ದಾಸಶ್ರೇಷ್ಠ ಶ್ರೀಜಗನ್ನಾಥದಾಸರು

ಇಂದು ಶ್ರೀ ಜಗನ್ನಾಥದಾಸರ ಆರಾಧನೆ ಈ ಪ್ರಯುಕ್ತ ವಿಶೇಷ ಲೇಖನ.

*ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಭಾದ್ರಪದ ಶುಕ್ಲ ನವಮಿಯಂದು ದಾಸಶ್ರೇಷ್ಠರಾದ, ದಾಸ ಚತುಷ್ಟಯರಲ್ಲೊಬ್ಬರಾದ, ಕರ್ಣಾಟಕದ ಹರಿದಾಸ ಪರಂಪರೆಯಲ್ಲಿ ತಮ್ಮ ಅಸಾಮಾನ್ಯ ಕೃತಿಗಳಿಂದ ಅಮರರಾದ ಶ್ರೀಜಗನ್ನಾಥದಾಸರ ಆರಾಧನೆ. ಹರಿದಾಸ ಸಾಹಿತ್ಯಕ್ಕೆ ಭದ್ರಬುನಾದಿ ಹಾಕಿದ ಮಹಾನುಭಾವರಲ್ಲಿ ಜಗನ್ನಾಥ ದಾಸರು ಒಬ್ಬರು..

ರಾಯಚೂರು ಪ್ರಾಂತ್ಯದ ನರಸಿಂಹಾಚಾರ್ಯ ಮತ್ತು ಲಕ್ಷ್ಮಮ್ಮ ದಂಪತಿಗಳಲ್ಲಿ ಜನಿಸಿ ಶ್ರೀನಿವಾಸಾಚಾರ್ಯರಾದರು.. ಶ್ರೀವರದೇಂದ್ರ ತೀರ್ಥರಲ್ಲಿ ಸಕಲ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿ ಮಹಾನ್ ವಿದ್ವಾಂಸರಾದರು.

ಒಮ್ಮೆ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರು ಮಾನ್ವಿ ಊರಿಗೆ ಆಗಮಿಸಿದರು. ಹರಿದಾಸ ಸಂಕೀರ್ತನೆಯಲ್ಲೇ ತೊಡಗಿದ ಅವರು ಮಧ್ಯಾಹ್ನ ತೀರ್ಥ ಪ್ರಸಾದಕ್ಕೆಂದು ಶ್ರೀನಿವಾಸಾಚಾರ್ಯರರನ್ನು ಕರೆಕಳಿಸಿದರು. ಮಹಾನ್ ವಿದ್ವಾಂಸರಾದ ಶ್ರೀನಿವಾಸಾಚಾರ್ಯರು ಏನೋ ಕಾರಣಾಂತರಗಳಿಂದ ಉದರಬಾಧೆಯಾಗಿದೆ ಬರಲು ಸಾಧ್ಯವಿಲ್ಲ ಎಂದು ಮರು ಹೇಳಿಕಳಿಸುತ್ತಾರೆ.. ವಿಜಯದಾಸರು ಆಗಲಿ ಹರಿಚಿತ್ತ ಎಂದು ಹೇಳುತ್ತಾರೆ.. ಕೆಲವೇ ಕ್ಷಣಗಳಲ್ಲಿ ಶ್ರೀನಿವಾಸಾಚಾರ್ಯರು ಭಯಂಕರ ಹೊಟ್ಟೆ ನೋವಿನಿಂದ ಬಳಲುತ್ತಾರೆ.. ಮಂತ್ರಾಲಯ ಪ್ರಭುಗಳ ಸೇವೆ ಮಾಡುತ್ತಾರೆ.. ರಾಯರು ಸ್ವಪ್ನದಲ್ಲಿ ಬಂದು ವಿಜಯದಾಸರ ಆಮಂತ್ರಣ ಮೀರಿದ್ದಕ್ಕೆ ಅವರ ಬಳಿಗೇ ಹೋಗಿ ಕ್ಷಮೆ ಕೇಳಿ ಎಂದು ಆಜ್ಞೆ ಮಾಡುತ್ತಾರೆ.

ತಕ್ಷಣವೇ ವಿಜಯದಾಸರಲ್ಲಿಗೆ ಬಂದು ಕ್ಷಮೆ ಕೇಳಿ ಶಿಷ್ಯರಾಗುತ್ತಾರೆ.. ಈ ಉದರಬಾಧೆಯ ಪರಿಹಾರಕ್ಕಾಗಿ ನಮ್ಮ ಶಿಷ್ಯರಾದ ಗೋಪಾಲದಾಸರ ಬಳಿ ಹೋಗಿ ಎಂದು ಕಳಿಸಿ ಕೊಡುತ್ತಾರೆ. ಗೋಪಾಲದಾಸರು ಶ್ರೀನಿವಾಸಾಚಾರ್ಯರಿಗಾಗಿ ಧನ್ವಂತರಿಯ ವಿಶೇಷ ಉಪಾಸನೆಯನ್ನು ಮಾಡುತ್ತಾರೆ. ನಿತ್ಯ ದೇವರಿಗೆ ನಿವೇದಿಸಿದ ಒಂದು ಜೋಳದ ಭಕ್ಕರಿಯನ್ನು ಕೊಡುತ್ತಾರೆ. “ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು” ಎಂದು ಪ್ರಾರ್ಥಿಸುತ್ತಾರೆ. ಮುಂದೆ ಕೆಲವೇ ದಿನಗಳಲ್ಲಿ ಶ್ರೀನಿವಾಸಾಚಾರ್ಯರು ಮೊದಲಿಗಿಂತಲೂ ಚೈತನ್ಯಭರಿತರಾಗುತ್ತಾರೆ.. ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾರ್ಥಿಸಿ ಶ್ರೀನಿವಾಸಾಚಾರ್ಯರಿಗೆ ತಮ್ಮ ಜೀವನದ ಇಪ್ಪತ್ತು ವರ್ಷಗಳ ಆಯುಷ್ಯವನ್ನೇ ಧಾರೆ ಎರೆದ ಮಹಾನುಭಾವರು ಗೋಪಾಲದಾಸರು..  ಅವರ ಆಜ್ಞೆಯಂತೆ ಪಂಡರಪುರಕ್ಕೆ ಹೋಗಿ ಪಾಂಡುರಂಗನ ದರ್ಶನ ಪಡೆಯುತ್ತಾರೆ. ಚಂದ್ರಭಾಗೆಯಲ್ಲಿ ಮಿಂದು ಮೇಲೇಳುವಾಗ ಅವರ ಬಲಭಾಗಕ್ಕೆ ಒಂದು ಶಿಲೆ ಸಿಗುತ್ತದೆ.. ಅದರ ಮೇಲೆ “ಜಗನ್ನಾಥ ವಿಠಲ” ಎಂಬ ಅಂಕಿತ ಬರೆದಿರುತ್ತದೆ.. ಆ ಶಿಲೆಯನ್ನು ಶಿರದ ಮೇಲಿಟ್ಟುಕೊಂಡು  “ಎಂದು ಕಾಂಬೆನೋ ಪಾಂಡುರಂಗ ಮೂರುತಿಯಾ” ಎಂದು ಕೊಂಡಾಡುತ್ತ ಶ್ರೀನಿವಾಸಾಚಾರ್ಯರು “ಶ್ರೀಜಗನ್ನಾಥದಾಸ”ರಾಗುತ್ತಾರೆ. 

“ರತುನ ದೋರಕೀತಲ್ಲ (ವಿಜಯದಾಸರೆಂಬ) ಎನಗೆ ದಿವ್ಯ.” “ಗೋಪಾಲದಾಸರಾಯಾ ನಿನ್ನಯ ಪಾದ ನಾ ಪೊಂದಿದೆ” ಎಂದು ಹೀಗೆ ವಿಜಯದಾಸ ಗೋಪಾಲದಾಸರನ್ನು ಕೊಂಡಾಡಿದ್ದಾರೆ.

ಮಂತ್ರಾಲಯ ಪ್ರಭುಗಳಾದ ರಾಯರ ಅನನ್ಯ ಭಕ್ತರು ಶ್ರೀಜಗನ್ನಾಥದಾಸರು .. ರಾಯರ ಮೇಲೆ ಅನೇಕ ಪದ್ಯಗಳನ್ನು ರಚಿಸಿದ್ದಾರೆ.

ವ್ಯಾಸ ಮಧ್ವರ ವಾಂಗ್ಮಯಗಳನ್ನು ತಿಳಿಯುವ ಪ್ರಯಾಸ ದೇವತೆಗಳೂ ಸಹ ಮಾಡುತ್ತಿರುವಾಗ ಜನಸಾಮಾನ್ಯರಿಗೆ ತತ್ತ್ವಜ್ಞಾನದ ಪ್ರಚಾರ ಹೇಗೆ..?ಎಂದು ಚಿಂತಿಸಿ ಸಮಸ್ತ ಸಮಾಜಕ್ಕೆ ಸಾಧನೆಯ ಗ್ರಂಥವನ್ನು ರಚಿಸಿದರು ಅದುವೇ “ಶ್ರೀಹರಿಕಥಾಮೃತಸಾರ”ವೆಂಬ ಮೇರು ಕೃತಿ.  ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಮತ್ತು ಸಕಲ ಪುರಾಣಗಳ ಸಾರಭೂತವಾಗಿ ಹರಿ ಕಥೆಗಳನ್ನು ಅಮೃತದಂತೆ ಸಮಸ್ತ ಸಮಾಜಕ್ಕೆ ನೀಡಿ ಉಪಕಾರ ಮಾಡಿದ್ದಾರೆ. ಗ್ರಂಥದ ರಚನೆಯಲ್ಲಿ ಅನೇಕ ವಿಘ್ನಗಳು ಬಂದಾಗ ಗಣಪತಿಯನ್ನು ಪ್ರಾರ್ಥಿಸಿ  “ಶ್ರೀವಿಘ್ನೇಶ್ವರ ಸಂಧಿ”ಯನ್ನು ರಚಿಸಿದರು. ಸವಣೂರಿನಲ್ಲಿ ನೆಲೆಸಿದ ಶ್ರೀಸತ್ಯಬೊಧತೀರ್ಥರ ಕಂಡು  ಪ್ರಾರ್ಥಿಸಿ ಮುಂದಿನ ಸಂಧಿಗಳನ್ನೆಲ್ಲ ಅಲ್ಲಿಯೇ ರಚಿಸಿದರು. ಹೀಗೆ ಸತ್ಯಬೋಧರ ಅನುಗ್ರಹದಿಂದ ಭಾಮಿನಿ ಷಟ್ಪದಿಯಲ್ಲಿ 32  ಸಂಧಿಗಳಿಂದ ಕೂಡಿದ ಮೇರುಗ್ರಂಥ “ಶ್ರೀಹರಿಕಥಾಮೃತಸಾರ” ದ ರಚನೆ ಪೂರ್ಣಗೊಂಡಿತು.  ಜಗನ್ನಾಥದಾಸರು

ಗುರುಕಾಣಿಕೆಯಾಗಿ ತಮ್ಮ ಗೋಪಾಳದ ಬುಟ್ಟಿಯನ್ನು ಶ್ರೀಸತ್ಯಬೊಧರಿಗೆ ಕೊಟ್ಟರು. ಅನುಗ್ರಹರೂಪವಾಗಿ ಸತ್ಯಬೋಧರ ಪಾದುಕೆಗಳನ್ನೂ ಪಡೆದರು..ಆ ಪಾದುಕೆಗಳು ಇಂದಿಗೂ ಮಾನ್ವಿಯಲ್ಲಿವೆ. ಸತ್ಯಬೋಧರ ಮೇಲೆ ಸ್ತೋತ್ರ ಹಾಗೂ ಪದ್ಯಗಳನ್ನು ಮಾಡಿದ್ದಾರೆ.

ಹರಿಕಥಾಮೃತಸಾರಕ್ಕೆ ಕನ್ನಡ, ಸಂಸ್ಕೃತ ಇನ್ನೂ ಅನೇಕ ಭಾಷೆಗಳಲ್ಲಿ ವ್ಯಾಖ್ಯಾನಗಳಿವೆ. ಸುಲಭವಾಗಿ ಜಿಹ್ವೆಗೆ ನಿಲುಕದ ಗಂಭೀರ ಸಾಹಿತ್ಯ ಹರಿಕಥಾಮೃತಸಾರದ್ದು. ಇದರ ನಿತ್ಯ ಪಾರಾಯಣ ಸರ್ವಸಿದ್ಧಿಗೆ ಕಾರಣ.

ಮಹಾನ್ ವಿದ್ವಾಂಸರಾದ ಜಗನ್ನಾಥದಾಸರು ಪ್ರಮೇಯಗಳನ್ನೆಲ್ಲ ಅರ್ಥೈಸುವ “ತತ್ತ್ವಸುವ್ವಾಲಿ”ಯನ್ನು ರಚಿಸಿದರು. ನರಸಿಂಹ  ದೇವರು, ಪ್ರಾಣದೇವರು ಮೊದಲಾಗಿ ನವಬೃಂದಾವನ ಗುರುಗಳು ಹೀಗೆ ಎಲ್ಲ ಗುರುಗಳನ್ನೂ ಕುರಿತು ಅನೇಕ ಪದ್ಯಗಳನ್ನು ರಚಿಸಿದ್ದಾರೆ.

ಹುಟ್ಟಿದ ಮನುಷ್ಯ ಬದುಕನ್ನು ಸಾರ್ಥಕಗೊಳಿಸುವುದು ಹೇಗೆ ಎಂದು ತಿಳಿಸಲು “ಫಲವಿದು ಬಾಳ್ದುದಕೆ” ಎಂಬ ಕೀರ್ತನೆಯನ್ನು ಹೇಳಿದರು. ಜಗನ್ನಾಥದಾಸರು ಹೇಳಿದ

‘ವಿಸ್ಮರಣೆಯೇ ನರಕ. ‌ಸ್ಮೃತಿ ಸ್ವರ್ಗ ‘ ಎಂಬ ಸಂದೇಶವನ್ನೇ, ಗ್ರೀಕ್ ತತ್ವಜ್ಞಾನಿ ಸೊಕ್ರಟೆಸ್ ” knowledge is virtue, ignorance is vice’ ಎಂದು ಹೇಳಿದನು..

ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರೆನೆಸಿದ  ಶ್ರೀಜಗನ್ನಾಥದಾಸರು ತಮ್ಮ ೮೧ ನೇ ವಯಸ್ಸಿನಲ್ಲಿ ತಮ್ಮ ಸ್ವಗ್ರಾಮ ಮಾನವಿಯಲ್ಲಿ ದೇಹತ್ಯಾಗ ಮಾಡಿದರು.

ಜಲಜೇಷ್ಟ ನಿಭಾಕಾರಂ ಜಗದೀಶ ಪದಾಶ್ರಯಮ್।

ಜಗತೀತಲ ವಿಖ್ಯಾತಂ ಜಗನ್ನಾಥಗುರುಂ ಭಜೇ॥”.

ಲೇಖಕರು

[email protected] ph- 9448375523

Related Articles

ಪ್ರತಿಕ್ರಿಯೆ ನೀಡಿ

Latest Articles