ಪರಿಶುದ್ಧತೆಗೆ ಉಪವಾಸ

ಉಪವಾಸ ಕೈಗೊಳ್ಳುವುದು ದೈಹಿಕ ಹಾಗೂ ಮಾನಸಿಕ ಶುದ್ಧತೆಗೆ ಸಹಕಾರಿ. ಎಲ್ಲ ಧರ್ಮದವರೂ ಉಪವಾಸ ವ್ರತವನ್ನು ಆಚರಿಸುತ್ತಾರೆ. ಆಯುರ್ವೇದ ವೈದ್ಯ ವಿಜ್ಞಾನದಲ್ಲಿಯೂ ಉಪವಾಸದ ಮಹತ್ವವನ್ನು ವಿವರಿಸಲಾಗಿದೆ. ಅಲ್ಲದೇ ಆಧುನಿಕ ವಿಜ್ಞಾನ ಕೂಡಾ ಉಪವಾಸ ಕೈಗೊಳ್ಳುವುದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸುತ್ತದೆ.

ವ್ರತ ಅಂದರೆ ಉಪವಾಸ ಇರುವುದು. ಉಪವಾಸ ಅಂದರೆ ಆಹಾರವನ್ನು ಸೇವಿಸದೆ ದೇಹವನ್ನು ದಂಡಿಸುವುದು. ಆಧ್ಯಾತ್ಮಿಕವಾಗಿ ನೋಡುವುದಾದರೆ ಉಪವಾಸ ದೈಹಿಕ ತೃಷೆಯನ್ನು ನಿಯಂತ್ರಿಸಿಕೊಳ್ಳುವುದರ ಜತೆಗೆ, ಬಯಕೆಗಳನ್ನು ಕಳೆದುಕೊಳ್ಳುವುದು. ಅರ್ಥಾತ್ ಇಂದ್ರಿಯ ನಿಗ್ರಹದಿಂದ ನಕಾರಾತ್ಮಕ ಅಂಶಗಳನ್ನು ಕಳೆದುಕೊಳ್ಳುವುದು.
ಎಲ್ಲ ಧರ್ಮಗಳಲ್ಲಿ ಉಪವಾಸ ವ್ರತಾಚರಣೆಗೆ ವಿಶೇಷ ಮಹತ್ವವಿದೆ. ನಂಬಿಕಸ್ಥರು, ಧಾರ್ಮಿಕ ಮನೋಭಾವ ಉಳ್ಳವರು ತಿಂಗಳಿಗೊಮ್ಮೆಯಾದರೂ ಕಡ್ಡಾಯವಾಗಿ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಐಹಿಕ ಸುಖವನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಉಪವಾಸದ ಧಾರ್ಮಿಕ ಉದ್ದೇಶವಾದರೆ, ಇದರಿಂದ ದೈಹಿಕ – ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ತಿಂದುಂಡು ಸುಖಿಸುವ ದೇಹಕ್ಕೆ ಹಸಿವಿನ ಅರಿವು ಆಗಬೇಕೆಂದಿದ್ದರೆ ಉಪವಾಸ ಕೈಗೊಳ್ಳುವುದು ಬಹಳ ಮುಖ್ಯ. ಧಾರ್ಮಿಕ ಭಾವನೆಗಳೇನೇ ಇರಲಿ ಆರೋಗ್ಯದ ದೃಷ್ಟಿಯಿಂದ ತಿಂಗಳಿಗೊಮ್ಮೆಯಾದರೂ ಉಪವಾಸ ಕೈಗೊಳ್ಳಬೇಕು ಅನ್ನೋದು ನಿಯಮ. ದೇಹದ ಅಂಗಾಂಗಗಳನ್ನು ನಿಗ್ರಹಿಸಿಕೊಳ್ಳುವುದು ದೈನಂದಿನ ಬದುಕಿಗೆ ಬಹಳ ಅಗತ್ಯ.
ದೇವರ ಹೆಸರಿನಲ್ಲಿ ಉಪವಾಸ ವ್ರತ ಕೈಗೊಳ್ಳುವುದರಿಂದ ದೇವರು ಸಂತೃಪ್ತನಾಗುತ್ತಾನೆ, ಕಷ್ಟಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಹಲವರದ್ದು. ಅದೇ ನಂಬಿಕೆ, ದೈವೀ ಭಕ್ತಿ ಇರುವವರು ಉಪವಾಸ ವ್ರತವನ್ನು ಆಚರಿಸುತ್ತಾರೆ.
ಮಾನವನ ಎಲ್ಲಾ ರೋಗಗಳಿಗೂ ಆತನ ದೇಹದಲ್ಲಿ ಉತ್ಪತ್ತಿಯಾಗುವಂತಹ ಕಶ್ಮಲಗಳೇ ಮುಖ್ಯ ಕಾರಣವಾಗಿರುತ್ತದೆ. ವ್ಯಕ್ತಿಯು ಉಪವಾಸದಲ್ಲಿ ತೊಡಗಿದಾಗ ಜೀರ್ಣಾಂಗದ ಶ್ರಮವು ಕಡಿಮೆಯಾಗಿ ಜೀರ್ಣಾಂಗವು ಬಲಿಷ್ಠಗೊಂಡು ದೇಹದಲ್ಲಿ ಉತ್ಪತ್ತಿಯಾದ ವಿಷವನ್ನು ಹೊರಹಾಕಿ ರೋಗ ಶಮನಕ್ಕೆ ಸಹಕರಿಸುತ್ತದೆ. ಮನುಷ್ಯನ ಆರೋಗ್ಯದ ಹಿತಕ್ಕಾಗಿ ವಾರದಲ್ಲಿ ಒಂದು ದಿನ ಅಥವಾ ಕನಿಷ್ಠ 15ದಿನಗಳಿಗೆ ಒಮ್ಮೆಯಾದರೂ ಒಂದು ದಿನದ ಉಪವಾಸ ಮಾಡಬೇಕು.
ಉಪವಾಸ ಮಾಡುವುದು ಅಂದರೆ ಅದೊಂದು ಧಾರ್ಮಿಕ ಪ್ರಕ್ರಿಯೆ, ದೇವರನ್ನು ಆರಾಸುವವರ ಮನಸ್ಸಿನ ಭಕ್ತಿ, ನಂಬಿಕೆ, ದೇವರಿಗೆ ತೋರುವ ಪ್ರೀತಿ ಎಂದೇ ಭಾವಿಸುತ್ತಾರೆ. ದೇಹವೇ ದೇಗುಲ ಎಂದಿದ್ದಾರೆ ಬಸವಣ್ಣನವರು. ದೇಹವೇ ದೇಗುಲ ಎಂದಾದ ಮೇಲೆ ಆ ದೇಹವನ್ನು ಯಾವ ರೀತಿ ನಡೆಸಿಕೊಳ್ಳಬೇಕು, ದಂಡಿಸಿಕೊಳ್ಳಬೇಕು ಎಂಬುದು ತಿಳಿದಿರಬೇಕು. ದೇಹ ದೇಗುಲವದು ಪರಿಶುದ್ಧವಾಗಿರುವಂತೆ ಮಾಡಲು ಉಪವಾಸ ಕೈಗೊಳ್ಳುವುದು ಅವಶ್ಯ. ಉಪವಾಸ ನಮ್ಮೊಳಗೊಂದು ಸಕಾರಾತ್ಮಕ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಉಪವಾಸದಿಂದಿದ್ದು ದೇಹದಲ್ಲಿರುವ ಕಶ್ಮಲವನ್ನು ತೆಗೆದು ಹಾಕುವುದು ಅಥವಾ ಜೀರ್ಣಕ್ರಿಯೆಗೆ ವಿರಾಮ ನೀಡುವುದು ಮಾತ್ರವಲ್ಲ, ಒಳಗಿನ ಆತ್ಮವನ್ನು ಪರಿಶುದ್ಧಗೊಳಿಸುತ್ತದೆ. ಉಪವಾಸ ಮಾಡುವುದರಿಂದ ದೈಹಿಕ ಶುದ್ಧತೆ ಮಾತ್ರವಲ್ಲ, ಮನಸ್ಸೂ ಪರಿಶುದ್ಧಗೊಳ್ಳುತ್ತದೆ.
ಕೆಲವರು ಉಪವಾಸ ಅಂದರೆ ಹಾಲು ಅಥವಾ ದ್ರವಾಹಾರವನ್ನು ಸೇವಿಸುತ್ತಾರೆ. ಇನ್ನು ಕೆಲವರು ನೀರನ್ನೂ ಸೇವಿಸುವುದಿಲ್ಲ. ಅದು ಅವರವರ ನಂಬಿಕೆಗೆ ಸಂಬಂಸಿದ್ದು. ನಂಬಿಕೆಯ ಪ್ರಕಾರ ಉಪವಾಸ ಮಾಡುವುದರಿಂದ ಶಕ್ತಿವರ್ಧನೆಯಾಗುತ್ತದೆ, ಸಕಾರಾತ್ಮಕ ಮನೋಭಾವ ಬೆಳೆಯುತ್ತದೆ. ಮನಸ್ಸಿನ ಆರೋಗ್ಯವೂ ಹೆಚ್ಚುತ್ತದೆ. ಸಂಯಮದಿಂದಿರುವುದು ಹಾಗೂ ದೈಹಿಕ ತೃಷೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಸಾಧ್ಯ.
ಹಬ್ಬಗಳಂದು ವ್ರತಾಚರಣೆ ಕೈಗೊಳ್ಳುವ ದಿನದಂದು ವಾತಾವರಣದಲ್ಲಿ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ. ಅದರಿಂದ ನಮ್ಮ ಮೆದುಳಿನಲ್ಲಿ ಒಂದು ವಿಶಿಷ್ಟವಾದ ಶಕ್ತಿ ಜಾಗೃತವಾಗುತ್ತದೆ. ಆಹಾರ ತ್ಯಾಗ ಮಾಡುವುದರ ಮೂಲಕ ಮನಸ್ಸಿಗೆ ಹೆಚ್ಚು ಕೆಲಸ ಕೊಡಬೇಕು. ಹೊಟ್ಟೆ ತುಂಬಿದರೆ ಬುದ್ಧಿ ಕೆಲಸ ಮಾಡುವುದಿಲ್ಲ ಎನ್ನುತ್ತಾರೆ. ಹಾಗಾಗಿ ದೇಹ-ಬುದ್ಧಿ ಎರಡನ್ನೂ ಸಮತೋಲನದಲ್ಲಿಡಲು ಉಪವಾಸ ವ್ರತ ಕೈಗೊಳ್ಳುವುದು ಒಳ್ಳೆಯದು. ಆಹಾರವನ್ನು ತ್ಯಜಿಸುವುದು ಎಂದರೆ ಬುದ್ಧಿಯನ್ನು ಶುದ್ಧೀಕರಿಸುವುದು, ಚುರುಕುಗೊಳಿಸುವುದು ಎಂದೇ ಅರ್ಥ.

ಪ್ರಯೋಜನಗಳು
ಉಪವಾಸ ಪರಿಣಾಮಕಾರಿ ಶುದ್ಧೀಕರಣ ಕ್ರಿಯೆಯಾಗಿದ್ದು, ಇದರಿಂದ ಹಲವು ಪ್ರಯೋಜನಗಳಿವೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಉಪವಾಸ ಕೈಗೊಳ್ಳುವುದು ಸರಳ ವಿಧಾನ ಎಂಬುದಾಗಿ ತತ್ವಜ್ಞಾನಿಗಳು, ವಿಜ್ಞಾನಿಗಳು, ವೈದ್ಯರುಗಳು ಸಲಹೆ ನೀಡುತ್ತಾರೆ. ಬುದ್ಧಿಜೀವಿಗಳೆನಿಸಿಕೊಂಡಿರುವ ಸಾಕ್ರಟಿಸ್, ಪ್ಲೇಟೋ, ಅರಿಸ್ಟಾಟಲ್, ಚರಕ ಮೊದಲಾದವರು ಫಾಸ್ಟಿಂಗ್ ಥೆರಪಿಯಲ್ಲಿ ನಂಬಿಕೆ ಇರಿಸಿಕೊಂಡಿದ್ದರು. ಹಬ್ಬದ ಸಂದರ್ಭಗಳಲ್ಲಿ ನಂಬಿಕೆ ಉಳ್ಳವರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಅನ್ನ ಆಹಾರ, ನೀರನ್ನು ಸೇವಿಸದೆ ಕಠಿಣ ಉಪವಾಸ ಕೈಗೊಳ್ಳುವವರೂ ಇದ್ದಾರೆ. ಉಪವಾಸ ಕೂಡಾ ಒಂದು ರೀತಿಯ ಪ್ರಾರ್ಥನೆಯೇ ಸರಿ. ಪ್ರಾರ್ಥನೆ ಮತ್ತು ಉಪವಾಸದಿಂದ ದೇಹದಲ್ಲಿರುವ ಕಶ್ಮಲಗಳು ಹೊರಹೋಗುವುದು ಮಾತ್ರವಲ್ಲ, ಆಂತರ್ಯದೊಳಗಿನ ಕಶ್ಮಲಗಳೂ ತೊಳೆದು ಮನಸ್ಸು ಪರಿಶುದ್ಧವಾಗುತ್ತದೆ. ಅಂದರೆ ಮನಸ್ಸಿನ ನಕಾರಾತ್ಮಕ ಅಂಶಗಳನ್ನು ಕಳೆದುಕೊಳ್ಳುವುದಕ್ಕೆ ಸಾಧ್ಯ.

Related Articles

ಪ್ರತಿಕ್ರಿಯೆ ನೀಡಿ

Latest Articles