ಕಲ್ಲಹಳ್ಳಿಯ ಭೂವರಾಹನಾಥಸ್ವಾಮಿ ದೇವಾಲಯ

ಮೇ 9 ರಂದು ವರಾಹ ಜಯಂತಿ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿರುವ ಕಲ್ಲಹಳ್ಳಿಯ ಅಪರೂಪದ ಭೂವರಾಹನಾಥಸ್ವಾಮಿ ದೇವಾಲಯದ ಬಗ್ಗೆ ಒಂದು ನೋಟ.

*ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನ ಹಲವು ದೇವಾಲಯಗಳು ಅರಸರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡವುಗಳೇ ಆಗಿವೆ. ಅಲ್ಲದೇ ವಿಷ್ಣುವನ್ನು ಹಲವು ರೂಪಗಳಲ್ಲಿ ಆರಾಧಿಸಿದ್ದಾರೆ. ಜತೆಗೆ ವಿಷ್ಣುದೇವರ ದಶಾವತಾರಗಳಿಗೂ ದೇಗುಲಗಳನ್ನು ನಿರ್ಮಿಸಿ ಆರಾಧಿಸುತ್ತಿದ್ದರು ಎಂಬುದಕ್ಕೆ ಅಂದಿನ ಕಾಲದಲ್ಲಿ ನಿರ್ಮಾಣಗೊಂಡ ದೇಗುಲಗಳೇ ಸಾಕ್ಷಿ.

ದಶಾವತಾರ ಸ್ವರೂಪದಲ್ಲಿಒಂದಾದ ವರಾಹಸ್ವಾಮಿಗೆ ದೇವಾಲಯಗಳು ಅಪರೂಪ. ಬಹುತೇಕ ದೇವಾಲಯಗಳ ಹೊರಭಿತ್ತಿಯಲ್ಲಿ ಕಾಣಿಸುವ ಈ ಅವತಾರದ ಶಿಲ್ಪ ಗರ್ಭಗುಡಿಯಲ್ಲಿ ಪೂಜಿಸುವುದನ್ನು ಹಲಸಿಯಲ್ಲಿ ನೊಡಿದರೆ ಭೂದೇವಿ ಸಮೇತನಾಗ ಕಾಣಿಸುವ ಅಪರೂಪದ ಶಿಲ್ಪವೊಂದು ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲ್ಲೂಕಿನಲ್ಲಿರುವ ಕಲ್ಲಹಳ್ಳಿಯಲ್ಲಿದೆ.

ಇತಿಹಾಸ ಪುಟದಲ್ಲಿ ಮೂರ್ತಿಯ ನಿರ್ಮಾಣದ ಖಚಿತ ಮಾಹಿತಿ ಇಲ್ಲದಿದ್ದರೂ ಕಲ್ಲಹಳ್ಳಿ ಇಲ್ಲಿನ
ಪ್ರಮುಖ ಅಗ್ರಹಾರವಾಗಿ ಕಾಣಿಸಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿನ 1334 ರ ಶಾಸನದಲ್ಲಿ
ಹೊಯ್ಸಳ ಮುಮ್ಮುಡಿ ಬಲ್ಲಾಳನ ಕಾಲದಲ್ಲಿ ಈ ಗ್ರಾಮವನ್ನು ದೇಮಲಪುರ ಎಂಬ
ಅಗ್ರಹಾರವನ್ನಾಗಿಸಿ ರಾಣಿ ದೇಮಲಾದೇವಿ ಹೆಸರಿನಲ್ಲಿ ರಾಜ ಗುರು ಗುಮ್ಮಟ ದೇವನಿಗೆ ದತ್ತಿ ನೀಡಿದ
ಉಲ್ಲೇಖ ನೋಡಬಹುದು. ನಂತರ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರ ಕಾಲದಲ್ಲಿ
ಸಾಕಷ್ಟು ದತ್ತಿ ಸಿಕ್ಕಿದ್ದ ಈ ದೇವಾಲಯ ಕಾಲಾಂತರದಲ್ಲಿವಿನಾಶದತ್ತ ಸಾಗಿದ್ದುಈಗ ಶಿಲ್ಪವನ್ನು
ಉಳಿಸಿಕೊಂಡು ಹೊಸತಾಗಿ ದೇವಾಲಯ ನಿರ್ಮಿಸಲಾಗಿದೆ.

ಸಂಪೂರ್ಣವಾಗಿ ನವೀಕರಣಗೊಂಡಿರುವ ಈ ದೇವಾಲಯ ವಿಶಾಲವಾದ ಗರ್ಭಗುಡಿಯನ್ನು
ಹೊಂದಿದೆ. ಉಳಿದಂತೆ ಮುಂದಿನ ವಿಶಾಲವಾದ ಮಂಟಪ ಹಾಗೂ ಶಿಖರಗಳು ಇಲ್ಲಿನ ನೂತನ
ನಿರ್ಮಾಣಗಳು. ಬೃಹತ್ ಪ್ರವೇಶದ್ವಾರ ಹೊಂದಿದ್ದು ಅಕ್ಕ ಪಕ್ಕದಲ್ಲಿ ಶಂಖ ಹಾಗೂ ಚಕ್ರದ ಕೆತ್ತನೆ
ನೋಡಬಹುದು. ಗರ್ಭಗುಡಿಯಲ್ಲಿ ಸುಮಾರು 14 ಅಡಿ ಎತ್ತರದ ಬೃಹತ್ ಶ್ರೀ ಲಕ್ಶ್ಮೀ (ಭೂದೇವಿ)
ಸಹಿತ ವರಾಹನಾಥಸ್ವಾಮಿಯ ಶಿಲ್ಪವಿದೆ. ಆಸೀನ ಭಂಗಿಯಲ್ಲಿರುವ ಈ ಶಿಲ್ಪ ಬಲಗಾಲನ್ನು ಕೆಳಗೆ ಇಟ್ಟಂತೆ ಇದ್ದು ಎಡಗಾಲಿನ ಮೇಲೆ ಶ್ರೀಲಕ್ಶ್ಮೀ ಆಸೀನಳಾಗಿದ್ದು ಎಡಗೈನಲ್ಲಿ ದೇವಿಯನ್ನು ಬಳಸಿದಂತಿದೆ. ಇನ್ನು ಕೈಗಳಲ್ಲಿ ಚಕ್ರ, ಶಂಖ ಮತ್ತು ಪದ್ಮ ಹಿಡಿದಿರುವ ಅಭಯ ಹಸ್ತ ನೋಡಬಹುದು. ಮೂರ್ತಿಯ ತಲೆಯ ಮೇಲಿನ ಕಿರೀಟ, ವರಾಹಮುಖ ಹಾಗೂ ಕಣ್ಣುಗಳು, ಮೂರ್ತಿಯ ವೈಭಕ್ಕೆ ಸಾಟಿ ಇಲ್ಲ ಎನ್ನುವಂತಿದೆ. ದೇವಾಲಯ ಹೇಮಾವತಿಯ ಎಡದಂಡೆಯ ಮೇಲೆ ಇದ್ದು ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುವುದು. ಚೈತ್ರ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಇಲ್ಲಿ ವರಾಹ ಜಯಂತಿಯನ್ನು ಆಚರಿಸಲಾಗುತ್ತದೆ.
ಹೋಗುವುದು ಹೀಗೆ: ಕೆ. ಆರ್. ಪೇಟೆ ಯಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದು ಇಲ್ಲಿನ ಪ್ರಸಿದ್ದ
ಹೊಸಹೊಳಲಿನ ಶ್ರೀ ಲಕ್ಶ್ಮೀ ನಾರಾಯಣ ದೇವಾಲಯ ನೋಡಿ ಹೋಗಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles