬಂಡಾಯದ ಧನಿಯೂ ಅಹುದು. ಚಂಪಾರವರು ಹುಟ್ಟುಬಂಡಾಯಸಾಹಿತಿ. ಅಷ್ಟು ಮಾತ್ರವಲ್ಲ, ಅವರು ಬಂಡಾಯ ಸಾಹಿತ್ಯದ ಮೂಲ ಕೂಡ ಅಹುದು ಮತ್ತು ಅವರು ಬಂಡಾಯಸಾಹಿತ್ಯದ ಶ್ರೋತ ಕೂಡ ಅಹುದು. ಚಂಪಾರವರನ್ನು ಬಂಡಾಯಸಾಹಿತ್ಯಕ್ಕೆ ಬಲತುಂಬಿದ “ಬಾಹುಬಲಿ” ಎಂದು ಕರೆದರೆ ಅದು ಅಕ್ಷರಶಃ ಸೂಕ್ತ ಮತ್ತು ಸಮಂಜಸವೆನಿಸುತ್ತದೆ.

1939, ಜೂನ್ 18ರಂದು ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದ ಅವರು “ಗತಿಪರ” ಮತ್ತು “ಪ್ರಗತಿಪರ” ಸಾಹಿತ್ಯದಲ್ಲಿಮೊದಲಿಗರು. ಚಂಪಾರವರ ಸಾಹಿತ್ಯಕೃಷಿಯದು ಬಹುಮುಖಿ. ಅವರು ಕವನ, ನಾಟಕಗಳನ್ನಷ್ಟೇ ಬರೆದು ಹೆಸರುಮಾಡಿದವರಲ್ಲ; ಅವರು ಸಾಹಿತ್ಯದ ವಿವಿಧ ಆಯಾಮ, ಪ್ರಾಣಾಯಾಮಗಳಲ್ಲಿ ತಮ್ಮ ಲೆಕ್ಕಣಿಕೆಯನ್ನು ದುಡಿಸಿದ್ದಾರೆ.

ತುಂಬ ಹೆಸರು ಮಾಡಿದ ಅವರ ಕೆಲವು ಕೃತಿಗಳನ್ನು ಗಮನಿಸಬಹುದು, ಅಪ್ಪ ಗುರ್ತಿನವರು ಟಿಂಗರ್ ಬುಡ್ಡಣ್ಣ ಗೋಕರ್ಣ ಗೌಡಶಾನಿ ನಳಕವಿಯ ಮಸ್ತಕಾಭೀಷೇಕ ಬಾನುಲಿ ಮಧ್ಯಬಿಂದು ಗುಂಡಮ್ಮನ ಗಝಲ್‌ಗಳು ಗಾಂಧೀ ಸ್ಮರಣೆ ಹೂವು ಹೆಣ್ಣು, ತಾರೆ ಶಾಲ್ಮಲಾ ನನ್ನ ಶಾಲ್ಮಲಾ ಮತ್ತು ಅರ್ಧಸತ್ಯದ ಹುಡುಗಿ……, ಇತ್ಯಾದಿ. ಚಂಪಾರವರು ಬರೆದ “ಅರ್ಧಸತ್ಯದ ಹುಡುಗಿ” ಎಂಬ ಈ ಕವನ ಸಂಕಲನವು (1989) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಯಿತು. ಕರ್ನಾಟಕ ಸರಕಾರವು ಕನ್ನಡ ಸಾಹಿತ್ಯದ “ಸರ್ವೋಚ್ಛ ಪ್ರಶಸ್ತಿ” ಎಂದೇ ಹೇಳುವ “ಪಂಪ” ಪ್ರಶಸ್ತಿಯನ್ನಿತ್ತು 2009ರಲ್ಲಿ ಚಂಪಾರವರನ್ನು ಗೌರವಿಸಿತು. ಕಾರಣಾಂತರಗಳಿಂದ, ಅವರು ಆ ಪ್ರಶಸ್ತಿಯನ್ನು ಮರಳಿಸಿದುದು ಎಲ್ಲರಿಗೂ ಗೊತ್ತಿದೆ. ಚಂಪಾರವರು ಸ್ವತಃ ಒಂದು ಅಧ್ಯಯನ ಕೇಂದ್ರವಾಗಿದ್ದರು ಮತ್ತು ಅವರು ಸ್ವತಃ ಒಂದು ಸಂಶೋಧನಾ ಸಂಸ್ಥೆಯಂತಿದ್ದರು.

ಬರೆಯುವುದು ಚಂಪಾರವರು ಹುಟ್ಟುಗುಣ

ಬರೆಯದೇ ಇರುವುದಕ್ಕೆ ಅವರಿಂದ ಆಗುತ್ತಲೇ ಇರಲಿಲ್ಲ. 1964ರಲ್ಲಿಯೇ ಅವರು ತಮ್ಮ ಇಬ್ಬರು ಸ್ನೇಹಿತರಾದ ಶ್ರೀ ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ಗಿರಡ್ಡಿ ಗೋವಿಂದರಾಜುರವರೊಂದಿಗೆ ಸೇರಿ “ಸಂಕ್ರಮಣ” ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. “ಸಂಕ್ರಮಣ” ಪತ್ರಿಕೆಯ ಸಂಪಾದಕರಾಗಿ ಅವರು ತಮ್ಮ ತೀಕ್ಷ್ಣ ವಿಚಾರಧಾರೆಯನ್ನು ನೇರವಾಗಿ ಜನಮನಕ್ಕೆ ತಲುಪಿಸುತ್ತಾರೆ. “ಸಂಕ್ರಮಣ” ಪತ್ರಿಕೆಯ ಮೂಲಕ ಅವರು ತಮ್ಮದೇ ಆದ ಒಂದು ಬಹುದೊಡ್ಡ ಓದುಗರ ವಲಯವನ್ನು ಕಟ್ಟಿಕೊಳ್ಳುತ್ತಾರೆ. ಜನರು ಮತ್ತು ಸಾಹಿತ್ಯಕ್ಷೇತ್ರದ ದಿಗ್ಗಜರು ಚಂಪಾರವರ ಸಂಕ್ರಮಣದ ಆಗಮನಕ್ಕಾಗಿ ಕಾದುಕೊಂಡಿರುತ್ತಿದ್ದರು ಎಂಬುವುದು ಹಾಲಿನ ಬಿಳಿಬಣ್ಣದಷ್ಟೇ ಸತ್ಯ!! ಚಂಪಾರವರು ಆಂಗ್ಲಭಾಷೆಯಲ್ಲೂ ಸಹ ಕವಿತೆಗಳನ್ನು ಬರೆಯುತ್ತಿದ್ದರು. ಅವರು ಬರೆದ ಆಂಗ್ಲ ಕವಿತೆಗಳ ಸಂಕಲನವು 1983ರಲ್ಲಿ ಅವರದೇ ಆದ ಕನ್ನಡ ಅನುವಾದದೊಂದಿಗೆ ಪ್ರಕಟವಾಗಿ ಜನಮನವನ್ನು ಸೂರೆಗೊಂಡಿತು.

ಚಂಪಾರವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಜನಮೆಚ್ಚುವಂತೆ ಕೆಲಸಮಾಡಿದರು. ಅವರು ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ನಾಡು, ನುಡಿಗಳ ಏಳಿಗೆಗಾಗಿ ಶ್ರಮಿಸಿದರು. ಇದರ ಜೊತೆ ಜೊತೆಯಲ್ಲಿ, ಅವರು ಇನ್ನೂ ಹತ್ತು, ಹಲವು ಹುದ್ದೆಗಳಲ್ಲಿದ್ದು ಸರಕಾರದ ತಪ್ಪು-ಒಪ್ಪುಗಳನ್ನು ಸರಕಾರದ ಗಮನಕ್ಕೆ ತರುವ ಕೆಲಸಮಾಡಿದರು. ಚಂಪಾರವರು ನಮ್ಮನ್ನು ಬಹುವಾಗಿ ಅಭಿಮಾನಿಸುತ್ತಿದ್ದರು. ಅವರು ಮೂರ‍್ನಾಲ್ಕು ಬಾರಿ ನಮ್ಮ ಮಠಕ್ಕೆ ಆಗಮಿಸಿ ಕನ್ನಡ ಸಾರಸ್ವತದ ಕುರಿತು ಚರ್ಚಿಸಿದ್ದರು. ಧಾರ್ಮಿಕರೊಂದಿಗೆ ಮತ್ತು ಧರ್ಮಗುರುಗಳೊಂದಿಗೆ “ಎಷ್ಟೋ ಅಷ್ಟು ಮಾತ್ರ” ಎಂಬ ಲೆಕ್ಕದಲ್ಲಿದ್ದ ಅವರು ನಮ್ಮ ವಿಷಯದಲ್ಲಿ ಒಂದಷ್ಟು ಹೆಚ್ಚು ಆಸ್ಥೆ ಮತ್ತು ಆಸಕ್ತಿಯನ್ನು ಹೊಂದಿದುದು ನಮಗೆ ಆಶ್ಚರ್ಯವನ್ನುಂಟು ಮಾಡಿತ್ತು!! ಲೋಕ ಶಿಕ್ಷಣ ಟ್ರಸ್ಟ್, ಬೆಂಗಳೂರು-ಹುಬ್ಬಳ್ಳಿ ಸಂಸ್ಥೆ ಪ್ರಕಟಿಸಿದ ಹಾಗೂ ನಾವು “ಸಂಯುಕ್ತ ಕರ್ನಾಟಕ” ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಬರೆಯುತ್ತಿದ್ದ ಅಂಕಣಲೇಖನಗಳ ಸಂಕಲನ, “ಸಂಚಲನ” ಗ್ರಂಥಕ್ಕೆ (421+18 ಪುಟಗಳು) ಚಂಪಾರವರು ಸದಾಶಯದ ನುಡಿಗಳನ್ನು ಬರೆದುಕೊಟ್ಟು ನಮ್ಮ ಬರಹ ಮತ್ತು ಭಾಷೆಯನ್ನು ಉತ್ಸಾಹಿಸಿದ್ದರು ಮತ್ತು ಪ್ರೋತ್ಸಾಹಿಸಿದ್ದರು.

ಯಾರನ್ನೂ ಓಲೈಸುವ ಜಾಯಮಾನವನ್ನು ಹೊಂದಿಲ್ಲದ ಚಂಪಾರವರ ನೇರ ಹಾಗೂ ನಿಖರ ಪ್ರಶಂಸೆಯ ಮಾತುಗಳು ನಮ್ಮ ಬರಹೋತ್ಸಾಹವನ್ನು ಇನ್ನಷ್ಟು, ಮತ್ತಷ್ಟು ಇಮ್ಮಡಿ, ಮುಮ್ಮಡಿಗೊಳಿಸಿದುದನ್ನು ಈ ಸಂದರ್ಭದಲ್ಲಿ ನಾವು ಜ್ಞಾಪಿಸಿಕೊಳ್ಳದೆ ಇರಲಾರೆವು. ಚಂಪಾರವರು, ತಮ್ಮ 83 ವರುಷಗಳ ಸುದೀರ್ಘ ಜೀವನಕ್ಕೆ ತೆರೆ ಎಳೆದುಕೊಂಡು ತಮ್ಮ ಐಹಿಕ ಯಾತ್ರೆಗೆ ವಿದಾಯ ಹೇಳಿದ್ದಾರೆ. ಅವರ ಚಿರಂತನ ಅಗಲಿಕೆ ಕನ್ನಡಕ್ಕೆ, ಕನ್ನಡಿಗರಿಗೆ ಮತ್ತು ಕನ್ನಡ ಸಾರಸ್ವತಲೋಕಕ್ಕೆ ಭರಿಸಲಾಗದ ನಷ್ಟವನ್ನುಂಟುಮಾಡಿದೆ.

ಚಂಪಾರವರು ಬಿಟ್ಟುಹೋದ ಸ್ಥಳವನ್ನು ಇನ್ನೊಬ್ಬರು, ಮತ್ತೊಬ್ಬರು ಭರ್ತಿ ಮಾಡಲಾರರು!! ಇದು ಬರೀ ನಾವು ಹೇಳುವ ಮಾತಲ್ಲ; ಇದು ಸಮಸ್ತ ಕನ್ನಡಿಗರ ಮನದಾಳದ ಮಾತು. ದಯಾಮಯನಾದ ಆ ದೇವರು, ಚಂಪಾರವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಧರ್ಮಪತ್ನಿ, ಮಕ್ಕಳು ಮತ್ತು ಕುಟುಂಬವರ್ಗಕ್ಕೆ ಮತ್ತು ಅವರ ಅಸಂಖ್ಯಾತ ಸಾಹಿತ್ಯಾಭಿಮಾನಿಗಳಿಗೆ, ಸಾಹಿತ್ಯ ಓದುಗರಿಗೆ ನೀಡಲಿ – ಎಂದು ನಾವು ಭಗವಂತನ ಚರಣ ಸನ್ನಿಧಾನದಲ್ಲಿ ಪ್ರಾರ್ಥಿಸುತ್ತೇವೆ.

Related Articles

ಪ್ರತಿಕ್ರಿಯೆ ನೀಡಿ

Latest Articles