ಮಹಾಮಹಿಮ ಶ್ರೀ ಜಗನ್ನಾಥದಾಸರು

*ಹೇಮ ಶ್ರೀಧರಾಚಾರ್ ಪ್ರಕಾಶನಗರ

ಜಲಜೇಷ್ಠ ನಿಭಾಕಾರಂ ಜಗದೀಶ ಪದಾಶ್ರಯಂ ಜಗತಿ ತಲ ವಿಖ್ಯಾತಂ ಜಗನ್ನಾಥ ಗುರುಂ ಭಜೇ. ಇದೇ ಭಾದ್ರಪದ ಶುದ್ಧ ನವಮಿ ಭಾನುವಾರ ಪರಮಪೂಜ್ಯ ಜಗನ್ನಾಥದಾಸರ ಆರಾಧನೆ ಪ್ರಯುಕ್ತ ಆ ಮಹನೀಯರ ಬಗ್ಗೆ ನನ್ನದೊಂದು ಪುಟ್ಟ ಲೇಖನ.

ಶ್ರೀಮಧ್ವಾಚಾರ್ಯರು ವೇದೋಪನಿಷತ್ತುಗಳು ಭಗವದ್ಗೀತೆ ಬ್ರಹ್ಮಸೂತ್ರಗಳು ಮೊದಲಾದ ಸಕಲ ಮೂಲ ಗ್ರಂಥಗಳ ಭಾವವನ್ನು ಹಾಗೂ ಅವರು ಪ್ರತಿಪಾದಿಸಿದ ಗ್ರಂಥರಾಶಿಗಳು ಸರ್ವಮೂಲ ಎಂಬುದಾಗಿ ಮಾನ್ಯವಾಗಿದೆ. ಅದರ ಭಾವವನ್ನು ಶ್ರೀ ಜಯತೀರ್ಥರು ಮೊದಲಾದವರು ತಮ್ಮ ಟೀಕಾ ಗ್ರಂಥಗಳಲ್ಲಿ ಅನುಪಮ ಟೀಕೆಗಳನ್ನು ರಚಿಸಿದ್ದಾರೆ. ತದನಂತರ ಶ್ರೀ ವ್ಯಾಸರಾಜ ತೀರ್ಥರು ಶ್ರೀ ವಾದಿರಾಜ ತೀರ್ಥರು ಶ್ರಿ ರಘುತ್ತಮ ತಿರ್ಥರು ಶ್ರೀರಾಘವೇಂದ್ರತೀರ್ಥರು ಮೊದಲಾದವರಿಂದ ಸಾಹಿತ್ಯ ಅಪಾರವಾಗಿ ಬೆಳೆಯಿತು. ಸ್ವಮತ ಸ್ಥಾಪನೆ ಮತ್ತು ಪರಮತ ವಿಮರ್ಶೆಗಳ ಪರಿಜ್ಞಾನಕ್ಕೆ  ಈ  ವ್ಯಾಸಸಾಹಿತ್ಯದ ಅಧ್ಯಯನ ‌ ಅನಿವಾರ್ಯವಾಗಿದೆ. ಆದರೆ ಭಾಷೆ ಮತ್ತು ಅಲ್ಪಮತಿಯಿಂದ ಎಲ್ಲರಿಗೂ ದಾಸಸಾಹಿತ್ಯ ಸುಲಭವಾಗಿ ಅರ್ಥವಾಗುವುದಿಲ್ಲ. ಆದಕಾರಣ ಶ್ರೀ ಸಾಮಾನ್ಯರಾದ ಜಿಜ್ಞಾಸುಗಳಿಗೆ ಅರ್ಥವಾಗುವಂತೆ ಬೆಳಕಿಗೆ ಬಂದಿದ್ದೇ ದಾಸ ಸಾಹಿತ್ಯ. ಈ ದಾಸ ಸಾಹಿತ್ಯವೆಲ್ಲ ವ್ಯಾಸ ಸಾಹಿತ್ಯದ ಕನ್ನಡೀಕರಣ ವೇ ಆಗಿದೆ. ನಿತ್ಯ ಜೀವನದಲ್ಲಿ ಇದನ್ನು ಅಳವಡಿಸಿಕೊಂಡು ನಾವುಗಳು ಮುಕ್ತಿ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಇದರ ಮಹತ್ವವನ್ನು ಗುರುತಿಸಿ ಕನ್ನಡ ಭಾಷೆಯಲ್ಲಿ ಮಧ್ವ ಸಿದ್ಧಾಂತದ ಪ್ರಚಾರಕ್ಕೆ ಚಾಲನೆ ಇತ್ತವರು ಆನಂದತೀರ್ಥರ ಸಾಕ್ಷಾತ್ ಶಿಷ್ಯರಾದ ಶ್ರೀ ನರಹರಿ ತೀರ್ಥರು. ಅವರು ಆರಂಭಿಸಿದ ದಾಸಸಾಹಿತ್ಯ ಶ್ರೀಪಾದರಾಜರ ಕಾಲದಲ್ಲಿ ವ್ಯಾಪಕವಾಗಿ ಬೆಳೆಯಿತು. ಅವರ ಶಿಷ್ಯರಾದ ವ್ಯಾಸರಾಯರಂತೂ ಕನ್ನಡ ಕೃತಿಗಳ ಜೊತೆಗೆ ಹರಿದಾಸ ಪಂಥವನ್ನು ನಿರ್ಮಿಸಿ ಪುರಂದರದಾಸರನ್ನು ಅದರ ಅಧ್ಯಕ್ಷರನ್ನಾಗಿಸಿದರು. ಪುರಂದರದಾಸರಿಂದ ಮುಂದುವರೆದ ದಾಸಸಾಹಿತ್ಯದ ಬೆಳಕಿನಲ್ಲಿ ದಾಸ ಚತುಷ್ಟಯರೆಂದರೆ ಬೆಳಕಿಗೆ ಬಂದವರು ಪುರಂದರದಾಸರು ವಿಜಯದಾಸರು ಗೋಪಾಲದಾಸರು ಜಗನ್ನಾಥದಾಸರು. ಶ್ರೀವಿಜಯದಾಸರು ಮತ್ತು ಗೋಪಾಲದಾಸರ ಕರುಣೆಯ ಕೂಸೇ ಶ್ರೀ ಜಗನ್ನಾಥದಾಸರು.

ಶ್ರೀ ಜಗನ್ನಾಥದಾಸರು ಪ್ರಸಿದ್ಧ ಹರಿದಾಸರಲ್ಲಿ ಕೊನೆಯವರು. ಕರ್ನಾಟಕದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬ್ಯಾಗವಾಟ ಎಂಬ ಗ್ರಾಮ ಇವರ ಜನ್ಮಸ್ಥಳ. ತಂದೆ ನರಸಿಂಹದಾಸರು ಎಂದು ಪ್ರಸಿದ್ಧರಾದ ನರಸಪ್ಪ. ತಾಯಿ ಲಕ್ಷಮ್ಮ ಗೋತ್ರ ಹರಿತಸ . ಯಜುರ್ವೇದ ಶಾಖೆಯ ಮನೆತನ. ಬಹುಕಾಲ ತಿರುಪತಿಯ ಶ್ರೀನಿವಾಸನನ್ನು ಸೇವಿಸಿದ ಫಲವಾಗಿ ಜನಿಸಿದ ಇವರಿಗೆ ತಂದೆ-ತಾಯಿಗಳು ಇಟ್ಟ ಹೆಸರು ಶ್ರೀನಿವಾಸ. ಶ್ರೀನಿವಾಸ ಆಶುಕವಿಯೂ  ಆಗಿದ್ದ. ಯೌವನದಲ್ಲಿ ವಿವಿಧ ಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸಿ ಶ್ರೀನಿವಾಸಾಚಾರ್ಯರಾದರು. ಶ್ರೀ ರಾಘವೇಂದ್ರ ಮಠದ ಪರಂಪರೆಗೆ ಸೇರಿದ ವರದೇಂದ್ರ ತೀರ್ಥರು ಇವರ ವಿದ್ಯಾಗುರುಗಳು. ಆಗ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಬೋಧ ತೀರ್ಥರಿಗೂ ತುಂಬಾ ಪ್ರಿಯರಾಗಿದ್ದರು. ತುಂಬು ತಾರುಣ್ಯದಲ್ಲಿ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ. ಕನ್ನಡ ಸಾಹಿತ್ಯವೆಂದರೆ ಇವರಿಗೆ ಅಷ್ಟು ಸೇರುತ್ತಿರಲಿಲ್ಲ. ಆ ಪಾಂಡಿತ್ಯದ ಬೆಳಕಿನಲ್ಲಿ ಇದ್ದ ಇವರಿಗೆ ಪ್ರಾರಬ್ಧವಶಾತ್ ಶ್ರೀ ವಿಜಯದಾಸರಿಗೆ ಮಾಡಿದ ಅಪಚಾರದ ಫಲವಾಗಿ ಭಯಂಕರ ಉದರಶೂಲೆ ಉಂಟಾಯಿತು. ಸ್ವೋತ್ತಮರಿಗೆ ಅಪಚಾರ ಮಾಡಿದ ಫಲವಾಗಿ ಭಯಂಕರವಾಗಿ ವ್ಯಾಧಿ ಉಲ್ಬಣಿಸಿತು. ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ನಿರಂತರ ಸೇವೆ ಮಾಡಿದ ಇವರಿಗೆ ರಾಯರು ಸ್ವಪ್ನದಲ್ಲಿ ಬಂದು ನಿನ್ನಿಂದ ಸ್ವೊತ್ತಮರ ದ್ರೋಹ ಆಗಿದೆ. ಅದರ ಫಲವಾಗಿ ನಿನಗೆ ಈ ರೋಗ ಬಂದಿದೆ. ನೀನು ಅವರನ್ನೇ ಶರಣು ಹೋಗಬೇಕು. ಅದು ಬಿಟ್ಟು ಬೇರೆ ಯಾವ ಮಾರ್ಗವೂ ಇಲ್ಲ ಎಂದು ಸೂಚಿಸಿದಾಗ ವಿಜಯರಾಯರ ಕ್ಷಮಾಯಾಚನೆ ಮಾಡಿದರು. ಅಲ್ಪಾಯುಷ್ಯ ದಾದ ಇವರಿಗೆ ವಿಜಯರಾಯರು ಅವರ ಶಿಷ್ಯರಾದ ಶ್ರೀ ಗೋಪಾಲದಾಸರಿಂದ 40ವರ್ಷ ಆಯುರ್ ದಾನ ಮಾಡಿಸಿದರು. ಅವರು ನೀಡಿದ ಅರ್ಧಾಯುಷ್ಯ ದಿಂದ ಪೂರ್ಣ ಆಯುಸ್ಸು ಪ್ರಾಪ್ತಿಯಾಯಿತು. ಮುಂದೆ ತಾವು ಹರಿದಾಸರಾಗುವ ಬಯಕೆ ಹೊಂದಿ ಗುರುಗಳ ಆದೇಶದಂತೆ ಪಂಡರಾಪುರಕ್ಕೆ ಪ್ರಯಾಣ ಮಾಡಿ ಅಲ್ಲಿ ಚಂದ್ರಭಾಗ ನದಿಯಲ್ಲಿ ಮೀಯುವಾಗ ಜಗನ್ನಾಥ ವಿಠ್ಠಲ ಎಂಬ ಅಂಕಿತ ಪ್ರಾಪ್ತಿಯಾಯಿತು. ಅಂದಿನಿಂದ ಜಗನ್ನಾಥದಾಸರು ಎಂದೇ ಖ್ಯಾತಿಯಾದರು. ಮುಂದಿನ ಜೀವನವೆಲ್ಲ ಪಾಠ-ಪ್ರವಚನ ಕೃತಿರಚನೆ ತೀರ್ಥಯಾತ್ರೆ ಅರ್ತ ಜನರ ಉದ್ದಾರದ ಮೂಲಕ ತತ್ವ ಪ್ರಸಾರಕ್ಕೆ  ಜೀವನವನ್ನು ಮುಡಿಪಾಗಿಟ್ಟರು. ರಂಗೋಲಿಯಲ್ಲಿ ಚಿತ್ರ ರಚಿಸುವ ಕೌಶಲದಿಂದ ರಂಗನನ್ನು ಒಲಿಸಿಕೊಂಡು ರಂಗೋಲಿ ದಾಸರೆಂದು ಪ್ರಸಿದ್ಧಿ ಪಡೆದರು. ಇವರ ಸಮಕಾಲೀನ ರನ್ನು ನೋಡಿದರೆ ಇವರ ಜೀವನ ಎಷ್ಟು ಮಹತ್ವದಿಂದ ಕೂಡಿದೆ ಎಂದು ಅರ್ಥವಾಗುತ್ತದೆ. ಉತ್ತರಾದಿ ಮಠದ ಶ್ರೀ ಸತ್ಯಬೋಧ ತೀರ್ಥರು ಶ್ರೀಸತ್ಯಸಂಧತೀರ್ಥರು ಶ್ರೀ ಸತ್ಯವರ ತಿರ್ಥರು ಮತ್ತು ಶ್ರೀ ಸತ್ಯಧರ್ಮ ತೀರ್ಥರು ಶ್ರೀ ರಾಘವೇಂದ್ರ ಮಠದ ಶ್ರೀ ವರದೇಂದ್ರ ತೀರ್ಥರು ವಾಸುದೇವ ವಿಠಲಾಂಕಿತ ಶ್ರೀ ವ್ಯಾಸ ತತ್ವಜ್ಞ ತೀರ್ಥರು ಭಾಗವತ ಸಾರೋದ್ಧಾರ ರಚಿಸಿದ ಶ್ರೀ ಮಾದನೂರು ವಿಷ್ಣುತೀರ್ಥರು ಮೊದಲಾದ ಸಮಕಾಲಿಕ ಮಹನೀಯರ ಪ್ರೀತಿ ಮತ್ತು ಆದರಗಳಿಗೆ ಪಾತ್ರರಾದ ದಿವ್ಯಜೀವನ ಇವರದು. ತಿಮ್ಮಣ್ಣ ದಾಸರು ಮತ್ತು ದಾಮೋದರ ದಾಸರು ಎಂಬ ಪುತ್ರರು ಇವರಿಗೆ ಇದ್ದು ಅವರಿಬ್ಬರೂ ತಾರುಣ್ಯದಲ್ಲಿಯೇ ವಿಧಿವಶರಾದರು ಎಂದು ಪ್ರತೀತಿ. ಮಾನವಿ ಯಲ್ಲಿನ ದಾಸರ ಗೃಹವೇ ಇಂದಿನ ದಾಸರ ಗುಡಿ.

ಮಹಿಮೆಗಳು
ಒಬ್ಬ ಬಡ ಬ್ರಾಹ್ಮಣ ನಿತ್ಯ ಇವರನ್ನು ಸೇವಿಸುತ್ತಿದ್ದನು ಆದರೆ ಅವನು ಹಿಂದಿನ ಜನ್ಮದಲ್ಲಿ ಏನೂ ದಾನ ಮಾಡದ ಫಲವಾಗಿ ದರಿದ್ರನಾಗಿ ಜನಿಸಿದನು. ಇದನ್ನು ಅರಿತ ದಾಸರು ಅವನಲ್ಲಿದ್ದ ಒಂದು ತಂಬಿಗೆಯಲ್ಲಿ ಭಗವಂತನಿಗೆ ಪಾನಕ ಸಮರ್ಪಣೆ ಮಾಡಿಸಿ ಆ ತಂಬಿಗೆಯನ್ನು ದಾನವಾಗಿ ಕೊಡಿಸಿದರು. ದುರಿತವನ ಕುಠಾರಿ ದುರ್ಜನ ಕುಲವೈರಿ ಎಂಬ  ನರಸಿಂಹ ಸುಳಾದಿ ಯನ್ನು ರಚಿಸಿ ಅದರ ಪಾರಾಯಣ ಮಾಡಿಸಿ ಅವನನ್ನು ಶ್ರೀಮಂತನನ್ನಾಗಿಸಿದರು.  ಉಡುಪಿಯಲ್ಲಿ ಮೂಕನಿಗೆ ಮಾತು ಬರಿಸಿ ಅದನ್ನು ಪರೀಕ್ಷಿಸಲು ಯತ್ನಿಸಿದ ವಾಗ್ಮಿಯನ್ನು ಮೂಕನನ್ನಾಗಿಸಿದರು. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ನೇರ ಸಂಭಾಷಣೆಯ ಭಾಗ್ಯವನ್ನು ಹೊಂದಿದ್ದರು. ರಾಯರು ಪ್ರಹಲ್ಲಾದ ರಾಜ ರಾಗಿದ್ದಾಗ ಇವರು ಅವರ ತಮ್ಮನಾಗಿದ್ದರು.

ಕೃತಿಗಳು

ಶ್ರೀಹರಿಕಥಾಮೃತಸಾರ ನೂರಾರು ತತ್ವಸುವ್ವಾಲಿ ಗಳು ಇನ್ನೂರಕ್ಕೂ ಹೆಚ್ಚು ಕೀರ್ತನೆಗಳು ಉಗಾಭೋಗಗಳು ನೂರಾರು ಸುಳಾದಿಗಳು ಶ್ರೀಪಾದರಾಜ ಮಧ್ವನಾಮ ಹಾಗೂ ವರದೇಂದ್ರ ತೀರ್ಥ ವಿರಚಿತ ಕನ್ನಡ ತಂತ್ರಸಾರಗಳಿಗೆ ಫಲಶೃತಿಯನ್ನು ರಚಿಸಿದ್ದಾರೆ. ನಾವು ಹೇಗೆ ಜೀವಿಸಬೇಕೆಂಬ ವಿಷಯವನ್ನು ಫಲವಿದು ಬಾಳ್ದುದಕೆ ಎಂಬ ಪದದಲ್ಲಿ ತಿಳಿಸಿದ್ದಾರೆ ಇದನ್ನು ಅಣು ಹರಿಕಥಾಮೃತಸಾರ ಎಂದು ಕೂಡ ಕರೆಯಲಾಗುತ್ತದೆ.

ಹರಿಕಥಾಮೃತಸಾರ

ಶ್ರೀಹರಿಕಥಾಮೃತಸಾರ ಇವರ ಮೇರುಕೃತಿ ಆಗಿದೆ ಇದು ಅಣು ಸುಧಾ ಎಂದೇ ಪ್ರಸಿದ್ಧವಾಗಿದೆ. ಇದು ಭಾಮಿನಿ ಷಟ್ಪದಿಯ ಕೃತಿ. ಇದರಲ್ಲಿ 32 ಸಂದಿಗಳು 986 ಪದ್ಯಗಳು ಇದೆ. ಹರಿಕಥಾಮೃತಸಾರ ಎಂಬ ಹೆಸರೇ ಸೂಚಿಸುವಂತೆ ಇದು ಭಗವಂತನಾದ ಶ್ರೀಹರಿಯ ಅನಂತ ಕಲ್ಯಾಣ ಗುಣಗಳು, ಗುಣ ಪೂರ್ಣತ್ವ, ಸಕಲ ದೋಷದೂರ ತ್ವ ಪ್ರಧಾನವಾಗಿ ನಿರೂಪಿಸುತ್ತಾ ಅದರ ಅಂಗವಾಗಿ ಜಗತ್ ಸತ್ವ ಪಂಚಭೇದ ದೇವರ ತಾರತಮ್ಯ ಮೋಕ್ಷ ಸಾಧನೆಗಳ ವಿವರ ಉಪಾಸನೆಯ ರೀತಿ ಭಕ್ತಿಯ ಮಹತ್ವ ಮೊದಲಾದ ತತ್ವಗಳನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ.
ಐದು ಪದ್ಯಗಳ ಅನುಕ್ರಮಣಿಕ ತಾರತಮ್ಯ ಸಂಧಿ ಅತಿ ಚಿಕ್ಕ ಸಂಧಿಯಾದರೆ 63 ಪದ್ಯಗಳ ಕಲ್ಪ ಸಾಧನ ಸಂಧಿ ಅತಿ ದೊಡ್ಡ ಸಂಧಿ ಆಗಿದೆ. ಪ್ರತಿ ಪದದಲ್ಲೂ ಭಗವಂತನ ಬಗ್ಗೆ ಭಕ್ತಿ ತುಂಬಿ ತುಳುಕುತ್ತದೆ. ಭಗವಂತನ ಕಾರುಣ್ಯವನ್ನು ಪರಿಪರಿಯಾಗಿ ನಿರೂಪಿಸಿದ್ದಾರೆ. ಭಗವಂತನ ಮಹಿಮೆಯನ್ನು ಭಕ್ತರಿಗೆ ತಲುಪಿಸುವ ಕಳಕಳಿಯಂತೂ ಎಂಥವನಿಗೂ ಇವರ ಬಗ್ಗೆ ಆತ್ಮೀಯ ಭಾವ ಮೂಡಿಸುತ್ತದೆ. ಅಲ್ಲಲ್ಲಿ ಸಂಸ್ಕೃತಭೂಯಿಷ್ಠ ಶೈಲಿ ಇದ್ದರೂ ಅದು ಕನ್ನಡಕ್ಕೆ ಹೊಂದಿಕೊಳ್ಳುವಂತೆ ಎಚ್ಚರ ವಹಿಸಿದ್ದಾರೆ. ಇದು ಅವರ ಅದ್ಭುತ ಕೌಶಲ್ಯಕ್ಕೆ ಉದಾಹರಣೆಯಾಗಿದೆ. ಇದು ದ್ವೈತ ವೇದಾಂತದ ಪ್ರಮೇಯ ಕೋಶವಾಗಿದೆ. ವಿದ್ವಾಂಸರಿಗೂ ಉಪಕಾರಕವಾದ ವೇದಾಂತದ ಕೈಪಿಡಿ.
ದಾಸಸಾಹಿತ್ಯ ವ್ಯಾಸ ಸಾಹಿತ್ಯದ ಕನ್ನಡ ಆವಿಷ್ಕಾರವಾದ ಹರಿಕಥಾಮೃತಸಾರ ಅದರ ಸಾರಸರ್ವಸ್ವ. ಅದಕ್ಕೆಂದೇ ಇದು ಹರಿದಾಸ ಸಾಹಿತ್ಯದ ನ್ಯಾಯಸುಧಾ ಎಂದು ಪರಿಗಣಿಸಲಾಗಿದೆ.
ಹರಿಕಥಾಮೃತಸಾರ ಕೃತಿಯ ಕೆಲವು ಪದ್ಯಗಳು ಅವಲೋಕನೆ.

ಮಂಗಳಾಚರಣ ಸಂಧಿ ಯಲ್ಲಿ ಅನಿಷ್ಟಗಳ ನಿವೃತ್ತಿ ಪೂರ್ವಕ ಇಷ್ಟ ಪ್ರಾಪ್ತಿಗೆ ಅವರ ಕುಲದೇವರಾದ ನರಸಿಂಹ ದೇವರನ್ನು ಪ್ರಾರ್ಥಿಸಿದ್ದಾರೆ. ಶ್ರೀರಮಣಿ ಕರಕಮಲ ಪೂಜಿತ..... ಕೈವಲ್ಯ ದಾಯಕ ನಾರಸಿಂಹನೆ ನಮಿಪೆ ಕರುಣಿಪುಧೆಮಗೆ ಮಂಗಳವ.
ನವವಿಧ ಭಕ್ತಿಯಲ್ಲಿ ಒಂದಾದ ಹರಿಕಥಾ ಶ್ರವಣ ದಿಂದಲೇ ಮೋಕ್ಷಕ್ಕೆ ದಾರಿ ಎಂದು ಹೇಳಿದ್ದಾರೆ.
ಶ್ರವಣ ಮನಕಾನಂದ ವಿನುದು ಭವಜನಿತ ದುಃಖಗಳ ಕಳೆವುದು ವಿವಿಧ ಭೋಗಗಳಿಹಪರಂಗಳನಿತ್ತು ಸಲಹುವುದು ಭುವನ ಪಾವನ ನೆನಿಪ ಲಕುಮೀ ಧವನ ಮಂಗಳ ಕಥೆಯ ಪರಮೋತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ.
ಪರಮಾತ್ಮ ತನಗೆ ಏನೂ ಪ್ರಯೋಜನವಿಲ್ಲದಿದ್ದರೂ ತನ್ನ ನಂಬಿದ ಭಕ್ತರನ್ನು ಕಾದುಕೊಂಡು ರಕ್ಷಿಸುವನು ಇದಕ್ಕೆ ಅದ್ಭುತ ಉದಾಹರಣೆ 
ಧನವ ಸಂರಕ್ಷಿಸುವ ಪಣಿ ತಾನುಣದೆ  ಮತ್ತೊಬ್ಬರಿಗೆ ಕೊಡದೆ ದಿನದಿನದಿ ನೋಡುತ ಸುಖಿಸುವಂದದಲಿ ಲಕುಮಿ ವಲ್ಲಭನು ಪ್ರಣತರನು ಕಾಯ್ದಿಹನು.
ಪರಮಾತ್ಮ ಎಲ್ಲೆಲ್ಲಿಯೂ ಎಲ್ಲರಲ್ಲಿಯೂ ವ್ಯಾಪ್ತನಾಗಿದ್ದರೂ ಸುಖ-ದುಃಖಗಳ ಲೇಪ ಅವನಿಗಿಲ್ಲ. ಇದಕ್ಕೆ ಉದಾಹರಣೆಕಾದ ಕಬ್ಬಿಣ ಹಿಡಿದು ಬಡಿಯಲು ವೇದನೆಯು ಲೋಹಗಳಿಗೆ ಅಲ್ಲದೆ ಆದುದೇನೈ ಆನಲಗಾ ವ್ಯಥೆ  ಏನು ಮಾಡಿದರು ಆದಿದೇವನು ಸರ್ವ ಜೀವರ ಕಾದುಕೊಂಡಿಹನೊಳಹೊರಗೆ ದುಃಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ.
ನಾವು ಮಾಡುವ ಕಾರ್ಯಗಳೆಲ್ಲವೂ ಪರಮಾತ್ಮನ ಅಧೀನವೆಂದು ತಿಳಿದು ಅವನಿಗೆ ಸಮರ್ಪಣೆ ಮಾಡಬೇಕು. ಅಂದರೆ ಸಮರ್ಪಣೆ ಮಾಡುವುದರಲ್ಲಿ ಭೇದ ಉಂಟು. ಪಾಪಕರ್ಮಗಳನ್ನು ಪರಮಾತ್ಮನಿಗೆ ಪಾದುಕೆಗಳನ್ನಾಗಿ ಸಮರ್ಪಿಸಿದರೆ ಪುಣ್ಯ ಕರ್ಮಗಳನ್ನು ದೇವರಿಗೆ ಸುಗಂಧ ಸಮರ್ಪಿಸಿದಂತೆ ಸಮರ್ಪಿಸಬೇಕು. ಪಾಪಕರ್ಮಗಳನ್ನು ಒಪ್ಪಿಸಿದರೆ ದೋಷ ಬಂದಿತೆಂಬ ಸಂಶಯವನ್ನು ಬಿಟ್ಟು ಲಕ್ಷ್ಮೀನಿವಾಸ ನಿಗೆ ಸರ್ವ ಕರ್ಮಗಳು ನಿನ್ನ ಅಧೀನವೆಂದು ಅರ್ಪಿಸಬೇಕು. ಜ್ಞಾನನಿಧಿಯಾದ ದೇವರು ಸರ್ವ ಕರ್ಮಗಳನ್ನು ಅಂಗೀಕರಿಸಿ ಹುಲ್ಲು ನೀರು ಸ್ವೀಕರಿಸಿದ ಗೋವು ಕ್ಷೀರವನ್ನು ಕೊಡುವಂತೆ ನಿರಂತರ ಶರಣಾಗತರಿಗೆ ಪಾಪ ಹೋಗಲಾಡಿಸಿ ಪುಣ್ಯ ಫಲವನ್ನು ಕೊಡುವನು.

ಏನು ಮಾಡುವ ಕರ್ಮಗಳು ಲಕ್ಷ್ಮೀನಿವಾಸ ನಿಗರ್ಪಿಸು ಅನುಸಂಧಾನ ಪೂರ್ವಕವಾಗಿ ಸಂದೇಹಿಸದೇ ದಿನದಿನದಿ ಮಾನನಿಧಿ ಕೈಕೊಂಡು ಸುಖವಿತ್ತನವರತ ಸಂತೈಪ ತೃಣ ಜಲ ತಾನುಂಡನವರತ ಪಾಲುಗರೆವಂತೆ ಎಂದಿದ್ದಾರೆ.
ಶರೀರಗತ ನಾಡಿಗಳಲ್ಲಿ ಮುಖ್ಯನಾದ ಸುಷುಮ್ನಾ ನಾಡಿ ಇರುವ ಸ್ಥಳ ಅದರಲ್ಲಿರುವ 6 ಕಮಲಗಳ ವಿಚಾರ ಮೂಲೇಶ ಅಗ್ರೇಶ ಪ್ರಾದೇಶನಾಮಕ ಬಿಂಬ ರೂಪಗಳ ಚಿಂತನ ಪ್ರಕಾರವನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ.ಪರಮಾತ್ಮನ ಧ್ಯಾನ ಅವನ ಉಪಾಸನೆ ಹೇಗೆ ಮಾಡಬೇಕು ಎಂದು ಮುಂದಿನ ಪದ್ಯದಲ್ಲಿ ತಿಳಿಸಿದ್ದಾರೆ.
ಹಗಲು ನಂದಾದೀಪದಂದದಲಿ ನಿಗಮ ವೇದ್ಯನ ಪೂಜಿಸುತ್ತಾ ಕೈಮುಗಿದು ಒಳಹೊರಗೆ ಒಂದು ಪುರುಷಾರ್ಥವನ್ನು ಬೇಡ ದೆಲೆ ಜಗದೋದ್ಧಾರನು ಕೊಟ್ಟುದನ್ನು ಭುಂಜಿಸಿ ಮಗ ಮಡದಿ ಪ್ರಾಣ ಇಂದ್ರಿಯ ಆತ್ಮಾದಿಗಳು  ಭಗವದಧೀನವೆಂದಡಿಗಡಿಗೆ ನೆನೆಯುತಿರು.
ಈ ನಿಮಿತ್ತ ನಿಷ್ಕಾಮ ಉಪಾಸನೆ ಮಾಡಬೇಕೆಂದು ತಿಳಿಸುತ್ತಾರೆ ನಮ್ಮ ದೇಹದಲ್ಲಿ 72 ಸಾವಿರ ನಾಡಿಗಳು ಇದೆ. ಇದರಲ್ಲಿ 36 ಸಾವಿರ ನಾಡಿಗಳು ಪುರುಷ ನಾಡಿಗಳು 36000 ಸ್ತ್ರೀ ನಾಡಿಗಳು. ಈ ನಾಡಿಗಳನ್ನು ಹಗಲು ಮತ್ತು ರಾತ್ರಿ ನಾಡಿಗಳು ಎಂದು ಕರೆಯುತ್ತಾರೆ. ಈ ನಾಡಿಗಳಲ್ಲಿ ಪರಮಾತ್ಮನ ವ್ಯಾಪಾರವನ್ನು ಹೃದಯಂಗಮವಾಗಿ ವರ್ಣಿಸಿದ್ದಾರೆ. ನಾವು ಪರಮಾತ್ಮನ ಸ್ಮರಣೆಯನ್ನು ಒಂದು ಅರೆಘಳಿಗೆ ಕೂಡ ಬಿಡಬಾರದು ಎಂದು ಮುಂದಿನ ಪದ್ಯದಲ್ಲಿ  ತಿಳಿಸಿದ್ದಾರೆ.

ಮಕ್ಕಳಾಡಿಸುವಾಗ ಮಡದಿಯೊಳಕ್ಕರದಿ ನಲಿವಾಗ ಹಯ ಪಲ್ಲಕ್ಕಿ ಗಜ ಮೊದಲಾದ ವಾಹನವೇರಿ ಮೆರೆವಾಗ ಬಿಕ್ಕುವಾಗಾಕಳಿಸುತಲಿ ದೇವಕ್ಕಿ ತನಯನ ಸ್ಮರಿಸುತಿಹ ನರ ಸಿಕ್ಕನೆಮಧೂತರಿಗಾವಾವಲ್ಲಿ ನೋಡಿದರು.
ಮುಖ್ಯಪ್ರಾಣ ದೇವರ ಮಹಿಮೆ ಮತ್ತು ಅವರು ಮಾಡುವ ಹಂಸ ಜಪಗಳ ವಿವರಣೆಯನ್ನು ನೀಡಿದ್ದಾರೆ. ಜೀವರಿಗೆ ಸ್ವತಂತ್ರ ಕರ್ತೃತ್ವ ಭೋಕ್ತೃತ್ವರೂಪ ಶಕ್ತಿ ಇಲ್ಲದಿದ್ದರೂ ದತ್ತ ಸ್ವಾತಂತ್ರ ಅಭಿಮಾನ ಮೂಲಕ ಜೀವರಿಗೆ ಪಾಪ-ಪುಣ್ಯ ಲೇಪವಾಗುವುದೆಂದು ತಿಳಿಸುತ್ತಾರೆ. ಪರಮಾತ್ಮನಿಗೆ ಪ್ರಾಕೃತ ರಸ ಭೋಜನ ಹೇಗೆಂಬ ಆಕ್ಷೇಪ ಪರಿಹಾರಾರ್ಥವಾಗಿ ಈಶ ಜೀವರ ಭೋಗ ದೃಷ್ಟಾಂತ ತಿಳಿಸುತ್ತಾರೆ
ಗರ್ಭಿಣಿ ಸ್ತ್ರೀ ಉಂಡ ಭೋಜನ ಗರ್ಭಗತ ಶಿಶು ಉಂಬ ತೆರದಿ ನಿರ್ಭಯನು ತಾನುಂಡುಣಿಸುವನು ಸರ್ವ ಜೀವರಿಗೆ. ಪರಮಾತ್ಮನು ಅಪಾರ ಕರುಣಾ ಸಮುದ್ರ ಅವನನ್ನು ಯಾವ ರೀತಿಯಲ್ಲಾದರೂ ಸ್ಮರಣೆ ಮಾಡಿದರೂ ಕಾಪಾಡುತ್ತಾನೆ. ಭಿಟ್ಟಿಗಳ ನೆವದಿಂದಾಗಲಿ ಹೊಟ್ಟೆಗೂಸುಗವಾಗಲಿ ಕೆಟ್ಟ ರೋಗ ಪ್ರಯುಕ್ತದಿಂದಾಗಲಿ ನಿಟ್ಟುಸಿರಿನಿಂಬಾಯ್ತೆರೆದು ಹರಿ ವಿಠಲ ಸಲಹೆಂದೆನಲು ಕೈಕೊಟ್ಟು ಕಾವ ಕೃಪಾಳು ಸಂತತ ತನ್ನ ಭಕುತರನು.

ಶ್ರೀಹರಿಕಥಾಮೃತಸಾರ ವು ಅತ್ಯುತ್ತಮವಾದ ರತ್ನ ವಾಗಿರುತ್ತದೆ ಇದರಲ್ಲಿ ಮುಮುಕ್ಷುಗಳು ತಿಳಿದುಕೊಳ್ಳಬೇಕಾದ ಅನೇಕ ಪ್ರಮೇಯಗಳು ಅಡಗಿರುತ್ತವೆ. ಮೂರು ಕಾಲಗಳಲ್ಲಿ ಪಠಿಸೆ ಶರೀರ ವಾಂಙ್ಮನ ಶುದ್ದಿ ಮಾಳ್ಪುದು ದೂರಗೈಸುವುದ ಅಖಿಲ ಪಾಪ ಸಮೂಹ ಪ್ರತಿದಿನದಿ  ಚೋರಭಯ ರಾಜಭಯ ನಕ್ರ ಚಮೂರು ಶಸ್ತ್ರಜಲ ಅಗ್ನಿ ಭೂತ ಮಹೋರಗ ಜ್ವರ ನರಕ ಭಯ ಸಂಭವಿಸದೆಂದೆಂದು.

ಈ ಹರಿಕಥಾಮೃತಸಾರಕ್ಕೆ ಜಮಖಂಡಿ ವಾದಿರಾಜಾಚಾರ್ಯರು ಸಂಸ್ಕೃತದಲ್ಲಿ  ವ್ಯಾಖ್ಯಾನವನ್ನು ಬರೆದಿದ್ದಾರೆ ಅಂದರೆ ಇದರ ಮಹತ್ವವನ್ನು ಎಷ್ಟು ಎಂದು ನಾವು ತಿಳಿಯಬೇಕು.
ಇವರ ಪ್ರಮುಖ ಶಿಷ್ಯರು ಶ್ರೀ ಪ್ರಾಣೇಶ ದಾಸರು ಶ್ರೀ ಶ್ರೀದವಿಠ್ಠಲದಾಸರು ಶ್ರೀ ಗುರು ಶ್ರೀಶ ವಿಠ್ಠಲ ದಾಸರು ಶ್ರೀವಿಜಯ ಹಯಗ್ರೀವ ದಾಸರು ಶ್ರೀ ಗುರು ಜಗನ್ನಾಥ ವಿಠ್ಠಲರು ಮುಂತಾದವರು ಇದಕ್ಕೆ ಫಲಶೃತಿಯನ್ನು ಬರೆದಿದ್ದಾರೆ. ಸಂಕರ್ಷಣ ಒಡೆಯರ ವ್ಯಾಖ್ಯಾನ ತುಂಬಾ ಪ್ರಸಿದ್ಧವಾಗಿದೆ.

ಈ ಹರಿಕಥಾಮೃತಸಾರವನ್ನು ಭಕ್ತಿಪೂರ್ವಕ ಪಠಿಸುವವರಿಗೆ ಶ್ರೀ ಹರಿ ಗುರು ದೇವತಾನುಗ್ರಹ ವಾಗುತ್ತದೆ.
ರಮಾರಮಣ ನಾದ ಶ್ರೀಹರಿ ಈ ಪದ್ಯಗಳನ್ನು ಪಠಿಸುವ ಭಕ್ತಜನರಿಗೆ ಸದಾ ಬೇಡಿದ ಇಷ್ಟಾರ್ಥವನ್ನು ಕೊಟ್ಟು ಜ್ಞಾನ ಭಕ್ತಿ ವೈರಾಗ್ಯ ಗಳನ್ನು ಕರುಣಿಸುತ್ತಾನೆ.
ಜಗನ್ನಾಥದಾಸರು ಭಾದ್ರಪದ ಶುದ್ಧ ನವಮಿಯಂದು ಮಾನವಿಯಲ್ಲಿ ಒಂದು ಕಂಬಕ್ಕೆ ಒರಗಿಕೊಂಡು ಅವರ ಪ್ರಾಕೃತ ದೇಹವನ್ನು ತ್ಯಜಿಸಿದ್ದಾರೆ. ಈ ಕಂಬಕ್ಕೆ ಎಲ್ಲಾ ಪೂಜೆ-ಪುನಸ್ಕಾರ ಆರಾಧನಾದಿಗಳು ನಡೆಯುತ್ತವೆ.
ಈ ಗ್ರಂಥದ ಮುಖ್ಯ ಸಾರಾಂಶವೇನೆಂದರೆ ನಾ ನಾ ಎನ್ನುವುದು ಬಿಟ್ಟು ನೀನೀ ಎಂದರೆ ಜನ್ಮ ಸಾರ್ಥಕವಾಗುತ್ತದೆ.ನಾನು ಮಾಡಿದೆ ಎನ್ನುವುದು ಸಂಸಾರಕ್ಕೆ ಭಂಧಕ . ನೀನು ಮಾಡಿಸಿದೆ  ಎಂದರೆ ಸಂಸಾರದಿಂದ ಮೋಚಕ

Related Articles

ಪ್ರತಿಕ್ರಿಯೆ ನೀಡಿ

Latest Articles