ಬದುಕಿನ ಸೋಲು ಗೆಲುವಿಗೆ ಸಂಬಂಧಗಳು ಕಾರಣವೇ?

ಕ್ಷುಲ್ಲಕ ಕಾರಣಗಳಿಗೆ ಅಣ್ಣ ತಮ್ಮಂದಿರು ದಾಯಾದಿಗಳಾಗುತ್ತಿದ್ದಾರೆ; ಯಾವುದೋ ತೀರಾ ಸಣ್ಣ ವಿಚಾರಕ್ಕೆ ಸ್ನೇಹಿತರು ತಮ್ಮ ಸ್ನೇಹ ಮರೆತು ಶತ್ರುಗಳಾಗುತ್ತಿದ್ದಾರೆ. ಅದೆಷ್ಟೋ ಪ್ರೇಮಿಗಳು ಅಗಲಿದ್ದಾರೆ, ಸಂಸಾರಗಳಂತೂ ವಿಚ್ಚೇದನ ಪಡೆಯುವ ಹಂತಕ್ಕೂ ಹೋಗಿವೆ. ಇವೆಲ್ಲ ಬದುಕಿನ ಸೋಲುಗಳೆ. ಯಾಕೆ ಗೊತ್ತಾ…. ಮುಂದೆ ಓದಿ.

*ಲಕ್ಷ್ಮೀಕಾಂತ್ ಎಲ್ ವಿ

ರಾಮಾಯಣ ನಮಗೆಲ್ಲ ಗೊತ್ತೇ ಇದೆ. ಈ ರಾಮಾಯಣ ನಮ್ಮ ಬದುಕಿಗೂ ಒಂದಷ್ಟು ಹತ್ತಿರ ಅನಿಸುತ್ತದೆ. ವಾಲ್ಮೀಕಿ ಬರೆದ ರಾಮಾಯಣ ಇಂದಿಗೂ ನಮಗೆಲ್ಲ ಸ್ಪೂರ್ತಿ. ಅಂದು ರಾಮ ರಾವಣರ ಯುದ್ಧದ ಕೊನೆಯ ದಿನ. ಯುದ್ಧ ಮುಗಿದು ರಾವಣ ಸೋತು ಕೆಳಗೆ ಬಿದ್ದಿರುತ್ತಾನೆ. ಆಗ ರಾಮ ರಾವಣನ ಬಳಿ ಹೋಗಿ ‘ನೀನು ಸೋತು ಬಿದ್ದಿರುವೆ, ಹಾಗಾಗಿ ಸಾಯೋ ಮುಂಚೆ ಈ ಜಗತ್ತಿಗೆ ಏನಾದರೂ ಸಂದೇಶ ಕೊಡಬೇಕೆಂದಿದ್ದರೆ ಹೇಳು ನಾನು ಈ ಲೋಕಕ್ಕೆ ತಿಳಿಸುವೆ’ ಎನ್ನುತ್ತಾನೆ. ಅದಕ್ಕೆ ರಾವಣ ನಗುತ್ತಾ ‘ನಾನು ನಿನಗಿಂತ ಶಕ್ತಿಶಾಲಿ, ಧನವಂತ, ಅತಿ ದೊಡ್ಡ ಸೈನ್ಯ ಎಲ್ಲವೂ ಇದೆ. ಜೊತೆಗೆ ಎಲ್ಲದರಲ್ಲೂ ನಿನಗಿಂತ ಒಂದು ಕೈ ಮೇಲು; ಆದರೆ ನಿನಗೆ ಸದಾ ಬೆನ್ನೆಲುಬಾಗಿ ಕೊನೆಯವರೆಗೂ ನಿನ್ನ ಹಿಂದೆ ನಿನ್ನ ತಮ್ಮ ಲಕ್ಷ್ಮಣ ಜೊತೆಗಿದ್ದ. ಆದರೆ ನನ್ನ ತಮ್ಮ ನನ್ನ ಬಿಟ್ಟು ನನಗೆ ಮೋಸ ಮಾಡಿ ನಿನ್ನ ಹತ್ತಿರ ಬಂದ. ಅದಕ್ಕೆ ಗೆಲುವು ನಿನ್ನದಾಯಿತು. ಸೋಲು ನನ್ನ ಹೆಗಲೇರಿತು’ ಎನ್ನುತ್ತಾನೆ.
ಹೌದು ಸ್ನೇಹಿತರೆ, ನಮ್ಮ ಸಂಬಂಧಗಳೇ ಹೀಗೆ; ನಮ್ಮ ಸೋಲು ಗೆಲುವನ್ನು ನಿರ್ಧಾರ ಮಾಡುವ ಜಡ್ಜ್‍ಗಳು. ನಮ್ಮ ಬಳಿ ಎಷ್ಟೇ ಹಣ, ಸಂಪತ್ತು ಇದ್ದರೂ, ಏನೆಲ್ಲ ಇದ್ದರೂ ಸಂಬಂಧಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಅಂತಾದರಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ಈ ರಾಮ ರಾವಣರ ಯುದ್ಧದಲ್ಲಿ ಕಾಣಬಹುದು.
ನಮ್ಮ ಈ ಬದುಕು ಒಂಥರ ಹಾವು ಏಣಿ ಆಟದಂತೆ. ಯಾವಾಗ ಸೋಲು ಎದುರಾಗುತ್ತದೆಯೋ ಗೊತ್ತಿಲ್ಲ; ಅದೇ ರೀತಿ ಬದುಕಿನಲ್ಲಿ ಮೇಲೇರಲು ಏಣಿ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ. ಆದರೆ, ಇದ್ದು ಹೋಗುವ ಈ ಮೂರು ದಿನದ ಬದುಕಲ್ಲಿ ಸಂಬಂಧಗಳ ಬಗ್ಗೆ ಸರಿಯಾಗಿ ಅರಿತುಕೊಂಡು ಬದುಕಬೇಕು.

ಒಂದಿಷ್ಟು ಯಾಮಾರಿದರೂ ಬದುಕು ಸೋಲಿನ ಹಾದಿಗೆ ತಿರುಗಿ ಬಿಡುತ್ತದೆ. ಹಾಗಾಗಿ ನಮ್ಮ ಬದುಕಲ್ಲಿ ಬಂದು ಹೋಗುವ ಅದೆಷ್ಟೋ ಸಂಬಂಧಗಳು ಎಷ್ಟು ಮುಖ್ಯ ಎಂಬುದರ ಅರಿವು ನಮಗಿರಬೇಕಾದ್ದು ತೀರಾ ಅನಿವಾರ್ಯ. ಇಲ್ಲವಾದಲ್ಲಿ ನಮ್ಮ ಬದುಕು ರಾಮ ರಾವಣರ ಯುದ್ಧದಂತಾಗುತ್ತದೆ.
ಒಟ್ಟಿನಲ್ಲಿ ಬದುಕಿನ ಈ ಮೂರು ದಿನದ ಸಂತೆಯಲ್ಲಿ ಸಿಗುವ ಅದೆಷ್ಟೋ ಕನಸುಗಳು ನನಸಾಗಬೇಕಾದಲ್ಲಿ, ಅವುಗಳನ್ನು ಈಡೇರಿಸಿಕೊಳ್ಳಲು ನಮ್ಮ ಗುರಿ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಈ ಗುರಿ ತಲುಪಲು ಸಹವರ್ತಿಗಳು ಕೂಡ ಪ್ರಾಮುಖ್ಯ ಪಡೆಯುತ್ತಾರೆ.

ಪ್ರಸ್ತುತ ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡದಾಗಿ ಮಾಡಿಕೊಂಡು ಸಂಬಂಧ ಮುರಿದು ಬೀಳುತ್ತಿವೆ. ಕ್ಷುಲ್ಲಕ ಕಾರಣಗಳಿಗೆ ಅಣ್ಣ ತಮ್ಮಂದಿರು ದಾಯಾದಿಗಳಾಗುತ್ತಿದ್ದಾರೆ; ಯಾವುದೋ ತೀರಾ ಸಣ್ಣ ವಿಚಾರಕ್ಕೆ ಸ್ನೇಹಿತರು ತಮ್ಮ ಸ್ನೇಹ ಮರೆತು ಶತ್ರುಗಳಾಗುತ್ತಿದ್ದಾರೆ. ಅದೆಷ್ಟೋ ಪ್ರೇಮಿಗಳು ಅಗಲಿದ್ದಾರೆ, ಸಂಸಾರಗಳಂತೂ ವಿಚ್ಚೇದನ ಪಡೆಯುವ ಹಂತಕ್ಕೂ ಹೋಗಿವೆ. ಇವೆಲ್ಲ ಬದುಕಿನ ಸೋಲುಗಳೆ. ಏಕೆಂದರೆ ಇಲ್ಲಿ ನಮ್ಮ ಜೊತೆಯಿರಬೇಕಿದ್ದ ಪ್ರೀತಿ ಪಾತ್ರರು ಯಾರೂ ಇರುವುದಿಲ್ಲ. ಹಾಗಾಗಿ ಸೋಲು ನಮ್ಮ ಬೆನ್ನು ಹತ್ತಿರುತ್ತದೆ.
ಆದ್ದರಿಂದ ನಮ್ಮ ಜೀವನದ ಯಾನದಲ್ಲಿ ಸಿಗುವ ಯಾವುದೇ ಸಂಬಂಧಗಳನ್ನು ತೀರಾ ಕಳೆದುಕೊಳ್ಳುವ ಹಂತಕ್ಕೆ ತಂದುಕೊಳ್ಳದೆ ತಪ್ಪುಗಳನ್ನು ತಿದ್ದಿಕೊಂಡು, ಕ್ಷಮಿಸುವ ಗುಣ ಬೆಳೆಸಿಕೊಂಡು ಬದುಕನ್ನು ಗೆಲುವಿನ ಕಡೆಗೆ ಕೊಂಡೊಯ್ಯೋಣ. ಎಲ್ಲರನ್ನೂ ಗೌರವಿಸೋಣ, ಪ್ರೀತಿಸೋಣ.

(ಲಕ್ಷ್ಮೀಕಾಂತ್ ಎಲ್ ವಿ ಅವರು, ಪ್ರಥಮ ದರ್ಜೆ ಸಹಾಯಕರು
ತುಮಕೂರು ವಿಶ್ವವಿದ್ಯಾಲಯ)

Related Articles

ಪ್ರತಿಕ್ರಿಯೆ ನೀಡಿ

Latest Articles