ಹೃದಯದ ಆರೋಗ್ಯಕ್ಕೆ ಗೋಡಂಬಿ

ಗೋಡಂಬಿ ಒಂದು ಅತ್ಯುತ್ತಮ ಒಣ ಫಲವಾಗಿದೆ. ಇದರಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುವ ಗುಣಗಳು ಹೇರಳವಾಗಿಯೇ ತುಂಬಿವೆ. ಗೋಡಂಬಿಯಲ್ಲಿ ಹೇರಳವಾದ ಕೊಬ್ಬಿನಂಶ, ಪ್ರೋಟೀನ್, ವಿಟಮಿನ್-ಇ, ಸೋಡಿಯಂ, ಮೆಗ್ನೆಶಿಯಂ, ಪೊಟ್ಯಾಷಿಯಂ, ಪೋಷಕ ಸತ್ವಗಳು ಅಡಕವಾಗಿವೆ. ಇದರಿಂದಾಗಿ ಹೃದಯ ಆರೋಗ್ಯ, ಗಟ್ಟಿಮುಟ್ಟಾದ ಎಲುಬು, ನರಮಂಡಲ ಮತ್ತು ಕ್ಯಾನ್ಸರ್ ನಂತಹ ರೋಗಗಳಿಂದ ರಕ್ಷಣೆ ನೀಡುತ್ತದೆ.

ಹೃದಯದ ಆರೋಗ್ಯ: ಹೃದಯದ ಆರೋಗ್ಯಕ್ಕೆ ಗೋಡಂಬಿ ತುಂಬಾನೇ ಸಹಾಯಕಾರಿ. ಗೋಡಂಬಿಯಲ್ಲಿ ದೇಹಕ್ಕೆ ಅಗತ್ಯವಿರುವ ಉತ್ತಮ ಕೊಬ್ಬು ಅಡಕವಾಗಿದೆ. ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅಂಶಗಳನ್ನು ಕಡಿಮೆ ಮಾಡಿ ಹೃದಯ ಕಾಯಿಲೆಗಳನ್ನು ತಡೆಯುತ್ತದೆ. ಇದರ ಸೇವನೆಯಿಂದಾಗಿ ಹೃದಯದ ಸ್ನಾಯುಗಳು ಬಲಗೊಳ್ಳುತ್ತದೆ. ಪ್ರತಿದಿನ 3-4 ಗೋಡಂಬಿ ಸೇವನೆ ಉತ್ತಮ ಆರೋಗ್ಯಕ್ಕೆ ಅಡಿಪಾಯ.

ಮೂಳೆ ಆರೋಗ್ಯ: ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೆಶಿಯಂ ಅಂಶವು ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದೆ. ದೇಹಕ್ಕೆ ಅಗತ್ಯವಿರುವ ಮೆಗ್ನೆಶಿಯಂ, ಪೊಟ್ಯಾಷಿಯಂ ಒದಗಿಸಿ, ಗಟ್ಟಿಮುಟ್ಟಾದ ಎಲುಬಿನ ಬೆಳವಣಿಗೆಗೆ ಸಹಕಾರಿಯಾಗಿದೆ.

ನರಗಳ ಶಕ್ತಿ ವರ್ಧಕ: ನರಗಳಲ್ಲಿ ಕ್ಯಾಲ್ಸಿಯಂನ ಅಧಿಕ ಪ್ರಮಾಣದಲ್ಲಿ ಹರಿವನ್ನು ತಡೆಹಿಡಿದು, ಅಗತ್ಯವಿರುವಷ್ಟನ್ನು ಪೂರೈಕೆ ಮಾಡಲು ಸಹಾಯಕವಾಗುತ್ತದೆ. ಇದರಲ್ಲಿರುವ ಮೆಗ್ನೆಶಿಯಂನಿಂದಾಗಿ ದೇಹದ ನರಗಳು ಸುಸ್ಥಿತಿಯಲ್ಲಿರುತ್ತವೆ. ಅಲ್ಲದೆ ಇದರ ನಿಯಮಿತವಾದ ಸೇವನೆಯಿಂದ ಮೆದುಳಿನ ನರಗಳು ಶಕ್ತಿಯುತವಾಗಿ ಕೆಲಸ ನಿರ್ವಹಿಸುವಂತಾಗುತ್ತವೆ.

ಕ್ಯಾನ್ಸರ್ ತಡೆಹಿಡಿಯುತ್ತವೆ: ಗೋಡಂಬಿಯಲ್ಲಿ ಉತ್ಕರ್ಷಣ ನಿರೋಧಕ ಶಕ್ತಿಯು ಅಧಿಕವಾಗಿದೆ. ಇದರಿಂದಾಗಿ ಕ್ಯಾನ್ಸರ್ ನಂತಹ ಕಾಯಿಲೆಗಳು ನಿಯಂತ್ರಿಸಲ್ಪಡುತ್ತವೆ. ಇದರಲ್ಲಿರುವ ವಿಟಮಿನ್-ಇ ಅಂಶದಿಂದಾಗಿ ರೋಗನಿರೋಧಕ ಶಕ್ತಿಯು ಬಲಗೊಳ್ಳುತ್ತದೆ. ಸಣ್ಣ ಪುಟ್ಟ ಕಾಯಿಲೆಗಳಿಂದ ಹಿಡಿದು ಹಲವಾರು ರೋಗಗಳು ನಿಯತ್ರಿಸಲ್ಪಡುತ್ತವೆ. ಮಹಿಳೆಯರು ನಿಯಮಿತವಾಗಿ ಗೋಡಂಬಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ತೂಕ ಇಳಿಕೆಗೆ ಸಹಾಯಕ: ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಂಶವಿದ್ದರೂ ಮಿತವಾಗಿ ಸೇವಿಸಿದಾಗ ತೂಕ ಕಡಿಮೆಯಾಗುತ್ತದೆ. ಗೋಡಂಬಿಯಲ್ಲಿರುವ ಉತ್ತಮ ಕೊಬ್ಬಿನಂಶದಿಂದಾಗಿ ಬೊಜ್ಜು ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳಿಂದ ದೂರವಿರಿಸುತ್ತದೆ. ಅಲ್ಲದೇ ಇದರ ಸೇವನೆಯಿಂದ ಅತಿಯಾಗಿ ತಿನ್ನುವ ಬಯಕೆಯು ದೂರವಾಗುತ್ತದೆ.

ರಕ್ತಹೀನತೆಯನ್ನು ತಡೆಯುತ್ತದೆ: ಗೋಡಂಬಿ ಬೀಜಗಳಲ್ಲಿ ಕಬ್ಬಿಣ ಮತ್ತು ತಾಮ್ರ ಎರಡೂ ಹೇರಳವಾಗಿದೆ. ಇದರಿಂದಾಗಿ ರಕ್ತದ ಉತ್ಪತ್ತಿ ಮತ್ತು ಪರಿಚಲನೆಯು ಸರಾಗವಾಗಿ ಸಾಗುತ್ತದೆ. ಕಬ್ಬಿಣಾಂಶದ ಕೊರತೆಯು ಪ್ರಮುಖವಾಗಿ ರಕ್ತಹೀನತೆಗೆ ಕಾರಣವಾಗಿದೆ. ನಿಮ್ಮ ದೈನಂದಿನ ಆಹಾರದ ಜೊತೆಯಲ್ಲಿ ಇದನ್ನೂ ಸೇವನೆ ಮಾಡುವುದರಿಂದ ರಕ್ತಹೀನತೆಯಿಂದ ಬಚಾವಾಗಬಹುದು.

ಸಂಗ್ರಹ: ಹೆಚ್.ಎಸ್.ರಂಗರಾಜನ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles