ನಿನ್ನ ನೀನು ಮರೆತರೇನು ಸುಖವಿದೆ

ಪ್ರತಿಯೊಬ್ಬರಲ್ಲೂ ವಿಶೇಷವಾದ, ವಿಭಿನ್ನ ಪ್ರತಿಭೆ ಇರುತ್ತದೆ. ಯಾರದೋ ಯಶಸ್ಸನ್ನು ಕಂಡು ನಿಮ್ಮ ಮನಸ್ಸನ್ನು ಭಗ್ನ ಗೊಳಿಸಿಕೊಳ್ಳದೆ ನಿಮ್ಮ ನಿಜವಾದ ಪ್ರತಿಭೆಯನ್ನು ಗುರುತಿಸಿಕೊಳ್ಳಿ. ನಿಮ್ಮನ್ನು ನೀವು ಪ್ರೀತಿಸಿ. ನಿಮ್ಮ ಬಗ್ಗೆ ನಂಬಿಕೆ ಇರಲಿ. ಇವೆಲ್ಲವೂ ನಿಮ್ಮ ಸ್ವಾಭಿಮಾನವನ್ನು ಹೆಚ್ಚಿಸಿ,ಯಶಸ್ಸಿಗೆ ಪ್ರೇರಣೆಯಾಗಬಲ್ಲುದು.

ಶ್ರೀದೇವಿ ಅಂಬೆಕಲ್ಲು


ನಿನ್ನನ್ನು ನೀನು ಪ್ರೀತಿಸು, ಆಗ ಜೀವನಪೂರ್ತಿ ಪ್ರಣಯ ತುಂಬಿರುತ್ತದೆ' ಎಂದಿದ್ದಾರೆ ಲೇಖಕ, ಕವಿ, ನಾಟಕಕಾರ ಆಸ್ಕರ್‍ವೈಲ್ಡ್ . ಜೀವನ ಅಂದರೆ ಜೀವಿಸುವುದು ಮಾತ್ರವಲ್ಲ ಜೀವನವನ್ನು ಸಂಭ್ರಮಿಸುವುದು. ಹೌದು. ಹುಟ್ಟು ಪಡೆದ ಜೀವವೊಂದು ಖುಷಿಯಾಗಿರಬೇಕು ಅಂದರೆ ಹೇಗಿದ್ದೇವೋ ಹಾಗೆಯೇ ನಮ್ಮನ್ನು ಒಪ್ಪಿಕೊಂಡು ನಮ್ಮನ್ನು ಪ್ರೀತಿಸುವುದು. ಇನ್ಯಾರನ್ನೋ ಪ್ರೀತಿಸಿದರೆ ಅವರು ಜೀವನಪೂರ್ತಿ ನಮ್ಮ ಜತೆ ಉಳಿಯುತ್ತಾರೆ ಅನ್ನೋದು ಭರವಸೆಯಷ್ಟೇ. ನಮ್ಮ ಕೊನೆಯುಸಿರು ಇರುವವರೆಗೂ ನಮ್ಮ ಜತೆ ನಾವು ಮಾತ್ರ ಇರುವುದಕ್ಕೆ ಸಾಧ್ಯ. ಬೇರೆಬೇರೆ ಕಾರಣಗಳಿಂದ ಬದುಕಿನಲ್ಲಿ ಬಂದು ಹೋಗುವವರು ಅದೆಷ್ಟೋ ಮಂದಿ. ಆದರೆ ಉಳಿಯುವವರು ಕೆಲವೇ ಜನ. ಖುಷಿಯ ಜೀವನ ನಡೆಸಲು ನೀವೇ ಕೈಗೊಂಡ ಪ್ರಜ್ಞಾಪೂರ್ವಕ ತೀರ್ಮಾನ ಅಂದರೆ ನಿಮ್ಮನ್ನು ನೀವು ಪ್ರೀತಿಸುವುದು. ಮಾರ್ಕೆಟ್‍ನಲ್ಲಿ ಸಿಗುವ ಪುಸ್ತಕಗಳಿರಬಹುದು, ಇಲ್ಲವೇ ಗುರುಗಳು ಸಲಹೆ ನೀಡುವುದುನಿಮ್ಮನ್ನು ನೀವು ಪ್ರೀತಿಸಿ’ ಎಂದು. ಹಾಗಾಗಿ ಬೇರೆಯವರನ್ನು ಪ್ರೀತಿಸುವುದಕ್ಕೂ ಮೊದಲು ನಿಮ್ಮನ್ನು ನೀವು ಪ್ರೀತಿಸಿ, ಹೇಗಿದ್ದೀರೋ ಹಾಗೇ ಸ್ವೀಕರಿಸಿ. ನಿಮ್ಮ ನಿಜವಾದ ವ್ಯಕ್ತಿತ್ವ ಏನು ಎಂಬುದನ್ನು ಕಂಡುಕೊಳ್ಳಿ. ಎರಡನೇಯದಾಗಿ ನೀವು ಇರುವ ರೀತಿಯನ್ನು ಒಪ್ಪಿಕೊಳ್ಳಿ. ನಿಮ್ಮ ವ್ಯಕ್ತಿತ್ವವನ್ನು ಪ್ರಶಂಸಿಕೊಳ್ಳಿ. ನೀವು ಇಷ್ಟಪಡದ, ಪ್ರೀತಿ ಮಾಡದ ವ್ಯಕ್ತಿಯಿಂದ ದೂರವೇ ಉಳಿದುಬಿಡುತ್ತೀರಿ, ಅವರನ್ನು ಅವಾಯ್ಡ್ ಮಾಡುತ್ತೀರಿ. ಅಲ್ಲವೇ? ಆದರೆ ನಿಮ್ಮನ್ನು ನೀವು ಇಷ್ಟಪಡುತ್ತಿಲ್ಲ, ಪ್ರೀತಿಸುತ್ತಿಲ್ಲ ಅಂತಾದರೆ ನಿಮ್ಮನ್ನು ನಿರ್ಲಕ್ಷ್ಯ ಮಾಡಿಕೊಳ್ಳುವುದಕ್ಕೆ ಅಥವಾ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.
ನಿಮ್ಮನ್ನು ನೀವು ಗೌರವಿಸಿಕೊಳ್ಳುವುದರಿಂದ ಸ್ವಾಭಿಮಾನ ಹೆಚ್ಚುತ್ತದೆ. ಅದರಿಂದ ಸಮೃದ್ಧಿ, ಖುಷಿ ಹಾಗೂ ಜೀವನದಲ್ಲಿ ಬಯಸಿದ ಯಶಸ್ಸು ಪಡೆಯುವುದಕ್ಕೆ ಸಾಧ್ಯ. ನಿಮ್ಮ ಬದುಕಿನಲ್ಲಿ ಘಟಿಸಿದ ಸೋಲಿನ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಡಿ. ನಿಮ್ಮಲ್ಲಿರುವ ಆತ್ಮವಿಶ್ವಾಸ, ಕನಸುಗಳನ್ನು ಪೆÇೀಷಿಸಿ. ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಿ. ನಿಮಗೆ ನೀವೇ ಅನನ್ಯ. ನಿಮ್ಮಂತೆ ಈ ಜಗತ್ತಿನಲ್ಲಿ ಬೇರೊಬ್ಬರು ಇರುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದಿರಿ. ನಿಮ್ಮನ್ನೇ ನೀವು ಡಿಗ್ರೇಡ್ ಮಾಡಿಕೊಳ್ಳುತ್ತಾ ಜೀವನದ ಎಲ್ಲಾ ಖುಷಿ-ಸಂತೋಷಗಳಿಂದ ತಪ್ಪಿಸಿಕೊಳ್ಳುವುದರಲ್ಲಿ ಅರ್ಥ ಇಲ್ಲ. ವೈಯಕ್ತಿಕವಾಗಿ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ. ನಿಮ್ಮ ಬಗ್ಗೆ ನಿಮಗಿರುವ ತಿರಸ್ಕಾರ ಭಾವ ಹಾಗೂ ನಿರ್ಲಕ್ಷ್ಯ ಮನೋಭಾವವನ್ನು ಬಿಟ್ಟು, ನಿಮ್ಮನ್ನು ನೀವು ಪ್ರೀತಿಸಿ.
ತನ್ನನ್ನು ಅಶಕ್ತನೆಂದೂ ಪಾಪಿಯೆಂದು ಭಾವಿಸುವುದೇ ಅತಿ ದೊಡ್ಡ ಪಾಪ. ನೀವು ಏನನ್ನಾದರೂ ನಂಬಬೇಕಿದ್ದರೆ, ನಾವು ಭಗವಂತನ ಮಕ್ಕಳೆಂದೂ ಅವನ ಅಂಶಗಳೆಂದೂ, ಅವನ ಅನಂತ ಶಕ್ತಿ ಮತ್ತು ಆನಂದದ ಪಾಲುಗಾರರೆಂದು ನಂಬಿರಿ'. ನಿಮಗೆ ನೀವೇದರಿದ್ರ, ದುರ್ಬಲ’ ಎಂದು ಹೇಳಬೇಡಿ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.
ನಮ್ಮಲ್ಲಿರುವ ದೌರ್ಬಲ್ಯಕ್ಕೆ ದೌರ್ಬಲ್ಯವನ್ನು ಕುರಿತು ಚಿಂತಿಸುವುದೇ ಔಷಧವಲ್ಲ. ನಮ್ಮಲ್ಲಿರುವ ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರ. `ನೀನು ಆಗಲೇ ಪರಿಶುದ್ಧ, ಪರಿಪೂರ್ಣ. ಯಾವುದನ್ನು ಪಾಪ, ದೋಷ, ದೌರ್ಬಲ್ಯವೆಂದು ಕರೆಯುವಿರೋ ಅದು ನಿನಗೆ ನಿಜವಾಗಿ ಸೇರಿದ್ದಲ್ಲ’ ಎಂದು ವೇದಾಂತ ಸಾರುತ್ತದೆ.
ಹಾಸ್ಟೆಲಿನಲ್ಲಿ ಚೆನ್ನಾಗಿ ಅಧ್ಯಯನ ಮಾಡದ, ಸೋಮಾರಿ, ದಡ್ಡ ಎಂದೆಲ್ಲಾ ಕರೆಸಿಕೊಂಡಿದ್ದ ವಿದ್ಯಾರ್ಥಿಯೊಬ್ಬ ಗಣಿತದಲ್ಲಿ ಹಿಂದುಳಿದಿದ್ದ. ಲೆಕ್ಕ ಹೇಳಿಸಿಕೊಳ್ಳಲೆಂದು ಮೇಷ್ಟ್ರರ ಬಳಿಗೆ ಬಂದಿದ್ದ. ಕಷ್ಟಪಟ್ಟು ಆತನಿಗೆ ಕಲಿಸಬೇಕೆಂದುಕೊಂಡ ಗುರುಗಳು ಅವನಲ್ಲಿ ಆತ್ಮವಿಶ್ವಾಸವನ್ನು ತುಂಬಿದರು. ಸರಳವಾದ ಲೆಕ್ಕಗಳನ್ನು ನೀಡಿದ ಗುರುಗಳು, ಅವನ ಮಾಡಿದ ಸರಿ ಉತ್ತರವನ್ನು ಕಂಡು ಆತನಲ್ಲಿರುವ ಸಾಮಥ್ರ್ಯವನ್ನು ಹೊಗಳಿದರು. ನಿಷ್ಠೆಯಿಂದ ಲೆಕ್ಕಗಳನ್ನು ಅಭ್ಯಸಿಸಿದ ಅವನು ಪರೀಕ್ಷೆಯಲ್ಲಿ ಎಪ್ಪತ್ತು ಪರ್ಸೆಂಟ್ ಮಾಕ್ರ್ಸ್ ಪಡೆಯುತ್ತಾನೆ. ಹೀಗೆ ತನ್ನಲ್ಲಡಗಿರುವ ಸುಪ್ತ ಸಾಮಥ್ರ್ಯವನ್ನು ಪ್ರಯತ್ನದಿಂದ ಬೆಳಗಲು ಸಾಧ್ಯ.

ಸ್ವಗತವಿರಲಿ
ನಿಮ್ಮೊಂದಿಗೆ ಮಾತಾಡಿಕೊಳ್ಳುವುದನ್ನು ರೂಢಿಸಿಕೊಳ್ಳಿ. ಮನಸ್ಸಿನೊಳಗೆ ಧನಾತ್ಮಕ ಚಿಂತನೆಗಳನ್ನು ಹರಿಯಬಿಡಿ. ಒಳ್ಳೆಯದನ್ನು ಮಾಡಿದಾಗ ನಿಮ್ಮನ್ನು ನೀವೇ ಪ್ರಶಂಸಿಕೊಳ್ಳಿ. ಕನ್ನಡಿ ಮುಂದೆ ನಿಂತು ಕಾಂಪ್ಲಿಮೆಂಟ್ ಕೊಟ್ಟುಕೊಳ್ಳಿ. ಕನಸುಗಳನ್ನು ಪೆÇೀಷಿಸಿ. ನೀವೇನಾಗಬೇಕೆಂದು ಬಯಸುತ್ತೀರೋ ಅದನ್ನು ಮನನ ಮಾಡಿಕೊಳ್ಳಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆಗಳಿರಲಿ.

ತಪ್ಪು ಮಾಡದವ್ರು ಎಲ್ಲವ್ರೆ…
ನಿಮ್ಮ ಸೋಲನ್ನು, ತಪ್ಪುಗಳನ್ನು ನಿಂದಿಸದಿರಿ. ತಪ್ಪು ಮಾಡದವರು ಈ ಜಗತ್ತಿನಲ್ಲಿ ಯಾರಿದ್ದಾರೆ ಹೇಳಿ? ಆದರೆ ತಪ್ಪುಗಳಿಂದ ಪಾಠ ಕಲಿಯಿರಿ. ಸೋಲಿಗೆ ಪಶ್ಚಾತ್ತಾಪ ಪಟ್ಟುಕೊಳ್ಳದೆ, ಸಮಾಧಾನ ಮಾಡಿಕೊಳ್ಳಿ.

ಸತ್ಯವಂತರಾಗಿ
ನಿಮಗೆ ನೀವೇ ಸುಳ್ಳು ಹೇಳಿಕೊಳ್ಳದಿರಿ. ನಿಮ್ಮ ನಿಜವಾದ ಭಾವನೆಗಳನ್ನು ನಿಯಂತ್ರಿಸದಿರಿ. ನೀವು ಖುಷಿಯಾಗಿದ್ದೀರಿ ಅಂತಾದರೆ ಆ ಸಂದರ್ಭವನ್ನು ಸಂಭ್ರಮಿಸಿ. ಬೇಸರದಲ್ಲಿದ್ದರೆ ಅದನ್ನೂ ವ್ಯಕ್ತಪಡಿಸಿ. ಎಂದಿಗೂ ನಿಮ್ಮ ನಿಜವಾದ ಭಾವನೆಗಳನ್ನು ಅದುಮಿಟ್ಟುಕೊಳ್ಳದಿರಿ.

ಆತ್ಮವಿಶ್ವಾಸವಿರಲಿ
ನಿಮಗೆ ನೀವೇ ಧೈರ್ಯ ತಂದುಕೊಳ್ಳಿ. ವಿಶ್ವಾಸ ಅಂದರೆ ಸಂದರ್ಭಗಳನ್ನು ಎದುರಿಸಲು ಸಿದ್ಧತೆ ಮಾಡಿ ಕೊಳ್ಳುವುದು ಎಂದರ್ಥ. ಎಲ್ಲವೂ ನಿಮ್ಮ ನಿಯಂತ್ರಣವನ್ನು ಮೀರಿ ನಿಂತಿದೆ. ಧನಾತ್ಮಕ ವಿಚಾರಗಳನ್ನು ಹೊಂದುವುದರ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. ನನ್ನಿಂದ ಸಾಧ್ಯ, ನಾನು ಮಾಡಬಲ್ಲೆ' ಅನ್ನುವ ಆತ್ಮವಿಶ್ವಾಸವಿರಲಿ. ನಿಮ್ಮೊಂದಿಗಿರುವ ಕೌಶಲಗಳನ್ನು ಒರೆಗೆ ಹಚ್ಚಿ. ಆ ಮೂಲಕ ಆತ್ಮಾಭಿಮಾನವನ್ನು ಹೆಚ್ಚಿಸಿಕೊಳ್ಳಬಹುದು. ವಿಲಿಯಂ ಹಜ್ಲಿಟ್ ಅವರು ಹೇಳುವಂತೆ,ತನ್ನ ಮೌಲ್ಯವನ್ನು ತಾನೇ ಕಡಿಮೆ ಮಾಡಿಕೊಂಡರೆ, ಬೇರೆಯವರೂ ನಮ್ಮನ್ನು ಕಡೆಗಣಿಸುತ್ತಾರೆ’.

ಚಿಂತೆ ಯಾಕೆ ಮನವೇ
ನಿಮ್ಮನ್ನು ನೀವು ಪ್ರೀತಿಸಬೇಕು ಅಂತಿದ್ದರೆ ನಿಮ್ಮ ಚಿಂತೆಗಳನ್ನು ಬಿಟ್ಟುಬಿಡಿ. ಚಿಂತೆ ಚಿತೆಗೆ ಹಚ್ಚುತ್ತದೆ. ಒತ್ತಡದಲ್ಲಿದ್ದಾಗ ಅಥವಾ ಚಿಂತೆಯಲ್ಲಿದ್ದಾಗ ನಿಮ್ಮದೇ ಧನಾತ್ಮಕ ವ್ಯಕ್ತಿತ್ವವನ್ನು ಪ್ರಶಂಸಿಕೊಳ್ಳಿ.

ರಿಲ್ಯಾಕ್ಸ್ ಆ್ಯಂಡ್ ಎಂಜಾಯ್
ಜೀವನದ ಪ್ರತಿ ಕ್ಷಣವನ್ನು ಆನಂದಿಸಿ. ಖುಷಿಯಾಗಿರುವುದರ ಮೂಲಕ ಜೀವನವನ್ನು ಆನಂದಿಸಬಹುದು. ಮನಸ್ಸಿಗೆ ವಿಶ್ರಾಂತಿ ನೀಡಿ. ಜೀವನದಲ್ಲಿ ಏಕತಾನತೆಯನ್ನು ರೂಢಿಸಿಕೊಳ್ಳದೆ, ಸ್ನೇಹಿತರೊಂದಿಗೆ ಒಂದಿಷ್ಟು ಸಮಯ ಕಳೆಯಿರಿ, ಸಿನಿಮಾ ನೋಡಿ.ಯಾವುದೇ ಕೆಲಸ ಮಾಡಿದರೂ ಅದು ನಿಮಗೆ ಖುಷಿ ನೀಡುವಂತಿರಲಿ.

ದೇಹವೇ ದೇಗುಲ
ನಿಮ್ಮನ್ನು ನೀವು ಪ್ರೀತಿಸಿದರೆ, ವ್ಯಕ್ತಿತ್ವವನ್ನು ಮೌಲ್ಯ ಮಾಡಿಕೊಂಡರೆ ಸುಂದರವಾಗಿ ಕಾಣಿಸಿಕೊಳ್ಳುತ್ತೀರಿ ! ಆರೋಗ್ಯದ ಬಗ್ಗೆ ಕಾಳಜಿ ಇರಲಿ. ದೇಹವನ್ನು ಪ್ರೀತಿಸುವುದು ಕೂಡಾ ನಮ್ಮನ್ನು ನಾವು ಪ್ರೀತಿಸಿದಂತೆ. ದೇಹ ದೇಗುಲವಿದ್ದಂತೆ. ಅದನ್ನು ಪೂಜಿಸಿ. ಎಕ್ಸರಸೈಸ್ ಮಾಡಿ. ಆರೋಗ್ಯಕರ ದಿನಚರ್ಯೆಯನ್ನು ರೂಢಿಸಿಕೊಳ್ಳಿ. ಚೆನ್ನಾಗಿ ತಿನ್ನಿ, ನಿದ್ರಿಸಿ. ದಿನನಿತ್ಯ ಒಂದರ್ಧ ಗಂಟೆಯಾದರೂ ಧ್ಯಾನ ಮಾಡಿ. ಅಧ್ಯಾತ್ಮಿಕವಾಗಿ ತೊಡಗಿಸಿಕೊಳ್ಳುವುದರಿಂದ ನಮ್ಮನ್ನು ನಾವು ಪ್ರೀತಿಸಲು ಸಹಕಾರಿ. ಪ್ರತಿ ವ್ಯಕ್ತಿ ಕೂಡಾ ವಿಭಿನ್ನ. ನಿಮ್ಮ ಅನನ್ಯ ವ್ಯಕ್ತಿತ್ವದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಿ.

ಅವಮಾನಿಸದಿರು

ನಿಮ್ಮ ಜೀವನವನ್ನು ಬೇರೆಯವರು ಆಳುವುದಕ್ಕೆ ಅವಕಾಶ ಮಾಡಿಕೊಡಬೇಡಿ. ನಿಮ್ಮ ಜೀವನ ನಿಮ್ಮದು. ನೀವೇ ನಿರ್ಧಾರ ಕೈಗೊಳ್ಳಿ. ವಿವಾದಗಳನ್ನು ನೀವೇ ಬಗೆಹರಿಸಿಕೊಳ್ಳಿ. ನಿರ್ಧಾರಗಳೂ ನಿಮ್ಮದೇ ಆಗಿರಲಿ. ನಿಮ್ಮನ್ನು ಅವಮಾನಿಸಲು, ಅಗೌರವದಿಂದ ನಡೆಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಡಿ. ಯಾರೋ ಏನೋ ಹೇಳುತ್ತಾರೆ ಅಂತಾದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದು ಅವರ ಯೋಚನೆ, ನಿಮ್ಮ ಬದುಕಿಗದು ಅಪ್ರಸ್ತುತ. ಅಲ್ಲವೇ?.

ನಿಮ್ಮನ್ನು ನೀವು ಪ್ರೀತಿಸಿ. ನೀವೇನೇ ಮಾಡಿದರೂ ಅದಕ್ಕೆ ಹೆಮ್ಮೆ ಪಟ್ಟುಕೊಳ್ಳಿ. ತಪ್ಪು ಮಾಡಿದರೂ ಖುಷಿ ಪಡಿ. ಯಾಕೆಂದರೆ ತಪ್ಪುಗಳನ್ನು ಮಾಡಿದ್ದೀರಿ ಎಂದಾದರೆ ನೀವು ಪ್ರಯತ್ನಿಸಿದ್ದೀರಿ ಎಂದರ್ಥ.ಸಂತೋಷವಾಗಿರುವುದು ಅಂದರೆ ನಿಮ್ಮನ್ನು ನೀವು ಪ್ರೀತಿಸುವುದು. ಇತರರಿಂದ ಅನುಕಂಪ ಪಡೆದುಕೊಳ್ಳದೇ ಇರುವುದು.

ನಿನ್ನನ್ನು ನೀನು ಪ್ರೀತಿಸುವುದು ಮುಖ್ಯ. ಯಾಕೆಂದರೆ ಬೇರೆಯವರು ಎಷ್ಟೇ ಪ್ರೀತಿ ನೀಡಿದರೂ ಅದರಿಂದ ನಿನ್ನ ಆತ್ಮಕ್ಕೆ ಸಂತೃಪ್ತಿ ಸಿಗುವುದಿಲ್ಲ. ನಿನ್ನಾತ್ಮಕ್ಕೆ ನಿನ್ನ ಪ್ರೀತಿಯೇ ಬೇಕು. –ಡೊಡಿನ್‍ಸ್ಕಿ

ನಿನ್ನನ್ನು ನೀನು ಪ್ರೀತಿಸುವುದನ್ನು ಕಲಿತರೆ ಹೆಚ್ಚು ಖುಷಿ ಮತ್ತು ಸಂತೋಷ ಸಿಗುವುದು. ಆ ನಂತರವೇ ಇತರರನ್ನು ಪ್ರೀತಿಸಿ.

ಶ್ರೀದೇವಿ ಅಂಬೆಕಲ್ಲು
ಶ್ರೀದೇವಿ ಅಂಬೆಕಲ್ಲುhttp://sakshatkara.com/
ಪ್ರತಿಯೊಬ್ಬರ ಬದುಕಿನಲ್ಲಿಯೂ ಆಧ್ಯಾತ್ಮಿಕ ವಿಚಾರಧಾರೆಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ. ಆಧ್ಯಾತ್ಮಿಕ ವಿಚಾರಧಾರೆಗಳು ಅಂದಾಕ್ಷಣ ಅದು ಧರ್ಮವೊಂದಕ್ಕೆ ಮಾತ್ರ ಸೀಮಿತಗೊಂಡುದುದಲ್ಲ. ಎಲ್ಲರ ಬದುಕಿನ ಭಾಗವೂ ಹೌದು. ಮನಸ್ಸಿನ ಸಮತೋಲನಕ್ಕೆ ಯೋಗ, ಧ್ಯಾನ ಹೇಗೆ ಸಹಕಾರಿಯೋ ಹಾಗೆಯೇ ಪ್ರಾರ್ಥನೆ, ದೇವರಪೂಜೆ, ವ್ರತಾಚರಣೆಗಳು, ಹಬ್ಬಗಳು ಮನುಕುಲದ ಬಾಂಧವ್ಯವೃದ್ಧಿಗೆ ಸಹಕಾರಿ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ಪಸರಿಸುವ ಸಣ್ಣ ಪ್ರಯತ್ನ. ನೀವು ಕೂಡಾ ನಿಮಗೆ ತಿಳಿದಿರುವ ದೇಗುಲ, ಯೋಗಕೇಂದ್ರ, ಮಠ-ಮಂದಿರಗಳ ಪರಿಚಯಾತ್ಮಕ ಲೇಖನ, ಹಬ್ಬ, ವ್ರತಾಚರಣೆಗಳ ಮಹತ್ವ, ಯೋಗ, ಧ್ಯಾನ ಕ್ರಮಗಳು, ಆಧ್ಯಾತ್ಮಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಯಾವುದೇ ಲೇಖನಗಳು, ಆಯುರ್ವೇದ, ಮನೆ ಮದ್ದು ಬರಹಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles