‘ಶ್ರೀಗಂಧ’ ಕವನ ಸಂಕಲನ ಬಿಡುಗಡೆ

ಮೈಸೂರು: ಲೇಖಕಿ ಎಸ್. ಎಲ್. ವರಲಕ್ಷ್ಮೀಮಂಜುನಾಥ್ ಅವರ ಚೊಚ್ಚಲ ಕವನ ಸಂಕಲನ ಶ್ರೀಗಂಧ ಮೈಸೂರಿನ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.

ಮೈಸೂರಿನ ಹಿರಿಯ ಸಾಹಿತಿ ಹಾಗೂ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷೆ ಎ ಹೇಮಗಂಗಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂತೋಷ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.

ಕೃತಿಯ ಬಗ್ಗೆ ಮಾತನಾಡಿದ ಸಾಹಿತಿ ಹೇಮಗಂಗಾ ಅವರು ಕೃತಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ,ವಾಟ್ಸಪ್ಪ್ ಮತ್ತು ಅಂತರ್ಜಾಲ ಸಾಹಿತ್ಯ ಬಳಗಗಳಲ್ಲಿ ಬಹಳ ಹೆಸರು ಮಾಡಿರುವ ಲೇಖನಕ್ಕಾಗಿ ಚಿನ್ನದ ಪದಕದ ವಿಜೇತೆಯಾದ ವರಲಕ್ಷ್ಮೀಮಂಜುನಾಥ್ ಅವರು ಬಹುಮುಖ ಪ್ರತಿಭೆಯಾಗಿದ್ದು ಅವರ ಕವನ ಸಂಕಲನದಲ್ಲಿ ವಿಷಯ ವೈವಿಧ್ಯತೆಯಿದ್ದು ರಸ ಭಾವಗಳಿಂದ ಕೂಡಿ ಸಮಾಜಮುಖಿ ಚಿಂತನೆಗಳನ್ನು, ಸಂದೇಶಗಳನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.ಕವನ ಸಂಕಲನದ ಅಪ್ಪ, ಬೆಲೆವೆಣ್ಣು, ಕನ್ನಡಾಂಬೆ ಕವಿತೆಗಳನ್ನು ಬಹುವಾಗಿ ಮೆಚ್ಚಿದ ಅವರು ಕವಿತೆಯ ಕೆಲ ಸಾಲುಗಳನ್ನು ಉಲ್ಲೇಖಿಸಿದರು. ಲೇಖಕಿ ವರಲಕ್ಷ್ಮೀ ಮಂಜುನಾಥ್ ಅವರಿಂದ ಮತ್ತಷ್ಟು ಕೃತಿಗಳು ಹೊರಬರಲೆಂದು ಹಾರೈಸಿದರು.

ವಿದ್ವಾನ್ ಕೃ. ಪ.ಮಂಜುನಾಥ್ ಮಾತನಾಡಿ, ಶ್ರೀಗಂಧ ಕೃತಿ ಹೆಸರಿಗೆ ತಕ್ಕಂತೆ ಪರಿಮಳ ಚೆಲ್ಲಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನೆರವೇರಿತು. ಪ್ರತಿಷ್ಠಾನದ ಕಡೆಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೇಖಕಿ ವರಲಕ್ಷ್ಮೀ ಮಂಜುನಾಥ್ ಸಾಹಿತ್ಯ ಸರಸ್ವತಿ ಬಳಗದ ವತಿಯಿಂದ ವೈಯುಕ್ತಿಕವಾಗಿ ವಿಜಯ ವಿಠಲ ಕಾಲೇಜಿನ ಪ್ರಾಂಶುಪಾಲ ಸತ್ಯಪ್ರಸಾದ್, ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರತ್ನ ಹಾಲಪ್ಪ,ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಸೌಗಂಧಿಕಾ ಜೋಯಿಸ್, ಹಿರಿಯ ಸಾಹಿತಿಗಳಾದ ಕೆರೋಡಿ ಲೋಲಾಕ್ಷಿ, ನಂಜನಗೂಡು ಸತ್ಯನಾರಾಯಣ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಕೃತಿ ಪಡೆಯಲು ಆಸಕ್ತರು ಮೊಬೈಲ್ ಸಂಖ್ಯೆ 9945653784 ಅನ್ನು ಸಂಪರ್ಕಿಸಲು ಕೋರಲಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles