ಮನೆಯಲ್ಲೇ ಮಾಡಿ ನೋಡಿ ಮದ್ದೂರು ವಡೆ

ಮದ್ದೂರು ವಡೆ ಮಂಡ್ಯದಲ್ಲಿ ತುಂಬಾ ಪ್ರಸಿದ್ಧಿ ಪಡೆದಿರೋ ತಿನಿಸು. ಕರಿದ ಖಾದ್ಯ ಇದಾಗಿರುವುದರಿಂದ ಎಲ್ಲರಿಗೂ ಇಷ್ಟವಾಗುತ್ತದೆ.
ಇದನ್ನು ತಯಾರಿಸಲು ಬೇಕಾಗುವ ಸಾಮಗ್ರಿ: ಅಕ್ಕಿ ಹಿಟ್ಟು ಒಂದು ಕಪ್, ಚಿರೋಟಿ ರವೆ ಅಥವಾ ಉಪ್ಪಿಟ್ಟು ರವೆ ಅರ್ಧ ಕಪ್, ಮೈದಾ ಎರಡು ಟೀ ಚಮಚ, ಕರಿಬೇವಿನ ಸೊಪ್ಪು ಸ್ವಲ್ಪ, ಹಸಿ ಮೆಣಸಿನಕಾಯಿ ಮೂರು, ಅಚ್ಚ ಖಾರದ ಪುಡಿ ಒಂದು ಟೀ ಚಮಚ, ಒಂದು ಚಮಚ ಉಪ್ಪು, ಈರುಳ್ಳಿ ಒಂದೂವರೆ ಕಪ್, ಎಣ್ಣೆ ಕರಿಯಲು.


ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ರವೆ, ಮೈದಾವನ್ನು ಬೆಚ್ಚಗಾಗುವಷ್ಟು ಹುರಿದು ಇವುಗಳ ಜೊತೆಗೆ ಸೇರಿಸಿ. ಕರಿಬೇವು ಸೊಪ್ಪು, ಹಸಿ ಮೆಣಸಿನಕಾಯಿ ಸಣ್ಣದಾಗಿ ಹೆಚ್ಚಿಕೊಳ್ಳಿ. ಇವುಗಳನ್ನು ಹಿಟ್ಟಿನ ಜತೆಗೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಅಚ್ಚ ಖಾರದ ಪುಡಿ, ಉಪ್ಪು ಸೇರಿಸಿ. ಒಂದು ಕೈ ಬಾಣಲೆಯಲ್ಲಿ ಎರಡು ಟೀ ಚಮಚ ಎಣ್ಣೆಯನ್ನು ಬಿಸಿ ಮಾಡಿ ಮಿಶ್ರಣಕ್ಕೆ ಸೇರಿಸಿ. ಈ ಮಿಶ್ರಣಕ್ಕೆ ಚಿಕ್ಕದಾಗಿ ಹೆಚ್ಚಿಕೊಂಡ ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ನೀರು ಎಷ್ಟು ಬೇಕು ಅಷ್ಟು ಮಾತ್ರ ಸೇರಿಸಿ ಹಿಟ್ಟನ್ನು ಗಟ್ಟಿಯಾಗಿ ನಾದಿಕೊಳ್ಳಿ. ಈರುಳ್ಳಿಯಲ್ಲಿ ನೀರಿನಂಶ ಜಾಸ್ತಿ ಇರುವುದರಿಂದ ಕಡಿಮೆ ನೀರು ಸಾಕಾಗುತ್ತದೆ. ಹಿಟ್ಟನ್ನು ಚೆನ್ನಾಗಿ ನಾದಿದ ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ.
ಈ ಉಂಡೆಗಳನ್ನು ಒಂದು ಪ್ಲಾಸ್ಟಿಕ್ ಪೇಪರ್ ಅಥವಾ ಬೈಡಿಂಗ್ ಪೇಪರ್‌ನಲ್ಲಿ ರೊಟ್ಟಿ ರೀತಿ ತಟ್ಟಿ ಕೊಳ್ಳಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಜಾಸ್ತಿ ಉರಿಯಲ್ಲಿ ಬೇಯಿಸಿದರೆ ಒಳಗಡೆ ಬೇಯುವುದಿಲ್ಲ. ತಟ್ಟಿಕೊಂಡ ಹಿಟ್ಟನ್ನು ಬಾಣಲೆಯಲ್ಲಿ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ

Related Articles

ಪ್ರತಿಕ್ರಿಯೆ ನೀಡಿ

Latest Articles