ವಸ್ತುಗಳನ್ನು ಹೊಂದುವುದರಿಂದಲಷ್ಟೇ ನೆಮ್ಮದಿಯ ಜೀವನ ಸಾಧ್ಯಾನಾ?

*ಸುಷ್ಮಸಿಂಧು (ಮನಃಶಾಸ್ತ್ರಜ್ಞೆ, ಹಾಸನ)

ನಾವು ಲೌಕಿಕ ವಸ್ತು ವಿಷಯಗಳಲ್ಲಿಯೇ ಆಸಕ್ತರಾಗುತ್ತಾ ಅದನ್ನು ಹೊಂದುವುದನ್ನೇ ಬದುಕಿನ ಉದ್ದೇಶವೆಂದುಕೊಂಡು ಇಲ್ಲಿಯೇ ಅಡ್ಡಾಡುತ್ತಿರುವುದಾದರೂ ಏಕೆ? ಇದಷ್ಟೇ ನಮಗೆ ಅತಿ ಮುಖ್ಯವೆನಿಸಿಬಿಟ್ಟಿರುವುದಾದರೂ ಏತಕ್ಕಾಗಿ? ನಮಗೆ ಕಂಡದ್ದಿಷ್ಟೇ ಅದಕ್ಕಾಗಿ! ಇದಕ್ಕಿಂತ ಹೆಚ್ಚಿನದ್ದು, ಇದರಾಚಿನದ್ದು ನೋಡಲು ನಾವು ಅಸಮರ್ಥರು.. ಹಾಗಾಗಿ!

ಈ ಅಸಮರ್ಥತೆಯಿಂದಲೇ ಇದನ್ನು ಹೊಂದಿದರೆ ಸುಖವೇನೋ, ಅದೊಂದು ಪಡೆದುಕೊಂಡು ಬಿಟ್ಟರೆ ನೆಮ್ಮದಿಯಾಗಿರುವೆನೇನೋ ಎಂದು ನಿರಂತರ ಲೆಕ್ಕಿಸುತ್ತಾ ಅವು ಇವುಗಳ ಹಿಂದೆಯೇ ಸುತ್ತುತ್ತಲೇ ಉಳಿದು ಬಿಡುತ್ತೇವೆ. ಆದರೆ ನಮ್ಮ ಬೇಡಿಕೆಗಳು ಒಂದರ ನಂತರ ಒಂದು ಅಸಂಖ್ಯವಾಗಿ ಬೆಳೆದಕೊಂಡು ಅಗಣಿತವಾಗಿವೆ. ಅದನ್ನೆಂದೂ ಪೂರೈಸಿ ನಂತರ ಆನಂದಿಸಲು ಅಸಾಧ್ಯ ಎಂಬುದರ ತಿಳಿವು ನಮಗಿರದು.

ವಸ್ತುಗಳಿಂದ ಸುಖ ಹೊಂದಲಸಾಧ್ಯ…

ನಮ್ಮೆಲ್ಲ ಅರಸುವಿಕೆಯ ಮುಖ್ಯ ಉದ್ದೇಶವೇನು? ಮತ್ತಷ್ಟು ಸುಖ ನೆಮ್ಮದಿ ಶಾಂತಿ ಆನಂದ ಹೊಂದುವುದೇ ಆಗಿದೆ. ಇವೆಲ್ಲವೂ ಆಂತರಿಕವಾಗಿ ಆಗುವ ಅನುಭವಗಳೇ ಹೊರತು ಹೊರಗೆ ಕಾಣುವಂತದ್ದಲ್ಲ.. ಆದರೆ ವಿಚಿತ್ರವೆಂದರೆ ಇವೆಲ್ಲವೂ ನಮ್ಮ ಹೊರಗಿನ ವಸ್ತುಗಳಿಗೆ ಅಂಟಿಕೊಂಡಂತೆ ಭಾಸವಾಗುತ್ತಿವೆ! ಸ್ವಂತ ಮನೆಯಾದರೆ ನೆಮ್ಮದಿ, ಕಾರೊಂದಿದ್ದು ಬಿಟ್ಟಿದ್ದರೆ ಖುಷಿಯಾಗಿ ಓಡಾಡಿಕೊಂಡಿರ ಬಹುದು.. ಹೀಗೆ… ಅವೆಲ್ಲ ಇರುವುದು, ಹೊಂದುವುದು, ಬಯಸುವುದು ತಪ್ಪಲ್ಲ.. ಅದೆಲ್ಲವುದರಿಂದ ಬದುಕು ಮತ್ತಷ್ಟು ಅನುಕೂಲಕರವಾಗಿ ಆಗುವುದು ನಿಜ. ಆದರೆ ಅದಕ್ಕೆ ನಮ್ಮ ಆನಂದ, ಸುಖವನ್ನು ಅಂಟಿಸಿಕೊಂಡಿರುವುದು ತರವಲ್ಲವಷ್ಟೇ. ವಸ್ತುಗಳಿಂದ ನನಗೊಂದಿಷ್ಟು ಅನುಕೂಲಕರವಾಗುವುದು ಎಂದು ಯೋಚಿಸಬೇಕೆ ಹೊರತು. ಅದರಿಂದಲೇ ಸುಖ, ಸಂತೋಷ ಎಂದು ಭಾವಿಸಿಕೊಳ್ಳಬಾರದು

ಲೌಕಿಕವಷ್ಟೇ ಬದುಕಲ್ಲ

ಬಹುಶಃ ನಮ್ಮ ಸುತ್ತಲಿನ ಪ್ರಪಂಚದ ಮೌಲ್ಯಗಳೂ ಹಾಗೆಯೇ ಇವೆ. ಅದನ್ನು ಪರಾಮರ್ಶಿಸದೆ ಒಪ್ಪಿಕೊಳ್ಳುವ ನಮ್ಮ ಮನಸ್ಥಿತಿಯೂ ಅಂತೆಯೇ ಇದೆ. ಹೀಗಿರುವುದರಿಂದ ಇಷ್ಟೇ ಬದುಕು. ಇದೇ ಸಾಧನೆ.. ಎಲ್ಲರಿಗಿಂತ ಲೌಕಿಕದಲ್ಲಿ ಹಿಂದುಳಿದು ಬಿಟ್ಟರೆ ಅದುವೇ ಬದುಕಿನ ಸೋಲು ಎಂದೆಲ್ಲ ನಮಗೆ ನಾವೇ ತೀರ್ಮಾನಿಸಿಕೊಂಡು ಬಿಡುತ್ತೇವೆ. ಇದರಿಂದ ನಿಜವಾದುದರೆಡೆಗೆ ಹೋಗುವುದಿರಲಿ  ಅತ್ತ ದೃಷ್ಟಿ ಬೀರಲೂ ನಮ್ಮಿಂದ ಸಾಧ್ಯವಾಗದು..

ಅಂಟಿಸಿಕೊಂಡರೇ ದುಃಖ!

ನಾವು ಇಲ್ಲೇ ಅರಸಿಕೊಂಡು ಅಡ್ಡಾಡುತ್ತಿರುವುದಕ್ಕೆ ಇಲ್ಲಿನದನ್ನೆಲ್ಲವನ್ನೂ ಅಪ್ರಜ್ಞಾಪೂರ್ವಕವಾಗಿ ಅಂಟಿಸಿಕೊಂಡಿರುವುದೇ ಕಾರಣ. ಈ ಜಗತ್ತಿನ ನಂಟು – ಅಂಟುಗಳು ನಮ್ಮ ತಿಳುವಳಿಕೆಯ ಹೊರಗಿವೆ. ಅರಿಯದೇ ನಮ್ಮೊಡನೆ ಬೆಸೆದುಕೊಂಡಿದೆ. ಬದುಕಿಗೆ ಅತ್ಯಗತ್ಯವಾದ ಇಂತಿಷ್ಟು ಇದ್ದರೂ ಏನನ್ನೇ ಪಡೆದುಕೊಂಡಿದ್ದರೂ ಎಡಬಿಡದೇ ಕಾಡುತ್ತಾ ಪದೇಪದೇ ಎದುರಾಗುವ ಅತೃಪ್ತಿ, ಅಸಾಮಾಧಾನಗಳನ್ನು ಅವಲೋಕಿಸ ಹೊರಟರೆ ಈ ಎಲ್ಲಾ ಬದುಕಿನ ಅಂಟು ನಂಟುಗಳೇ ನಮ್ಮ ದುಃಖಗಳಿಗೆ ಮೂಲವೆಂದು ತೋರುವುದು.

ಮಾನಸಿಕ ಅಂಧತ್ವ

ಕಂಡಷ್ಟನ್ನೇ ಪ್ರಪಂಚವೆಂದು ನಮ್ಮ ಅಂಧಕಾರ ಭಾವಿಸಿಕೊಂಡಿರುತ್ತದೆ. ಈ ಪ್ರಪಂಚದಲ್ಲಿ ಆಧ್ಯಾತ್ಮಿಕ ಬೀಜ ಬಿತ್ತಿಹ ಅದೆಷ್ಟೋ ಸಾಧಕರು, ಮಹಿಮಾನ್ವಿತರು ಆಗಿ ಹೋಗಿದ್ದಾರೆ, ಇನ್ನೂ ನಮ್ಮ ನಡುವೆಯೇ ಇದ್ದಾರೆ. ಅವಿರತ, ಅನವರತ ಜಗವನ್ನು ಸಲಹುತ್ತಿದ್ದಾರೆ. ಆದರೆ ಮನದ ಅಂಧತ್ವಕ್ಕೆ ಇದ್ಯಾವುದೂ ಕಾಣದು. ಅದೇನಿದ್ದರೂ ಇಲ್ಲಿಯದ್ದನ್ನೇ ಹಿರಿಯದಾಗಿಸಿಕೊಂಡು ಹಿರಿಯರು ಅತ್ಯುನ್ನತರನ್ನು ಕಡೆಗಣಿಸಿ ಕತ್ತಲ ಕೂಪಕ್ಕೆ ಜಾರುತ್ತಲಿದೆ. ಇದನ್ನರಿತು ಕೊಂಚ ನಡೆದರೂ ಮುಂದಿನ ದಾರಿ ತಾನೇ ತೆರೆಯಲ್ಪಡುವುದು

ನಿಜವಾದುದರೆಡೆಗೆ ಹೆಜ್ಜೆ

ದಿನನಿತ್ಯ ಪ್ರಾಪಂಚಿಕವಾದ ಕರ್ತವ್ಯಗಳಲ್ಲಿ ನಾವು ತೊಡಗಿಕೊಂಡಿರ ಬೇಕಾದ್ದು ಹೌದಾದರೂ ಅದುವೇ ಗಮ್ಯವೆಂದು ತೀರ್ಮಾನಿಸಿ ಬಿಡಬಾರದು. ಮಾನವ ಜನ್ಮದ ಗುರಿ ಲೌಕಿಕ ಸುಖ ಭೋಗಗಳನ್ನಷ್ಟೇ ಮುಖ್ಯವಾಗಿಸಿಕೊಂಡು  ಇಲ್ಲಿಯೇ ಕಳೆದು ಹೋಗಿ ಬಿಡುವುದಾಗಿಲ್ಲ.. ಜೀವನದ ಸಾರ್ಥಕ್ಯ ಅಂತರಾತ್ಮವನ್ನು ಆ ದಿವ್ಯ ಚೇತನದೊಂದಿಗೆ ಬೆಸೆದುಕೊಳ್ಳುವುದಾಗಿದೆ. ಆಗಷ್ಟೇ ನಿಜವಾದ ಸೌಖ್ಯ ಸಂತೋಷಗಳು ನಮ್ಮವಾಗಿ ಸಂಸಾರದೊಳಗೂ ಇದ್ದುಕೊಂಡೇ ಸುಖಿಸಲು ಸಾಧ್ಯ.. ಇದನ್ನರಿತು ನಿಜವಾದುದರೆಡೆಗೆ ಹೆಜ್ಜೆ ಹಾಕುತ್ತಾ ಹೋದರೆ ಇಂದಲ್ಲಾ ನಾಳೆ ನಿಜವಾದ ಗಮ್ಯದ ದ್ವಾರದೆಡೆಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನು ಆ ಸೃಷ್ಟಿ ಚೈತನ್ಯವೇ ಇರಿಸುತ್ತಾ ಮುನ್ನಡೆಸುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles