ವ್ಯಕ್ತಿತ್ವದಲ್ಲಿದೆ ಯಶಸ್ಸು ಮತ್ತು ಜನಪ್ರಿಯತೆ

ನಾವು ಸದ್ಯ ಏನಾಗಿರುವೆವೋ ಅದು ನಮ್ಮ ಯೋಚನೆಗಳ ಫಲವೇ. ಯೋಚನೆಗಳೇ ಸದ್ಯದ ಪರಿಸ್ಥಿತಿಗೆ ತಳಹದಿ. ನಮ್ಮ ಯೋಚನೆಗಳಿಂದಲೇ ಅದು ರೂಪುಗೊಂಡಿದೆ. ಒಳ್ಳೆಯದನ್ನೇ ಯೋಚಿಸುತ್ತಾ, ಒಳ್ಳೆಯತನಗಳಿಂದ ನಡೆದುಕೊಂಡರೆ ಸುಖ ನಮ್ಮನ್ನು ಹಿಂಬಾಲಿಸುತ್ತದೆ.

ವಿಶ್ವದ ಇತಿಹಾಸದಲ್ಲೇ ನೋಡುವುದಾದರೆ ನಿಮ್ಮಂತೆ ಯಾರೂ ಇರುವುದಿಲ್ಲ. ನಿಮ್ಮಂತವರು ಮತ್ತೆ ಹುಟ್ಟಿ ಬರುವುದಕ್ಕೆ ತುಂಬಾ ಕಾಲವೇ ಬೇಕು. ಇಡೀ ವಿಶ್ವದಲ್ಲಿ ನಿಮ್ಮಂತೆ ಯಾರೂ ಇಲ್ಲ, ನೀವೇ ಮೂಲಭೂತರು. ನಿಮಗೆ ನೀವೇ ಅಪರೂಪ, ಅನನ್ಯ. ಹಾಗಾಗಿ ನಿಮ್ಮ ಅನನ್ಯತೆಯನ್ನು ಸಂಭ್ರಮಿಸಿ ಎನ್ನುತ್ತಾರೆ ಶ್ರೀ ಶ್ರೀ ರವಿಶಂಕರ್.
ಇಡೀ ಬ್ರಹ್ಮಾಂಡದಲ್ಲಿ ಮನುಷ್ಯರ ವ್ಯಕ್ತಿತ್ವ ವಿಭಿನ್ನ. ಒಬ್ಬರಂತೆ ಮತ್ತೊಬ್ಬರಿಲ್ಲ. ಒಬ್ಬ ವ್ಯಕ್ತಿಯಲ್ಲಿರುವ ಒಳ್ಳೆಯತನವಿರಲಿ, ಗುಣ-ಅವಗುಣಗಳಿರಲಿ ಅದನ್ನು ಮತ್ತೊಬ್ಬರಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ. ವ್ಯಕ್ತಿ ವ್ಯಕ್ತಿಗಿಂತ ಭಿನ್ನ. ಹಾಗಾಗಿ ಎಲ್ಲ ವ್ಯಕ್ತಿಗಳು ಜೀವನದಲ್ಲಿ ಯಶಸ್ಸು ಗಳಿಸುವುದಿಲ್ಲ.ಎಲ್ಲರೂ ಜನಪ್ರಿಯತೆಯ ಉತ್ತುಂಗದಲ್ಲಿರುವುದಕ್ಕೆ ಸಾಧ್ಯವಿಲ್ಲ. ಸಮಾಜದಲ್ಲಿ ಅಸಮಾನತೆಗಳಿರುವುದು ಭಿನ್ನ ವ್ಯಕ್ತಿಗಳಿಂದಾಗಿಯೇ. ಆದರೆ ವ್ಯಕ್ತಿಯೊಬ್ಬ ಯಶಸ್ಸು ಗಳಿಸುವುದು, ಜನಪ್ರಿಯತೆ ಹೊಂದುವುದು ತನ್ನ ವ್ಯಕ್ತಿತ್ವದಿಂದಲೇ. ವ್ಯಕ್ತಿ ತನ್ನಲ್ಲಿ ಅಳವಡಿಸಿಕೊಂಡಿರುವ, ಬೆಳೆಸಿಕೊಂಡಿರುವ ಗುಣಗಳಿಂದಾಗಿಯೇ. ನಿಮ್ಮದೇ ವ್ಯಕ್ತಿತ್ವದಲ್ಲಿರುವ ರಹಸ್ಯ ಅಂಶಗಳನ್ನು ಹುಡುಕಿಕೊಂಡು ಯಶಸ್ಸು ಮತ್ತು ಜನಪ್ರಿಯತೆಯ ವೇಗವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳಿ. ಯಶಸ್ಸು ಮತ್ತು ಜನಪ್ರಿಯತೆ ತನ್ನಿಂತಾನೇ ನಿಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತದೆ.
ಅಷ್ಟಕ್ಕೂ ವ್ಯಕ್ತಿತ್ವ ಅಂದರೆ ನಮ್ಮ ಬಾಹ್ಯ ನೋಟವಲ್ಲ. ಹೊರಗಿನ ಪ್ರಪಂಚಕ್ಕೆ ನಾವು ಹೇಗೆ ಕಾಣಿಸಿಕೊಳ್ಳುತ್ತಿದ್ದೇವೆ ಅನ್ನೋದು ಮುಖ್ಯವಾಗುವುದಿಲ್ಲ. ನಮ್ಮ ಯೋಚನೆಗಳು, ನಮ್ಮ ಚಟುವಟಿಕೆಗಳು ಹಾಗೂ ನಮ್ಮ ಭಾವನೆಗಳು ನಮ್ಮ ಜೀವನದ ಗತಿಯನ್ನೇ ಬದಲಾಯಿಸುತ್ತದೆ. ಆ ವ್ಯಕ್ತಿತ್ವವೇ ವ್ಯಕ್ತಿಯ ಉನ್ನತಿಯನ್ನು ನಿರ್ಧರಿಸುತ್ತದೆ.

ಆಕರ್ಷಕ ವ್ಯಕ್ತಿತ್ವವನ್ನು ಅನ್ವೇಷಿಸಿಕೊಳ್ಳಿ
ಮಗುವೊಂದು ಕೊಠಡಿಯೊಳಕ್ಕೆ ಬಂದ ತಕ್ಷಣ ಅಲ್ಲಿರುವವರೆಲ್ಲನ್ನು ಆಕರ್ಷಿಸುತ್ತದೆ. ಎಲ್ಲರೂ ಮಗುವಿನತ್ತ ತಿರುಗಿ ನೋಡುತ್ತಾರೆ. ಮಗುವಿನ ಇರುವಿಕೆಯನ್ನು ಗಮನಿಸುತ್ತಾರೆ. ಆ ಮಗು ಜನರನ್ನು ಆಕರ್ಷಿಸುವುದಕ್ಕೆ ಯಾವ ಪ್ರಯತ್ನವನ್ನು ಮಾಡಿರುವುದಿಲ್ಲ. ಎಲ್ಲವೂ ಸ್ವಾಭಾವಿಕವಾಗಿ ನಡೆಯುತ್ತಿರುತ್ತದೆ. ಮಾತಿಗಿಂತ ಹೆಚ್ಚಾಗಿ ಅದರ ಇರುವಿಕೆಯಲ್ಲಿಯೇ ಹೆಚ್ಚು ಜನರೊಂದಿಗೆ ಸಂವಹನ ನಡೆಸುತ್ತದೆ.

ಯಶಸ್ಸು ಅಂದರೆ….
ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸನ್ನು ನಿರೀಕ್ಷೆ ಮಾಡುತ್ತಾರೆ. ಯಶಸ್ಸು ಅಂದರೆ ಐಷಾರಾಮಿಯಾಗಿ ಜೀವಿಸುವುದು, ದೊಡ್ಡ ಮೊತ್ತವನ್ನು ಬ್ಯಾಂಕ್‍ನಲ್ಲಿ ಹೊಂದಿರುವುದು ಎಂದೇ ಭಾವಿಸುತ್ತಾರೆ. ಕೆಲವರಲ್ಲಿ ಹೆಚ್ಚು ಹಣ ಇರಬಹುದು. ಆದರೆ ಅವರ ದೇಹ ಅನಾರೋಗ್ಯಕ್ಕೆ ತುತ್ತಾಗಿರುತ್ತದೆ. ಇನ್ನು ಕೆಲವರು ತಾವು ಹೊಂದಿರುವುದನ್ನು ಅವರಿಂದ ಅನುಭವಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಲ್ಲಿದ್ದವನಿಗೆ ಕಡ್ಲೆಯಿಲ್ಲ, ಕಡ್ಲೆಯಿದ್ದವನಿಗೆ ಹಲ್ಲಿಲ್ಲ ಅನ್ನುವ ಪರಿಸ್ಥಿತಿ. ಹೆಚ್ಚಿನ ಸಂದರ್ಭಗಳಲ್ಲಿ ಜನರು ತಮ್ಮ ಅರ್ಧ ಆರೋಗ್ಯವನ್ನು ಸಂಪತ್ತು ಗಳಿಸುವುದಕ್ಕಾಗಿಯೇ ಕಳೆಯುತ್ತಾರೆ. ಇನ್ನರ್ಧ ಆಯಸ್ಸಿನಲ್ಲಿ ಜೀವನದಲ್ಲಿ ಕಳೆದುಕೊಂಡ ಆರೋಗ್ಯವನ್ನು ಗಳಿಸಲು ಕೂಡಿಟ್ಟ ಹಣವನ್ನು ಖರ್ಚು ಮಾಡುತ್ತಾರೆ. ಯಾವಾಗ ನಿಮ್ಮ ಸಮಸ್ಯೆಗಳು ಸಮಸ್ಯೆಗಳಾಗಿ ಉಳಿಯುವುದಿಲ್ಲವೋ, ಅವುಗಳನ್ನು ಒಂದು ಅವಕಾಶ ಎಂದು ಪರಿಗಣಿಸುತ್ತೀರೋ ಆಗ ನಿಮಗೆ ಬಲ ಬರುತ್ತದೆ. ಸಮಸ್ಯೆಯನ್ನು ನಗುವಿನಿಂದಲೇ ಎದುರಿಸುತ್ತೀರಿ. ಆ ವ್ಯಕ್ತಿತ್ವದಿಂದ ಉನ್ನತಿಯ ಕಡೆಗೆ ಹೆಜ್ಜೆ ಹಾಕಬಹುದು.

ವಿಭಿನ್ನ ವ್ಯಕ್ತಿತ್ವ ಬೆಳೆಸಿಕೊಳ್ಳಿ
ಜ್ಞಾನ ಗಳಿಸಿಕೊಳ್ಳಲು ನೆರವಾಗುವಂತಹ ಪುಸ್ತಕಗಳು ಸಾಕಷ್ಟು ಸಿಗುತ್ತವೆ. ಆದರೆ ಒಬ್ಬ ವ್ಯಕ್ತಿಯ ಆಕರ್ಷಕ ವ್ಯಕ್ತಿತ್ವ, ಸ್ನೇಹಪರತೆ ಹಾಗೂ ಅವನ ಇರುವಿಕೆಯ ಅನುಭವವನ್ನು ಪುಸ್ತಕಗಳು ಕೊಡಲಾರವು. ಅಂದರೆ ಅವು ವ್ಯಕ್ತಿತ್ವವನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕಷ್ಟೇ.
ಜನಪ್ರಿಯತೆ ಮತ್ತು ಯಶಸ್ಸು ಪ್ರತಿಸ್ರ್ಪಗಳು
ಒಂದನ್ನು ಹಿಂದಿಕ್ಕಿ ಮುನ್ನುಗ್ಗಿದ ಮೇಲೆ, ಮತ್ತೊಂದು ನಿಮ್ಮನ್ನು ಅನುಸರಿಸಿಕೊಂಡು ಬರುತ್ತದೆ ಎಂದು ನಿರೀಕ್ಷಿಸಬೇಡಿ. ಅಂದರೆ ಜನಪ್ರಿಯತೆಯಿದ್ದರೆ ಯಶಸ್ಸು ಸಿಗುತ್ತದೆ, ಯಶಸ್ಸು ಇದ್ದರೆ ಖ್ಯಾತಿ ಬರುತ್ತದೆ ಎಂದು ಭಾವಿಸಬೇಡಿ. ಯಾಕೆಂದರೆ ಜನಪ್ರಿಯತೆ ಮತ್ತು ಯಶಸ್ಸು ಎರಡೂ ಕೂಡಾ ಪ್ರತಿಸ್ರ್ಪಗಳು. ಮೊದಲು ಯಶಸ್ಸು, ನಂತರ ಜನಪ್ರಿಯತೆ. ಯಾವಾಗಲೂ ಯಶಸ್ಸು ಮೊದಲ ಸ್ಥಾನದಲ್ಲಿರುತ್ತದೆ. ನಂತರವೇ ಜನಪ್ರಿಯತೆ ಹಿಂಬಾಲಿಸುತ್ತದೆ. ಜನಪ್ರಿಯತೆ ಮತ್ತು ಯಶಸ್ಸು ಎರಡನ್ನು ಗಳಿಸಿಕೊಳ್ಳಲು ಬೇರೆ ಬೇರೆ ರೀತಿಯ ಟ್ಯಾಕ್ಟಿಕ್ಸ್ ಇದೆ. ಹಾಗಾಗಿ ಪ್ರಸಿದ್ಧಿ ಮತ್ತು ಅದೃಷ್ಟವನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಖ್ಯಾತಿ ಮತ್ತು ಯಶಸ್ಸಿನ ನಡುವೆ ಇರುವ ವ್ಯತ್ಯಾಸವನ್ನು ಅದರ ಫಲಿತಾಂಶದಿಂದಲೇ ಅರ್ಥ ಮಾಡಿಕೊಳ್ಳಬಹುದು.
ಉದಾಹರಣೆಗೆ ವ್ಯವಹಾರದಲ್ಲಿ ಯಶಸ್ಸನ್ನು ನಿರೀಕ್ಷೆ ಮಾಡುತ್ತೀರಿ ಅಂತಾದರೆ ನಿಮ್ಮ ಹಿಂದೆ ಬರುವವರ ಸಂಖ್ಯೆಯನ್ನು ಲೆಕ್ಕ ಮಾಡುವುದಿಲ್ಲ, ಅಭಿಮಾನಿಗಳ ಬಗ್ಗೆಯು ತಲೆ ಕೆಡಿಸಿಕೊಳ್ಳುವುದಿಲ್ಲ, ಹಾಗೆಯೇ ನಿಮ್ಮ ಗ್ರಾಹಕರನ್ನೂ ಕೂಡಾ. ಅದರ ಬದಲಾಗಿ ಮೂರು ತಿಂಗಳು, ಆರು ತಿಂಗಳು, ಒಂದು ವರ್ಷದಲ್ಲಿ ಅದೆಷ್ಟು ಹಣ ಗಳಿಸಿದಿರಿ ಎಂದಷ್ಟೇ ಲೆಕ್ಕ ಮಾಡುತ್ತೀರಿ. ಅರ್ಥಾತ್ ಇಲ್ಲಿ ಯಶಸ್ಸಿನ ಲೆಕ್ಕಾಚಾರದಲ್ಲಿ ಹಣವೇ ಮುಖ್ಯ.
ಆದರೆ ಜನಪ್ರಿಯತೆ ಹಾಗಲ್ಲ. ಹಣದ ಹೊರತಾಗಿ ಎಲ್ಲವೂ ಬೇಕು. ನಿಮ್ಮನ್ನು ಅನುಸರಿಸುವವರು ಬೇಕು, ನಿಮಗೆಷ್ಟು ಅಭಿಮಾನಿಗಳಿದ್ದಾರೆ ಅನ್ನೋದನ್ನು ಲೆಕ್ಕ ಮಾಡುತ್ತೀರಿ. ಸಾಮಾಜಿಕ ಜಾಲತಾಣದಲ್ಲಿ ನಿಮಗೆಷ್ಟು ಮಂದಿ ಗೆಳೆಯರಿದ್ದಾರೆ ಅನ್ನೋದನ್ನು ತಾಳೆ ಹಾಕುತ್ತೀರಿ. ಮೂರು ತಿಂಗಳಿನಲ್ಲಿ ಅದೆಷ್ಟು ಮಂದಿ ನಿಮ್ಮ ಸಾಮಾಜಿಕ ತಾಣಕ್ಕೆ ಸೇರ್ಪಡೆಗೊಂಡರು ಎಂಬುದನ್ನೂ ಹುಡುಕುತ್ತೀರಿ. ಇವು ವ್ಯವಹಾರದ ಯಶಸ್ಸು ಮತ್ತು ಜನಪ್ರಿಯತೆಯ ನಡುವಿನ ವ್ಯತ್ಯಾಸಗಳು.
ಆದರೆ ಮನುಷ್ಯನ ದಿನನಿತ್ಯದ ಜೀವನದ ಮೇಲೆ ಪ್ರಭಾವ ಬೀರುವ ಅತ್ಯಂತ ಪ್ರಮುಖವಾದ ಸಂಗತಿಗಳು ಅಂದರೆ ಯೋಚನೆಗಳು ಮತ್ತು ಭಾವನೆಗಳು ಅಂತಾರೆ ಸ್ವಾಮಿ ಜಗದಾತ್ಮಾನಂದರು. ಉನ್ನತಿಯ ಹಾದಿಯಲ್ಲಿ ಮುನ್ನಡೆಯಬೇಕೆಂದುಕೊಂಡಿರುವ ಯಾವುದೇ ವ್ಯಕ್ತಿ ತನ್ನ ಆಲೋಚನಾ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ಭಯ, ಸಂಶಯಗಳಿಂದ ಕೂಡಿದ್ದರೆ ಫಲಿತಾಂಶವೂ ನಕಾರಾತ್ಮಕವಾಗಿರುತ್ತದೆ. ಆತ್ಮವಿಶ್ವಾಸ, ಆಶಾಭಾವನೆಯಿಂದ ಕೂಡಿದ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಯಶಸ್ಸು ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಪ್ರಸಿದ್ಧಿಯೂ ನಿಮ್ಮನ್ನು ಹಿಂಬಾಲಿಸುತ್ತದೆ.

ಶ್ರೀದೇವಿ ಅಂಬೆಕಲ್ಲು
ಶ್ರೀದೇವಿ ಅಂಬೆಕಲ್ಲುhttp://sakshatkara.com/
ಪ್ರತಿಯೊಬ್ಬರ ಬದುಕಿನಲ್ಲಿಯೂ ಆಧ್ಯಾತ್ಮಿಕ ವಿಚಾರಧಾರೆಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ. ಆಧ್ಯಾತ್ಮಿಕ ವಿಚಾರಧಾರೆಗಳು ಅಂದಾಕ್ಷಣ ಅದು ಧರ್ಮವೊಂದಕ್ಕೆ ಮಾತ್ರ ಸೀಮಿತಗೊಂಡುದುದಲ್ಲ. ಎಲ್ಲರ ಬದುಕಿನ ಭಾಗವೂ ಹೌದು. ಮನಸ್ಸಿನ ಸಮತೋಲನಕ್ಕೆ ಯೋಗ, ಧ್ಯಾನ ಹೇಗೆ ಸಹಕಾರಿಯೋ ಹಾಗೆಯೇ ಪ್ರಾರ್ಥನೆ, ದೇವರಪೂಜೆ, ವ್ರತಾಚರಣೆಗಳು, ಹಬ್ಬಗಳು ಮನುಕುಲದ ಬಾಂಧವ್ಯವೃದ್ಧಿಗೆ ಸಹಕಾರಿ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ಪಸರಿಸುವ ಸಣ್ಣ ಪ್ರಯತ್ನ. ನೀವು ಕೂಡಾ ನಿಮಗೆ ತಿಳಿದಿರುವ ದೇಗುಲ, ಯೋಗಕೇಂದ್ರ, ಮಠ-ಮಂದಿರಗಳ ಪರಿಚಯಾತ್ಮಕ ಲೇಖನ, ಹಬ್ಬ, ವ್ರತಾಚರಣೆಗಳ ಮಹತ್ವ, ಯೋಗ, ಧ್ಯಾನ ಕ್ರಮಗಳು, ಆಧ್ಯಾತ್ಮಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಯಾವುದೇ ಲೇಖನಗಳು, ಆಯುರ್ವೇದ, ಮನೆ ಮದ್ದು ಬರಹಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles