ಬೆಳಕಾಗಿ ಬಾ ಬುದ್ಧ

*ಸೌಮ್ಯ.ಎಸ್

ಲೋಕವಾರ್ತೆಯನು ಅರುಹ ಬಂದಿರುವೆ
ಕೇಳು ಜ್ಞಾನ ದಿಗ್ಗಜ
ನಿನ್ನ ಮಹಿಮೆಯ ಅರಿಯಲರಿಯದೆ 
ಸೋತು ಸೊರಗಿದೆ ಮೂಜಗ!

ಪಾಪ ಅರಿವಿಲ್ಲ ಜನರಿಗೆ
ತಮ್ಮ ಮುಂದಿರುವ ಪ್ರಪಾತ!
ಬೀಳಲು ನೋಡುತಿಹರು ನಾ ಮುಂದೆ 
ತಾ ಮುಂದೆ ಎಂದೆನ್ನುತಾ

ಧರ್ಮಚಕ್ರ ಪ್ರವರ್ತನ ಮಾಡಿದರೂ ನೀನು 
ನಿಲ್ಲಲಿಲ್ಲ ಕಾಂಚನದ ಹಿಂದೋಡುವ ಅವರ ನರ್ತನ
ನೀ ಪುಣ್ಯವಂತ ಎದ್ದು ನಡೆದು ಬಿಟ್ಟೆ
ಲೋಕದ ಜಂಜಡ ಬೇಡವೆನುತಾ!

ವೃದ್ಧರ ಕಂಡು ನೀ ಜಿಗುಪ್ಸೆಗೊಂಡೆ
ಆದರೆ ಇವರಿಗಿಲ್ಲ ಒಂದಿನಿತಾದರೂ ಕಾಳಜಿ
ರೋಗಿಯ ಕಂಡರೆ ವೈದ್ಯರಿಗೇ ಇಲ್ಲ ಆಸ್ಥೆ
ಇನ್ನು ಸಾಮಾನ್ಯರ ನೋಟವಂತೂ ನಿಕೃಷ್ಟ 

ಮುಖದ ಹೊಳಪು ಮಾಸಿದರೂ
ಕಾಣೆಯಾಗಿಲ್ಲ ಒಂದಿನಿತು ಭಾವವು
ಕಣ್ತೆರೆದು ನೋಡೊಮ್ಮೆ ಕಾಣಬೇಕಾಗಿದೆ
ನಿನ್ನೊಲವ ನೋಟವನು

ಆಸೆ, ಸ್ವಾರ್ಥ, ಮೋಹಗಳೆಂಬ ಕತ್ತಲೆಯ ದಾರಿಗೆ 
ನಿನ್ನ ಕಂಗಳ ಕಾಂತಿಯಿಂದ ಬೆಳಕನೀಯೆ ಬಾ..
ದುಃಖದ ಮೂಲ ಕಿತ್ತೊಗೆಯಲು
ಮತ್ತೊಮ್ಮೆ ಎದ್ದು ಬಾ

ಕಣ್ತೆರೆದು ಪೊರೆಯಬಾರದೇ.. ?!
ನಿನ್ನ ಕಣ್ಣ ಬೆಳಕಿಂದ ನಮಗೆ ದಾರಿಯ ತೋರಬಾರದೇ..?!
ನೂರ್ಕೋಟಿ ಮಾನಿಸರ ಮನ್ನಿಸಲು
ಮಗದೊಮ್ಮೆ ಅವತರಿಸಬಾರದೇ?

ಕೊಡು ನಿನ್ನ ಶಾಂತಿಯ ಒಂದಂಶವನು
ಇಡೀ ಜಗತ್ತಿಗೆ ಬೇಕಾದ ತುರ್ತದು!
ಪಾಪದ ಕೊಡ ತುಂಬಿದೆ ಬಾ ಬುದ್ಧ
ನೀ ಬರಲು ಸಮಯವಾಗಿದೆ ಸಿದ್ಧ!

*ಸೌಮ್ಯ.ಎಸ್, ಸಹ ಶಿಕ್ಷಕಿ ಸರ್ಕಾರಿ ಪ್ರೌಢಶಾಲೆ,

ದಿದ್ದಿಗೆ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ.

Related Articles

ಪ್ರತಿಕ್ರಿಯೆ ನೀಡಿ

Latest Articles