ಸ್ವರವಚನ ನಿರ್ವಚನ

*ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ

ವಿದ್ವಾಂಸರು ಮತ್ತು ಸಂಗೀತಗಾರರು ತಮಗೆ ಒದಗಿ ಬರುವ ಬೇರೆ ಬೇರೆ ಸಂದರ್ಭಗಳಲ್ಲಿ ಮತ್ತು ವೇದಿಕೆಗಳಲ್ಲಿ ಸ್ವರವಚನಗಳನ್ನು ಹೆಚ್ಚಾಗಿ ಬಳಸಿಕೊಂಡು ಪ್ರಸಾರ ಮಾಡಬೇಕಾದ ಅಗತ್ಯತೆ ಇದೆ. ಈ ವಿಚಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 2012 ರ ಶ್ರಾವಣಮಾಸದಲ್ಲಿ ‘ಸ್ವರವಚನ ಶ್ರಾವಣ’ವೆಂಬ ಕಾರ್ಯಕ್ರಮವನ್ನು ಧಾರವಾಡದ ಮುರುಘಾಮಠದಲ್ಲಿ ಸಂಯೋಜಿಸಲಾಗಿತ್ತು.

12ನೆಯ ಶತಮಾನದ ಬಸವಣ್ಣನವರು ಆದಿಯಾಗಿ ಇತ್ತೀಚಿನ ಅನುಭಾವ ಕವಿ ಶಿಶುನಾಳ ಶರೀಫರವರೆಗಿನ 30 ಜನ ಸ್ವರವಚನಕಾರರ ಸ್ವರವಚನಗಳನ್ನು ಆಯ್ದು, ಪ್ರತಿದಿನ ಒಂದು ಸ್ವರವಚನವನ್ನು ಕುರಿತು ಒಬ್ಬರು ಶಿವಾನುಭವ ಪರಿಣತರಿಂದ ಹಾಗೂ ಸ್ವರವಚನ ನಿರ್ವಚನ ಮತ್ತು ಖ್ಯಾತ ಮತ್ತು ಉದಯೋನ್ಮುಖ ಸಂಗೀತಗಾರರಿ0ದ ಆ ಸ್ವರವಚನದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾದ ಉಪನ್ಯಾಸಗಳನ್ನು ಸಂಗ್ರಹಿಸಿದ ರೂಪವೇ “ಸ್ವರವಚನ ನಿರ್ವಚನ” ಎಂಬ ಕೃತಿ.

ಇದನ್ನು ಸಂಪಾದಿಸಿದವರು ಹಿರಿಯ ಸಾಹಿತಿಗಳಾದ ಡಾ.ವೀರಣ್ಣ ರಾಜೂರ ಅವರು. ಇದು 2013 ರಲ್ಲಿ ಶ್ರೀಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆ ಶ್ರೀಮುರುಘಾಮಠ ಧಾರವಾಡದಿಂದ ಪ್ರಕಟವಾಗಿದೆ. 142 ಪುಟದ ವಿಸ್ತಾರದಲ್ಲಿ ಅರಳಿದೆ. ಇಪ್ಪತ್ತೇರಡು ಜನ ವಿದ್ವಾಂಸರು ರಚಿಸಿದ ಇಪ್ಪತ್ತೆರಡು ಲೇಖನಗಳು ಇಲ್ಲಿ ಅರಳಿವೆ.
ಈ ಕೃತಿಯ ಪರಿವಿಡಿ ಹೀಗಿದೆ. ಸ್ವರವಚನ ಸಾಹಿತ್ಯ ಡಾ. ವೀರಣ್ಣ ರಾಜೂರ, ಬಸವಣ್ಣ-ಡಾ.ಬಸವರಾಜ ಜಗಜಂಪಿ, ಅಲ್ಲಮ ಪ್ರಭುದೇವರು-ಡಾ.ಆರ್.ಬಿ.ಚಿಲುಮಿ, ಚೆನ್ನಬಸವಣ್ಣ-ಡಾ.ಡಾ,ಎಸ್.ಆರ್.ಗಂಜಾಳ, ಅಕ್ಕಮಹಾದೇವಿ-ಡಾ.ಶಾಂತಾ ಇಮ್ರಾಪೂರ, ನೀಲಾಂಬಿಕೆ-ಡಾ.ಅನಿತಾ ಗುಡಿ, ನಿಜಗುಣಯೋಗಿ-ಡಾ.ಸಂಗಮೇಶ ಸವದತ್ತಿಮಠ, ಸಕಲೇಶ ಮಾದರಸ-ಡಾ.ಮೃತ್ಯುಂಜಯ ರುಮಾಲೆ, ಬಹುರೂಪಿ ಚೌಡಯ್ಯ-ಪ್ರೋ.ಸಿದ್ದಣ್ಣ ಲಂಗೋಟಿ(ಚಾ0ದಕವಠೆ), ಅಮುಗಿದೇವಯ್ಯ-ಡಾ.ಕಲ್ಯಾಣಮ್ಮ ಲಂಗೋಟಿ, ಸೊಡ್ಡಳ ಬಾಚರಸ-ಡಾ.ಅಂದಾನಯ್ಯ ಹಿರೇಮಠ, ನಿಜಗುಣ ಶಿವಯೋಗಿ-ಡಾ.ವ್ಹಿ.ಎಸ್.ಮಾಳಿ, ಘನಮಠ ಶಿವಯೋಗಿ-ಪ್ರೊ.ಟಿ.ವಿ.ಮಾಗಳದ, ಮುಪ್ಪಿನ ಷಡಕ್ಷರಿ-ಡಾ. ಜಯಶ್ರೀ. ಎಂ. ಹಿರೇಮಠ, ಕರಸ್ಥಲ ನಾಗಿದೇವ-ಶ್ರೀ ಆಯ್.ಆರ್.ಮಠಪತಿ, ಕೂಡಲೂರ ಬಸವಲಿಂಗ-ಡಾ.ಸುಪ್ರಿಯಾ ಮಲಶೆಟ್ಟಿ, ಶಿಶುನಾಳ ಶರೀಫ-ಪ್ರೊ. ಹಸನಬಿ ಬೀಳಗಿ, ಹಾಗಲವಾಡಿ ಮುದ್ವೀರಸ್ವಾಮಿ-ಡಾ.ಆಯ್.ಎಸ್.ಹುರಳಿ, ಇಮ್ಮುಡಿ ಮುರುಗಾ ಗುರುಸಿದ್ದ-ಡಾ.ಪುಷ್ಪಾ ಬಸನಗೌಡರ, ನೀಲಗ್ರೀವ-ಡಾ.ಸಂಗಮೇಶ ಹಂಡಗಿ, ಕಡಕೋಳ ಮಡಿವಾಳಪ್ಪ-ಡಾ.ಬಿ.ವ್ಹಿ.ಶಿರೂರ, ಗುರುಬಸವಾರ್ಯ-ಡಾ.ಆರ್.ಬಿ.ಚಿಲುಮಿ.


ಈ ಕೃತಿ ಆರಂಭದ ಲೇಖನ ‘ಸ್ವರವಚನ ಸಾಹಿತ್ಯ’ ಡಾ. ವೀರಣ್ಣ ರಾಜೂರ ಅವರು ರಚಿಸಿರುವ ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರದು. ಈ ಲೇಖನದ ಒಟ್ಟು ಆಶಯನ್ನು ಹೀಗೆ ಗ್ರಹಿಸಬಹುದು: ‘ಸ್ವರವಚನ’ವು ಪದ, ಪದನು, ಸ್ವರಪದ, ಬೆಡಗಿನ ಸ್ವರಪದ, ಅನುಭಾವಪದ, ಸ್ವರಬೊಲ್ಲಿ, ಗೀತ, ವಚನ, ರಾಗಲಲಿತ, ವಚನ, ತತ್ವಪದ ಎಂಬ ಬೇರೆಬೇರೆ ನಾಮಾಂತರಗಳಿ0ದ ಗುರುತಿಸಿಕೊಳ್ಳುತ್ತ ಬಂದಿದೆ. ‘ಸ್ವರವಚನ’ ಎಂಬುದು ‘ಸ್ವರ’ ಮತ್ತು ‘ವಚನ’ ಎಂಬ ಪದಗಳು ಸೇರಿ ಆದ ಸಮಸ್ತಪದ. ‘ಸ್ವರ’ ಎಂದರೆ ನಾದ, ಧ್ವನಿ ಎಂದು ಅರ್ಥ. ಸಂಗೀತ ಪರಿಭಾಷೆಯಲ್ಲಿ ‘ಸ್ವಕೀಯವಾಗಿ ರಂಜನೆಯನ್ನು0ಟು ಮಾಡುವುದು; ಶೃತಿಗೆ ಹೊಂದತಕ್ಕುದಾಗಿಯೂ ಅನುರಣನಾತ್ಮಕವಾಗಿಯೂ ಇರುವುದು’ ಎಂದು ಅರ್ಥೈಸಲಾಗಿದೆ. ಶೃತಿಯಿಂದ ಸ್ವರ, ಸ್ವರದಿಂದ ರಾಗ ರೂಪಿತವಾಗಿವೆ. ಈ ರಾಗಬದ್ದವಾದ ಶರಣರ ರಚನೆಯ ‘ಸ್ವರವಚನ’ ಅಂದರೆ ರಾಗ-ತಾಳ ಸಮನ್ವಿತವಾಗಿ ಹಾಡಲು ಯೋಗ್ಯವಾದ ಲಘು ಪದ್ಯಪ್ರಕಾರ ಎಂಬ ಅರ್ಥವನ್ನು ಈ ‘ಸ್ವರವಚನ’ ಪದ ಪ್ರಕಟಿಸುತ್ತದೆ ಎಂದು ಅದರ ಅರ್ಥ ವೈಚಿತ್ರವನ್ನು ಆಧಾರ ಸಹಿತ ಎಳೆಎಳೆಯಾಗಿ ಬಿಡಿಸಿ ತೋರಿದ್ದಾರೆ.


ಮುಕ್ತರೂಪದ ವಚನಗಳಿಗೆ ‘ಬೊಲ್ಲಿಯ ವಚನ’ ಎಂದು, ಸ್ವರವಚನಗಳಿಗೆ ‘ಸ್ವರಬೊಲ್ಲಿ; ಎಂದು ಕರೆಯುವುದರ ಮೂಲಕ ವಚನ ಮತ್ತು ಹಾಡುಗಳ ಭೇದವನ್ನು ಗುರುತಿಸಲು ಪ್ರಯತ್ನಿಸಿದುದೂ ಉಂಟು. ಆದರೆ ವಚನ – ಸ್ವರವಚನ ಎಂಬ ಪದಗಳಿಗಿರುವ ಸಾಮರಸ್ಯ, ಅರ್ಥ ಸಾರ್ಥಕತೆಗಳು ಅವುಗಳಿಗಿಲ್ಲ. ಕಾರಣ ಇನ್ನು ಮುಂದೆ ಮುಕ್ತಕ ರೂಪದ ಶರಣರ ರಚನೆಗಳನ್ನು ‘ವಚನ’ ಎಂದು, ಸ್ವರ ಸಹಿತವಾದ ಹಾಡುಗಳನ್ನು ‘ಸ್ವರವಚನ’ ಎಂದು ಖಚಿತವಾಗಿ ಬಳಸುವುದು ಯಥಾರ್ಥವೆನಿಸುತ್ತದೆ ಎಂದು ಸ್ಪಷ್ಟವಾಗಿ ನಿರೂಪಿಸಿದ್ದಾರೆ.


ಆರಂಭದಲ್ಲಿ ‘ಪಲ್ಲ’ ಇರುವುದು ಸ್ವರವಚನದ ಪ್ರಥಮ ಲಕ್ಷಣ. ಇಡೀ ಪದ್ಯದ ಸಾರಸಂಗ್ರಹವೆನಿಸಿದೆ. ಇದು ಪಲ್ಲ, ಪಲ್ಲವಿ, ಪಲ್ಲವ ಎಂದು ಬಳಕೆಯಾಗಿದೆ. ಇದು ಒಂದು ಪಾಠದಿಂದ ನಾಲ್ಕು ಪಾದದವರೆಗಿನ ವ್ಯಾಪ್ತಿಯನ್ನು ಪಡೆದಿದೆ. ಎರಡು ಪಾದದ ನುಡಿಗಳಿದ್ದರೆ ಒಂದು ಪಾದದ ಪಲ್ಲ, ನಾಲ್ಕು ಪಾದದ ನುಡಿಗಳಿದ್ದರೆ ಹೆಚ್ಚಾಗಿ ಎರಡು ಪಾದದ ಪಲ್ಲ, ಕ್ವಚಿತ್ತಾಗಿ ನಾಲ್ಕು ಪಾದದ ಪಲ್ಲ. ಷಟ್ಪದಿಯಾಗಿದ್ದರೆ ಅದರ ಅರ್ಧದಷ್ಟು ಅಂದರೆ ಮೂರು ಪಾದದ ಪಲ್ಲ ಇರುವುದುಂಟು. ಇದು ಹಾಡುವಾಗ ಪ್ರತಿಯೊಂದು ನುಡಿಯ ಅಂತ್ಯಕ್ಕೆ ಪುನರುಕ್ತಗೊಳ್ಳುತ್ತ ನಡೆಯುತ್ತದೆ. ಅನುಪಲ್ಲವಿ ಕಂಡುಬರುವದಿಲ್ಲವೆ0ದು ಸ್ವರವಚನದ ಸ್ವರೂಪ ಮತ್ತು ಲಕ್ಷಣವನ್ನು ಚಂದದಿ0ದ ವಿಶ್ಲೇಷಿಸಿದ್ದಾರೆ.


12ನೆಯ ಶತಮಾನದ ಶರಣರಿಂದ ಕಿರುದೊರೆಯಾಗಿ ಆರಂಭವಾದ ಸ್ವರವಚನ ವಾಹಿನಿ ಮುಂದೆ ನೂರೊಂದು ವಿರಕ್ತರ ಕಾಲದಲ್ಲಿ ಹೆದ್ದೊರೆಯಾಗಿ, ನಿಜಗುಣಾದಿಗಳ ಕಾಲಕ್ಕೆ ಮಹಾಪುರವಾಗಿ ಮುಂದುವರೆದು ಇಂದಿನವರೆಗೂ ಹರಿದುಬಂದಿದೆ. ಅದು ನಡೆದುಬಂದ ದಾರಿಯನ್ನು ಬಸವಯುಗ, ನೂರೊಂದು ವಿರಕ್ತರಯುಗ, ತೋಂಟದ ಸಿದ್ಧಲಿಂಗರಯುಗ, ತತ್ವಪದಕಾರಯುಗ ಎಂದು ನಾಲ್ಕು ಘಟ್ಟಗಳಲ್ಲಿ ವಿಭಜಿಸಿ ಸ್ವರವಚನ ಪರಂಪರೆ ವಿಶ್ಲೇಷಿಸಿರುವರು.


ಈಗ ಪ್ರಕಟವಾದುದು ಕಾಲುಭಾಗ ಮಾತ್ರ ಇನ್ನೂ ಆಗಬೇಕಾದ ಮುಕ್ಕಾಲುಭಾಗ ಕಾರ‍್ಯ ಕೈಗೂಡಲು ನೂರಾರು ಸಂಖ್ಯೆಯ ಕೈಗಳು ನಿರಂತರ ಕಾರ‍್ಯತತ್ಪರವಾಗಬೇಕಾಗಿದೆ. ವಿಶ್ವವಿದ್ಯಾಲಯ, ಸರಕಾರಿ ಪ್ರಾಚ್ಯಸಂಶೋಧನ ಸಂಸ್ಥೆಗಳು, ಖಾಸಗಿ ಹಸ್ತಪ್ರತಿ ಭಂಡಾರಗಳಲ್ಲಿ ಹಸ್ತಪ್ರತಿಗಳಲ್ಲಿ ಅಡಗಿ ಕುಳಿತ ಬಿಡಿ ಸ್ವರವಚನಗಳನ್ನು ಸಂಗ್ರಹಿಸುವ, ಕನ್ನಡನಾಡಿನ ಉದ್ದಗಲಕ್ಕೂ ಮನೆಮಠಗಳಲ್ಲಿ ಜೋಪಡಿಗಳಲ್ಲಿ ಬರೆದಿಟ್ಟ ಹಾಡುಗಳನ್ನು ಶೋಧಿಸುವ, ಜನಸಾಮಾನ್ಯರ ಬಾಯಲ್ಲಿ ಕಂಠಸ್ಥವಾಗಿ ಕುಳಿತಿರುವ ಅಸಂಖ್ಯ ಹಾಡುಗಳನ್ನು ಧ್ವನಿಮುದ್ರಿಸಿಕೊಂಡು ಶುದ್ದಗೊಳಿಸಿ ಪ್ರಕಟಿಸುವ ಕಾರ‍್ಯ ಇಂದು ತೀರ ಅಗತ್ಯವಾಗಿ ನಡೆಯಬೇಕಾಗಿದೆ. ಹಾಗಾದಾಗ ಮಾತ್ರ ಸ್ವರವಚನ ಸಾಹಿತ್ಯದ ಬೃಹತ್ತು ಮಹತ್ತು ಅರಿತಕ್ಕೆ ಬರಲು ಸಾಧ್ಯ. ಮೊದಲು ಆಕರಸಾಮಗ್ರಿ ಪ್ರಕಟವಾಗಿ ಹೊರಬಂದಾಗ, ತರುವಾಯ ಆದರ ವಿವಿಧ ನೆಲೆಯ ಅಧ್ಯಯನ ಸಾಧ್ಯವಾಗುತ್ತದೆ. ಹಾಡುಗಳ ಜೊತೆಗೆ ಧ್ವನಿ ಪರಂಪರೆಯಲ್ಲಿ ಬೆಳೆದು ಬಂದ ಅವುಗಳ ಧಾಟಿ, ರಾಗ-ತಾಳಗಳ ಸಂಗ್ರಹ ಕಾರ್ಯವೂ ಜೊತೆಯಲ್ಲಿಯೇ ನಡೆಯುವುದು ಅಗತ್ಯವಾಗಿದೆ.


ಪ್ರೊ. ಹಸನಬಿ ಬೀಳಗಿ ಅವರ ‘ಶಿಶುನಾಳ ಶರೀಫ’ ಲೇಖನದ ತಿರುಳು ಹೀಗಿದೆ. ಸೃಷ್ಟಿಯ ಪ್ರತಿಯೊಂದು ವಸ್ತುವಿನಲ್ಲಿಯೂ ಚೈತನ್ಯ ಕಂಡ ಶಿಶುನಾಳ ಶರೀಫರು, ಹಳ್ಳಿಗಾಡಿನ ಜನತೆಗೆ ವಿಶ್ವಾಸ ಹಾಗೂ ಆತ್ಮಶಕ್ತಿ ನೀಡಿದ ಸಂವೇದನಾಶೀಲ ಕವಿ. ಹಿಂದೂ ಮುಸ್ಲಿಂ ಧರ್ಮಗಳ ಸಂಗಮದ ಖಾದರಲಿಂಗ ಎಂದು ಖ್ಯಾತರಾದ ಹುಲಗೂರ ‘ಖಾದರೆಶಾ ಹಜರೇಶಾ ಖಾದರಿ’ ಗುರುಗಳ ಆಶೀರ್ವಾದದಿಂದ ಅವರು ಹುಟ್ಟಿದ್ದು ಶಿಶುನಾಳ ಗ್ರಾಮದಲ್ಲಿ 1819, ಜುಲೈ 3 ರಂದು. ತಂದೆ ಇಮಾಮಸಾಹೇಬ, ತಾಯಿ ಹಜ್ಜೂಮಾ. ತಂದೆ-ತಾಯಿಗಳು ಅವರಿಗೆ ಇಟ್ಟ ಹೆಸರು ಮಹಮ್ಮದ ಶರೀಧ. ತಂದೆಯಿ0ದ ಇಸ್ಲಾಂ ಧರ್ಮ- ಸಂಸ್ಕೃತಿಯ ಶಿಕ್ಷಣ ಪಡೆಯುತ್ತ, ಹಿಂದೂ ಪುರಾಣ, ರಾಮಾಯಣ, ಮಹಾಭಾರತಗಳನ್ನು ಪರಿಚಯಿಸಿಕೊಂಡರು.

ಸ್ಥಳೀಯ ವಿಭೂತಿ ಬಸಯ್ಯನವರಿಂದ ಶರಣತತ್ವ ಸಂಸ್ಕೃತಿ ಹಾಗೂ ವಚನಸಾಹಿತ್ಯದ ಅಭ್ಯಾಸವನ್ನು ಮಾಡುವ ಅವಕಾಶವೂ ಅವರಿಗೆ ದೊರೆಯಿತು. ಚಿಕ್ಕಂದಿನಿ0ದಲೆ ಸಮನ್ವಯ ಸಾರ ಹೀರಿಕೊಳ್ಳುತ್ತ ಬೆಳೆದ ಶರೀಫರಿಗೆ ಸ್ಮಾರ್ಥ ಬ್ರಾಹ್ಮಣ ಗೋವಿಂದಭಟ್ಟರು ಗುರುವಾಗಿ ದೊರೆತದ್ದು ಅವರ ಜೀವನದ ದಿಕ್ಕನ್ನೇ ಬದಲಿಸಿತು. ವೈದಿಕ ಜ್ಞಾನ ಸಂಸ್ಕೃತಿಯ ಸೆಲೆಯೂ ಸೇರಿಕೊಂಡಿತು. ಹೀಗಾಗಿ ಶರೀಫರು ಇಸ್ಲಾಂ, ವೀರಶೈವ, ವೈದಿಕ ಧರ್ಮ-ಸಂಸ್ಕೃತಿಯ ತ್ರಿವೇಣಿ ಸಂಗಮ ಎನಿಸಿದರು. ಶಿಶುನಾಳ ಗ್ರಾಮದಲ್ಲಿ ಓದಿ ಮುಲ್ಕೀ ಪರೀಕ್ಷೆ ಪಾಸುಮಾಡಿಕೊಂಡ ಅವರು ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ತಂದೆ-ತಾಯಿಗಳ ಒತ್ತಾಯದಿಂದ, ಗುರುವಿನ ಅನುಮತಿ ಪಡೆದು ಶರೀಫರು ಮದುವೆಯಾದರು. ನಂತರ ಹೆಣ್ಣು ಮಗುವಿನ ತಂದೆಯೂ ಆದರು. ಆದರೆ ಬಹುಬೇಗ ಹೆಂಡತಿ, ಮಗಳು ತೀರಿಕೊಂಡಾಗ, ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೊ’, ‘ಶಿಶುನಾಳಧೀಶನ ದಯದಿಂದ ಇಂದಿಗೆ ವಿಷಯದ ವ್ಯಸನವು ಸಾಕೊ’ ಎಂದು ಹೇಳುತ್ತ ಸಂಸಾರ ಬಂಧನದಿ0ದ ಮುಕ್ತರಾಗಿ, ನಿರ್ಲಿಪ್ತವಾಗಿ ಆತ್ಮೋನ್ನತಿಯ ಮಾರ್ಗ ಕಂಡುಕೊ0ಡರು. ಸಮಕಾಲೀನ ಸಿದ್ಧಪುರುಷರಾಗಿದ್ದ ಬಾಲಲೀಲಾ ಮಹಾಂತ ಶಿವಯೋಗಿಗಳು, ಗುಡಗೇರಿಯ ಕಲ್ಮಠದ ಸಂಗಮೇಶ್ವರರು, ಅಂಕಲಗಿ ಅಡವಿ ಸ್ವಾಮಿಗಳು, ನವಲಗುಂದ ನಾಗಲಿಂಗ ಸ್ವಾಮಿಗಳು, ಹುಬ್ಬಳ್ಳಿಯ ಸಿದ್ಧಾರೂಢರು ಇವರ ನಿಕಟ ಒಡನಾಟವಿರಿಸಿಕೊಂಡಿದ್ದ ಶರೀಫರು, ಸಮನ್ವಯ ತತ್ವವನ್ನು ಅರಗಿಸಿಕೊಂಡವರು. ತಮ್ಮ ಹಾಡುಗಳ ಮೂಲಕ ಅದನ್ನು ಅಭಿವ್ಯಕ್ತಿಸಿದ ಅನುಭಾವಿಗಳು, ಶರೀಫರು ‘ಕರ್ನಾಟಕದ ಕಬೀರ’ರೆಂದು ಖ್ಯಾತರಾದವರು. ಹೀಗೆ ಲೇಖಕರು ಇವರ ವ್ಯಕ್ತಿತ್ವದ ಮಜಲುಗಳನ್ನು ಸುಂದರವಾಗಿ ಅನಾವರಣಗೊಳಿಸಿದ್ದಾರೆ.


ಡಾ. ಬಿ.ವ್ಹಿ.ಶಿರೂರ ಅವರು ರಚಿಸಿದ ‘ಕಡಕೋಳ ಮಡಿವಾಳಪ್ಪ’ ಕುರಿತ ಲೇಖನ ಬಹುವಿಶಿಷ್ಟವಾಗಿ ತೋರಿದೆ. ಅದರ ಮಹತ್ವವನ್ನು ಹೀಗೆ ಗ್ರಹಿಸಬಹುದು. ಮಡಿವಾಳಪ್ಪನವರಿಗೆ ಶಾಂತಿದೊರಕದ್ದರಿAದ ತಿಮಣಗೇರಿಗುಡ್ಡಕ್ಕೆ ಬಂದು ನೆಲೆನಿಂತರು. ಶಿವನ ಸಾಕ್ಷಾತ್ಕಾರಕ್ಕಾಗಿ ೧೨ ವರುಷ ಹಗಲಿರುಳು ಚಿಂತಿಸಿದರು. ಒಂದು ವರ್ಷಕಾಲ ಬಿಟ್ಟೂಬಿಡದೆ ಅನುಷ್ಠಾನ ಮಾಡಿದರು. ‘ಶ್ರೀಶೈಲದಲ್ಲಿ ಮಹಾಂತನದರ್ಶನ’ ಎಂಬ ಕನಸು ಕಂಡು ಶ್ರೀಶೈಲದತ್ತ ನಡೆದರು. ಅಲ್ಲಿ ಪರಮಾತ್ಮನನ್ನು ಮಹಾಂತನ ರೂಪದಲ್ಲಿ ಕಂಡು ಅರಳಗುಂಡಿಗೆಗೆ ಮತ್ತೆ ಶರಣರ ದರ್ಶನಕ್ಕೆ ಆಗಮಿಸಿದರು. ಅಲ್ಲಿಯ ಅನ್ನದಾಸೋಹ, ಜ್ಞಾನದಾಸೋಹ, ಭಜನೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ. ಮೂಢನಂಬಿಕೆ, ಅನ್ಯಾಯ-ಅತ್ಯಾಚಾರ ಮೊದಲದವುಗಳ ವಿರುದ್ದ ನಿರಂತರ ಹೋರಾಟ ನಡೆಸಿದರು. ಇದನ್ನು ಮೆಚ್ಚಿಕೊಂಡವರAತೆ ದ್ವೇಷಿಸುವವರೂ ಹೆಚ್ಚಾದರೂ ತನ್ನಿಂದ ಶರಣರಿಗೆ ತೊಂದರೆಯಾಗಬಾರದೆAದು ಆ ಊರನ್ನು ಬಿಟ್ಟು ಕೋಣಸಿರಸಿಗಿ, ಜಂಬೇರಾಳಗಳಲ್ಲಿ ಸಂಚರಿಸುತ್ತ ಕೊನೆಗೆ ಜೀವರಗಿಯಿಂದ ೨೫ ಮೈಲು ದೂರದಲ್ಲಿರುವ ಕಡಕೋಳಕ್ಕೆ ಬಂದರು. ಮನಃಶಾಂತಿಗೆ ಯೋಗ್ಯಸ್ಥಲವೆಂದು ಅಲ್ಲಿಯೇ ನೆಲೆನಿಂತರು. ಅಲ್ಲಿ ಮತ್ತೆ ಅನುಭವ ಮಂಟಪವನ್ನು ಕಟ್ಟಿ, ಕಲ್ಯಾಣದ ಬಸವಣ್ಣನ ತರುವಾಯ ಎಲ್ಲ ಜಾತಿಯ ಕಾಯಕವೀರರು ಅದರಲ್ಲಿ ಭಾಗವಹಿಸುವಂತೆ ಮಾಡಿದರು. ಹೀಗೆ ಅನುಭವಮಂಟಪ ಮತ್ತೊಮ್ಮೆ ವಿಜೃಂಭಿಸಿತು. ಇದರಿಂದ ಕಡಕೋಳ ಸಗರನಾಡಿನ ಶಿಖರ, ಭಕ್ತಿ ಸಾಮ್ರಾಜ್ಯದ ಮುಕ್ತಿಧಾಮ, ಕಲ್ಯಾಣನಾಡಿನ ಕೈಲಾಸ, ಭೂಲೋಕದ ಕಲ್ಪವೃಕ್ಷ ಎಂದು ಪ್ರಸಿದ್ಧ ಪಡೆಯಿತು. ಸಾವಿರಾರು ಜನಶಿಷ್ಯರನ್ನು ಹೊಂದಿ, ಅವರಿಗೆಲ್ಲ ಧರ್ಮಬೋಧೆ ಮಾಡುತ್ತ, ಅನುಭಾವಪದಗಳನ್ನು ಹಾಡುತ್ತ ಕ್ರಿ.ಶ. ೧೮೫೫ರಲ್ಲಿ ಜೀವಂತ ಸಮಾಧಿ ಹೊಂದಿದರು ಎಂದು ಅವರ ಬದುಕಿನ ಚಿತ್ತಾರಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ಕಡಕೋಳ ಮಡಿವಾಳಪ್ಪನವರು ಸಾವಿರಾರು ಸ್ವರವಚನಗಳನ್ನು ರಚಿಸಿದ್ದಾಗಿ ತಿಳಿದು ಬರುತ್ತದೆ. ಅವುಗಳಲ್ಲಿ 1160 ಭಕ್ತಿಪದ, 1100 ತತ್ವಪದ, 1100 ಮಂಗಳಾರತಿ ಪದ, ಸಾವಿರಾರು ವಚನಗಳೂ ಸೇರಿವೆ. ಅವರೇ ತಾವು ಬರೆದ ಪದಗಳ ಸಂಖ್ಯೆ 1750 ಎಂದಿದ್ದಾರೆ. ಆದರೆ ಈಗ ದೊರೆತಿರುವ ಹಾಡುಗಳ ಸಂಖ್ಯೆ 500 ನ್ನೂ ದಾಟಿಲ್ಲ ಎಂದಿರುವರು. ಅವರ ಸ್ವರ ವಚನಗಳನ್ನು ಆಧಾರವಾಗಿ ನೀಡಿ ವಿಮರ್ಶೆ ಮಾಡಿರುವರು.
ಹೀಗೆ ಡಾ. ವೀರಣ್ಣ ರಾಜೂರ ಹಾಗೂ ಶ್ರೀ ಬಸವರಾಜ ಹೂಗಾರ ಅವರುಗಳು ಕೂಡಿಕೊಂಡು 22 ಲೇಖನಗಳನ್ನು ಸುಂದರವಾಗಿ ಹೊಂದಿಸಿ ಕೃತಿರೂಪದಲ್ಲಿ ನಾಡಿಗೆ ನೀಡಿರುವುದು ಅರ್ಥಪೂರ್ಣವೆನಿಸಿದೆ. ಇಂದಿನ ಯುವ ಬರಹಗಾರರಿಗೆ ಆಕರ ಗ್ರಂಥವಾಗಿ ಅನುಕೂಲವೆನಿಸಿದೆ.

(ಲೇಖಕರು ಉಪನ್ಯಾಸಕರು, ಬಾದಾಮಿ)

Related Articles

ಪ್ರತಿಕ್ರಿಯೆ ನೀಡಿ

Latest Articles