ಎಲ್ಲಿ ರಾಮನೋ… ಅಲ್ಲೇ ಹನುಮನು

*ವೈ.ಬಿ.ಕಡಕೋಳ

ದವನದ ಹುಣ್ಣಿಮೆ ಹನುಮ ಜಯಂತಿಯ ಸಡಗರ. ನಾಡಿನ ಎಲ್ಲ ಹನುಮಾನ್ ಮಂದಿರಗಳಲ್ಲಿ ಹನುಮಾನ್ ಹುಟ್ಟಿದ ಕ್ಷಣಗಳನ್ನು ಅವನನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಪೂಜೆ ಕಾರ್ಯಗಳು ನಡೆಯುವುದನ್ನು ಗಮನಿಸಬಹುದು. ಎಲ್ಲಿ ಹನುಮ ದೇವಾಲಯಗಳಿವೆಯೋ ಅಲ್ಲೆಲ್ಲ ಹನುಮ ಜಯಂತಿ ಆಚರಣೆ ಜರುಗುತ್ತದೆ. ಹಾಗಾದರೆ ಹನುಮ ಜನನ ತಳೆದ ಸ್ಥಳದ ನೆನಪನ್ನು ಈ ಸಂದರ್ಭದಲ್ಲಿ ಕಂಡು ಬಂದರೆ ಜನ್ಮ ಸಾರ್ಥಕವಲ್ಲವೇ.?

ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊ0ದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ.
ಹನುಮಂತನು ಕಿಷ್ಕಿಂದೆಯಲ್ಲಿ ಸುಗ್ರೀವನ ಜೊತೆಯಲ್ಲಿರುವಾಗ ಸೀತೆಯನ್ನು ಹುಡುಕಿಕೊಂಡು ಶ್ರೀರಾಮ ಅಲ್ಲಿಗೆ ಬಂದಾಗ ತನ್ನ ಸ್ವಾಮಿಯೊಡನೆ ಬೇಟಿಯಾಗುತ್ತದೆ. ಅಲ್ಲಿಂದ ಮುಂದೆ ರಾಯಾಯಣದ ಅಂತ್ಯದವರೆಗೂ ಹನುಮಂತನ ಪಾತ್ರ ತುಂಬ ಮಹತ್ವವನ್ನು ಪಡೆಯುತ್ತ ಸಾಗುವುದನ್ನು ನಾವು ಕಾಣುತ್ತೇವೆ.ರಾಮಾಯಣದ ಅಂಜನೇಯನ ಪ್ರವೇಶದ ಸಂದರ್ಭದಿಂದ ಬರುವ ಕಾಂಡವನ್ನು “ಸುಂದರಕಾಂಡ” ಎಂದು ಕರೆಯಲಾಗಿದೆ. ಸೀತಾಮಾತೆಯನ್ನು ಹುಡುಕುವ ಪ್ರತಿ ಸಂದರ್ಭಗಳೂ ಜೊತೆಗೆ ರಾಮ-ರಾವಣರ ಯುದ್ದ ಸಂದರ್ಭದಲ್ಲಿ ಮೂರ್ಛಿತನಾದ ಲಕ್ಷö್ಮಣನನನ್ನು ಬದುಕಿಸಲು ಸಂಜೀವಿನಿ ಪರ್ವತ ಹೊತ್ತು ತರುವಲ್ಲಿ, ಲಂಕೆಗೆ ಸೇತುವೆ ನಿರ್ಮಿಸುವಲ್ಲಿ, ಜೊತೆಗೆ ಯುದ್ದದಲ್ಲಿ ಗೆದ್ದಾಗ ಸುದ್ದಿಯನ್ನು ಹೊತ್ತು ಸೀತಾಮಾತೆಯಲ್ಲಿಗೆ ಹೋಗುವವರೆಗೂ ನಡೆಯುವ ಪ್ರತಿಯೊಂದು ಘಟನೆಯಲ್ಲಿಯೂ ಹನುಮಂತನ ಪಾತ್ರವಿದೆ. ಅಷ್ಟೇ ಅಲ್ಲ ಲಂಕೆಗೆ ಪ್ರವೇಶ ಮಾಡಿ ವಿಭೀಷಣನ ಮನಃಪರಿವರ್ತನೆ ಮಾಡಿ ಅವನನ್ನು ರಾಮಭಕ್ತನನ್ನಾಗಿ ಮಾಡುವಲ್ಲಿ ಹನುಮಂತನ ಪಾತ್ರ ಬಹುಮುಖ್ಯವಾದುದು. ಯುದ್ದ ಗೆದ್ದ ಮೇಲೆ ಸಣ್ಣ ಮಗುವಾಗಿ ಸೀತಾಮಾತೆಯ ತೊಡೆಯ ಮೇಲೆ ಮಲಗಿ ಅವಳಲ್ಲಿ ಮಾತೃ ಸ್ವರೂಪವನ್ನು ಪಡೆದವನು ಹನುಮಂತ.


ಶ್ರೀ ರಾಮನ ಪಟ್ಟಾಭೀಷೇಕವಾದ ಮೇಲೆ ಅರಮನೆಯಲ್ಲಿ ಘಟನೆಯೊಂದು ನಡೆಯುತ್ತದೆ.ರಾಮನು ಸುಗ್ರೀವ,ವಿಭೀಷಣ ಮುಂತಾದವರಿಗೆ ಪಟ್ಟಾಭಿಷೇಕದ ಕುರುಹಾಗಿ ತನ್ನ ಕೈಯಿಂದಲೇ ಒಂದೊಂದು ಉಡುಗೊರೆ ಕೊಡುತ್ತಾನೆ. ಆದರೆ ಹನುಮಂತನಿಗೆ ಏನನ್ನೂ ಕೊಡುವುದಿಲ್ಲ. ಅಲ್ಲಿದ್ದವರಿಗೆಲ್ಲ ಆಶ್ಚರ್ಯ. ಸೀತಾ-ರಾಮರಿಗೆ ಮಾತ್ರ ಅದರ ಹಿಂದಿನ ರಹಸ್ಯ ಗೊತ್ತಿತ್ತು. ಆದರೂ ಸೀತಾಮಾತೆ ಎಲ್ಲರೆದುರು ಇದು ತೋರಬಾರದೆಂದು ತನ್ನ ಕೊರಳಿನಲ್ಲಿದ್ದ ಬಹು ಅಮೂಲ್ಯವಾದ ರತ್ನಹಾರವೊಂದನ್ನು ಹನುಮಂತನಿಗೆ ನೀಡಿದಳು. ಭಕ್ತಿಯಿಂದ ಅದನ್ನು ಪಡೆದ ಆತ ಅದರ ಒಂದೊಂದು ಮಣಿಯನ್ನು ಕಿತ್ತು ಒಡೆದು ಅದನ್ನು ದೃಷ್ಟಿಸಿ ನೋಡತೊಡಗಿದ. ಅದನ್ನು ನೋಡುತ್ತಿದ್ದ ಕೆಲವರು “ಎಷ್ಟೇ ಆದರೂ ಅದು ಕಪಿ ತಾನೇ.? ಅದಕ್ಕೆ ನವರತ್ನ ಹಾರದ ಬೆಲೆಯೇನು ಗೊತ್ತು?” ಎಂದು ಛೇಡಿಸಿದರು.


ಆಗ ಹನುಮಂತ ಕೊಟ್ಟ ಉತ್ತರ “ತಾವೆಲ್ಲರೂ ಏಕೆ ಕೋಪಗೊಳ್ಳುವಿರಿ ? ನಾನು ಈ ಮಣಿಗಳ ಮಹತ್ವವನ್ನು ಪರೀಕ್ಷಿಸುತ್ತಿರುವೆ. ಇವುಗಳಲ್ಲಿ ಬಹಳ ಕಾಂತಿಯಿದೆ. ಇವುಗಳು ಹೆಚ್ಚು ಬೆಲೆ ಬಾಳುತ್ತವೆ. ಇವಕ್ಕೆ ಬೆಲೆ ಕಟ್ಟಲೂ ಸಾಧ್ಯವಾಗದಿರಬಹುದು. ಇವುಗಳನ್ನು ಧರಿಸುವುದರಿಂದ ಸೌಂದರ‍್ಯವೂ ಹೆಚ್ಚಬಹುದು. ನನಗೆ ಇವುಗಳಲ್ಲಿ ನನ್ನ ಹೃದಯದೊಡೆಯ ಶ್ರೀ ರಾಮ ಮಾತೆ ಸೀತಾಮಾತೆ ಇಬ್ಬರೂ ಕಾಣಿಸುತ್ತಿಲ್ಲವಲ್ಲ. ಯಾವ ವಸ್ತುವಿನ ಹೃದಯದಲ್ಲಿ ಭಗವಂತನ ದರ್ಶನವಾಗುತ್ತದೆಯೋ ಆ ವಸ್ತುವೇ ಮಹತ್ವಪೂರ್ಣವಾದುದು” ಎಂದಾಗ ಎಲ್ಲರ ಮುಖದಲ್ಲಿ ಅಚ್ಚರಿ ಮತ್ತು ಹನುಮಂತನ ಭಕ್ತಿನಿಷ್ಠೆಯ ಅರಿವಾಯಿತು.

ಹನುಮನ ಭಕ್ತಿ
ಆದರೂ ಅವನ ರಾಮನಿಷ್ಠೆ ಪರೀಕ್ಷಿಸಲು ಸವಾಲು ಎಸೆದರು. “ನಿನ್ನ ಹೃದಯದಲ್ಲಿ ಸೀತಾ-ರಾಮರಿದ್ದಾರೆಯೇ ?” ಎಂದು ಪ್ರಶ್ನಿಸಲು ತನ್ನ ಎರಡು ಕೈಗಳಿಂದ ಹೃದಯವನ್ನು ಬಗೆದು “ಸೀತಾ-ರಾಮರನ್ನು” ತೋರಿಸಲು ಎದುರಿಗಿದ್ದ ರಾಮಚಂದ್ರನು ಎದ್ದು ಬಂದು ತನ್ನ ಭಕ್ತನನ್ನು ಗಾಢವಾಗಿ ಆಲಂಗಿಸಿಕೊ0ಡನು. ಶ್ರೀ ರಾಮನ ಸ್ಪರ್ಶದಿಂದ ಅವನ ಹೃದಯ ಮೊದಲಿನಂತಾಯಿತು. ರಾಮನ ಸೇವೆಯನ್ನು ಬಹಳ ಸ್ವಾಮಿನಿಷ್ಠೆಯಿಂದ ಮಾಡಿದವನು ಹನುಮಂತ.


ರಾಮಾಯಣದ ಎಲ್ಲ ಘಟನೆಗಳ ಕೊನೆಯಲ್ಲಿ ರಾಮ ಸ್ವರ್ಗಲೋಕಕ್ಕೆ ಹೊರಟಾಗ ಎಲ್ಲರೂ ಅವನನ್ನು ಬೀಳ್ಕೊಡುವ ಕೊನೆಯಲ್ಲಿ ಹನುಮಂತನ ಸರದಿ ಬಂದಾಗ ಅವನು ರಾಮನ ಕಾಲುಗಳ ಮೇಲೆ ಬಿದ್ದು “ಸ್ವಾಮೀ ನಾನು ನಿಮ್ಮ ಚರಣಗಳಲ್ಲಿಯೇ ಇರುತ್ತೇನೆ” ಎಂದು ಪ್ರಾರ್ಥಿಸಿದನು. ಆಗ ಶ್ರೀ ರಾಮನು. “ಹನುಮಂತ ಇನ್ನು ನಾನು ನನ್ನ ಲೋಕಕ್ಕೆ ಹೋಗುತ್ತಿದ್ದೇನೆ. ಆದರೆ ನೀನು ದುಃಖ ಪಡಬೇಕಾಗಿಲ್ಲ. ನೀನು ಈ ಪ್ರಥ್ವಿಯಲ್ಲಿಯೇ ಉಳಿದು ಶಾಂತಿ, ಪ್ರೇಮ ಮತ್ತು ಜ್ಞಾನದ ಪ್ರಚಾರ ಮಾಡು, ನೀನು ಸ್ಮರಿಸಿದಾಗಲೆಲ್ಲ ನಾನು ನಿನ್ನ ಮುಂದಿರುತ್ತೇನೆ. ಎಲ್ಲಿ ನನ್ನ ಕಥೆಯು ನಡೆಯುತ್ತಿರುತ್ತದೆಯೋ ಅಲ್ಲಿ ಅಲ್ಲಿ ನೀನು ಉಪಸ್ಥಿತನಾಗಿರು” ಎಂದು ಹೇಳಿದನು.
ರಾಮನು ಪರಂಧಾಮವನ್ನೆöÊದಿದ ಮೇಲೆ ಹನುಮಂತನು ಶ್ರೀ ರಾಮ ಲೀಲೆ, ಗುಣಗಳ ಕೀರ್ತನೆ ಮಾಡುವುದು ಹಾಗೂ ಕೇಳುವ ಮೂಲಕ ರಾಮನ ಗುಣಗಾನದಲ್ಲಿ ತೊಡಗಿದ. ಆಂಜನೇಯನನ್ನು ನಂಬಿದ ಎಲ್ಲರಿಗೂ ಒಂದಲ್ಲ ಒಂದು ಪ್ರತಿಫಲಗಳು ದೊರೆಯುತ್ತ ಸಾಗಿದವು. ಎಲ್ಲಿ ರಾಮಕಥೆ ಜರುಗುತ್ತದೆಯೋ ಅಲ್ಲಿ ಹನುಮಂತನು ಭಕ್ತಿಯಿಂದ ಕೈಮುಗಿದು ಕೇಳುತ್ತಾನೆ ಎಂಬ ಮಾತಿದೆ. ಇಂದಿಗೂ ರಾಮನಾಮ ಸ್ಮರಿಸುವವರು ಹನುಮನ ಗುಣಗಾನವನ್ನು ಕೂಡ ಮಾಡುವರು.

ಶ್ರೀರಾಮನ ಮಂದಿರಗಳು ಎಲ್ಲೆಡೆ ಇರದಿರಬಹುದು. ರಾಮಭಕ್ತನಾದ ಹನುಮಂತನ ದೇಗುಲಗಳು ಇಲ್ಲದ ಊರುಗಳಿಲ್ಲ ಎಂಬ0ತೆ ಎಲ್ಲಿ ಹನುಮನ ಮಂದಿರಗಳಿವೆಯೋ ಅಲ್ಲಿ “ಜಯ ರಾಮ ಶ್ರೀ ರಾಮ ಜಯ ಜಯ ರಾಮ“ ಎಂಬ ರಾಮಮಂತ್ರ ಜಪ ಇದ್ದೇ ಇದೆ. ಹೀಗಾಗಿ ಎಲ್ಲಿ ರಾಮನೋ ಅಲ್ಲಿ ಹನುಮನು. ಎಲ್ಲಿ ಹನುಮನೋ ಅಲ್ಲಿ ರಾಮನು” ಎಂಬ ಮಾತು ಇಂದಿಗೂ ಕೂಡ ಸತ್ಯವಾಗಿ ಯುಗಯುಗ ಕಳೆದರೂ ಹನುಮನ ರೂಪದಲ್ಲಿ ಭಕ್ತರು ರಾಮನ ಭಕ್ತ ಹನುಮನಿಗೂ ಕೂಡ ತನ್ನದೇ ಆದ ಸ್ಥಾನವನ್ನು ನೀಡಿರುವುದಕ್ಕೆ ಸಾಕ್ಷಿ.


                        
                             

Related Articles

2 COMMENTS

ಪ್ರತಿಕ್ರಿಯೆ ನೀಡಿ

Latest Articles