ತೀರ್ಥಯಾತ್ರೆ, ಕ್ಷೇತ್ರ ದರ್ಶನದಲ್ಲಿ ಈ ತಪ್ಪುಗಳನ್ನು ಮಾಡಲೇಬಾರದು

*ದೇವಿಪ್ರಸಾದ್ ಗೌಡ ಸಜಂಕು

ಯಾವುದೇ ತೀರ್ಥಕ್ಷೇತ್ರ, ಪುಣ್ಯಕ್ಷೇತ್ರದ ಯಾತ್ರೆ, ದರ್ಶನ ಸಮಯದಲ್ಲಿ ತಪ್ಪಿಯೂ ಕೆಲವು ತಪ್ಪುಗಳನ್ನು ಮಾಡಬಾರದು. ಅಂತಹ ತಪ್ಪುಗಳಿಂದ ಘೋರವಾದ ನರಕ ಪ್ರಾಪ್ತಿ ಆಗುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ. ಉತ್ತಮ ಕಾರ್ಯ ಮಾಡಲಾಗದಿದ್ದರೂ ಈ ತಪ್ಪುಗಳನ್ನು ಮಾಡಲೇಬಾರದು.

1. ಯಾತ್ರೆ ಸಮಯದಲ್ಲಿ, ಕ್ಷೇತ್ರದಲ್ಲಿ ತಪ್ಪಿಯೂ ಕಾಮಾಸಕ್ತಿ ಇರಬಾರದು.

2. ಕಾಮ ಪ್ರಚೋದಕ ಉಡುಗೆ ತೊಡುಗೆ ಉಡಬಾರದು.

3. ಕಾಮ ಪ್ರಚೋದಕ, ಮತ್ತು ಭರಿಸುವ ಆಹಾರ, ಪಾನೀಯ ಸೇವಿಸಬಾರದು. ಸಾತ್ವಿಕ ಆಹಾರವನ್ನು ಆಯಾ ಕ್ಷೇತ್ರದ ದೇವರಿಗೆ ಸಮರ್ಪಣೆ ಮಾಡಿ, ಸ್ಮರಣೆ ಮಾಡಿ ಸೇವಿಸಬೇಕು.

4. ಪಾದುಕೆ ಧರಿಸಿ ಯಾತ್ರೆ ಮಾಡಿದರೆ ಕ್ಷೇತ್ರದಲ್ಲಿ ಸಂಚರಿಸಿದರೆ ಅರ್ಧ ಪುಣ್ಯಕ್ಕೆ ಕಾರಣ ಆಗುತ್ತದೆ.

5. ದೇವರ ಪ್ರಸಾದ ಹೊರತಾಗಿ ಪರಾನ್ನ ಸ್ವೀಕರಿಸಿದರೆ ಯಾತ್ರೆಯ ಫಲ ದೊರಕದು.

6. ಯಾತ್ರೆಯ ಮಾರ್ಗದಲ್ಲಿ ಯಾತ್ರೆ ಹೋಗುತ್ತಿರುವ ಕ್ಷೇತ್ರದ ದೇವರ ನಾಮಸ್ಮರಣೆ, ದಿವ್ಯವಾದ ಕಥೆಗಳನ್ನುಕೇಳುವುದು ಮಾಡದಿದ್ದರೆ ನಾಲ್ಕು ಕಾಲಿನ ಪ್ರಾಣಿಯಂತೆ ಆಯುಷ್ಯವು ವ್ಯರ್ಥ ಆಗುತ್ತದೆ.

7. ಯಾತ್ರೆ ಸಮಯದಲ್ಲಿ ನವ ವಿಧ ದ್ವೇಷ ಚಿಂತಿಸಲೇಬಾರದು. ಜೀವರಲ್ಲಿ ಭೇದ, ದೇವರುಗಳ ಮಧ್ಯೆ ದ್ವೇಷ, ದೇವರು ಅಪೂರ್ಣ ಎಂಬ ಭಾವ, ದೇವರ ಕೈ ಕಾಲುಗಳಿಗೆ ಭೇದ, ಅವತಾರಗಳಲ್ಲಿ ಭೇಧ, ಅವತಾರಗಳು ನಮ್ಮಂತೆ ಜನನ-ಮರಣದ ಬಂಧನ ಎಂಬ ಭಾವ, ಸಹ ಯಾತ್ರಿಕರ ದ್ವೇಷ, ಭಕ್ತರ ಭೇದ, ಭಕ್ತರ ದೂಷಣೆ ಇವುಗಳನ್ನು ಮಾಡಲೇಬಾರದು. ಮಾಡಿದರೆ ಜೀವನದಲ್ಲಿ ಸದಾ ದುರ್ಜನರ ಸಂಗ, ಅಶುಭಗಳೇ ಘಟಿಸುತ್ತದೆ.

8. ಯಾವುದೇ ತೀರ್ಥದಲ್ಲಿ ಬೆತ್ತಲಾಗಿ ಸ್ನಾನ ಮಾಡಬಾರದು. ಉಗುಳಬಾರದು, ಮಲ ಮೂತ್ರ ವಿಸರ್ಜನೆ, ಗುಪ್ತಾಂಗ ತೊಳೆಯುವುದು, ತೀರ್ಥದಲ್ಲಿ ನಿಂತು ಗುಪ್ತಾಂಗ ಸ್ಪರ್ಶ ಮಾಡುವುದು ಮಾಡಲೇಬಾರದು. ಮಲಿನ ಬಟ್ಟೆ ಶುಚಿ ಮಾಡಬಾರದು. ಪಾದುಕೆ ತೊಳೆಯಬಾರದು. ಹೀಗೆ ಮಾಡುವುದರಿಂದ ಗುಪ್ತ ರೋಗಗಳು ಜೀವನವಿಡೀ ಬಾಧಿಸುತ್ತದೆ.

9. ಶುಚಿಯಾಗಿ, ಮಡಿ ವಸ್ತ್ರ ಧರಿಸಿಯೇ ದೇವರ ದರ್ಶನ ಮಾಡಬೇಕು.

10. ದೇವರ ನೈರ್ಮಲ್ಯವನ್ನು ಎಸೆಯಬಾರದೂ, ಅದನ್ನು ಕಣ್ಣಿಗೆ ಒತ್ತಿ ಸ್ವೀಕರಿಸಬೇಕು.

11. ದೇವರ ಪ್ರಸಾದದಲ್ಲಿ ತಪ್ಪು ಹುಡುಕುವುದು, ಅಪಹಾಸ್ಯ ಮಾಡುವುದು ಮಾಡಬಾರದು.

12. ಕ್ಷೇತ್ರದಲ್ಲಿ ನಿಂತು ಆ ಕ್ಷೇತ್ರದ ನಿಯಮಗಳನ್ನು, ಪೂಜಾ ಪದ್ಧತಿಯನ್ನು ಆಕ್ಷೇಪ ಮಾಡಬಾರದು. ಆದರೆ ಸಲಹೆ ಮಾಡಬಹುದು.

13. ಕ್ಷೇತ್ರದಲ್ಲಿ ಗುಡಿಸುವುದು, ಶುಚಿ ಮಾಡುವುದು, ಒರೆಸುವುದನ್ನು ಮಾಡಿದರೆ ದೇವರ ಅನುಗ್ರಹ ಆಗುತ್ತದೆ. ಕಸ ಹಾಕುವುದು, ಉಗುಳುವುದು ಮಾಡಿದರೆ ರೋಗಗ್ರಸ್ತ ಜೀವನ ಪ್ರಾಪ್ತಿ ಆಗುತ್ತದೆ.

14. ಕ್ಷೇತ್ರದಲ್ಲಿ ತನಗೆ ಬೇಡವಾದ ವಸ್ತುವನ್ನು ದಾನ ಮಾಡಬಾರದು. ತನಗೆ ಬೇಕಾದ ವಸ್ತುವನ್ನೇ ದಾನ ಮಾಡಬೇಕು. ಆಗ ಮಾತ್ರ ನಮಗೆ ಬೇಕಾದದ್ದನ್ನು ದೇವರು ನೀಡುತ್ತಾನೆ.

15. ದೇವರ ಪ್ರಸಾದವನ್ನು ಬಿಟ್ಟು ಬೇರೆ ವಸ್ತುಗಳನ್ನು ಕ್ಷೇತ್ರದಿಂದ ತರಬಾರದು. ತಂದರೂ ಅದಕ್ಕೆ ಸೂಕ್ತವಾದ ಮೌಲ್ಯವನ್ನು ನೀಡಿ ತರಬೇಕು. ಹಾಗಾಗಿ ನಾವೆಲ್ಲಾ ಅರಿತು ಯಾತ್ರೆ ಮಾಡಿದರೆ ನಮಗೇ ಒಳಿತು.

(ಲೇಖಕರು ಸಂಸ್ಕೃತಿ ಚಿಂತಕರು)

Related Articles

ಪ್ರತಿಕ್ರಿಯೆ ನೀಡಿ

Latest Articles