ಮಹಾನ್ ಶಕ್ತಿ ಶ್ರೀ ಆದಿ ಶಂಕರಚಾರ್ಯರು

ವೈಶಾಖ ಶುದ್ಧ ಪಂಚಮಿಯಂದು ಶ್ರೀ ಶಂಕರಾಚಾರ್ಯ ಅವರು ಭುವಿಯಲ್ಲಿ ಅವತರಿಸಿದ ಪುಣ್ಯದಿನ. ತನ್ನಿಮಿತ್ತ ಸಾಂದರ್ಭಿಕ ನುಡಿನಮನ.

*ಡಾ.ಗುರುರಾಜ ಪೋಶೆಟ್ಟಿಹಳ್ಳಿ

ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶ್ರೀ ಶಂಕರಾಚಾರ್ಯರು ಮೊದಲಿಗರು. ಬೌದ್ಧರೊಂದು ಕಡೆ ಮತ್ತು ಜೈನರು ಮತ್ತೊಂದು ಕಡೆಯಿಂದ ಶೃತಿಯಲ್ಲಿ ಉಕ್ತವಾದ ಕ್ರಿಯಾಕಲಾಪಗಳ ಮೇಲೆ ಆಕ್ರಮಣ ನಡೆಸಿರುವಾಗ ವೈದಿಕ ಧರ್ಮವನ್ನು ಪುನಃ ಊರ್ಜಿತಗೊಳಿಸುವುದಕ್ಕಾಗಿ ಶೃತಿಯ ಯಥಾರ್ಥವಾದ ಅರ್ಥವನ್ನು ಜನರಿಗೆ ಸುಗಮ ಮಾರ್ಗದಲ್ಲಿ ತಿಳಿಸಲು ಶ್ರೀಶಂಕರರು, ಅವೈದಿಕ ದರ್ಶನಗಳನ್ನು ಯುಕ್ತಯುಕ್ತಾವಾಗಿ ಖಂಡಿಸಿ ಉಪನಿಷತ್ತುಗಳಲ್ಲಿ ಪ್ರತಿಪಾದಿಸಿರುವ ಆಧ್ಯಾತ್ಮಿಕ ಅದ್ವೈತ ತತ್ತ್ವದ ಪ್ರತಿಪಾದನೆ ಮಾಡಲು ಪರಮೇಶ್ವರನ ಅವತಾರಿಗಳಾಗಿ ಜನಿಸಿದರು.

ಕ್ರಿ.ಶ.788ರಲ್ಲಿ ವೈಶಾಖ ಶುಕ್ಲ ಪಂಚಮಿಯಲ್ಲಿ ಆರಿದ್ರಾ ನಕ್ಷತ್ರ ಮಿಥುನರಾಶಿಯಲ್ಲಿ ಕೇರಳ ರಾಜ್ಯದ ಕಾಲಟಿ ಎಂಬ ಗ್ರಾಮದಲ್ಲಿ ಉತ್ತಮ ವೈದಿಕ ಸಂಪ್ರದಾಯದ ನಂಬೂದರಿ ಮನೆತನದ ರ‍್ಯಾಂಬೆ, ಶಿವಗುರು ದಂಪತಿಗಳಿಗೆ ಸುಪುತ್ರನಾಗಿ ಜನಿಸಿದರು.
ಮೂರು ವರ್ಷ ತುಂಬುವುದರೊಳಗೆ ತಂದೆಯನ್ನು ಕಳೆದುಕೊಂಡು ತಾಯಿಯ ಮಮತಾಪಾಶದಲ್ಲಿ ಬೆಳೆಯುತ್ತಾ ಐದನೆಯ ವರ್ಷದಲ್ಲಿನ ಉಪನಯನ ವಿಧಿಗಳ ನಂತರ ತಾಯಿಯ ಮನವನ್ನು ಒಲಿಸಿ ಶಂಕರರು ಒಬ್ಬ ಯೋಗ್ಯ ಗುರುವನ್ನು ಹುಡುಕಿಕೊಂಡು ಹೊರಟರು. ನರ್ಮದಾ ತೀರದಲ್ಲಿ ಪ್ರಸಿದ್ಧ ಸನ್ಯಾಸಿಗಳಾದ ಗೋವಿಂದ ಭಗವತ್ಪಾದರ ಶಿಷ್ಯರಾಗಿ ವಿದ್ಯೆಯನ್ನು ಕಲಿತರು.


ಪವಾಡಗಳಂತಹ ಧಿಃಶಕ್ತಿ
ಅಲ್ಲಿ ತುಂಬಿ ಹರಿಯುತ್ತಿದ್ದ ನರ್ಮದಾ ನದಿಯ ನೀರನ್ನು ತಮ್ಮ ಸತ್ ಪ್ರಖರತೆಯಿಂದ ಕಮಂಡಲದಲ್ಲಿ ಸೆರೆ ಹಿಡಿದು ಮುಳುಗಿ ಹೋಗುತ್ತಿದ್ದ ಹಳ್ಳಿಗಳನ್ನು ಉಳಿಸಿ ರೈತರ ಆಪದ್ಭಾಂಧವರಾದರು.
ಶ್ರೀ ಭಗವತ್ಪಾದರು ಬಾಲಯೋಗಿ, ಅಪ್ರತಿಮ ಪ್ರತಿಭೆಯ ಎಳೆಯ ಬಾಲನಾಗಿ ಮಾಣಿಕ್ಯ ಮಂಗಳ ಕಾತ್ಯಾಯಿನಿ ಭಗವತಿಗೆ ಹಾಲನ್ನು ಸ್ವೀಕರಿಸುವಂತೆ ಮಾಡಿದುದಲ್ಲದೆ ಪ್ರಸಾದದ ರೂಪದಲ್ಲಿ ಬಟ್ಟಲಲ್ಲಿ ಮತ್ತೇ ಹಾಲನ್ನು ತುಂಬಿಸಿ ಕೊಡುವಷ್ಟು ಮಟ್ಟಿಗೆ ದೇವಿಯನ್ನು ಸಾಕ್ಷಾತ್ಕರಿಸಿಕೊಂಡು ನಲಿದರು. ಇನ್ನೊಮ್ಮೆ ಭಿಕ್ಷಾಟನೆಗೆ ಹೋದಾಗ ಕಡುಬಡವಳ ಮನೆಯಲ್ಲಿ ಭಿಕ್ಷೆ ನೀಡಿದ ನೆಲ್ಲಿಕಾಯಿಗೆ ಪ್ರತಿಯಾಗಿ 21 ಶ್ಲೋಕಗಳ ಕನಕಧಾರ ಸ್ತುತಿಯನ್ನು ಸ್ತುತಿಸುವುದರ ಮೂಲಕ ಆ ಮಹಾಲಕ್ಷಿö್ಮಯನ್ನೇ ಒಲಿಸಿಕೊಂಡು ಆ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳ ಸುರಿಮಳೆ ಆಗುವಂತೆ ಮಾಡಿದರು. ಮತ್ತೊಮ್ಮೆ ದಿನನಿತ್ಯದಂತೆ ತುಂಬು ಪ್ರವಾಹದ ನಿಮಿತ್ತ ಶ್ರೀಬಾಲಕೃಷ್ಣನ ದೇವಾಲಯವನ್ನು ಅರ್ಚಿಸಲಾಗದ ತನ್ನ ತಾಯಿಗೆ ತಮ್ಮ ಯೋಗಶಕ್ತಿಯ ಪ್ರಭಾವದಿಂದ ಆ ನದಿಯ ನೀರು ತಮ್ಮ ಮನೆಯ ಬಾಗಿಲಿಗೆ ಹರಿದು ಬರುವಂತೆ ಮಾಡಿ ಶ್ರೀ ಬಾಲಕೃಷ್ಣನ ಪುಟ್ಟಗುಡಿಯನ್ನು ನಿರ್ಮಿಸಿಕೊಟ್ಟರು.

ಶ್ರೀ ಆಚಾರ‍್ಯರು ಉಗ್ರಕಾಳಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ವಾಮಾಚಾರ ಪದ್ಧತಿಗಳನ್ನು ತೊಡೆದು ಹಾಕಿ ವೈದಿಕ ಪದ್ಧತಿಯಿಂದ ದೇವಿಯು ಪ್ರಸನ್ನಗೊಳಿಸಿದ ಆ ಭಗವತಿಯನ್ನು ಸಾಕ್ಷಾತ್ಕರಿಸಿಕೊಂಡರು.
ಹೀಗಿರುವಾಗ ಒಂದು ದಿನ ಗಂಗಾನದಿಗೆ ಸ್ನಾನಕ್ಕೆಂದು ಹೊರಟಿರುವಾಗ ಚಂಡಾಲನೋರ್ವನು ತನ್ನ ನಾಲ್ಕು ನಾಯಿಗಳೊಂದಿಗೆ ಎದುರಾದರು. ಆಗ ಅತನನ್ನು ಉದ್ದೇಶಿಸಿ ಶ್ರೀಗಳವರ ಶಿಷ್ಯನೋರ್ವನು “ಏ ತೊಲಗಾಚೆ” ಎಂದು ಗದರಿಸಿದನು. ಆಗ ಆತನು ಅವನನ್ನು ಉದ್ದೇಶಿಸಿ “ನೀನು ಹೇಳಿದ ಈ ಮಾತು ದೇಹಕ್ಕೋ, ಇಲ್ಲ ಆತ್ಮಕ್ಕೋ ?” ಎಂದು ಮರುಪ್ರಶ್ನಿಸಿದನು. ಮಹಾನ್ ಶಕ್ತಿ ದೇದೀಪ್ಯಮಾನ ಪ್ರತಿಭೆಯ ಶ್ರೀ ಶಂಕರರಿಗೆ ಸತ್ಯಾಸತ್ಯತೆಯ ಅರಿವಾಗಿ, ಆತನೇ ಶಂಕರನೆ0ಬ ಸತ್ಯವನ್ನು ಅರಿತು ಆತನ ಪಾದಕ್ಕೆರಗಿದರು. ಆಗ ಈಶ್ವರನ ಸಾಕ್ಷಾತ್ಕಾರವಾಯಿತು. ಪರಶಿವನು ವೈದಿಕಧರ್ಮದ ಪುನರುಜ್ಜೀವನವು ನಿನ್ನಿಂದ ಆಗಲಿ ಎಂದು ಹರಸಿ ಅದೃಶ್ಯನಾದನು. ಪವಾಡಗಳಂತೆನಿಸಿದರೂ ಈ ಘಟನೆಗಳಲ್ಲಿನ ಸಾಧನೆಗಳೆಲ್ಲವೂ ಶಂಕರರ ಶಕ್ತಿಯ ಪ್ರತಿರೂಪಗಳೇ ಆಗಿವೆ.


ಸರ್ವವೂ ಏಕವೇ
“ಅದ್ವೈತ” ಎಂದರೆ ಪ್ರಪಂಚದಲ್ಲಿ ಎರಡಿಲ್ಲ, ಎಲ್ಲವೂ ಒಂದೇ, ಎಲ್ಲವೂ ಬ್ರಹ್ಮ; ಬ್ರಹ್ಮನು ಬೇರೆ ನಾವು ಬೇರೆ ಅಲ್ಲ ಎಂಬ ತತ್ವ. ಪಾರಮಾರ್ಥಿಕವಾಗಿ ಮೇಲುಕೀಳು ಎನ್ನುವುದಿಲ್ಲ. ಎಲ್ಲವೂ ಬ್ರಹ್ಮ. ಎಲ್ಲವೂ ಪೂಜನೀಯ ಎಂದು ಹೇಳಿ, ಮನುಷ್ಯರಾದ ನಮ್ಮಲ್ಲಿ ಮೇಳುಕೀಳು ಭಾವನೆ ಇರಬಾರದು. ನಾವೆಲ್ಲರೂ ಒಂದೇ ಎನ್ನುವುದನ್ನು ಸಾರಿದರು.
ಶಂಕರಾಚಾರ್ಯರು ಸನ್ಯಾಸಿಯಾದ ಮೇಲೂ ತಮ್ಮ ತಾಯಿಯನ್ನು ಮರೆಯಲಿಲ್ಲ. ತಾಯಿಗೆ ಆರೋಗ್ಯ ಕೆಟ್ಟಿದೆ ಎಂದು ತಿಳಿದಾಗ ಕಾಲಟಿಗೆ ಮರಳಿದರು. ಅಲ್ಲಿ ಆಕೆ ಕಾಲವಾದಳು. ಸನ್ಯಾಸಿಗಳಾದರೂ ತಮ್ಮ ತಾಯಿಯ ಅಂತ್ಯಕ್ರಿಯೆ ನಡೆಸಿ ಸಂಪ್ರದಾಯದ ನಿಷ್ಠುರಕ್ಕೆ ಪಾತ್ರರಾದರು. ಶುದ್ಧವಾದ ಅದ್ವೈತ ಸಂಪ್ರದಾಯವನ್ನು ಎತ್ತಿ ಹಿಡಿದರು ಕ್ಷೀಣಿಸುತ್ತಿದ್ದ ವೈದಿಕ ಧರ್ಮಕ್ಕೆ ನವಚೈತನ್ಯವನ್ನಿತ್ತು ಅದನ್ನು ಭದ್ರವಾದ ತಳಹದಿಯ ಮೇಲೆ ಮತ್ತೆ ಸ್ಥಾಪಿಸಿವುದು ಆಚರ‍್ಯರ ಉದ್ದೇಶವಾಗಿತ್ತು. ಸಾಂಖ್ಯ, ವೈಶೇಷಿಕ, ತಾಂತ್ರಿಕಾದಿ ಮತಗಳ ಖಂಡಿಸಿ, ಅವುಗಳಲ್ಲಿದ್ದ ದೋಷಗಳನ್ನು ತೋರಿಸಿದರೇ ಹೊರತು ಹೊಸದಾಗಿ ಯಾವ ಮತವನ್ನೂ ಸ್ಥಾಪಿಸಲಿಲ್ಲ. ಯಾವ ಮತೀಯ ಚಿಹ್ನೆಯನ್ನೂ ಶಂಕರಾಚರ‍್ಯರು ಪ್ರತಿಪಾದಿಸಲಿಲ್ಲ.
ಜಗದೀಶ್ವರನಾದ ಭಗವಂತನು ಒಬ್ಬನೇ. ನಾಮರೂಪಗಳೆಲ್ಲವೂ ಭಕ್ತರ ಇಚ್ಛಾನುಗುಣವಾಗಿ ಕಲ್ಪಿತವಾದವು. ಶಿವ, ವಿಷ್ಣು, ಶಕ್ತಿ, ಗಣಪತಿ ಮುಂತಾದ ಯಾವ ದೇವತೆಯನ್ನಾದರೂ ಭಕ್ತಿಯಿಂದ ಪೂಜಿಸಬಹುದು. ಅದ್ವೈತವು ಪರಮಾರ್ಥವಾದರೂ ವ್ಯವಹಾರದಲ್ಲಿ ದೈತವೇ ಇರಬೇಕು. ಆದ್ದರಿಂದ ಕರ್ಮಾನುಷ್ಠಾನ, ದೇವತಾ ಭಕ್ತಿ ಮೊದಲಾದ ದ್ವೈತ ಮಾರ್ಗವೇ ಸಾಧಕನಿಗೆ ವಿಹಿತವಾಗಿದೆ ಎಂಬುದು ಆಚಾರ‍್ಯರ ನಿಲುವು. ಪಂಚಾಯತನ ಪೂಜಾ ಪದ್ಧತಿಯನ್ನು ತಿಳಿಸಿ ಸರ್ವಮತ ಸಮನ್ವಯವನ್ನು ಮಾಡಿದರು ಶ್ರೀ ಶಂಕರರು. ಅವರ ಅಸಾಧಾರಣ ಪರಿಶ್ರಮದಿಂದ ಈ ಭರತಖಂಡದಲ್ಲಿ ವೈದಿಕ ಮಾರ್ಗವು ಉಳಿದುಕೊಂಡಿತು.


ಯುಗಪುರುಷ ಶಂಕರಾಚಾರ್ಯ
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ್ಯಗಳು ಅರಿಷಡ್ವರ್ಗಗಳು ಎನಿಸಿವೆ. ಈ ಆರೂ ಮಾನವನಿಗೆ ಶತ್ರುಗಳು. ಅವು ನಿಶಾಚಾರರಾದ ಗೂಬೆ ಬಾವಲಿಗಳಂತಹವು. ಬೆಳಕನ್ನು ಸಹಿಸದು. ಮಾನವನ ಮನಸ್ಸು ಅಜ್ಞಾನವೆನ್ನುವ ಅಂಧಕಾರದಿ0ದ ತುಂಬಿದೆ. ಆದ್ದರಿಂದ ಆ ಆರು ಶತ್ರುಗಳು ಅದರಲ್ಲಿ ಪ್ರವೇಶಿಸುವರು. ಈ ಅಂಧಕಾರವು ಕಲ್ಲುಬೀಸಿದರೆ ಓಡಿಹೋಗದು; ಕತ್ತಿಯಿಂದ ಇರಿದರೂ, ತುಪಾಕಿಯಿಂದ ಸುಟ್ಟರೂ ಅಂತ್ಯವಾಗುವುದಿಲ್ಲ. ದೀಪವನ್ನು ಬೆಳಗಿಸಿದರೆ ಮಾತ್ರ ಅದು ನಾಶವಾಗುವುದು. ಸಾಮಾನ್ಯವಾದ ಈ ಸತ್ಯವು ಶಂಕರರು ಬೋಧಿಸುವವರೆಗೂ ಕೆಲವರಿಗೆ ತಿಳಿಯಲೇ ಇಲ್ಲ. ಶಂಕರರು ಅದ್ವೈತವನ್ನು ಬೋಧಿಸಿ, ವೇದ, ಉಪನಿಷತ್ತು, ಶಾಸ್ತçಗಳನ್ನು ಏಕಗ್ರೀವವಾಗಿ ಅಂಗೀಕರಿಸಿದರೆ ಅದೊಂದೇ ಸರಿಯಾದ ಮಾರ್ಗವೆಂದು ತಿಳಿಸಿ ಹೇಳಿದರು. ಜೀವನ, ಈಶ್ವರನು ಒಂದೇ, ಒಬ್ಬರೇ ವಿನಾ ಇಬ್ಬರಲ್ಲ ಎಂದು ಹೇಳುವ ಮತವೇ ಅದ್ವೈತ ಮತ.
ಶಂಕರರು ಚಿಕ್ಕಂದಿನಲ್ಲಿಯೇ ವಿಗ್ರಹಾರಾಧನೆಯನ್ನು ಮಾಡಿ, ಸಗುಣೋಪಾಸನೆಯ ಮಹಿಮೆಯನ್ನು ತಿಳಿದುಕೊಂಡಿದ್ದವರು. ಆದ್ದರಿಂದಲೇ ತಮ್ಮ ಜೀವಿತದ ಚರಮ ಭಾಗದಲ್ಲಿ ಸಗುಣೋಪಾಸನೆಯನ್ನು ಕೆಲವರಿಗೆ ಉಪದೇಶಿಸಿದರು.
ಶಂಕರರು ಲೋಕಕ್ಕೆ ವೈರಾಗ್ಯವನ್ನು ಬೋಧಿಸಲೆಳಿಸಿ, ಅದಕ್ಕೆ ಅರ್ಹತೆಯನ್ನುಗಳಿಸಲು ತಾವು ಸನ್ಯಾಸವನ್ನು ಸ್ವೀಕರಿಸಬೇಕೆಂದು ನಿಶ್ವಯಿಸಿಕೊಂಡರು. ಸನ್ಯಾಸ ಸ್ವೀಕಾರಕ್ಕೆ ತಾಯಿಯ ಅನುಮತಿ ಬೇಕು. ತನ್ನ ತಾಯಿಗೆ ತಾನೊಬ್ಬನೇ ಮಗನಾದ್ದರಿಂದ ಆಕೆ ಏಕಪುತ್ರ ಪ್ರೇಮಾತಿಶಯದಿಂದ ಸಮ್ಮತಿಸಲಾರಳೆಂದುಕೊ0ಡು ಒಂದು ಉಪಾಯವನ್ನು ಮಾಡಿದರು. ಒಂದು ದಿನ ತಮ್ಮ ಮನೆಯ ಪಕ್ಕದಲ್ಲೆ ಇದ್ದ ಪೂರ್ಣಾ ನದಿಯಲ್ಲಿ ಸ್ನಾನ ಮಾಡುತ್ತಾ, “ಅಮ್ಮಾ! ನನ್ನ ಕಾಲನ್ನು ಮೊಸಳೆ ಹಿಡಿದುಕೊಂಡಿದೆ” ಎಂದು ಜೋರಾಗಿ ಕಿರುಚಿದರು. ಅದು ನಿಜವೇ, ಪೂರ್ವದಲ್ಲಿ ಗಜೇಂದ್ರನ ಕಾಲನ್ನು ಹಿಡಿದುಕೊಂಡಿತು. ಆದರೆ ತನನ್ನು ನಿಜವಾಗಿ ಹಿಡಿದುಕೊಂಡಿದ್ದು ವಿಷಯಗಳ ಆಸೆಯನ್ನೇ ಹೊರತು ಮೊಸಳೆಯಲ್ಲ. ಅದನ್ನು ಶಂಕರರು ಆ ವಿಧವಾಗಿ ಕಾಣುವಂತೆ ಮಾಡಿದರು. ಕುಮಾರನ ಕೂಗನ್ನು ಕೇಳಿ ತಾಯಿ ಓಡಿ ಬಂದು ತನ್ನ ಮಗನಿಗೆ ಸಂಭವಿಸಿರುವ ವಿಪತ್ತನ್ನು ನೋಡಿ ಅಳತೊಡಗಿದಳು. ಆಗ ಶಂಕರರು, “ಅಮ್ಮಾ! ನಾನು ಸನ್ಯಾಸ ದೀಕ್ಷೆವಹಿಸಲು ನೀನು ಅನುಮತಿ ಕೊಟ್ಟ ಹೊರತು ಈ ಮೊಸಳೆ ನನ್ನ ಕಾಲು ಬಿಡುವುದಿಲ್ಲ” ಎಂದರು.

ಅದೂ ನಿಜವೇ. ಪ್ರಪಂಚ ಸಂಬ0ಧವನ್ನು ಬಿಡಿಸಿಕೊಳ್ಳುವುದು, ಬಂಧನದಿ0ದ ತನ್ನನ್ನೂ ತಾನು ಮುಕ್ತಿಗೊಳಿಸಿಕೊಳ್ಳುವುದು, ಸನ್ಯಾಸಿಯಾಗಿಯಾದರೂ ಸರಿ, ತನ್ನ ಮಗನು ಜೀವಂತವಾಗಿದ್ದರೆ ಸಾಕು ಎಂದು ಶಂಕರರ ತಾಯಿ ಅನುಮತಿ ಇತ್ತಳು. ತಕ್ಷಣವೇ ಮೊಸಳೆ ಹಿಡಿತವನ್ನು ಬಿಟ್ಟು ಅಂತರ್ಧಾನವಾಯಿತು. ಶಂಕರರು ಮೋಕ್ಷ ರಹಸ್ಯವನ್ನು ತಿಳಿಸುವ ಗುರುವನ್ನು ಹುಡುಕಿಕೊಂಡು ಆ ನದಿಯ ದಡದಿಂದ ಹಾಗೇ ಹೊರಟು ಹೋದರು. ಶಂಕರರು ಜೀವಿಸಿದ್ದು ಮೂವತ್ತೆರಡು ವರ್ಷಗಳು ಮಾತ್ರವಾದರೂ ಆ ಸ್ವಲ್ಪ ಕಾಲದಲ್ಲಿಯೇ ಅವರು, ಅಂದು ಬಹು ವಿಧಗಳಲ್ಲಿ ನಡೆಯುತ್ತಿದ್ದ ಆರಾಧನೆಯ ವಿಧಾನವನ್ನು ಸಂಸ್ಕರಿಸಿ ಸಮೀಕರಣ ಮಾಡಿ ಎಲ್ಲವನ್ನೂ ವೇದಾಂತ ತತ್ವದ ಏಕಸಿದ್ಧಾಂತವಾದ ಅದ್ವೈತದ ಒಳಗೆ ಅಳವಡಿಸಿದರು.
ವೇದಗಳ ಮಹಾವಾಕ್ಯಗಳು ತಮ್ಮ ಸರಿಯಾದ ನಿಜಾರ್ಥದೊಂದಿಗೆ ಎಲ್ಲರ ಹೃದಯಾಂತರಂಗದೊಳಗೆ ದೃಢವಾಗಿ ನಿಲ್ಲುವಂತೆ ಭಾಷ್ಯಗಳನ್ನು ರಚಿಸಿದರು ಶಂಕರರು. “ಅಹಂ ಬ್ರಹ್ಮಾಸ್ಮಿ”, “ತತ್ವಮಸಿ”, “ಪ್ರಜ್ಞಾನಂ ಬ್ರಹ್ಮಾ”, “ಆಯಮಾತ್ಮಾ ಬ್ರಹ್ಮಾ” ಮೊದಲಾದ ವಾಕ್ಯಗಳೆಲ್ಲಾ ಸುಲಭವಾದ ಭಾಷೆಯಲ್ಲಿ ತರ್ಕಸಮ್ಮತವಾದ ಮಧುರ ಕವಿತಾ ರೂಪದಲ್ಲಿ ಜಿಜ್ಞಾಸುಗಳಿಗೆ ಬೋಧಿಸಲಾಗಿದೆ. ಶಂಕರರ ಅದ್ವೈತವೇ ದೇವಾಂತದಲ್ಲಿ ಕೊನೆ ಸಿದ್ಧಾಂತ. ಅದೇ ಪರಮ ಸತ್ಯ.

ಅದ್ವೈತವು ದ್ರವ್ಯಶಕ್ತಿಗಳಿಗೂ ಮಾಯಾವರಣದಿಂದ ಕೂಡಿರುವಂತೆ ಜಗತ್ತಿಗೂ ಇರುವ ಏಕತೆಯನ್ನು ಹೇಳುವುದು. ಆ ಮಾಯೆಯೂ ಸಹ ಆದಿಪುರುಷ ನಿರ್ಮಿತವೇ. ಮಾನವನ ಮಾನಸದಿಂದ ಅಹಂಕಾರವೆನ್ನುವ ದೈತವನ್ನು ತೊಲಗಿಸುವುದಕ್ಕೂಅದ್ವೈತ ಭಾವವನ್ನು ಸಿದ್ಧಿಸಿಕೊಳ್ಳುವುದಕ್ಕೂ ತೀವ್ರವಾದ ಸಾಧನೆಯು ಅವಶ್ಯವೆಂದು ಶಂಕರರಿಗೆ ತಿಳಿದಿತ್ತು. ಆದ್ದರಿಂದಲೇ ಅದಕ್ಕೆ ಪ್ರಥಮ ಶಿಕ್ಷಣವಾಗಿ ಯೋಗ, ಭಕ್ತಿ, ಕರ್ಮಸೂತ್ರಗಳನ್ನು ಬೋಧಿಸಿದರು. ಆ ಮೂರು ಬುದ್ಧಿಗೆ ವಿಕಾಸವನ್ನುಂಟುಮಾಡಿ, ಭಾವ ವಿಕಾರಗಳನ್ನು ತೊಲಗಿಸಿ ಹೃದಯವನ್ನು ಪರಿಶುದ್ಧಗೊಳಿಸಿ, ವ್ಯಕ್ತಿಗೂ ಜಗತ್ತಿಗೂ ಇರುವ ಸತ್ಯವಾದ ಏಕತೆಯನ್ನು ತಿಳಿಯಪಡಿಸುವುದು. ಲೋಕದಲ್ಲಿರುವ ಪ್ರತಿ ಪ್ರದೇಶದಲ್ಲಿಯೂ ಪ್ರತಿ ಪದಾರ್ಥದಲ್ಲಿಯೂ ಸರ್ವತ್ರ, ಸರ್ವರಲ್ಲಿಯೂ ಭಗವಂತನ ಕರುಣೆ ತುಂಬಿದೆ ಎನ್ನುವ ಜ್ಞಾನದ ಅರಿವೇ ಅದ್ವೈತ.
ಶಂಕರರು ಸಾಧನೆಗೆ ಮೊಟ್ಟ ಮೊದಲಿನ ಹಂತವೇ ಸತ್ಸಂಗವೆಂದು ಹೇಳಿರುವುದು. ಸತ್ಸಂಗವನ್ನು ನಿಸ್ಸಂಗತ್ವವನ್ನು ಜೀವನದಲ್ಲಿ ಅಳವಡಿಸಿದರೆ ಮೌನದಲ್ಲಿಯೇ ಏಕಾಂತವಾಸದಲ್ಲಿಯೂ ಆಸಕ್ತಿ ಹುಟ್ಟಿಸುವುದು. ಅದು ಮೋಹವನ್ನು ದೂರ ಮಾಡುವುದು. ಪ್ರಾರ್ಥನೆಗೆ ಭಗವದ್ಗೀತೆಯನ್ನು ಕೇಳಿದುದರಿಂದ ಇದೇ ಫಲವು ಸಿದ್ಧಿಸಿತು. ಅದು ಲಭಿಸಿದಾಗ ನಿಶ್ವಲ ತತ್ವವು ದೃಢವಾಗುವುದು. ಸ್ಥಿರವಾಗುವುದು. ತತ್ ಅದು ಎಂದರೆ ಪರಮಾತ್ಮ ತ್ವಂ ನೀನು, ಎಂದರೆ ಜೀವಾತ್ಮ ಎನ್ನುವದರ ಪರಮಾರ್ಥ ಎಂದರೆ ಇವೆರಡಕ್ಕೂ ಇರುವ ಏಕತ್ವವನ್ನು ಗುರುತಿಸುವುದೇ ಅರಿಯುವುದೇ, ಮುಕ್ತಿ ಪ್ರಾಪ್ತಿ.

Related Articles

2 COMMENTS

  1. Very well explained. About Sri Shankaracharya and advaitha.
    Some people may not understand this and just comment for the heck of commenting.
    Dr. Gururaj has put it in a proper way. Even a common man can understand.
    Regards
    Mohan.

ಪ್ರತಿಕ್ರಿಯೆ ನೀಡಿ

Latest Articles