ಕುಬತ್ತೂರಿನಲ್ಲಿದೆ ಪುರಾತನ ರಾಮೇಶ್ವರ ದೇಗುಲ

* ಶ್ರೀನಿವಾಸ ಮೂರ್ತಿ ಎನ್ ಎಸ್

ಶಿವಮೊಗ್ಗ ಜಿಲ್ಲೆ ವಾಸ್ತುಲೋಕದ ತೊಟ್ಟಿಲು ಎಂದೇ ಹೇಳಬಹುದು. ಶಾತವಾಹನರಿಂದ ಕೆಳದಿ ಅರಸರವರಿಗೆ ಇಲ್ಲಿ ದೇವಾಲಯಗಳು ನಿರ್ಮಾಣವಾಗಿದ್ದು ಬಹುತೇಕ ಅರಸರ ದೇವಾಲಯಗಳ ಇತಿಹಾಸದ ಕೊಂಡಿಯೆಂದೇ ಹೇಳಬಹುದು. ಇಲ್ಲಿನ ಹಲವು ದೇವಾಲಯಗಳು ಹೊಸ ಅಧ್ಯಯನಕ್ಕೆ ನಾಂದಿ ಹಾಡಿದೆ.  ಅಂತಹ ಅಪರೂಪದ ದೇವಾಲಯಗಳನ್ನು ಹೊಂದಿದ್ದು ಅಜ್ಞಾತ ತಾಣವಾಗಿರುವ ಊರೆಂದರೆ ಕುಬತ್ತೂರು.

ಕುಬತ್ತೂರು ಹಲವು ಅರಸರ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿದ್ದು ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳ ಹಾಗು ಕೆಳದಿ ಅರಸರ ಕಾಲದವರೆಗೂ ಪ್ರಮುಕ ಪಟ್ಟಣವಾಗಿತ್ತು. ಈಗ ಚಿಕ್ಕ ಗ್ರಾಮವಾಗಿರುವ ಇಲ್ಲಿ ಮೂರು ಅರಸರ ಕಾಲದ ಬಸದಿ ಹಾಗು ದೇವಾಲಯಗಳು ಇತಿಹಾಸದ ಕೊಂಡಿಯಂತಿದೆ.

ಶ್ರೀ ರಾಮೇಶ್ವರ ದೇವಾಲಯ

ಸುಮಾರು ಕ್ರಿ.ಶ 900 ರಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಮುಖಮಂಟಪವನ್ನು ಹೊಂದಿದೆ. ಇಲ್ಲಿನ ಮುಖಮಂಟಪದಲ್ಲಿ ನಾಲ್ಕು ಕಂಭಗಳಿವೆ. ವಿತಾನದಲ್ಲಿನ ಪದ್ಮದ ಅಲಂಕರಣವಿದ್ದು ಇಲ್ಲಿನ ಸಪ್ತಮಾತೃಕೆ ಹಾಗು ಮಹಿಷಮರ್ದಿನಿ ಶಿಲ್ಪಗಳು ಗಮನ ಸೆಳೆಯುತ್ತದೆ. ಹೊರಭಿತ್ತಿಯಲ್ಲಿ ಯಾವುದೇ ಅಲಂಕರಣವಿಲ್ಲ.  ದೇವಾಲಯದ ಎದುರಿನ ಪ್ರತ್ಯೇಕ ಮಂಟಪದಲ್ಲಿ ನಂದಿಯ ಶಿಲ್ಪವಿದೆ. ಅತ್ಯಂತ ಇಟ್ಟಿಗೆಯಿಂದ ನಿರ್ಮಿತ ಸರಳ ರಚನೆಯಾದ ಮಂಟಪದ ದ್ವಾರದ ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತನೆ ಇದೆ. ದೇವಾಲಯದ ಆವರಣದಲ್ಲಿನ ವೀರಗಲ್ಲು ಗಮನ ಸೆಳೆಯುತ್ತದೆ.

ಶ್ರೀ ನರಸಿಂಹ ದೇವಾಲಯ

ಸಂಪೂರ್ಣವಾಗಿ ನವೀಕರಣಗೊಂಡಿರುವ ಇಲ್ಲಿ ಕದಂಬರ ಕಾಲದ ಸುಮಾರು 5 ನೇ ಶತಮಾನಕ್ಕೆ ಸೇರುವ ಅಪುರೂಪದ ಕೇವಲ ನರಸಿಂಹ ಶೈಲಿಯ ನರಸಿಂಹನ ಶಿಲ್ಪವಿದೆ.  ಪ್ರಸ್ತುತ ಗರ್ಭಗುಡಿಯಲ್ಲಿ ಹೊಸದಾದ ಮೂರ್ತಿಯನ್ನ ಇರಿಸಲಾಗಿದ್ದರು ಇಲ್ಲಿ ಪಕ್ಕದಲ್ಲಿ ಇರಿಸಲಾದ ಈ ಪುರಾತನ ಶಿಲ್ಪ ಇತಿಹಾಸದ ಕೊಂಡಿಯಂತಿದೆ. ಸುಖಾಸನ ಭಂಗಿಯಲ್ಲಿರುವ ಈ ಶಿಲ್ಪ ದ್ವಿಭುಜ ನರಸಿಂಹ. ನೀಳವಾದ ದೇಹಾಕೄತಿ ಇದ್ದು ಎರಡು ಕೈಗಳು ಮೊಳಕಾಲು ಹಾಗು ಚಾಚಿದ ಕಾಲಿನ ಮೇಲೆ ಇದ್ದು ತಲೆಯಲ್ಲಿ ಕಮಲದ ಶಿಲ್ಪವಿದೆ.

ಶ್ರೀ ಪಾರ್ಶ್ವನಾಥ ಬಸದಿ

ಸುಮಾರು ಕ್ರಿ.ಶ  1017 ರಲ್ಲಿ ನಿರ್ಮಿಸಲಾದ ಈ ಬಸದಿ ಗರ್ಭಗುಡಿ ಹಾಗು ಮುಖಮಂಟಪವನ್ನು ಹೊಂದಿದೆ. ಸಂಪೂರ್ಣವಾಗಿ ಜಂಬಿಟ್ಟಿಗೆಯಿಂದ ನಿರ್ಮಿಸಲಾದ ಈ ಬಸದಿಯ ಗರ್ಭಗುಡಿಯಲ್ಲಿ ಸುಮಾರು ಐದು ಆಡಿ ಎತ್ತರದ ಪಾರ್ಶ್ವನಾಥನ ಮೂರ್ತಿ ಇದೆ. ಏಳು ಹೆಡೆಯ ಸರ್ಪದ ನೆರಳಿನಲ್ಲಿ ಚಾಮರಧಾರಿಣಿಯಿಂದ ಸುತ್ತವರೆದ ಶಿಲ್ಪ. ಹೊರಭಿತ್ತಿಯಲ್ಲಿ ಅಲಂಕರಣವಿಲ್ಲ. ಇನ್ನು ಇಲ್ಲಿನ ಶಾಸನಗಳು ಜೈನ ಭಕ್ತರ ಸಲ್ಲೇಖನ ವ್ರತದ ಉಲ್ಲೇಖ ಮಾಡಿದೆ. 

ತಲುಪುವ ಬಗ್ಗೆ:  ಸೊರಬದಿಂದ ಸುಮಾರು 31 ಕಿಮೀ ದೂರದಲ್ಲಿದ್ದು ಆನವಟ್ಟಿಯಿಂದ ಸುಮಾರು 4 ಕಿಮೀ ದೂರದಲ್ಲಿದೆ.  ಇಲ್ಲಿನ ಪ್ರಸಿದ್ದ ಕೋಟಿಪುರ ದೇವಾಲಯದ ನಂತರ ಏಡಕ್ಕೆ ತಿರುಗಿ ಹೋದಲ್ಲಿ ಸುಮಾರು 3 ಕಿಮೀ ದೂರದಲ್ಲಿ ಕುಬತ್ತೂರು ಇದೆ. ಇಲ್ಲಿನ ಬನವಾಸಿ ಸುಮಾರು 20 ಕಿಮೀ ದೂರ.

Related Articles

ಪ್ರತಿಕ್ರಿಯೆ ನೀಡಿ

Latest Articles