ಶೃಂಗೇರಿಯ ಬೆಟ್ಟದ ಮಲ್ಲಿಕಾರ್ಜುನ ದೇವಾಲಯ

*ಶ್ರೀನಿವಾಸ ಮೂರ್ತಿ ಎನ್. ಎಸ್.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಶಾರದಾ ಮಠ ತನ್ನದೇ ಆದ ಇತಿಹಾಸ ಹೊಂದಿದೆ. ಹೊಯ್ಸಳರ ಕಾಲದ ಬಸದಿಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಇನ್ನು ವಿಜಯನಗರ ಕಾಲದಲ್ಲಿ ಇಲ್ಲಿ ಸಾಕಷ್ಟು ದೇವಾಲಯಗಳು ನಿರ್ಮಾಣಗೊಂಡಿದ್ದು ನಂತರದ ಕೆಳದಿ ಅರಸರ ಕಾಲದಲ್ಲೂ ಈ ಪರಂಪರೆ ಮುಂದುವರೆಯಿತು. 

ವಿಜಯನಗರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳಲ್ಲಿ ಊರಿನ ಮಧ್ಯದಲ್ಲಿರುವ ಬೆಟ್ಟದ ಮಲ್ಲಿಕಾರ್ಜುನ ದೇವಾಲಯವೂ ಒಂದು.

ಸುಮಾರು 14 ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು 1621 ರಲ್ಲಿ ಮಠದ ಭಕ್ತರಲ್ಲಿ ಒಬ್ಬರಾಗಿದ್ದ ಪುಟ್ಟಯ್ಯ ಎಂಬುವರು ನವೀಕರಣ ಮಾಡಿ ದತ್ತಿ ನೀಡಿದ ಉಲ್ಲೇಖ ನೋಡಬಹುದು. ಪ್ರಥಮ ಶ್ರೀ ಸಚ್ಚಿದಾನಂದ ಸ್ವಾಮಿಯವರು 17 ನೇ ಶತಮಾನದಲ್ಲಿ ಇಲ್ಲಿ ರಥೋತ್ಸವ ಆರಂಭಿಸಿದ ಉಲ್ಲೇಖ ನೋಡಬಹುದು. 1812 ರಲ್ಲಿ ದೇವಾಲಯ ಪೂಜೆಗೆ ಮಂಜಪ್ಪಯ್ಯ ಎಂಬುವವರಿಗೆ ಶೃಂಗೇರಿಯ ಸ್ವಾಮಿಗಳು ದತ್ತಿ ನೀಡಿದೆ ಉಲ್ಲೇಖವಿದೆ.

ಈ ದೇವಾಲಯ ಚತುರ್ದಶ ಮಾದರಿಯ ಗರ್ಭಗುಡಿ, ಸುಖನಾಸಿ ಹಾಗು ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಚಿಕ್ಕದಾದ ಮಲ್ಲಿಕಾರ್ಜುನ ಎಂದು ಕರೆಯುವ ಶಿವಲಿಂಗವಿದೆ. ಇದನ್ನು ಮಲಹನಿಕೇಶ್ವರ ಎಂದು ಕರೆಯುವ ಪದ್ದತಿ.  ಮನಸಿನ, ಆತ್ಮದ ಕೊಳೆಯನ್ನು ತೆಗೆಯುವ ದೇವರಾದ ಕಾರಣ ಈ ಹೆಸರು ಬಂದಿದೆ ಎನ್ನಲಾಗಿದೆ.  ಇನ್ನ ಇಲ್ಲಿ ವಿಭಂಡಕ ಮುನಿಗಳು ಐಕ್ಯರಾದ ಕಾರಣ ವಿಭಂದಕ ಲಿಂಗ ಎಂದೂ ಕರೆಯುತ್ತಾರೆ. 

1963 ರಲ್ಲಿ ಅಭಿನವ ವಿದ್ಯಾತೀರ್ಥ ಸ್ವಾಮಿಗಳ ಕಾಲದಲ್ಲಿ ಈ ಮೊದಲು ಇದ್ದ ನವರಂಗ ವಿಸ್ತಾರಗೊಂಡಿತು. ವಿಸ್ತಾರವಾಗಿ ನಿರ್ಮಾಣವಾದ ನವರಂದಗಲ್ಲಿ ವಿಜಯನಗರ ಕಾಲದ ನಾಲ್ಕು ಉಬ್ಬು ಶಿಲ್ಪದ ಕೆತ್ತನೆ ಹೊಂದಿರುವ ಕಂಭಗಳಿವೆ.  ನವರಂಗದಲ್ಲಿನ ಕಂಭಗಳಲ್ಲಿ ಗಣಪತಿ, ದುರ್ಗಾ, ವೇಣುಗೋಪಾಲ, ಆಂಜನೇಯ, ಕಾಳಿಂಗಮರ್ಧನ ಹಾಗು ಮಹಿಷಿಮರ್ಧಿನಿಯ ಶಿಲ್ಪಗಳಿದ್ದು ಇಲ್ಲಿನ ವಿತಾನ (ಭುವನೇಶ್ವರಿ) ಸುಂದರವಾಗಿ ಅಲಂಕೄತಗೊಂಡಿದೆ.  ಇನ್ನು ಇಲ್ಲಿನ ದೀಪಸ್ಥಂಭದಲ್ಲಿನ ಗಣಪತಿಯ ಚಿತ್ರವನ್ನು ಅಭಿನವ ನರಸಿಂಹ ಭಾರತೀ ಸ್ವಾಮಿಗಳು ಬರೆದರು ಎಂಬ ನಂಬಿಕೆ ಇದೆ.  ದೇವಾಲಯಕ್ಕೆ ಕದಂಬ ನಾಗರ ಮಾದರಿಯ ಶೈಲಿಯ ಹೋಲುವ ಶಿಖರವಿದೆ.

ಇನ್ನು ದೇವಾಲಯಕ್ಕೆ ನಿತ್ಯ ಪೂಜೆ ನಡೆಯಲಿದ್ದು ಶಿವರಾತ್ರಿ ಸಮಯದಲ್ಲಿ ಹಾಗು ವಿಷೇಶ ಸಂಧರ್ಭದಲ್ಲಿ ಶತ್ರರುದ್ರಾಭಿಶೇಕ, ದೀಪಾರಾಧನೆ ನಡೆಯುತ್ತದೆ.  ಇನ್ನು ಸುಮಾರು 17 ನೇ ಶತಮಾನದಲ್ಲ್ಲಿ ಹೊನ್ನಶೆಟ್ಟಿ ಕಟ್ಟಿಸಿದ ಹೊನ್ನೆ ದೇವಾಲಯವಿದ್ದು ಗರ್ಭಗುಡಿಯಲ್ಲಿ ವಿಶ್ವೇಶ್ವರ ಎಂದು ಕರೆಯುವ ಶಿವಲಿಂಗವಿದೆ. 

ತಲುಪುವ ಬಗ್ಗೆ: ಶಾರದ ಮಠದಿಂದ ನೆಹರು ರಸ್ತೆಯಲ್ಲಿ ಸಾಗಿ ಎಡಕ್ಕೆ ತಿರುಗಿದರೆ ಬೆಟ್ಟದ ಮೇಲೆ ಈ ದೇವಾಲಯ ಸಿಗುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles