ಸಾಲಿಗ್ರಾಮ ಹೊಂದಿದ ಈ ಹನುಮನ ದೇಗುಲಗಳನ್ನು ಒಂದೇ ದಿನದಲ್ಲಿ ದರ್ಶಿಸಿದರೆ ಪುಣ್ಯಪ್ರಾಪ್ತಿಯಾಗುವುದು

*ಶ್ರೀನಿವಾಸ ಮೂರ್ತಿ ಎನ್ ಎಸ್

ರಾಮ ಎಂದೊಡನೆಯೇ ನಮಗೆ ನೆನಪಾಗುವುದು ಹನುಮ. ರಾಮನವವಮಿ ಜೊತೆಯಲ್ಲಿ ಬರುವ ಹನುಮ ಜಯಂತಿ (ಏಪ್ರಿಲ್ 27 – ಉತ್ತರ ಭಾರತದಲ್ಲಿ ಹೆಚ್ಚಾಗಿ). ವಿಜಯನಗರ ಕಾಲದಲ್ಲಿ ವಿರಳವಾಗಿದ್ದ ಹನುಮ ದೇವಾಲಯಗಳು ನಂತರ ವ್ಯಾಪಕವಾಗಿ ರಾಜ್ಯದಲ್ಲಿ ಕಂಡು ಬಂದವು. ವ್ಯಾಸರಾಜರು ಹಲವೆಡೆ ಹನುಮನ ಸ್ಥಾಪಿಸಿದರು ಎನ್ನಲಾಗಿದ್ದು ಈಗ ಹನುಮನಿಲ್ಲದ ಊರು ಇಲ್ಲ ಎನ್ನುವಷ್ಟು ಹನುಮ ದೇವಾಲಯಗಳು ರಾಜ್ಯದಲ್ಲಿವೆ.

ಒಂದು ದಿನದಲ್ಲಿ ಸಾಲಿಗ್ರಾಮವನ್ನು ಹೊಂದಿದ ಮೂರು ಆಂಜನೇಯ ದೇವಾಲಯಗಳನ್ನ ದರ್ಶನ
ಮಾಡಿದರೆ ಹನುಮನ ಆಶಿರ್ವಾದ ಸಿಗುವುದು ಎಂಬ ನಂಬಿಕೆ ಭಕ್ತರಲ್ಲಿ ಇದೆ (ಕದರಮಂಡಲಗಿ ಕಾಂತೇಶ, ಸಾತೇನಹಳ್ಳಿ ಶಾಂತೇಶ ಮತ್ತು ಶಿಕಾರಿಪುರದ ಭ್ರಾಂತೇಶ). ಇವುಗಳಲ್ಲಿ ಶ್ರೀ ಹುಚ್ಚುರಾಯಸ್ವಾಮಿ ಎಂದೇ ಪ್ರಸಿದ್ದಿ ಪಡೆದ ಶಿಕಾರಿಪುರದ ಆಂಜನೇಯನ ದೇವಾಲಯ. ಈ ದೇವಾಲಯಗಳ ಪರಿಚಯ ಇಲ್ಲಿದೆ.

ಕದರಮಂಡಲಗಿಯ ಕಾಂತೇಶ ದೇವಾಲಯ :


ಮೂರು ತ್ರಿವಳಿ ದೇವಾಲಯಗಳಲ್ಲಿ ಒಂದಾದ ಎರಡೂ ಕಣ್ಣುಗಳಲ್ಲಿ ಸಾಲಿಗ್ರಾಮ ಹೊಂದಿರುವ ಈ
ಹನುಮ ಇರುವುದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನಲ್ಲಿ. ನೂತನವಾಗಿ ನಿರ್ಮಾಣಗೊಂಡಿರುವ
ವಿಶಾಲವಾದ ದೇವಾಲಯವಿರುವ ಇಲ್ಲಿನ ಗರ್ಭಗುಡಿಯಲ್ಲಿ ವಿಜಯನಗರ ಕಾಲಕ್ಕೆ ಸೇರಿರಬಹುದಾದ
ಹನುಮನ ಶಿಲ್ಪವಿದ್ದು ನೇರವಾಗಿ ನಿಂತಿರುವುದು ವಿಷೇಶ, ದೇವಾಲಯಕ್ಕೆ ದೊಡ್ಡದಾದ
ರಾಜಗೊಪುರವನ್ನ ನಿರ್ಮಿಸಲಾಗಿದೆ. ಕನಕದಾಸರಿಂದ ಆರಾಧನೆಗೆ ಒಳಪಟ್ಟಿದ್ದ ಈ ಮೂರ್ತಿಗೆ
ಹಲವು ಅರಸರ ಕಾಲದಲ್ಲಿ ದತ್ತಿ ನೀಡಿದ ಉಲ್ಲೇಖ ನೋಡಬಹುದು. ಇನ್ನು ಈ ಶಿಲ್ಪ ಹನುಮ, ಭೀಮ
ಹಾಗು ಮಧ್ವಾಚಾರ್ಯರಂತೆ ಗೊಚರವಾಗುವುದು ವಿಷೇಶ. ದೇವಾಲಯದಲ್ಲಿ ಆವರಣದಲ್ಲಿ ರಾಮನಪರಿವಾರದ ಶಿಲ್ಪಗಳನ್ನ ಸ್ಥಾಪಿಸಲಾಗಿದೆ. ಈ ಹನುಮನನ್ನ ಜನಮೇಜಯ ರಾಜ ಸ್ಥಾಪಿಸಿದ ಎಂದು ಸ್ಥಳೀಯ ಪುರಾಣಗಳು ಹೇಳುತ್ತದೆ.

ಇನ್ನು ಕದರಮಂಡಲಗಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಈಶ್ವರ ದೇವಾಲಯವಿದ್ದು ಇಲ್ಲಿನ
ಜಾಲಂದ್ರಗಳು, ನಂದಿ ಗಮನ ಸೆಳೆಯುತ್ತದೆ. ಇನ್ನು ದೇವಾಲಯದ ಮುಂಭಾಗದಲ್ಲಿನ ಬೃಹತ್
ಮಾಸ್ತಿ ಕಲ್ಲು ಗಮನ ಸೆಳೆಯುತ್ತದೆ. ಪಕ್ಕದಲ್ಲಿ ಬೃಹತ್ ಕಲ್ಯಾಣಿ ಇದ್ದು ವಿಶಾಲವಾದ ಕಲ್ಯಾಣ
ಮಂಟಪ ಹಾಗು ಅನ್ನ ದಾಸೋಹ ಇದೆ. ಇನ್ನು ಊರಿನಲ್ಲಿ ದುರ್ಗಾ ದೇವಾಲಯವೂ ಇದೆ.

ತಲುಪವ ಬಗ್ಗೆ : ರಾಣಿಬೆನ್ನೂರನಿಂದ ಸುಮಾರು 14 ಕಿ ಮೀ ದೂರದಲ್ಲಿದ್ದು ಬ್ಯಾಡಗಿ ರಸ್ತೆಯ ಮೂಲಕ ಹೋಗಬಹುದು.

ಸಾತೇನಹಳ್ಳೀ ಶಾಂತೇಶ ದೇವಾಲಯ:


ಮೂರು ತ್ರಿವಳಿ ದೇವಾಲಯಗಳಲ್ಲಿ ಒಂದಾದ ಈ ದೇವಾಲಯ ಹಾವೇರಿ ಜಿಲ್ಲೆಯ ಹಿರೇಕೆರೂರು
ತಾಲ್ಲೂಕಿನಲ್ಲಿದೆ. ಶಿಲ್ಪದ ವಕ್ಷ ಸ್ಥಳಲ್ಲಿ (ಎದೆಯ ಭಾಗ) ಸಾಲಿಗ್ರಾಮ ಹೊಂದಿರುವ ಈ ಶಿಲ್ಪ
ಮೂಲತಹ ಕಲ್ಯಾಣ ಚಾಲುಕ್ಯರಿಗೆ ಸೇರಿದ ದೇವಾಲಯ. ಗರ್ಭಗುಡಿ, ಅಂತರಾಳ, ನವರಂಗ ಹಾಗು
ವಿಶಾಲವಾದ ರಾಜಗೋಪುರ ಇರುವ ಇಲ್ಲಿನ ಗರ್ಭಗುಡಿಯಯಲಿ ಸುಮಾರು ಬಲಕ್ಕೆ ತಿರುಗಿರುವ
ಸುಮಾರು ಮೂರು ಅಡಿ ಎತ್ತರದ ಹನುಮನ ಶಿಲ್ಪವಿದೆ. ಇನ್ನು ದೇವಾಲಯದಲ್ಲಿ ಚಾಲುಕ್ಯ ಶೈಲಿಯ
ಸುಂದರವಾದ ನಾಲ್ಕು ಕಂಭಗಳಿದ್ದು ಎಂದಿನಂತೆ ಬಾಗಿಲುವಾಡ, ಅಂತರಾಳದ ಜಾಲಂದ್ರಗಳು,
ಲಲಾಟದಲ್ಲಿನ ಬ್ರಹ್ಮ, ಶಿವ, ಸೂರ್ಯ ಹಾಗು ಗಣಪತಿಯ ಶಿಲ್ಪಗಳು ಸುಂದರವಾಗಿದೆ. ಇನ್ನು
ವಿತಾನದಲ್ಲಿನ ಕೆತ್ತೆನೆ ಕಲಾತ್ಮಕವಾಗಿದೆ. ಇಲ್ಲಿ ಬಿಲ್ಲ ಬಾಣ ಧರಿಸಿರುವ ಸುಂದರ ವಿಷ್ಣುವಿನ ಮೂರ್ತಿ
ಇದೆ. ಈ ಶಿಲ್ಪವನ್ನು ಬಹ್ಮಣ್ಯ ತೀರ್ಥರು ಸ್ಥಾಪನೆ ಮಾಡಿದರು ಎನ್ನಲಾಗಿದೆ. ಇಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಹರಿಹರಶ್ವೇರ ದೇವಾಲಯವಿದ್ದು ಸುಂದರವಾದ ಹರಿಹರಶ್ವೇರ
ಶಿಲ್ಪವಿದೆ.

ತಲುಪುವ ಬಗ್ಗೆ : ಹಿರೇಕೆರೂರಿನಿಂದ ಸುಮಾರು 18 ಕಿ ಮೀ ದೂರದಲ್ಲಿದ್ದು ಹಂಸಭಾವಿ ಮೂಲಕ
ಹಾಗು ಹಾವೇರಿಯಿಂದ ಸುಮಾರು 35 ಕಿ ಮೀ ಇದೆ. ಕದರಮಂಡಲಗಿಯಿಂದ ಬರುವವರು
ಹಂಸಭಾವಿ ಮೂಲಕವೂ ತಲುಪಬಹುದು.

ಶಿಕಾರಿಪುರದ ಭ್ರಾಂತೇಶ ದೇವಾಲಯ :

ಮೂರು ತ್ರಿವಳಿ ದೇವಾಲಯಗಳಲ್ಲಿ ಒಂದಾದ ಮೂಗಿನಲ್ಲಿ ಸಾಲಿಗ್ರಾಮ ಹೊಂದಿರುವ ಹನುಮ ಇರುವುದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ.

ದೇವಾಲಯ ಗರ್ಭಗುಡಿ ಹಾಗು ಅಂತರಾಳ, ನವರಂಗ ಮತ್ತು ಪಡಸಾಲೆ ಹೊಂದಿದೆ. ಗರ್ಭಗುಡಿಯಲ್ಲಿ
ಮೈಸೂರು ಅರಸರ ಕಾಲಕ್ಕೆ ಸೇರಿದ ಆಂಜನೇಯನ ಶಿಲ್ಪವಿದೆ. ಇತಿಹಾಸ ಪುಟದಲಿ ಮೈಸೂರಿನ ಅರಸರು
ಇಲ್ಲಿಗೆ ಸೇವೆ ನೀಡಿದ ಉಲ್ಲ್ಲೇಖವಿದೆ. ದ್ವಾರಗಳಲ್ಲಿ ವೈಷ್ಣವ ದ್ವಾರ ಪಾಲಕರಿದ್ದು ದ್ವಾರದಲ್ಲಿ
ಗಜಲಕ್ಶ್ಮಿ ಕೆತ್ತನೆ ಇದೆ. ನವರಂಗ ಮತ್ತು ಪಡಸಾಲೆ ನಂತರ ಕಾಲದ ಸೇರ್ಪಡೆಯಾಗಿದ್ದು. ಇಲ್ಲಿ
ತಾಳಗುಂದ ಗ್ರಾಮದಲ್ಲಿ ಶಿಥಿಲವಾಗಿದ್ದ ದೇವಾಲಯದಲ್ಲಿದ್ದ ಶ್ರೀ ರಾಮ ಲಕ್ಷಣರ ಶಿಲ್ಪಗಳು ಹಾಗು
ನೂತನವಾಗಿ ನಿರ್ಮಿಸಿದ್ದ ಸೀತಾ ವಿಗ್ರಹ ಇದೆ.
ಇನ್ನು ಇಲ್ಲಿನ ಸ್ಥಳೀಯ ಪುರಾಣದಂತೆ ಶ್ರೀ ವ್ಯಾಸರಾಯರು ಇಲ್ಲಿಗೆ ಬಂದಾಗ ಇಲ್ಲಿನ ಕೆರೆಯ ದಂಡೆಯ ಮೇಲೆ ಸ್ಥಾಪಿಸಲು ಮನಸ್ಸು ಮಾಡಿದರು. ಆದರೆ ಆ ಸ್ಥಳದಲ್ಲಿ ಶ್ರೀ ಹುಚ್ಚಪ್ಪ ಒಡೆಯರ್ ಎಂಬ ಸ್ವಾಮಿಗಳು ಮಠ ನಿರ್ಮಿಸಿದ್ದರು. ವ್ಯಾಸರಾಯರು ಅವರ ಬಳಿ ವಿನಂತಿಸದಾಗೆ ನನ್ನ ಹೆಸರಿಂದ ದೇವರನ್ನುಕರೆಯುವುದಾದರೆ ಜಾಗ ನೀಡಲು ಸಿದ್ದ ಎಂದರು. ಹಾಗಾಗಿ ಅಂಜನೇಯ ದೇವರಿಗೆ ಹುಚ್ಚರಾಯ ಸ್ವಾಮಿ ಎಂಬ ಹೆಸರು ಬಂದಿತು. ನಂತರ ಕಾಲದಲಿ ಪರಕೀಯರ ದಾಳಿಯಿಂದ ಮೂರ್ತಿ ಭಿನ್ನವಾದಾಗ ಹೊಸ ಮೂರ್ತಿಯನ್ನ ಸ್ಥಾಪಿಸಲು ಯೋಚಿಸಿದರು. ಇಲ್ಲಿನ ಸ್ವಾಮಿಗೆ ಬಿದ್ದ ಕನಸಿನಂತೆ ಇಲ್ಲಿನ ಕೆರೆಯ ಬಳಿ ಸಿಕ್ಕ ಮೂರ್ತಿಯನ್ನ ಸ್ಥಾಪಿಸಲು ತಿರ್ಮಾನಿಸಲಾಯಿತು, ಆದರೆ ಈ ಮೂರ್ತಿಯ ಮೂಗು ಭಗ್ನವಾಗಿತ್ತು. ಹಾಗಾಗಿ ಸ್ವಾಮಿಯು ಪೂಜಿಸುತ್ತಿದ್ದ ಸಾಲಿಗ್ರಾಮವನ್ನು ಮೂಗಿನಲ್ಲಿ ಜೋಡಿಸಿ ಪ್ರತಿಷ್ಠಾಪಿಸಲಾಯಿತು.

ಇಲ್ಲಿ ಮೂರ್ತಿ ಸಿಕ್ಕ ಕಾರಣ ಕೆರೆಗೆ ಹುಚ್ಚರಾಯನ ಕೆರೆ ಎಂಬ ಹೆಸರು ಬಂದಿತು. ಮೂಲ ವಿಗ್ರಹ
ಭಗ್ನವಾದ ಕಾರಣ ಒಡಕಪ್ಪ ಎಂದು ಕರೆಯಲಾಗುತ್ತಿದ್ದು ಪ್ರಾಕಾರದ ಕೋಣೆಯಲ್ಲಿ ಇರಿಸಲಾಗಿದೆ.

ತಲುಪವ ಬಗ್ಗೆ : ಶಿವಮೊಗ್ಗದಿಂದ ಶಿಕಾರಿಪುರ ಸುಮಾರು 55 ಕಿ ಮೀ ದೂರದಲ್ಲಿದ್ದು ಸುಲಭವಾಗಿ
ತಲುಪಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles