ಏಳೂರ ಒಡೆಯ ಯಲಗೂರು ಆಂಜನೇಯ

*ವೈ.ಬಿ.ಕಡಕೋಳ

ಕರ್ನಾಟಕದಲ್ಲಿ ಆಂಜನೇಯನಿಗೆ ಸಂಬಂಧಪಟ್ಟಂತೆ ಅನೇಕ ಐತಿಹ್ಯಗಳುಳ್ಳ ದೇವಾಲಯಗಳಿವೆ. ಅವುಗಳ ನಿರ್ಮಾಣದ ಹಿಂದೆ ಒಂದೊಂದು ದೃಷ್ಟಾಂತಗಳಿವೆ. ಅವುಗಳಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯಲಗೂರು ಪ್ರಸಿದ್ದ ಆಂಜನೇಯ ದೇವಾಲಯವೂ ಒಂದು.
ಯಲಗೂರು ಸುತ್ತಮುತ್ತ ರಾಮಾಯಣ ಕಾಲಕ್ಕೆ ಘಟಿಸದವು ಎನ್ನಲಾದ ಘಟನೆಗಳ ಸ್ಥಳಗಳಿವೆ. ಅವುಗಳೆಂದರೆ ಮಾರೀಚನು ರಾವಣನ ಆದೇಶದಂತೆ ಚಿನ್ನದ ಮಾಯಾಮೃಗವಾಗಿ ಸೀತೆಯನ್ನು ಸೆಳೆದ ಸ್ಥಳ ಚಿಮ್ಮಲಿಗೆ. ಶಬರಿಯ ನೆಲೆಯಾದ ಚಂದ್ರಗಿರಿ, ಅಳಿಲುದಿನ್ನೆ, ರಾವಣನು ಸೀತೆಯನ್ನು ಅಪಹರಿಸಿ ಲಂಕೆಗೆ ಹೋಗುತ್ತಿರಲು ಪಕ್ಷಿರಾಜನಾದ ಜಟಾಯು ರಾವಣನನ್ನು ಅಡ್ಡಗಟ್ಟಿ ಪ್ರಾಣ ನೀಡಿದ ಸ್ಥಳ ಅಡಗಟ್ಟಿ, ಮುಂತಾದವುಗಳು ರಾಮಾಯಣಕ್ಕೆ ಸಂಬ0ಧಿಸಿದ ಸ್ಥಳಗಳೆಂದೂ ನಂಬಿಕೆ.


ಇನ್ನು ಯಲಗೂರು ಏಳೂರು ಸೇರಿ ಒಬ್ಬ ಹಣಮಂತನ ನೆಲೆಯಾಗಿದೆ ಎಂಬುದನ್ನು ಉಲ್ಲೇಖಿಸುವ ಅಂದರೆ ಚಂದ್ರಗಿರ, ಅಳಿಲುದಿನ್ನೆ,ಯಲಗೂರು, ಕಾಶಿನಕು0ಟೆ, ಬೂದಿಹಾ, ಮಸೂತಿ, ನಾಗಸ0ಪಿಗೆ ಈ ಏಳು ಊರುಗಳಿಗೆ ಅಪ್ಪನಾಗಿ ಯಲಗೂರಲ್ಲಿ ಹನುಮಪ್ಪನು ನೆಲೆಸಿರುವುದು ಯಲಗೂರು ಎಂದಾಗಿದೆ. ಎಲೆಯ ಊರು ಯಲಗೂರು.
ಇಲ್ಲಿ ಹನುಮಪ್ಪನು ನೆಲೆನಿಂತ ಬಗ್ಗೆ ಕೂಡ ದೃಷ್ಟಾಂತವೊ0ದಿಗೆ. ಚಾಲುಕ್ಯರ ಒಡೆತನಕ್ಕೆ ಸೇರಿದ ಈ ಪ್ರದೇಶದಲ್ಲಿ ಪಾಳೆಯಗಾರನಾದ ನಿಪ್ಪಾಣಿಕರನು ಸರ್ವಾಧಿಕಾರಿಯಾಗಿರಲು ಈತನ ಆಕಳುಗಳು ದನಗಾಹಿಯೊಡನೆ ನಿತ್ಯವೂ ಈ ಪ್ರದೇಶದಲ್ಲಿ ಸಂಚರಿಸುತ್ತಿರಲು ಒಂದು ಆಕಳು ಹುತ್ತವೊಂದಕ್ಕೆ ಹಾಲು ಧಾರೆಯೆರೆಯುತ್ತಿತಂತೆ. ಎಲ್ಲ ಗೋವುಗಳು ಹಾಲು ಕರೆದರೆ ಒಂದು ಗೋವು ಮಾತ್ರ ಹಾಲು ಕರೆಯದಿರಲು ಕಾರಣ ಗೋಪಾಲಕನನ್ನು ಕೇಳಿದ ಪಾಳೆಗಾರನಿಗೆ ಆತನಿಂದ ಸಮರ್ಪಕ ಉತ್ತರ ಬರದಿದ್ದಾಗ ಕೋಪದಿಂದ ದಂಡಿಸಿದನ0ತೆ.
ಆ ರಾತ್ರಿ ಆತನ ಕನಸಿನಲ್ಲಿ ಆಂಜನೇಯನು ಬಂದು “ನಾನು ಹುತ್ತದಲ್ಲಿ ವಾಸಿಸುತ್ತಿದ್ದು ನಿನ್ನ ಆಕಳು ನಿತ್ಯವೂ ನನಗೆ ಹಾಲು ಕೊಡುತ್ತಿದೆ. ಅದಕ್ಕೆ ಅಮಾಯಕನಾದ ಗೋಪಾಲಕನನ್ನೇಕೆ ಶಿಕ್ಷಿಸಿದೆ? ಬೆಟ್ಟದ ಅಡಿಯಲ್ಲಿ ಗೋವಿಂದರಾಜನ ಕೆರೆಯಿದೆ. ಕೆರೆಯ ನೀರಿನಲ್ಲಿ ಅರ್ಧ ಮುಳುಗಿದ ಹಾಸುಗಲ್ಲಿನ ಒಳಭಾಗದಲ್ಲಿ ನನ್ನ ಶಿಲಾಮೂರ್ತಿ ಹುದುಗಿಕೊಂಡಿದೆ. ಅದನ್ನು ತಂದು ಹುತ್ತ ಇರುವ ಸ್ಥಳದಲ್ಲಿ ಸ್ಥಾಪಿಸಿರಿ. ನಿತ್ಯ ಪೂಜೆ ಏರ್ಪಾಡು ಮಾಡು” ಎಂದು ಸ್ವಪ್ನವಾಗಲು, ಪಾಳೆಗಾರನು ಸುತ್ತಲಿನ ಏಳು ಊರುಗಳ ಜನರ ಸಮ್ಮುಖದಲ್ಲಿ ಹುತ್ತದ ಸ್ಥಳದಲ್ಲಿ ಹನುಮಪ್ಪನನ್ನು ಪ್ರತಿಷ್ಠಾಪಿಸಿದನಂತೆ.
ಹೀಗಾಗಿ ಸುತ್ತಲಿನ ಏಳು ಊರುಗಳಲ್ಲಿ ಹನುಮಪ್ಪನ ದೇವಾಲಯಗಳು ಇಲ್ಲದಿರುವ ಕಾರಣ ಯಲಗೂರಪ್ಪನು ಏಳೂರ ಹನುಮಪ್ಪನಾಗಿ ಜನಜನಿತನಾಗಿರುವನು.

ಈ ದೇವಾಲಯವು ಯಾರಿಂದ ಯಾವಾಗ ನಿರ್ಮಾಣವಾಯಿತು ಎಂಬ ಬಗ್ಗೆ ಖಚಿತ ಆಧಾರಗಳು ದೊರೆತಿಲ್ಲ. ಮುಂಬೈ ಗೆಜೆಟಿಯರ್‌ದ ಮೂಲಕ ಈಗಿನ ದೇವಾಲಯದ ಕಟ್ಟಡವನ್ನು ನಿಡಗುಂದಿಯ ಶ್ರೀಪಾದ ದೇಸಾಯರು ಕಟ್ಟಿಸಿದರೆಂದು ಉಲ್ಲೇಖವಿರುವುದಾಗಿ, ಶಾಮರಾವ, ಬಂಡೇರಾವ, ಗಜೇ0ದ್ರಘಡ ಬರೆದಿರುವ ಯಲಗೂರೇಶ್ವರನ ಚರಿತ್ರೆ ಪುಸ್ತಕದಲ್ಲಿ ತಿಳಿಸಿರುವರು.

ಇದೇಗುಲದ ಆವರಣದಲ್ಲಿ

ದೇಗುಲದ ವಿನ್ಯಾಸ ಗಮನಿಸಿದ ಲೇಖಕರು ಕಟ್ಟಡದ ಜೀರ್ಣೋದ್ದಾರ ಮಾಡಿರಬಹುದೆಂದು ಊಹಿಸಿರುವರು. ವಿಶಾಲವಾದ ಪ್ರಾಂಗಣವುಳ್ಳ ದೇವಾಲಯದಲ್ಲಿ ರಂಗಮ0ಟಪ, ಸೂರ್ಯನಾರಾಯಣ ದೇವರ ಚಿಕ್ಕಗುಡಿ, ಗಣಪತಿ ಮೂರ್ತಿ ಇದೆ. ಗುಡಿಯ ಹಿಂದೆ ತುಲಸೀ ವೃಂದಾವನ, ಮಹಾದ್ವಾರದ ಬದಿಗಲ್ಲಿ ಎರಡು ವೀರಗಲ್ಲುಗಳಿದ್ದು ಗರ್ಭಗುಡಿಯಲ್ಲಿ ಯಲಗೂರಪ್ಪನ ಎತ್ತರವಾದ ಮೂರ್ತಿ ಇರುವುದು. ಪ್ರಾಕಾರದ ಹೊರಬದಿಯಲ್ಲಿ ಗರುಡಗಂಭವಿದ್ದು ಅದಕ್ಕೆ ಪವಾಡ ದಾಸಯ್ಯನ ಕಂಬ ಎನ್ನುವರು. ಅಲ್ಲಿಯೇ ತುಸು ಅಂತರದಲ್ಲಿ ಸಭೆ ಸಮಾರಂಭಗಳು ನಡೆಯಲು ವಿಶಾಲವಾದ ಕಟ್ಟೆಯೊಂದಿದೆ. ಇಲ್ಲಿ ಅನೇಕ ಕಾರ‍್ಯಕ್ರಮಗಳು ಜರುಗುತ್ತವೆ. ಇನ್ನು ದೇವಸ್ಥಾನದ ಹತ್ತಿರದಲ್ಲೇ ಗೋಶಾಲೆಯೊಂದಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಈ ದೇವಾಲಯಕ್ಕೆ ಒಂದು ಕೋಟಿ ರೂಪಾಯಿಗಳು ಮಂಜೂರಾಗಿದ್ದು ಇಲ್ಲಿಗೆ ಆಗಮಿಸುವ ಭಕ್ತರ ವಸತಿ ಮತ್ತು ಮೂಲ ಸೌಲಭ್ಯ ಕಲ್ಪಿಸಲು ವಿನಿಯೋಗಿಸಲಾಗುವುದೆಂದು ದೇವಾಲಯ ಸಮೀತಿಯವರು ನಿಶ್ಚಯಿಸಿದ್ದು ಕಾರ‍್ಯಗಳು ಸಾಗಿವೆ.

ದೇಗುಲದಲ್ಲಿ ನಡೆಯುವ ಸೇವೆ, ಆಚರಣೆಗಳು
ಈ ದೇವಾಲಯದಲ್ಲಿ ಪ್ರತಿ ವರ್ಷ ಮಾಘಮಾಸದ ಕೃಷ್ಣ ಪಕ್ಷದ ಮೊದಲ ಶನಿವಾರ ಮತ್ತು ರವಿವಾರಗಳಂದು ಕಾರ್ತಿಕೋತ್ಸವ ಜರುಗುತ್ತದೆ. ಈ ಸಂದರ್ಭದಲ್ಲಿ ಭಾಗಲಕೋಟೆ, ವಿಜಾಪುರ, ಸುತ್ತಲಿನ ಏಳು ಊರುಗಳಲ್ಲದೇ ನಾಡಿನ ವಿವಿಧ ಭಾಗಗಳಿಂದ ಬರುವ ಭಕ್ತ ಜನರು ಹೋಳಿಗೆ ನೈವೇದ್ಯವನ್ನು ದೇವರಿಗೆ ಅರ್ಪಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸುವರು. ಈ ಸಂದರ್ಭದಲ್ಲಿ ವಿಶೇಷ ಪೂಜೆ ಜರುಗುತ್ತವೆ. ಅಷ್ಟೇ ಅಲ್ಲದೇ ಪಲ್ಲಕ್ಕಿ ಉತ್ಸವ, ರಥೋತ್ಸವ, ಹರಿದಾಸ ಸಂಗೀತ ಕಾರ‍್ಯಕ್ರಮಗಳು, ಭಕ್ತಿ ಸಂಗೀತ, ನೃತ್ಯ ರೂಪಕಗಳು, ಹರಿದಾಸ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದವರಿಗೆ “ಶ್ರೀ ಯಲಗೂರೇಶ ಅನುಗ್ರಹ” ಪ್ರಶಸ್ತಿ ವಿತರಣೆ ಕಾರ‍್ಯಕ್ರಮಗಳು ಜರುಗುತ್ತವೆ. ಚೈತ್ರಮಾಸದ ಪ್ರತಿಪದದಿಂದ ಹುಣ್ಣಿಮೆಯವರೆಗೂ ಈ ಕ್ಷೇತ್ರದಲ್ಲಿ ರಾಮಾಯಣ ಕುರಿತ ಉಪನ್ಯಾಸ, ಭಕ್ತಿ ಸಂಗೀತ ಕಾರ‍್ಯಗಳು ಜರುಗುತ್ತವೆ. ಪ್ರತಿ ನಿತ್ಯವೂ ಒಂದಲ್ಲ ಒಂದು ಅಭಿಷೇಕ ಪೂಜೆಗಳು ಭಕ್ತ ಜನರಿಂದ ಜರುಗುವ ಜೊತೆಗೆ ಪ್ರತಿ ಶನಿವಾರ ವಿಶೇಷ ಪೂಜೆ ಮತ್ತು ಸಂಜೆ ಪಲ್ಲಕ್ಕಿ ಉತ್ಸವ ನಡೆಯುತ್ತಿದ್ದು ಈ ಭಾಗದ ಜನರು ತಾವು ಮಾಡುವ ಯಾವುದೇ ಉತ್ತಮ ಕಾರ‍್ಯಗಳಿಗೆ ಆ ಕಾರ‍್ಯ ಕೈಗೊಳ್ಳುವ ಮೊದಲು ಈ ದೇವಾಲಯಕ್ಕೆ ಬಂದು ಎಲೆ ಪೂಜೆ ಮಾಡಿಸಿ ಪ್ರಶ್ನೆ ಕೇಳುವ ಸಂಪ್ರದಾಯವಿದೆ.

ಅಂದರೆ ಇಲ್ಲಿ ಪ್ರಶ್ನೆ ಕೇಳಿದಾಗ ಹನುಮಪ್ಪನ ಬಲಭಾಗದಿಂದ ಹೂ ಬಿದ್ದರೆ ಅವರು ಕೈಗೊಳ್ಳುವ ಕೆಲಸ ಯಶಸ್ವಿಯಾಗುತ್ತದೆ ಎಂದೂ ನಂಬಿಕೆ. ಆ ಕಾರ‍್ಯ ಯಶಸ್ವಿಯಾದರೆ ಹನುಮಪ್ಪನಿಗೆ ಮಧುಪೂಜೆ ಸಲ್ಲುವ ಹರಕೆ ಕೂಡ ಹೊತ್ತು ಸಾಗುವರು.
ಈ ದೇವಾಲಯಕ್ಕೆ ಭೇಟಿ ನೀಡುವವರು ವರ್ಷದ ಯಾವುದೇ ದಿನದಲ್ಲಿ ಬಂದರೂ ವಿಶೇಷ ದರ್ಶನ ಲಭಿಸುವುದು. ಅದರಲ್ಲೂ ಮಾಘಮಾಸ ಅಥವ ಚೈತ್ರ ಪೌರ್ಣಮಿ ಸಂದರ್ಭದಲ್ಲಿ ಆಗಮಿಸಿದರೆ ಇಲ್ಲಿ ಹೆಚ್ಚಿನ ಜನದಟ್ಟಣೆಯನ್ನು ಅಂದರೆ ಜಾತ್ರೆಯ ವಾತಾವರಣವಿರುವುದು. ಒಟ್ಟಾರೆ ಏಳು ಊರುಗಳ ಒಡೆಯನಾಗಿ ಯಲಗೂರೇಶ ಯಲಗೂರಲ್ಲಿ ನೆಲೆ ನಿಂತಿದ್ದಾನೆ.

ಹೋಗುವುದು ಹೀಗೆ

ಬೆಂಗಳೂರಿನಿಂದ ವಿಜಾಪುರ 580 ಕಿ.ಮೀ ಇದ್ದು ಬಿಜಾಪುರದಿಂದ ಮುದ್ದೇಬಿಹಾಳ 83 ಕಿ.ಮೀ ಅಂತರವಿದೆ. ಆಲಮಟ್ಟಿಯ ರೈಲು ನಿಲ್ದಾಣ ಮುದ್ದೇಬಿಹಾಳಕ್ಕೆ 27 ಕಿ.ಮೀ ಹತ್ತಿರವಿದ್ದು. ಬೆಂಗಳೂರಿನಿಂದ ಬರುವವರು ಆಲಮಟ್ಟಿಯವರೆಗೂ, ಅಂದರೆ ಬಾಗಲಕೋಟೆ ಮಾರ್ಗವಾಗಿ ಆಲಮಟ್ಟಿ ತಲುಪಬೇಕು. ಆಲಮಟ್ಟಿಗೆ ಹತ್ತಿರದಲ್ಲಿ ರೈಲು ಮತ್ತು ಬಸ್ ನಿಲ್ದಾಣವಿದೆ. ಇಲ್ಲಿಂದ ಯಲಗೂರಿಗೆ ಸಾಕಷ್ಟು ವಾಹನ ಸೌಕರ‍್ಯವಿದೆ. ಆಲಮಟ್ಟಿಯು ಆಣೆಕಟ್ಟಿನ ಮೂಲಕ ಪ್ರಸಿದ್ದ ಸ್ಥಳವಾಗಿರುವ ಕಾರಣ ಆಲಮಟ್ಟಿಯಲ್ಲಿ ವಸತಿಗೃಹಗಳು ಅನುಕೂಲಕರವಾಗಿವೆ. ಆಲಮಟ್ಟಿಯಿಂದ ಯಲಗೂರು ಕೇವಲ 5 ಕಿ.ಮೀ ಅಂತರದಲ್ಲಿರುವುದರಿ0ದ ಸುಲಭವಾಗಿ ತಲುಪಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles