ಹೃದಯ ವೈಶಾಲ್ಯವನ್ನು ಗಳಿಸಿದ್ದ ಅನುಭಾವಿ ವ್ಯಾಸ ಮಹರ್ಷಿಗಳು

ವ್ಯಾಸ ಮಹರ್ಷಿಗಳು ಮಹಾಜ್ಞಾನಿಗಳು. ವೇದ-ಆಗಮ-ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಮಹಾಕಾವ್ಯ ಮಹಾಭಾರತವನ್ನು ರಚಿಸಿದರು. ಹದಿನೆಂಟು ಪುರಾಣಗಳನ್ನೂ ರಚಿಸಿದ ಪುಣ್ಯಪುರುಷರು. ಬ್ರಹ್ಮಸೂತ್ರದಂಥ ಆಧ್ಯಾತ್ಮದ ಮೇರುಕೃತಿ ನಿರ್ಮಿಸಿದ ಆಚಾರ್ಯರು.

ಒಮ್ಮೆ ಅದಾವುದೋ ಕಾರ್ಯದ ನಿಮಿತ್ತ ಹೊರಟಿದ್ದರು. ಮಹರ್ಷಿಗಳು ಜ್ನಾನದೆಗುಲವೇ ನಡೆದಂತೆ ನಡೆದಿದ್ದಾರೆ. ಈಗಾಗಲೇ ಅವರ ದೇಹ 80 ವಸಂತಗಳನ್ನು ಕಂಡಿದೆ. ದೇಹ ಮುಪ್ಪಾಗಿದೆ. ದೇಹದ ಒಳಗಾದರೋ ಎಂದೆಂದೂ ಮುಪ್ಪಾಗದ ಆಧ್ಯಾತ್ಮವಿದ್ಯೆ ತುಂಬಿಕೊಂಡಿದೆ. ಬೇಸಿಗೆಯ ಬಿಸಿಲು, ದೂರದ ದಾರಿ. ಅಲ್ಲಲ್ಲಿ ದಣಿವಾರಿಸಿಕೊಳ್ಳಲೇ ಬೇಕು. ಈ ಬಾರಿ ರೈತನ ತೋಟದ ಗಿಡದಡಿ ಕುಳಿತಿದ್ದಾರೆ. ದೂರದಿಂದಲೇ ರೈತ ಇವರನ್ನು ನೋಡಿದ. ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳಲೆಂದು ಅಲ್ಲಿಗೆ ಬಂದ; ಮಹರ್ಷಿಗಳನ್ನು ಕಂಡು ನಮಸ್ಕರಿಸಿದ.

ಸಂತರಂತೆ ಕಾಣುವಿರಿ. ತಾವಾರು? ದಯವಿಟ್ಟು ಹೇಳಬೇಕೆಂದು ರೈತ ಪ್ರಾರ್ಥಿಸಿದ. ರೈತನ ಮುಗ್ಧ ಪ್ರಶ್ನೆಗೆ ಉತ್ತರಿಸುವುದು ಹೇಗೆ? “ನನಗೆ ವ್ಯಾಸ ಮಹರ್ಷಿ ಎನ್ನುತ್ತಾರೆ. ಭಗವತ್ ಕೃಪೆಯಿಂದ ಕೆಲವೊಂದು ಧರ್ಮಗ್ರಂಥಗಳನ್ನು ಬರೆದಿದ್ದೇನೆ.”

ರೈತನು 50ವರ್ಷಗಳಿಂದ ಮಹರ್ಷಿಗಳ ಹೆಸರು ಕೇಳಿದ್ದ. ಜೀವನದಲ್ಲಿ ಒಮ್ಮೆಯಾದರೂ ಅವರನ್ನು ಕಾಣಬೇಕು. ಅವರಿಂದ ನಾಲ್ಕಾರು ಹಿತೊಪದೆಶಗಳನ್ನು ಕೇಳಬೇಕೆಂದು ಹಂಬಲಿಸಿದ್ದ. ಅರಸುವ ಬಳ್ಳಿಯೇ ಕೈಗೆ ಸಿಕ್ಕಂತೆ, ಮಹರ್ಷಿಗಳು ತಾವಾಗಿಯೇ ಇವನಲ್ಲಿಗೆ ನಡೆದು ಬಂದಿದ್ದಾರೆ. ರೈತನಿಗೆ ಆದ ಸಂತಸ ಅವರ್ಣನೀಯ.

ಉದ್ದಾಗಿ ನಮಸ್ಕರಿಸುತ್ತಾ ರೈತ ಕೇಳುತ್ತಾನೆ- “ ತಾವು ನೂರಾರು ಧರ್ಮಗ್ರಂಥಗಳನ್ನು ಬರೆದಿರುವ ಪುಣ್ಯಪುರುಷರು. ನಾನೊಬ್ಬ ನಿರಕ್ಷರಿ. ಬಡ ರೈತ. ಅಷ್ಟೆಲ್ಲಾ ಓದಲು ನನಗಾಗದು. ತಮ್ಮ ಶ್ರೀಮುಖದಿಂದಲೇ ಧರ್ಮವನ್ನು ತಿಳಿದುಕೊಳ್ಳುವ ಬಯಕೆಯಾಗಿದೆ. ಆದರೆ ಎತ್ತು ಕಟ್ಟಿಬಂದಿದ್ದೇನೆ ಬೇಗ ಹೋಗಬೇಕು. ಏನಾದರೂ ಧರ್ಮೋಪದೇಶ ಮಾಡಿರಿ ಎಂದು ರೈತನು ಪುನಃ ನಮಸ್ಕರಿಸಿದ.

ಮಹರ್ಷಿಗಳು ಚಿಕಿತರಾಗಿ ನುಡಿದರು. “ಹನ್ನೆರಡು ವರ್ಷ ಹೇಳಿದರೂ ಮುಗಿಯದ ಅನುಭವ ಐದು ನಿಮಿಷದಲ್ಲಿ ಹೇಗೆ ಹೇಳಲಿ? ಅದಾಗದು!”

“ಅದು ಹೇಗೆ ಆಗುವುದಿಲ್ಲ ಮಹರ್ಷಿಗಳೇ? ನಾಲ್ಕು ಜನ ಪಂಡಿತರಿಗೆ ಉಪದೇಶ ಮಾಡಿದರಾಯಿತೆ? ಸಾಮಾನ್ಯರೂ ಧರ್ಮವನ್ನು ತಿಳಿಯಬೇಡವೇ? ಎಲ್ಲವನ್ನೂ ತೊರೆದು ಆಶ್ರಮವಾಸಿಗಳಾದ ಸಂನ್ಯಾಸಿಗಳಿಗೆ ತಾವು ವರ್ಷಾವಧಿ ಹೇಳಬಹುದು. ಆದರೆ ಸಂಸಾರದ ಹೊಣೆಯನ್ನು ಹೊತ್ತಿರುವ ನಮಗೆಲ್ಲಿ ಕೂತಿರಲಾಗುತ್ತದೆ? ಕೂತರೆ ಸಂಸಾರ ನಡೆದೀತೆ? ನಮ್ಮಂಥ ಪ್ರಾಪಂಚಿಕರೇ ಈ ಜಗತ್ತಿನಲ್ಲಿ ಹೆಚ್ಚಾಗಿರುವರು. ಹೀಗೆ ಅಧಿಕಾಂಶದಲ್ಲಿರುವ ನಮಗೆ ತಾವು ಧರ್ಮೋಪದೇಶ ಮಾಡದಿದ್ದರೆ. ತಮಗೆ ಧರ್ಮವೇ ತಿಳಿದಿಲ್ಲವೆಂದು ನಾನು ಭಾವಿಸಬೇಕಾಗುತ್ತದೆ. ಹೇಳಿ, ಬೇಗ ಹೇಳಿ, ಎತ್ತು ಕರೆಯುತ್ತಿದೆ” ಎಂದ ರೈತ ನುಡಿದ.

ಆಚಾರ್ಯರು ಕ್ಷಣ ಕಾಲ ಮೌನತಾಳಿದರು. ಅವರ ಆಯುಷ್ಯದಲ್ಲಿಯೇ ಇಂಥ ಗಟ್ಟಿ ಶಿಷ್ಯ ದೊರೆತಿರಲಿಲ್ಲ. “ಈ ಮುಗ್ಧನಿಗೆ ಧರ್ಮ ತಿಳಿದರೆ ಮಾತ್ರ ನಾನು ಬರೆದದ್ದು ಸಾರ್ಥಕವಾಗುತ್ತದೆ” ಎಂದು ಮಹರ್ಷಿಗಳ ಹೃದಯ ನುಡಿಯಿತು.

ಮಹರ್ಷಿಗಳು ಬರೀ ತಲೆ ಬೆಳೆಸಿಕೊಂಡ ಶುಷ್ಕ ಪಂಡಿತರಾಗಿರಲಿಲ್ಲ. ಹೃದಯ ವೈಶಾಲ್ಯವನ್ನು ಗಳಿಸಿದ್ದ ಅನುಭಾವಿಗಳಾಗಿದ್ದರು. ಒಂದು ಗಳಿಗೆ ಕಣ್ಣು ಮುಚ್ಚಿ ಸರ್ವಶಕ್ತ ಸರ್ವಾಂತರ್ಯಾಮಿ ಭಗವಂತನಿಗೆ ಪ್ರಾರ್ಥಿಸಿದರು. “ಇದೀಗ ನನಗೆ ಸೋಲುವ ಪ್ರಸಂಗ ಬಂದಿದೆ. ನೀನೇ ನಿಜ ನುಡಿಸು; ದಯಾನಿಧಿ ದೇವನೆ, ಸರ್ವಜ್ಞನೇ” ಎಂದರು.

ತಡವಿಲ್ಲದೆ ಅವರ ಹೃದಯ ಪ್ರೇಮಪೂರ್ಣವಾಯಿತು. ಕಣ್ಣಲ್ಲಿ ಶಾಂತಿ ಚಿಮ್ಮಿತು. ಮುಖದಿಂದ ಜ್ನಾನಗಂಗೆ ಪ್ರವಹರಿಸಿತು. ‘ಶ್ರೂಯತಾಂ ಧರ್ಮಸರ್ವಸ್ವ ಶ್ರುತ್ವಾ ಚೈವ ಅವಧಾರ್ಯತಾಂ’ “ ಕೇಳು ಧರ್ಮ ಸರ್ವಸ್ವವನ್ನು ಕೇಳಿ, ಹೃದಯವಿಟ್ಟು ಅದರಂತೆ ಆಚರಿಸು; ಮುಕ್ತನಾಗೆಂದರು.”

ರೈತನಿಗೆ ಎಲ್ಲಿಲ್ಲದ ಸಂತಸ; ನಿಜವಾಗಿಯೂ ಧರ್ಮ ಅಷ್ಟೊಂದು ಸುಲಭವೇ? ಆಶ್ಚರ್ಯದಿಂದ ಕೇಳಿದ ರೈತ. “ಒಂದು ಮಾವಿನಹಣ್ಣಿಗಾಗಿ ರೈತನು ಇಪ್ಪತ್ತು ವರ್ಷ ತಪಿಸಬೇಕು. ಅದೇ ಹಣ್ಣನ್ನು ಹರಿದು ಹಂಚಿ ಧರ್ಮಕಾರ್ಯ ನಡೆಸಲು ಎರಡು ನಿಮಿಷ ಸಾಕು. ಒಬ್ಬ ಮಗನನ್ನು ಮಾನವನನ್ನಾಗಿ ಮಾಡಲು ತಾಯಿಗೆ ಇಪ್ಪತ್ತು ವರ್ಷ ಬೇಕು. ಅದೇ ಮಾನವನನ್ನು ದೇವನನ್ನಾಗಿ ಮಾಡಲು ಸಮರ್ಥ ಗುರುವಿನ ಎರಡು ನಿಮಿಷ ಬಹಳವಾಯಿತು.” ಮಹರ್ಷಿಗಳು ಸತ್ಯ ಸಾರಿದರು.

‘ಹಾಗಾದರೆ ಬೇಗ ಹೇಳಿ ಗುರುಗಳೆ, ಕೇಳಿ ನಾನು ಧನ್ಯನಾಗಬೇಕು’ ಎಂದು ರೈತ ಮಹರ್ಷಿಗಳ ಪಾದವಿಡಿದು ಪ್ರಾರ್ಥಿಸಿದ.

‘ನಮ್ಮ ಹೃದಯ ಹೂವಾಗಬೇಕು’ ಮನದಲ್ಲಿ ಪ್ರೇಮದ ಮಕರಂದ ತುಂಬಬೇಕು. ಶತ್ರು-ಮಿತ್ರರೆನ್ನದೆ ಸಮಸ್ತ ಪ್ರಪಂಚವನ್ನು ಅದರಲ್ಲಿ ಅದ್ದಿ ತೆಗೆಯಬೇಕು. ಇದೇ ಧರ್ಮ ಸರ್ವಸ್ವ’ ಎಂದು ಮಹರ್ಷಿಗಳು ಮನದುಂಬಿ ನುಡಿದರು.

ಈ ಗುರುಗೀತೆಯನ್ನು ಕೇಳಿದಾಗ ರೈತನ ಹೃದಯವೂ ತುಂಬಿ ಬಂದಿತು. ಆನಂದ ಭಾಷ್ಪದೊಂದಿಗೆ ಗುರುಗಳಿಗೆ ಹಣೆಮಣಿದು ದೇವ ದೇವ ಮಹಾದೇವ ಧನ್ಯನಾದೆನೆಂದು ಹೂವಿನ ಹೆಜ್ಜೆಗಳನ್ನಿಡುತ್ತ ಹೊಲದತ್ತ ಹೊರಟನು. ಎತ್ತು ಕಾಣುತ್ತಲೇ ಕೈಯೊಳಗಿನ ಬಾರಕೊಲನ್ನು ಬೀಸಾಕಿದನು. ಎತ್ತು ಬಿಚ್ಚಿ ಎದೆಗವಚಿಕೊಂಡು ಪ್ರೇಮವರ್ಷಾ ಕರೆದನು. ಅಂದಿನಿಂದ ಮುಂದೆಂದೂ ಆ ರೈತ ಪ್ರಾಣಿಗಳನ್ನಾಗಲಿ, ಮನುಷ್ಯರನ್ನಾಗಲಿ ಕನಸು ಮನಸ್ಸಿನಲ್ಲಿಯೂ ದ್ವೇಷಿಸಲಿಲ್ಲ. ಬದುಕಿನುದ್ದಕ್ಕೂ ತನ್ನಂತೆ ಪರರ ಬಗೆದು ಸಕಲ ಜೀವರಾಶಿಗಳ ಸೇವೆಯನ್ನು ಮಾಡಿ ಸಂತಸನಾದ, ಮಹಾಂತನಾದ.

Related Articles

ಪ್ರತಿಕ್ರಿಯೆ ನೀಡಿ

Latest Articles