ವಿವಿಧೆಡೆ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ, ದಾಸೋಹ

ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ತುಮಕೂರು ಶ್ರೀ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ನಾಡಿನ ವಿವಿಧೆಡೆ ವಿವಿಧ ಸಂಘಟನೆಗಳು, ಮಠಗಳು ಹಮ್ಮಿಕೊಂಡಿವೆ. ಶ್ರೀಗಳ ಪುಣ್ಯಾರಾಧನೆಯ ದಿನವನ್ನು ದಾಸೋಹ ದಿನವನ್ನಾಗಿ ಘೋಷಿಸಬೇಕು ಎಂಬ ಆಗ್ರಹ ಭಕ್ತರದ್ದು. ಇದರ ಜತೆಗೆ ಶ್ರೀಗಳ ಕಾರ್ಯವನ್ನು ನೆನಪಿಸುವ ಸಲುವಾಗಿ ಜನವರಿ 21 ರಂದು ಮಠ, ಸಂಘ ಸಂಸ್ಥೆಗಳಿಂದ ಅನ್ನದಾಸೋಹ ನಡೆಯಲಿದೆ.

ಉಡುಪಿ: ಕಾರ್ಕಳದಲ್ಲಿ NGO ಪ್ರೆಂಡ್ಸ್ ಕಾರ್ಕಳ, ಹುಬ್ಬಳ್ಳಿ ಕ್ಯಾಂಟೀನ್, ಬಂಡಿಮಠ ಕಾರ್ಕಳ ಹಾಗೂ ಭಕ್ತಾಭಿಮಾನಿಗಳ ಸಹಯೋಗದಿಂದ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ‌ ಶಿವಯೋಗಿಗಳವರ ದ್ವಿತೀಯ ಸಂಸ್ಮರಣೋತ್ಸವದ ಅಂಗವಾಗಿ ಪೂಜೆ ಮತ್ತು ಮಧ್ಯಾಹ್ನ ಮಹಾಪ್ರಸಾದ ನಡೆಯಲಿದೆ.

ಬಳ್ಳಾರಿ: ಸಂಡೂರು ತಾಲೂಕಿನ ಎಸ್.ಬಸಾಪುರ ಗ್ರಾಮದಲ್ಲಿ ಶ್ರೀಗಳ ಎರಡನೆ ವರ್ಷದ ಪುಣ್ಯ ಸ್ಮರಣೆ ಆಚರಿಸಲಾಗುತ್ತಿದೆ. ಶ್ರದ್ಧಾ ‌ಭಕ್ತಿಗಳಿಂದ ಬಹಳ ವಿಜೃಂಭಣೆಯಿಂದ ಪರಮಪೂಜ್ಯರ ಭಾವಚಿತ್ರದ ಮೆರವಣಿಗೆ ಮತ್ತು ಮಹಾದಾಸೋಹ ನಡೆಯಲಿದೆ.

ಚಿತ್ರದುರ್ಗ: ಇಸಾಮುದ್ರ ಗ್ರಾಮ ಭರಮಸಾಗರ ಹೋಬಳಿಯಲ್ಲಿ ಪರಮಪೂಜ್ಯರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ರಾಯಚೂರು ಜಿಲ್ಲೆ: ಮಲ್ಲದಗುಡ್ಡ (ಮಸ್ಕಿ ತಾಲೂಕ್, ರಾಯಚೂರು ಜಿಲ್ಲೆ) ಗ್ರಾಮದಲ್ಲಿ ಪರಮಪೂಜ್ಯ ಡಾ. ಶ್ರೀ ‌ಶ್ರೀ‌ ಶಿವಕುಮಾರ ಮಹಾಸ್ವಾಮಿಗಳವರ ದ್ವಿತೀಯ ಸಂಸ್ಮರಣೋತ್ಸವದ ಅಂಗವಾಗಿ ಶ್ರದ್ಧಾ ಭಕ್ತಿಗಳಿಂದ ಪರಮಪೂಜ್ಯರ ಭಾವಚಿತ್ರಕ್ಕೆ ಪೂಜೆ ಹಾಗೂ ಮಹಾದಾಸೋಹ ಏರ್ಪಡಿಸಲಾಗಿದೆ. ಮಲ್ಲದಗುಡ್ಡದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮಠದ ಪುಸ್ತಕಗಳನ್ನು ವಿತರಿಸಲಾಗುವುದು.

ಮೈಸೂರು: ನಡೆದಾಡುವ ದೇವರ ದಾಸೋಹ ಭಕ್ತವೃಂದದವರಿಂದ ಜಯಚಾಮರಾಜೇಂದ್ರ ಒಡೆಯರ್ ವೃತ್ತ (ಹಾಡಿಂಜ್ ಸರ್ಕಲ್) ಅರಮನೆ ರಸ್ತೆ ಬಳಿ ಮಧ್ಯಾಹ್ನ 12 ಗಂಟೆಗೆ ದಾಸೋಹ ನಡೆಯಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles