ಡಿ.24 -26 ರವರೆಗೆ ಸಂಗೀತ ಸಮಾರಾಧನೆ

ಸುಸ್ವರ ಪ್ರೌಢಸಂಗೀತ ಕಲಾಶಾಲೆಯ 22 ನೇ ವಾರ್ಷಿಕೋತ್ಸವ

(ಚಿತ್ರದಲ್ಲಿ ಎಡದಿಂದ ಬಲಕ್ಕೆ: ವಿದ್ವಾನ್ ತಿರುಮಲೆ ಶ್ರೀನಿವಾಸ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ವಿದ್ವಾನ್ ಶ್ರೀ ಮುಷ್ಣಂ ರಾಜಾರಾವ್, ವಿದುಷಿ ಶುಭಾ ಸಂತೋಷ್.)

ಬೆಂಗಳೂರು: ಜಯನಗರ 4ನೇ ಬ್ಲಾಕ್‌ನಲ್ಲಿರುವ ಸುಸ್ವರ ಪ್ರೌಢಸಂಗೀತ ಕಲಾಶಾಲೆಯ 22 ನೇ ವಾರ್ಷಿಕೋತ್ಸವದ ಪ್ರಯುಕ್ತ ಡಿ.24ರಿಂದ 26ರವರೆಗೆ ಬನಶಂಕರಿ 2ನೇ ಹಂತ, 9ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಮ ಲಲಿತ ಕಲಾ ಮಂದಿರದ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಿ. 24 ರಂದು ಸಂಜೆ 4.15ಕ್ಕೆ ಮೃದಂಗ ವಿದ್ವಾಂಸ ಎಂ.ವಾಸುದೇವ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಈ ಸಂದರ್ಭದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರಿಗೆ ‘ಸ್ವರಲಯ ರತ್ನ’ ಮತ್ತು ವಿದ್ವಾನ್ ತಿರುಮಲೆ ಶ್ರೀನಿವಾಸ ಅವರಿಗೆ ‘ಸ್ವರಲಯ ಶೃಂಗ’ ಬಿರುದನ್ನು ಪ್ರದಾನ ಮಾಡಲಾಗುತ್ತದೆ.

ಹಿರಿಯ ವಿದುಷಿ ಡಾ. ಟಿ ಎಸ್ ಸತ್ಯವತಿ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಮೃದಂಗಕಾರ ವಿದ್ವಾನ್ ಶ್ರೀ ಮುಷ್ಣಂ ರಾಜಾರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ ಪ್ರಾಚಾರ್ಯ ವಿದ್ವಾನ್ ಎಚ್.ಎಸ್. ಸುಧೀಂದ್ರ, ಹಿರಿಯ ಉದ್ಯಮಿ ಮತ್ತು ಕಲಾ ಪೋಷಕರಾದ ಪತ್ತಿ ಶ್ರೀಧರ ಅವರು ಉಪಸ್ಥಿತರಿರಲಿದ್ದಾರೆ.


ಪ್ರೌಢ ಸಂಗೀತ ಕಛೇರಿ

ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರಿಂದ ಸಂಗೀತ ಕಛೇರಿ ನಡೆಯಲಿದೆ.

ವಿದ್ಯಾರ್ಥಿಗಳಿಂದ ತಾಳವಾದ್ಯ

25 ರಂದು ಬೆಳಗ್ಗೆ ಸುಸ್ವರಲಯ ಶಾಲೆ ವಿದ್ಯಾರ್ಥಿಗಳಿಂದ ತಾಳವಾದ್ಯ, 10.15 ಕ್ಕೆ ಆರ್.ಎಸ್. ಚಿನ್ಮಯಮ್ಮ ಅವರಿಂದ ‘ಸಂಗೀತ ಕಛೇರಿಗಳಲ್ಲಿ ಮೃದಂಗದ ಪಾತ್ರ’ ಕುರಿತು ಪ್ರಾತ್ಯಕ್ಷಿಕೆ ನಡೆಯಲಿದೆ. ನಂತರ ವಿದ್ವಾನ್ ಎಚ್.ಕೆ. ವೆಂಕಟರಾಮ್ ಅವರಿಂದ ಪಿಟೀಲು-ಮುಖ್ಯವಾದ್ಯ ಮತ್ತು ಪಕ್ಕವಾದ್ಯವಾಗಿ ಬಳಕೆ’ ಕುರಿತು ಪ್ರಾತ್ಯಕ್ಷಿಕೆ ನಡೆಯಲಿದೆ.

ಸಂಜೆ 4.30 ಕ್ಕೆ ಯುವ ಕಲಾವಿದರಾದ ವರಲಕ್ಷ್ಮಿ (ಪಿಟೀಲು) ಮತ್ತು ಜ್ಯೋತ್ಸಾö್ನ ಹೆಬ್ಬಾರ್ (ವೀಣೆ) ಕಛೇರಿ, ಶ್ರೀನಿವಾಸ, ಶ್ರೀರಾಮ ಮತ್ತು ರವಿಶಂಕರ್ (ಮೃದಂಗತ್ರಯ) ಕಛೇರಿ ಹಮ್ಮಿಕೊಳ್ಳಲಾಗಿದೆ. ಸಂಜೆ 6ಕ್ಕೆ ವಿದ್ವಾನ್ ಎ.ಎಸ್. ಮುರಳಿ ಅವರಿಂದ ಶಾಸ್ತ್ರೀಯ ಗಾಯನವಿದೆ.


26ರಂದು ಮೇಳಕರ್ತ ತಾಳ ಮಾಲಿಕೆ- ರತ್ನಾಂಗಿ ತಾಳದ ಪ್ರಾತ್ಯಕ್ಷಿಕೆ ಇದೆ. ಕೃತಿಕ್ ಕೌಶಿಕ್( ಪಿಟೀಲು) ಮತ್ತು ವಿದ್ವಾಂಸರಾದ ಫಣೀಂದ್ರ ಭಾಸ್ಕರ, ರಕ್ಷಿತ್ ಶರ್ಮಾ (ಯುಗಳ ಮೃದಂಗ) ಪ್ರಸ್ತುತಿ ಶೋಭೆ ನೀಡಲಿದೆ.
ನಂತರ ವಿದುಷಿ ಅಶ್ವಿನಿ ಸತೀಶ್ ಹೆಚ್ಚು ಪ್ರಚಾರಕ್ಕೆ ಬಾರದ ಹರಿದಾಸರ ಕೀರ್ತನೆಗಳು' ಎಂಬ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. 11.15 ಕ್ಕೆ ವಿದುಷಿ ಶುಭಾ ಸಂತೋಷ್ವೀಣಾ ವಾದಕರು ರಚಿಸಿರುವ ಕೃತಿಗಳು’ ಬಗ್ಗೆ ಪ್ರಾತ್ಯಕ್ಷಿಕೆ ಪ್ರಸ್ತುತಿ ಇದೆ.


ಮಕ್ಕಳಿಂದ ವಿಶೇಷ ಜುಗಲ್ ಬಂದಿ:
ಸುಸ್ವರಲಯದ 22 ನೇ ವಾರ್ಷಿಕೊತ್ಸವದ ವಿಶೇಷ ಆಕರ್ಷಣೆಯಾಗಿ ಮಕ್ಕಳಿಂದ ವಿಶೇಷ ಜುಗಲ್ ಬಂದಿ. ಸಂಜೆ 4.15ರ ಈ ಕಛೇರಿಯಲ್ಲಿ ಕುಮಾರಿ ಮಹತಿ (ಪಿಟೀಲು), ರಕ್ಷಾ (ಹಾರ‍್ಮೋನಿಯಂ), ಸುಧನ್ವ (ಮೃದಂಗ) ಮತ್ತು ಪ್ರದ್ಯುಮ್ನ (ತಬಲಾ) ಕಲಾವಂತಿಕೆ ಪ್ರದರ್ಶಿಸಲಿದ್ದಾರೆ. ಸಂಜೆ 6ಕ್ಕೆ ವಿದ್ವಾನ್ ತಿರುಮಲೆ ಶ್ರೀನಿವಾಸರ ಶಾಸ್ತ್ರೀಯ ಗಾಯನವಿದೆ ಎಂದು ಪ್ರಾಂಶುಪಾಲ ವಿದ್ವಾನ್ ಎಚ್.ಎಸ್.ಸುಧೀಂದ್ರ ತಿಳಿಸಿದ್ದಾರೆ.

ಸುಸ್ವರಲಯ ಬೆಳೆದುಬಂದ ಹಾದಿ

ವಿದ್ವಾನ್ ಎಚ್.ಎಸ್.ಸುಧೀಂದ್ರ


ಬೆಂಗಳೂರಿನಲ್ಲಿ 1999 ರಲ್ಲಿ ವಿದ್ವಾನ್ ಎಚ್.ಎಸ್.ಸುಧೀಂದ್ರ ಹಾಗೂ ವಿದ್ವಾನ್ ಬಾಲು ರಘುರಾಮನ್ ಅವರಿಂದ ಸ್ಥಾಪನೆಗೊಂಡ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ ಭಾರತೀಯ ಪರಂಪರೆಯ ಪ್ರದರ್ಶಿತ ಕಲೆಗಳನ್ನು ಪೋಷಿಸಿ ಬೆಳೆಸುವ ಉದ್ದೇಶ ಹೊಂದಿದೆ.
ಕಲಾಶಾಲೆಯು ಪರಿಣತ ವಿದ್ವಾಂಸರ ತಂಡವನ್ನು ಹೊಂದಿದ್ದು, ಯುವ ಮತ್ತು ಉದಯೋನ್ಮುಖ ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನೀಡುವುದರೊಂದಿಗೆ, ಆಸಕ್ತಿಯಿಂದ ಕೂಡಿದ ಸಂಗೀತ ಕಛೇರಿಗಳನ್ನೂ ಆಗಾಗ್ಗೆ ಆಯೋಜಿಸುತ್ತದೆ. ಕಳೆದ 22 ವರ್ಷಗಳಿಂದ ವಾದನ ಹಾಗೂ ತಾಳವಾದ್ಯ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುತ್ತಾ, ಒಂದು ವಿದ್ವತ್ ಪೂರ್ಣ ಕಛೇರಿಗೆ ಬೇಕಾಗುವ ಸಮಗ್ರ ತರಬೇತಿ ನೀಡಿ, ಸಾಹಿತ್ಯ ಮತ್ತು ಲಯದ ತಿಳಿವಳಿಕೆಗೆ ವಿಶೇಷ ಆದ್ಯತೆ ನೀಡುವ ಸೇವೆ ಮಾಡುತ್ತಿದೆ. ಈ ಶಾಲೆಯ ಆಶ್ರಯದಲ್ಲಿ ಬೆಳೆದ ನೂರಾರು ಕಲಾವಿದರು ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿ, ದೇಶ- ವಿದೇಶಗಳಲ್ಲಿ ಶುದ್ಧ ಭಾರತೀಯ ಶಾಸ್ತ್ರೀಯ ಸಂಗೀತದ ವಿದ್ವಾಂಸರಾಗಿ ಖ್ಯಾತರಾಗಿರುವುದು ಹೆಮ್ಮೆಯ ಸಂಗತಿ. ಕಲೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ವಿದ್ವಾನ್ ಎಚ್.ಎಸ್.ಸುಧೀಂದ್ರ ಈ ಪ್ರೌಢ ಸಂಗೀತ ಕಲಾಶಾಲೆಯ ಸಾಧನೆಗಳ ಹಿಂದಿನ ರೂವಾರಿ.

Related Articles

ಪ್ರತಿಕ್ರಿಯೆ ನೀಡಿ

Latest Articles